ಯಂತ್ರಗಳು ಮನುಷ್ಯನಂತಾದ ಹೊತ್ತಿನಲ್ಲಿ ಮನುಷ್ಯನು ಯಂತ್ರದಂತೆ ಆಗದಿರಲು ಮಾಡಬೇಕಾದುದೇನು ಎಂಬುದೇ ಪ್ರಶ್ನಾರ್ಹ! ನಮ್ಮ ಪ್ರಸಕ್ತ ಜೀವನಶೈಲಿಯ ಅಶಿಸ್ತು, ಆತುರಗೇಡಿತನ ಹಲವಾರು ಅನಾಹುತ ಗಳನ್ನು ತಂದೊಡ್ಡುತ್ತಿವೆ. ಎಲ್ಲಿಯೂ ನಮಗಾಗಲಿ ನಮ್ಮೊಟ್ಟಿಗೆ ಹೆಜ್ಜೆ ಹಾಕುತ್ತಿರುವ ಮಕ್ಕಳಿಗಾಗಲಿ ಶ್ರದ್ಧೆ, ಸೈರಣೆಯಿಲ್ಲ, ಕಾಯುವಿಕೆ, ಮಾಗುವಿಕೆಗೆ ತಯಾರಿಲ್ಲ ಎಂಬಂತಹ ಮನಃಸ್ಥಿತಿ.
ಹೌದು, ಇದು ರೀಲ್ಸ್‌ನ ಕಾಲಘಟ್ಟ. ಕೈಲಿರುವ ಮೊಬೈಲ್ ಫೋನ್ ಪರದೆಯಲ್ಲಿನ ವಿಡಿಯೊಗಳು ಕ್ಷಣಾರ್ಧದಲ್ಲಿ ಸ್ಕ್ರೋಲ್ ಆಗಿಬಿಡುತ್ತವೆ. ಮನಸ್ಸು ಬರೀ ಸೆಕೆಂಡಿನೊಳಗೆ ಕಣ್ಣೆದುರು ಕಂಡಿದ್ದನ್ನು ವೀಕ್ಷಿಸಬೇಕೋ ಬೇಡವೋ ಎಂಬುದನ್ನು ನಿರ್ಧರಿಸಿ ಮುಂದೆ ಹೋಗುತ್ತದೆ. ಚಿತ್ರ-ಸನ್ನಿವೇಶಗಳು ಚಕ್ಕನೆ ಬದಲಾಗು ತ್ತಿರುತ್ತವೆ. ಕೂತು ಓದುವ, ಧ್ಯಾನಿಸುವ, ಆಸ್ವಾದಿಸುವ, ವಿಷದೀಕರಿಸುವ, ಚಿಂತಿಸುವ ವ್ಯವಧಾನವೇ ಈಗ ನಮ್ಮಲ್ಲಿ ಉಳಿದಿಲ್ಲ.
ದೀರ್ಘಾವಧಿಯ ದಣಿವಿರದ ದುಡಿತ, ಅವಿರತ ಪರಿಶ್ರಮದ ನಡುವೆ ಸಣ್ಣದೊಂದು ಬಿಡುವು, ರಂಜನೆ, ಪೇಟೆ, ಟಿ.ವಿ-ಸಿನಿಮಾ ಹೀಗಿತ್ತು ಅವತ್ತಿನ ಬದುಕು. ಈಗ ಬದಲಾಗಿದೆ. ಬಹುತೇಕ ಮನೆಮಂದಿಗೆ ಮನರಂಜನೆಯೇ ಬದುಕಾಗಿದೆ. ಇಡೀ ದಿನ ಮನೆಯೇ ಯಾವ ಮೌಲಿಕತೆ, ನೈತಿಕತೆಯನ್ನೂ ಕಲಿಸದ, ಬರೀ ದಾರಿ ತಪ್ಪಿಸುವ ಟಿ.ವಿ. ಧಾರಾವಾಹಿಗಳು, ರಿಯಾಲಿಟಿ ಷೋಗಳ ಎದುರು ಕೂತುಬಿಟ್ಟಿದೆ. ದಿನದ ಉಳಿದ ಅವಧಿಗೂ ಅದರದೇ ಮೆಲುಕು. ವಾಸ್ತವ ಜಗತ್ತಿನಿಂದ ಬಹುದೂರ. ಸುಳ್ಳು, ಕಪಟತನ, ಆಕರ್ಷಕ ಮುಖವಾಡಗಳಿಗೆ ಮಾರುಹೋಗುವ ಅಪ್ರಬುದ್ಧತೆ. ಹೀಗೆ ವಿವೇಕಹೀನರಾಗಿ ಬದುಕುವ ಮನೆಮಂದಿ ತಮ್ಮ ಕುಡಿಗಳಿಗಾಗಲಿ, ಪರಿಸರಕ್ಕಾಗಲಿ ನೈತಿಕ ಮೌಲ್ಯಗಳನ್ನು ಬೋಧಿಸಲು, ಬಿತ್ತಿ ಬೆಳೆಯಲು ಅಥವಾ ಉಳಿಸಿ ಹೋಗಲು ಸಾಧ್ಯವೇ?
