ADVERTISEMENT

ಸಂಗತ | ಪರೀಕ್ಷೆ ಹಬ್ಬ: ಬನ್ನಿ ಸಂಭ್ರಮಿಸೋಣ

ಪರೀಕ್ಷೆಯನ್ನು ಎದುರಿಸಬಾರದು, ಹಬ್ಬದಂತೆ ಸಂಭ್ರಮಿಸಬೇಕು ಎಂಬ ಭಾವನೆ ವಿದ್ಯಾರ್ಥಿಗಳ ಸಾಧನೆಯಲ್ಲಿ ಗಮನಾರ್ಹವಾದ ಬದಲಾವಣೆ ತರಬಲ್ಲದು

ಎಚ್.ಎಸ್.ನವೀನಕುಮಾರ್
Published 13 ಫೆಬ್ರುವರಿ 2025, 20:21 IST
Last Updated 13 ಫೆಬ್ರುವರಿ 2025, 20:21 IST
ಸಂಗತ
ಸಂಗತ   

ಇದು ಪರೀಕ್ಷಾ ಪರ್ವ. ಫೆಬ್ರುವರಿ, ಮಾರ್ಚ್ ತಿಂಗಳು ಬಂತೆಂದರೆ, ಎಸ್ಎಸ್ಎಲ್‌ಸಿ, ಪಿಯುಸಿಯಂತಹ ಪ್ರಮುಖ ಪರೀಕ್ಷೆಗಳನ್ನು ಬರೆಯಬೇಕಾದ ವಿದ್ಯಾರ್ಥಿ ಗಳಿಗೆ ಉತ್ತೇಜನ ನೀಡುವ, ಧೈರ್ಯದ ಮಾತುಗಳನ್ನು ಹೇಳುವ ಕಾರ್ಯಾಗಾರಗಳನ್ನು ಶಾಲೆಗಳಲ್ಲಿ ಆಯೋಜಿಸುವುದನ್ನು ಕಾಣುತ್ತೇವೆ. ಹಲವು ಕಡೆಗಳಲ್ಲಿ ಇದನ್ನು ಒಂದು ಸಂಪ್ರದಾಯದೋಪಾದಿಯಲ್ಲಿ ಮಾಡುತ್ತಾರೆ. ಇದರಿಂದ ವಿದ್ಯಾರ್ಥಿಗಳ ಆತಂಕ ಕಡಿಮೆಯಾಗುವುದರ ಬದಲು ಹೆಚ್ಚಾಗಿಬಿಡುತ್ತದೇನೋ ಎಂದು ಅನಿಸುವುದುಂಟು.

ಆದರೆ ಇಲ್ಲಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬಿತ್ತ ಬೇಕಾದ ಅತ್ಯಂತ ಮುಖ್ಯವಾದ ಅಂಶವೆಂದರೆ, ‘ನೀವು ಪರೀಕ್ಷೆಯನ್ನು ಎದುರಿಸಬೇಡಿ, ಹಬ್ಬದಂತೆ ಸಂಭ್ರಮಿಸಿ’ ಎಂಬ ಸಕಾರಾತ್ಮಕ ವಿಚಾರ. ಈ ಒಂದು ಚಿಕ್ಕ ಮಾನಸಿಕ ಸಿದ್ಧತೆಯು ವಿದ್ಯಾರ್ಥಿಗಳ ಸಾಧನೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಖಂಡಿತ ತರುತ್ತದೆ. ‘ಎದುರಿಸುವುದು’ ಎಂಬ ಶಬ್ದ ಸಾಧಾರಣವಾಗಿ ಜಗಳವಾಡುವುದು ಎನ್ನುವ ಅರ್ಥವನ್ನು ಕೊಡುತ್ತದೆ. ನಾವು ಯಾರ ಜೊತೆ ಜಗಳವಾಡುತ್ತೇವೆ? ನಮ್ಮ ಶತ್ರುಗಳ ಜೊತೆಗೆ ತಾನೆ? ಜಗಳವಾಡುವಾಗ ಸಾಧಾರಣವಾಗಿ, ಮನಸ್ಸು ಉದ್ವಿಗ್ನ ಗೊಳ್ಳುತ್ತದೆ, ಆತಂಕಕ್ಕೆ ಒಳಗಾಗುತ್ತದೆ. ಇಂತಹ ಸಂದರ್ಭದಲ್ಲಿ ಜಗಳಕ್ಕೆ ನಾವೆಷ್ಟೇ ತಯಾರಾಗಿದ್ದರೂ ಜಗಳದ ಭರದಲ್ಲಿ ನಾವು ಹೇಳಬೇಕೆಂದಿದ್ದ ಅಂಶಗಳನ್ನೇ ಮರೆತುಬಿಡುತ್ತೇವೆ!

