ಉದ್ಯೋಗಾವಕಾಶ ಕಲ್ಪಿಸುವುದಕ್ಕಾಗಿ ವಿದ್ಯಾರ್ಥಿಗಳ ಸಂದರ್ಶನ ಮಾಡಲು ಕ್ಯಾಂಪಸ್‌ಗೆ ಬಂದಿದ್ದ ತಾಂತ್ರಿಕ ಕಂಪನಿಯೊಂದರ ಅಧಿಕಾರಿ, ಹಾಲ್‌ನಲ್ಲಿ ಕುಳಿತಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ‘ಮ್ಯಾತ್ಸ್ ಅಪ್ಲಿಕೇಶನ್ ಚೆನ್ನಾಗಿ ಗೊತ್ತಿರುವವರು ಮಾತ್ರ ಕೈ ಎತ್ತಿ’ ಎಂದರು. ಅಲ್ಲಿ ಸೇರಿದ್ದ ನೂರು ವಿದ್ಯಾರ್ಥಿಗಳಲ್ಲಿ ಕೈಯೆತ್ತಿದವರು ಹತ್ತು– ಹನ್ನೆರಡು ಮಂದಿ ಮಾತ್ರ. ಅಷ್ಟು ಮಂದಿಯನ್ನು ಸಂದರ್ಶನದ ಕೊಠಡಿಗೆ ಆಹ್ವಾನಿಸಿ ‘ಸರ್, ಮ್ಯಾತಮ್ಯಾಟಿಕ್ಸ್ ಈಸ್ ವೆರಿ ಇಂಪಾರ್ಟೆಂಟ್ ಫಾರ್ ಅವರ್ ಕಂಪನಿ ಜಾಬ್ಸ್, ನೆಕ್ಸ್ಟ್ ಟೈಮ್ ನಾವು ಕ್ಯಾಂಪಸ್ ರಿಕ್ರೂಟ್ಮೆಂಟ್‌ಗೆ ಬರುವ ಹೊತ್ತಿಗೆ ಮ್ಯಾತಮ್ಯಾಟಿಕ್ಸ್ ಕಲಿಸುವುದರ ಕಡೆ ಗಮನ ಕೊಡಿ’ ಎಂದು ಅಧ್ಯಾಪಕರಾದ ನಮಗೆ ಸಲಹೆ ನೀಡಿದರು.
‘ಏನ್ರಪ್ಪಾ ನಿಮ್ಮ ಸಮಸ್ಯೆ’ ಎಂದು ಉಳಿದ ವಿದ್ಯಾರ್ಥಿಗಳನ್ನು ಕೇಳಿದೆ. ‘ನಮಗೆ ಗಣಿತ ಬರಲ್ಲ ಅಂತಲ್ಲ, ಆದರೆ ಗಣಿತದ ಕ್ರಮಗಳನ್ನು ಅಪ್ಲೈ ಮಾಡುವುದು ಹೇಗೆ ಎಂಬುದು ಗೊತ್ತಿಲ್ಲ. ಆದ್ದರಿಂದ ನಾವು ಕೈ ಎತ್ತಲಿಲ್ಲ’ ಎಂದರು. ದೇಶದ ಬಹುತೇಕ ವಿದ್ಯಾರ್ಥಿಗಳು ಗಣಿತದ ವಿಷಯದಲ್ಲಿ ಇಂಥದೊಂದು ಸಂದಿಗ್ಧ ಮತ್ತು ಅನನುಕೂಲವನ್ನು ಅನುಭವಿಸಿಯೇ ಇರುತ್ತಾರೆ. ಶಾಲೆ ಕಾಲೇಜುಗಳಲ್ಲಿ ಗಣಿತವನ್ನು ಒಂದು ವಿಷಯವನ್ನಾಗಿ ಕಲಿಸಲಾಗುತ್ತದೆಯೇ ವಿನಾ ಅದನ್ನು ದೈನಂದಿನ ಜೀವನದ ಸಮಸ್ಯೆಗಳಿಗೆ ಹೇಗೆ ಅನ್ವಯಿಸಬಹುದು ಎಂಬುದನ್ನು ಹೇಳಿಕೊಡುವುದಿಲ್ಲ. ಕಾರಣವಿಷ್ಟೇ, ಬಹಳಷ್ಟು ಸಂದರ್ಭಗಳಲ್ಲಿ, ಕಲಿಸುವವರೇ ಇದನ್ನು ಕಲಿತಿರುವುದಿಲ್ಲ!