ನಕಾರಾತ್ಮಕತೆಯ ನೆರಳಲ್ಲಿ ಬೆಳೆದ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನಾಗಲಿ ತಿಳಿವಳಿಕೆಯನ್ನಾಗಲಿ
ಉಂಡು ಬೆಳೆಯುವುದಕ್ಕೆ ಸಾಧ್ಯವಾಗದು. ಅದೇ ವಾತಾವರಣದಲ್ಲಿನ ಎಳೆಯ ಮನಸ್ಸುಗಳಿಗೆ ವರ್ತಮಾನದ ತಲ್ಲಣಗಳಾಗಲಿ, ಭವಿಷ್ಯದ ಭೀಕರತೆಯ ಬಗೆಗಾಗಲಿ ಅರಿವಿರುವುದಿಲ್ಲ. ಹಾಗಾಗಿ, ಇವತ್ತಿನ ತಲೆಮಾರಿಗೆ ಚರಿತ್ರೆಯ ವಿವೇಕವಾಗಲಿ, ಅಪಾರ ಓದಿನದ್ದಾಗಲಿ ಅಥವಾ ಆದರ್ಶಪುರುಷರ ಒಡನಾಟದ ಬಲವಾಗಲೀ ಇಲ್ಲ. ಜೊಳ್ಳುಕಾಳುಗಳ ಪೊಳ್ಳು ಸಂತೆಯಂತೆ. ಸುದ್ದಿ-ಸಂಗತಿಗಳನ್ನು ವಿವೇಚಿಸುವ, ಮಥಿಸುವ ವ್ಯವಧಾನವಿಲ್ಲ. ಯಾವುದೋ ದುಶ್ಚಟ, ದ್ವೇಷ, ದಾಳಿ, ಜೂಜು, ಆನ್‌ಲೈನ್ ಗೇಮು, ಪ್ರೀತಿ-ಪ್ರೇಮ ಅಂತೆಲ್ಲಾ ನಿತ್ಯವೂ ಹಾದಿತಪ್ಪುತ್ತಿದೆ ದೊಡ್ಡ ಯುವಸಮೂಹ. ಹಿಡಿದು ಕೇಳುವ ಸ್ಥಿತಿಯಲ್ಲಿ ಹಿರಿಯರೂ ಇಲ್ಲ!
ಸಮಸ್ಯೆಗಳ ಬಗ್ಗೆ ಬರಿದೇ ಹಳಹಳಿಸುವ ಬದಲು ಪರಿಹಾರದ ಕುರಿತು ಯೋಚಿಸಬೇಕು, ಯೋಜಿಸಬೇಕು. ಇಂತಹ ಕಾಲಘಟ್ಟದಲ್ಲಿ ನಮ್ಮನ್ನು ಕೈ ಹಿಡಿಯಬೇಕಾದುದು ದಾರ್ಶನಿಕರು ತೋರಿದ ವಿವೇಕದ ಮಾರ್ಗಗಳು. ಹಿರಿಯರ ನೈತಿಕ ಪ್ರಜ್ಞೆ ಮತ್ತು ಶ್ರಮದ ದುಡಿಮೆಯ ಸಭ್ಯ ಮಾರ್ಗಗಳನ್ನು ಹೊಸಪೀಳಿಗೆ ಸಕಾಲಿಕವಾಗಿ ಅರಿಯದೇ ಹೋದರೆ ಆಪತ್ತು ಕಟ್ಟಿಟ್ಟ ಬುತ್ತಿ.