ಅದೇ ಹಬ್ಬ, ಉತ್ಸವಗಳ ಸಂದರ್ಭದಲ್ಲಿ ಮನಸ್ಸು ಉಲ್ಲಸಿತವಾಗಿರುತ್ತದೆ, ಇನ್ನೊಬ್ಬರ ಜೊತೆಗೆ ಸಂತೋಷದಿಂದ ಮಾತನಾಡುವ ಮನಃಸ್ಥಿತಿ ನಮ್ಮಲ್ಲಿ ಇರುತ್ತದೆ. ಈ ಉದ್ವೇಗರಹಿತ ಸ್ಥಿತಿಯಲ್ಲಿ ನಮ್ಮ ನೆನಪಿನ ಶಕ್ತಿ ಕೂಡ ಖಂಡಿತ ಹೆಚ್ಚಾಗಿರುತ್ತದೆ. ಹೀಗಾಗಿ, ನಾವು ಪರೀಕ್ಷೆಯನ್ನು ಸಂಭ್ರಮಿಸಬೇಕೇ ವಿನಾ ಎದುರಿಸಬೇಕು ಎಂಬ ಆಲೋಚನೆಯನ್ನು ಬಿಟ್ಟುಬಿಡಬೇಕು.

ADVERTISEMENT

‘ಪರೀಕ್ಷೆ ಎನ್ನುವುದು ನನ್ನ ಸಾಮರ್ಥ್ಯವನ್ನು ಅಳೆಯಲು ಇರುವ ಮೌಲ್ಯಮಾಪನ. ಅಂದರೆ, ನಾನು ಎಷ್ಟರಮಟ್ಟಿಗೆ ವಿಷಯವನ್ನು ಅರ್ಥ ಮಾಡಿಕೊಂಡಿದ್ದೇನೆ ಎನ್ನುವುದರ ಸೂಚ್ಯಂಕ. ಇದು ನನ್ನ ಸಾಮರ್ಥ್ಯದ ಪರೀಕ್ಷೆಯಾಗಬೇಕೇ ವಿನಾ ಅದನ್ನು ಬೇರೆಯವರ ಸಾಮರ್ಥ್ಯದೊಂದಿಗೆ ಹೋಲಿಕೆ ಮಾಡಿ ನೋಡುವು ದಲ್ಲ. ನನ್ನ ಸಾಮರ್ಥ್ಯದ ಶೇಕಡ 100ರಷ್ಟು ಅಂಕವನ್ನು ಗಳಿಸುವ ಬಗ್ಗೆ ನಾನು ಆಲೋಚಿಸಬೇಕು. ಅದುಬಿಟ್ಟು ನಾನೂ ಅವರಂತೆ ನೂರಕ್ಕೆ ನೂರು ಅಂಕ ಪಡೆಯಲು ಸಾಧ್ಯವಾಗಲಿಲ್ಲವಲ್ಲ ಎಂದು ದುಃಖಿಸುವುದಲ್ಲ’ ಎಂಬು ದನ್ನು ವಿದ್ಯಾರ್ಥಿಗಳು ನೆನಪಿಡಬೇಕು.