ವಿಜ್ಞಾನ- ತಂತ್ರಜ್ಞಾನದ ಎಲ್ಲ ಕ್ಷೇತ್ರಗಳಲ್ಲೂ ಗಣಿತ ಬಳಕೆಯಾಗುತ್ತಿದೆ. ದೊಡ್ಡ ಸಂಬಳದ ಕೆಲಸ ಬೇಕು ಎನ್ನುವವರು ಗಣಿತವನ್ನು ಕಲಿಯಲೇಬೇಕಾದ ಸಂದರ್ಭ ಸೃಷ್ಟಿಯಾಗಿದೆ. ಈ ನಡುವೆ ರಾಜ್ಯದ 22 ಲಕ್ಷ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ಬೋಧಿಸಲು ಇರುವ ಶಿಕ್ಷಕರ ಸಂಖ್ಯೆ ಬರೀ 9,000 ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಗಣಿತವನ್ನು ಸರಿಯಾಗಿ ಕಲಿಸುವುದು ಒಂದು ಕಡೆ ಇರಲಿ, ಕಲಿಸಲು ಅಗತ್ಯ ಸಂಖ್ಯೆಯ ಶಿಕ್ಷಕರೇ ಇಲ್ಲದಿದ್ದರೆ ಪ್ರೌಢಶಿಕ್ಷಣಕ್ಕೆ ಕಾಲಿಡುವ ವಿದ್ಯಾರ್ಥಿಗಳಿಂದ ನಾವು ಏನನ್ನು ನಿರೀಕ್ಷಿಸಬಹುದು? 2000 ಇಸವಿಯಿಂದ ಹೈಸ್ಕೂಲು ಮತ್ತು ಪದವಿಪೂರ್ವ ಶಿಕ್ಷಣ ಕಲಿಯುವ 15 ವರ್ಷ ವಯೋಮಾನದ ವಿದ್ಯಾರ್ಥಿಗಳ ಗಣಿತ, ವಿಜ್ಞಾನ ಕಲಿಕೆ ಮತ್ತು ಇಂಗ್ಲಿಷ್ ಭಾಷೆಯ ಪಠ್ಯವನ್ನು ಓದುವ ಕ್ಷಮತೆಯನ್ನು ಪರೀಕ್ಷಿಸಲು ಅಂತರರಾಷ್ಟ್ರೀಯ ಮಟ್ಟದ ಪಿಸ (ಪಿಐಎಸ್‌ಎ– ಪ್ರೋಗ್ರ್ಯಾಮ್ ಫಾರ್ ಇಂಟರ್‌ನ್ಯಾಷನಲ್ ಸ್ಟೂಡೆಂಟ್ ಅಸೆಸ್‌ಮೆಂಟ್) ಎಂಬ ಪರೀಕ್ಷೆಯನ್ನು ಒಇಸಿಡಿ (ಆರ್ಗನೈಜೇಷನ್ ಫಾರ್ ಎಕನಾಮಿಕ್ ಕಾರ್ಪೊರೇಷನ್ ಆ್ಯಂಡ್ ಡೆವಲಪ್‌ಮೆಂಟ್) ಒಕ್ಕೂಟವು ನಡೆಸುತ್ತಿದೆ.
2009ರಲ್ಲಿ ನಾವು ಪ್ರಥಮ ಬಾರಿಗೆ ಪರೀಕ್ಷೆಯಲ್ಲಿ ಇತರ 74 ದೇಶಗಳೊಂದಿಗೆ ಭಾಗವಹಿಸಿದ್ದೆವು. ಶೈಕ್ಷಣಿಕವಾಗಿ ಮುಂದುವರಿದ ಹಿಮಾಚಲಪ್ರದೇಶ ಮತ್ತು ತಮಿಳುನಾಡಿನ 5,000 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಆಯ್ಕೆ ಮಾಡಲಾಗಿತ್ತು. ಫಲಿತಾಂಶ ಹೊರಬಿದ್ದಾಗ ಚೀನಾ, ಸಿಂಗಪುರ, ಹಾಂಗ್‌ಕಾಂಗ್‌ನ ವಿದ್ಯಾರ್ಥಿಗಳು ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿದ್ದರು. ನಮ್ಮ ವಿದ್ಯಾರ್ಥಿಗಳು 73ನೇ ಸ್ಥಾನ ಗಳಿಸಿದ್ದರು. ವಿಶ್ವಮಟ್ಟದಲ್ಲಿ ಮುಖಭಂಗ ಅನುಭವಿಸಿದ ನಾವು ‘ಪರೀಕ್ಷೆಗೆ ನಿಗದಿ ಮಾಡಿದ ಸಿಲಬಸ್‌ನಿಂದ ಹೊರತಾದ ಪ್ರಶ್ನೆಗಳಿದ್ದವು’ ಎಂಬ ಕಾರಣ ನೀಡಿ 2011 ಮತ್ತು 2015ರ ಪರೀಕ್ಷೆಗಳಲ್ಲಿ ಭಾಗವಹಿಸಲೇ ಇಲ್ಲ. ಆಗ ನಮ್ಮ ವಿದ್ಯಾರ್ಥಿಗಳ ಗಣಿತ ಕಲಿಕಾ ಕ್ಷಮತೆಯನ್ನು ನಮ್ಮದೇ ಪರೀಕ್ಷಾ ವಿಧಾನದ ಮೂಲಕ ಪರೀಕ್ಷಿಸಲು ನಿರ್ಧರಿಸಿದ ಕೇಂದ್ರ ಸರ್ಕಾರವು 2015ರಿಂದ ನ್ಯಾಷನಲ್ ಅಚೀವ್‌ಮೆಂಟ್ ಸರ್ವೆ (ಎನ್‌ಎಎಸ್) ಎಂಬ ಪರೀಕ್ಷೆಯನ್ನು ರೂಪಿಸಿ, ಬಹುಪಾಲು ರಾಜ್ಯಗಳ ಹತ್ತನೇ ತರಗತಿ ಓದುತ್ತಿದ್ದ 2.7 ಲಕ್ಷ ವಿದ್ಯಾರ್ಥಿಗಳಿಗೆ ಐದು ತಿಂಗಳು ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಇಂಗ್ಲಿಷ್ ಮತ್ತು ಆಯಾ ರಾಜ್ಯದ ಮುಖ್ಯ ಭಾಷೆಯ ವಿಷಯಗಳ ಪರೀಕ್ಷೆ ನಡೆಸಿತು.