ಸಮಾಜ ಪರಿವರ್ತನೆಗೆ ದಿಟ್ಟ ಹೆಜ್ಜೆ ಇಡಬೇಕೆಂದರೆ ಶಿಕ್ಷಣದ ಎಲ್ಲ ಹಂತಗಳಲ್ಲೂ ಮಾನವೀಯ ಮೌಲ್ಯಗಳು ಪ್ರಾಮುಖ್ಯ ಪಡೆಯಬೇಕು, ಸುದ್ದಿಮಾಧ್ಯಮ ಗಳ ಕಾರ್ಯಕ್ರಮಗಳಲ್ಲೂ ಸತ್ಸಂದೇಶಗಳು ಮನೆ ಮನೆಗಳನ್ನು ತಲುಪಬೇಕು. ನೈತಿಕತೆಯನ್ನು ಬಾಳುವ ದಿವ್ಯಚೈತನ್ಯವೇ ದೇವರೆಂದು ಪ್ರತಿ ಮನೆಯೂ ಮನವೂ ಪರಿಭಾವಿಸಬೇಕು. ಆ ಹಾದಿಯಲ್ಲಿ ನಾವು ವಿವೇಕಪೂರ್ಣವಾಗಿ ಗ್ರಹಿಸಬೇಕಾದ, ಪಾಲಿಸಬೇಕಾದ ಸಂಗತಿಗಳು ಹಲವು ಇವೆ. ನಮ್ಮೆಲ್ಲರ ಜೀವಚೈತನ್ಯವು ಕ್ಷುಲ್ಲಕ ರಾಜಕೀಯ, ಜಾತಿ– ಮತಗಳ ವಿಭಜನೆಯ ಭಾವೋದ್ವೇಗದಲ್ಲಿ ವ್ಯಯವಾಗದೆ, ಬಲಿಯಾಗದೆ ಪ್ರೀತಿ, ಕರುಣೆಯಿಂದ ಹೊರಹೊಮ್ಮಬೇಕು. ಶಿಕ್ಷಣವು ಸಾಂವಿಧಾನಿಕ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಪ್ರತಿಫಲಿಸಬೇಕು. ಮಕ್ಕಳು ತಿಳಿಯಾದ ಆಲೋಚನೆ, ಮನದಮಾತು, ಹೃದಯದ ಮಿಡಿತದಲ್ಲಿ ಬೆಸೆದುಕೊಂಡು, ಜೀವನ
ಮೌಲ್ಯಗಳಲ್ಲಿ ಒಡಮೂಡಬೇಕು.
ತಂತ್ರಜ್ಞಾನ ಯುಗವು ತಂದೊಡ್ಡುವ ಒಂಟಿತನ, ಸೋಮಾರಿತನ, ಮಿಥ್ಯ ಸುಖಗಳಲ್ಲಿ ಮೆದುಳು ಮುದುಡದೆ, ಆಂತರ್ಯದ ಅತೃಪ್ತಿ ಜ್ವಾಲೆಯು ಮಂಕಾಗದೆ ಸೃಜನಶೀಲತೆಗೆ ತೆರೆದುಕೊಳ್ಳಬೇಕು. ಶಿಷ್ಟ ಸಮಾಜವು ಗುರುತಿಸುವ ‘ನೈತಿಕತೆ’ಯು ಒಳ-ಹೊರ ಸುಳಿಗಳನ್ನು ಮೀರಿ ಸ್ವಂತಿಕೆಯ ಪೂರ್ಣ ಸ್ವಾತಂತ್ರ್ಯದಲ್ಲಿ ಸಂಭ್ರಮಿಸುವಂತಾಗಬೇಕು. ಬಾಳುವೆಯ ವೈಶಾಲ್ಯವು ಸ್ವಾರ್ಥ, ಲೋಭಗಳಲ್ಲಿ ಕುರುಡಾಗದೇ ಪ್ರಕೃತಿಯ ಅದಮ್ಯ ಚೇತನದಲ್ಲಿ ಕಲೆತು ಬೆಳಗಬೇಕು. ಆ ಬೆಳಕು ಎಲ್ಲೆಡೆಯೂ ಪಸರಿಸಬೇಕು. ಚಲನಶೀಲ ಬದುಕಿನಲ್ಲಿಯೂ ಆಲಿಸುವ, ಗ್ರಹಿಸುವ, ಕಲಿಯುವ, ಧ್ಯಾನಿಸುವ ಸಂಯಮ ಮೂಡಬೇಕು, ಎಲ್ಲಕ್ಕೂ ಮಿಗಿಲಾಗಿ ಸಂವೇದನಾಶೀಲತೆ, ವಿನಯವಂತಿಕೆಯು ‘ಜೀವನ ಕಲೆ’ ಆಗಬೇಕು.
ಪರಸ್ಪರ ಪ್ರೀತಿ, ನಂಬುಗೆಯಲ್ಲಿ ಬಾಂಧವ್ಯಗಳನ್ನು ಬೆಸೆಯುವಷ್ಟು ನಿಸ್ವಾರ್ಥ ಬೇಕು. ಮುಗ್ಧತೆಯು ಮಾನ, ಅಪಮಾನಗಳನ್ನು ಮೀರಿ, ಹಳೆಯ ಗಾಯದ ನೋವುಗಳಿಲ್ಲದೆ ನಿರಾಳಗೊಳ್ಳಬೇಕು. ನಮ್ಮ ಆತ್ಮವನ್ನು ತಿನ್ನುವ ಮನ್ನಣೆಯ ದಾಹವನ್ನು ತೊರೆದು, ತನ್ನ ತಾನು ಬಣ್ಣಿಸ ಬಯಸದೆ, ಕೀರ್ತಿಶನಿಯನ್ನು ಆಚೆ ನೂಕಬೇಕು. ಹಾಗಾದಾಗ ಮಾನವ ಜನ್ಮ ಹಿರಿದೆನಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.