ಪರೀಕ್ಷೆ ನಮ್ಮನ್ನು ಮುಂದಿನ ತರಗತಿಗೆ ತೇರ್ಗಡೆ ಗೊಳಿಸುವ ವ್ಯವಸ್ಥೆ. ಅದುಬಿಟ್ಟು ನಮ್ಮ ಬದುಕನ್ನೇ ರೂಪಿಸುವ ವ್ಯವಸ್ಥೆಯಲ್ಲ. ಎಷ್ಟೋ ಬಾರಿ ಕಡಿಮೆ ಅಂಕ ಗಳಿಸಿದವರು ಬದುಕಿನ ಬೇರೆ ಬೇರೆ ಕ್ಷೇತ್ರಗಳಲ್ಲಿ ಅತ್ಯಂತ ಯಶಸ್ವಿ ವ್ಯಕ್ತಿಗಳಾಗಿರುವುದನ್ನು ನೋಡಿದ್ದೇವೆ. ಮೈಕ್ರೊಸಾಫ್ಟ್ ಸಂಸ್ಥೆಯ ಮಾಲೀಕರಾದ ಬಿಲ್ ಗೇಟ್ಸ್ ಒಂದೆಡೆ ‘ನಾನು ಎಲ್ಲ ಪರೀಕ್ಷೆಗಳಲ್ಲೂ ತೃತೀಯ ದರ್ಜೆಯಲ್ಲಿ ಪಾಸ್ ಆಗುತ್ತಿದ್ದೆ. ನನ್ನ ಸಹಪಾಠಿಗಳಲ್ಲಿ ಕೆಲವರು ಡಿಸ್ಟಿಂಕ್ಷನ್, ರ್‍ಯಾಂಕ್‌ ಪಡೆಯುತ್ತಿದ್ದರು. ನಾನೀಗ ಮೈಕ್ರೊಸಾಫ್ಟ್ ಕಂಪನಿಯ ಮಾಲೀಕ. ಹೆಚ್ಚಿನ ಅಂಕ ಗಳಿಸುತ್ತಿದ್ದ ನನ್ನ ಸಹಪಾಠಿಗಳು ಈಗ ನನ್ನ ಕಂಪನಿಯ ಉದ್ಯೋಗಿಗಳು’ ಎಂದಿದ್ದಾರೆ. ಅಂದ ಮಾತ್ರಕ್ಕೆ ಎಲ್ಲರೂ ತೃತೀಯ ದರ್ಜೆಯಲ್ಲಿ ಪಾಸಾಗಬೇಕು ಎಂದಲ್ಲ. ಇದರ ಅರ್ಥ ಪರೀಕ್ಷೆಯಲ್ಲಿ ಪಡೆದ ಅಂಕಗಳೇ ನಮ್ಮ ಬದುಕನ್ನು ನಿರ್ಧರಿಸುವುದಿಲ್ಲ ಎಂಬುದು.

ಸಾಮಾನ್ಯವಾಗಿ ಪರೀಕ್ಷೆಯ ಬಗ್ಗೆ ಭಯ ಹೊಂದಿರುವ ವಿದ್ಯಾರ್ಥಿಗಳ ಸಮಸ್ಯೆ ಎಂದರೆ ‘ಮರೆವು’. ಇದನ್ನು ಬಹಳಷ್ಟು ಜನ ದೈಹಿಕ ಕಾಯಿಲೆ ಎಂದು ತಿಳಿದಿ ದ್ದಾರೆ. ಆದರೆ ಚಿಕ್ಕ ವಯಸ್ಸಿನಲ್ಲಿ ಮರೆವಿನ ಕಾಯಿಲೆ ಖಂಡಿತವಾಗಿಯೂ ಯಾರನ್ನೂ ಕಾಡುವುದಿಲ್ಲ. ಮರೆವು ಎಂಬುದು ಪರೀಕ್ಷಾರ್ಥಿಗಳ ಮಾನಸಿಕ ಸಮಸ್ಯೆ. ಇದು ಉಂಟಾಗುವುದು ಏಕಾಗ್ರತೆಯ ಕೊರತೆಯಿಂದ. ಪರೀಕ್ಷಾ ಯಶಸ್ಸಿನ ಏಕೈಕ ಸೂತ್ರವೆಂದರೆ ಏಕಾಗ್ರತೆ. ಅಂತೆಯೇ ‘ಏಕಾಗ್ರತೆ ಎಂಬುದು ಯಶಸ್ಸಿನ ಏಕೈಕ ಕೀಲಿಕೈ’ ಎಂದಿದ್ದಾರೆ ಸ್ವಾಮಿ ವಿವೇಕಾನಂದ.