ಶಾಲಾ ಮಟ್ಟದ ಪರೀಕ್ಷೆಗಳಲ್ಲಿ ಶೇ 95ಕ್ಕೂ ಹೆಚ್ಚು ಅಂಕ ಗಳಿಸುತ್ತಿದ್ದ ವಿದ್ಯಾರ್ಥಿಗಳು ಎನ್ಎಎಸ್ ಪರೀಕ್ಷೆಗಳಲ್ಲಿ ಶೇ 50ರಷ್ಟು ಅಂಕಗಳನ್ನು ಗಳಿಸಲು ಸಹ ವಿಫಲವಾದದ್ದು ಕಂಡುಬಂತು. ಶಾಲೆಗಳಲ್ಲಿ ಪರಿಕಲ್ಪನೆಯ ವಿಧಾನದಲ್ಲಿ ವಿಷಯಗಳನ್ನು ಕಲಿಸಿಲ್ಲ, ಗಣಿತದ ಮೂಲ ಪ್ರಕ್ರಿಯೆಗಳ ಕುರಿತು ಮಕ್ಕಳಲ್ಲಿ ಸರಿಯಾದ ತಿಳಿವಳಿಕೆಗಳಿಲ್ಲ, ಅರ್ಥ ಮಾಡಿಕೊಳ್ಳದೆ ಕಂಠಪಾಠ ಮಾಡಿ ಕಲಿಯುವ ಕ್ರಮ ಇನ್ನೂ ಜಾರಿಯಲ್ಲಿದೆ ಎಂಬ ಅಂಶಗಳು ಆಗ ಬೆಳಕಿಗೆ ಬಂದವು.
ಗಣಿತ ಕಲಿಕೆಯನ್ನು ಸುಲಭ ಮತ್ತು ಆಕರ್ಷಕವಾಗಿಸಲು, ಕಲಿಸುವ ವಿಧಾನಗಳ ಬಗ್ಗೆ ಹೆಚ್ಚು ಕರಾರುವಾಕ್ಕಾದ ಸಂಶೋಧನೆಗಳು ಆಗಬೇಕಿದೆ. ವಿಶ್ವ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿರುವ ಮತ್ತು ಸ್ಥಳೀಯವಾಗಿ ಪ್ರಸಿದ್ಧಿಗೆ ಬರುತ್ತಿರುವ ನಾವೀನ್ಯದ ಕುರಿತು ಪಠ್ಯಪುಸ್ತಕಗಳಲ್ಲಿ ಪಾಠಗಳಿರಬೇಕು. ಗಣಿತವನ್ನು ವಿನೋದದ ಆಟದಂತೆ, ಸಂಗೀತದಂತೆ, ಚದುರಂಗದಂತೆ, ಚಿತ್ರಕಲೆಯಂತೆ ಕಲಿಯುವ ಅವಕಾಶಗಳಿವೆ. ಬರೀ ಕೆಲವು ಉದಾಹರಣೆಗಳು ಮತ್ತು ಸಮಸ್ಯೆಗಳನ್ನು ಪಟ್ಟಿ ಮಾಡುವ ಪಠ್ಯಪುಸ್ತಕಗಳು ಹೊಸ ಕಾಲದ ಅಗತ್ಯಕ್ಕೆ ತಕ್ಕಂತೆ ಅಪ್‌ಡೇಟ್ ಆಗಬೇಕು. ಶಿಕ್ಷಕರು ನೂತನ, ಸುಲಭ ಮತ್ತು ಅನ್ವಯಿಕ ಕ್ರಮಗಳನ್ನು ವಿದ್ಯಾರ್ಥಿಗಳಿಗೆ ಹೇಗೆ ಕಲಿಸಬೇಕು ಎಂಬುದರ ಬಗ್ಗೆ ಪ್ರತ್ಯೇಕ ಹಾಗೂ ಕಡ್ಡಾಯ ತರಬೇತಿ ಪಡೆಯಬೇಕು. ರಾಷ್ಟ್ರೀಯ ಗಣಿತ ದಿನಾಚರಣೆಯ (ಡಿ. 22) ಈ ಸಂದರ್ಭದಲ್ಲಿ, ಗಣಿತ ಕಲಿಕೆಯ ಉದ್ದೇಶ ಬದಲಾಗಬೇಕಿರುವ ಅಗತ್ಯದ ಕುರಿತು ಚಿಂತಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.