ಏಕಾಗ್ರತೆ ಶಬ್ದದ ಸಂಧಿ ಬಿಡಿಸಿದರೆ ಏಕ+ಅಗ್ರತೆ ಎಂದಾಗುತ್ತದೆ. ಇದರಲ್ಲಿನ ಅಗ್ರತೆ ಶಬ್ದದ ‘ಅ’ ಎನ್ನುವ ಅಕ್ಷರದಲ್ಲಿ ಏಕಾಗ್ರತೆಯನ್ನು ಹೆಚ್ಚಿಸುವ ಮೂರು ಅತ್ಯಂತ ಮುಖ್ಯ ಅಂಶಗಳು ಅಡಗಿವೆ. ಅವುಗಳೆಂದರೆ ಆಸಕ್ತಿ, ಅಭ್ಯಾಸ ಹಾಗೂ ಆತ್ಮವಿಶ್ವಾಸ. ಯಾವುದೇ ಪಾಠವನ್ನು ಆಸಕ್ತಿಯಿಂದ ಓದಿದರೆ, ಕೇಳಿದರೆ ಅದು ಖಂಡಿತವಾಗಿಯೂ ನಮ್ಮ ಮನಸ್ಸಿನಲ್ಲಿ ಉಳಿಯುತ್ತದೆ. ಹಾಗೆಯೇ ಅದನ್ನು ನಿರಂತರವಾಗಿ ಅಭ್ಯಾಸ ಮಾಡಿದಾಗ ನಮ್ಮಲ್ಲಿರುವ ಆತ್ಮವಿಶ್ವಾಸ ಜಾಗೃತಗೊಳ್ಳುತ್ತದೆ. ಈ ಮೂರು ಅಂಶಗಳು ನಮ್ಮಲ್ಲಿದ್ದಾಗ ಖಂಡಿತವಾಗಿಯೂ ನಾವು ಪರೀಕ್ಷೆಯನ್ನು ಸಂಭ್ರಮಿಸಬಹುದು ಹಾಗೂ ಉತ್ತಮ ಸಾಧನೆಯನ್ನು ಮಾಡಬಹುದು.

ಅಂದಹಾಗೆ ಜೀವನವೇ ದೊಡ್ಡ ಪರೀಕ್ಷೆ. ಬದುಕಿನ ಪರೀಕ್ಷೆಯಲ್ಲಿ ಪ್ರತಿನಿತ್ಯವೂ ಪಠ್ಯಕ್ರಮಕ್ಕೆ ಹೊರತಾದ ಪ್ರಶ್ನೆಗಳೇ ನಮಗೆ ಎದುರಾಗುತ್ತಿರುತ್ತವೆ. ಹೀಗಿರುವಾಗ, ಜೀವನವೆಂಬ ಪರೀಕ್ಷೆಗೆ ಸಿದ್ಧರಾಗಲು ಈ ಪರೀಕ್ಷೆಗಳೇ ಮೊದಲ ಮೆಟ್ಟಿಲು ಎಂದು ನಾವು ಅಂದುಕೊಂಡರೆ, ವಿದ್ಯಾಭ್ಯಾಸ ಹಾಗೂ ಪರೀಕ್ಷೆ ಇರುವುದು ನಮ್ಮ ಜ್ಞಾನಾ ರ್ಜನೆಗೆ ಎನ್ನುವ ವಿಚಾರವನ್ನು ಸರಿಯಾಗಿ ಮನದಟ್ಟು ಮಾಡಿಕೊಂಡರೆ, ಪರೀಕ್ಷೆ ಎಂದಿಗೂ ನಮ್ಮಲ್ಲಿ ಭಯ ಹುಟ್ಟಿಸುವುದಿಲ್ಲ. ಬದಲಿಗೆ ಅದು ಖಂಡಿತವಾಗಿಯೂ ಸಂಭ್ರಮಿಸಬಲ್ಲ ಹಬ್ಬವಾಗಿ ಮಾರ್ಪಾಡಾಗುತ್ತದೆ.

-ಲೇಖಕ: ವ್ಯಕ್ತಿತ್ವ ವಿಕಸನ ತರಬೇತುದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.