ಈ ವರ್ಷದ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ 1.32 ಲಕ್ಷ ಮಕ್ಕಳು ಪ್ರಥಮ ಭಾಷೆ ಕನ್ನಡದಲ್ಲಿ ನಪಾಸಾಗಿದ್ದಾರೆ. ಇದು ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ 21ರಷ್ಟು. ಅಂಕ ಗಳಿಕೆಯ ಗುಣಾತ್ಮಕತೆಯೂ ಅಷ್ಟೇನೂ ಸಮಾಧಾನಕರವಾಗಿಲ್ಲ. ಇದು ಬರೀ ಈ ವರ್ಷದ ವಿದ್ಯಮಾನವಲ್ಲ; ಪ್ರತಿವರ್ಷದ್ದು! ಮಾತೃಭಾಷೆ, ರಾಜ್ಯಭಾಷೆ ಎಲ್ಲವೂ ಕನ್ನಡವೇ ಆಗಿರುವಾಗ ಅದರಲ್ಲೇ ಹೆಚ್ಚು ಮಂದಿ ನಪಾಸಾಗುವುದು ಎಂದರೇನು ಎಂಬ ಪ್ರಶ್ನೆ ಮೂಡುವುದು ಸಹಜ.
‘ಕನ್ನಡವು ಸುಲಿದ ಬಾಳೆಯ ಹಣ್ಣಿನಂತೆ’ ಎಂದಿದ್ದಾರೆ ಕವಿ ಮಹಲಿಂಗರಂಗ. ಆದರೆ ನಮ್ಮ ಮಕ್ಕಳು ಭಾಷೆಯ ಕಲಿಕೆಯಲ್ಲಿ ಸೋಲುತ್ತಿದ್ದಾರೆ. ಅಷ್ಟು ಸುಲಭದ ಭಾಷೆಯು ಗಂಟಲಲ್ಲಿ ಇಳಿಯದ ಕಡುಬಿನಂತೆ ಆದದ್ದು ಹೇಗೆ? ಮೊದಲನೆಯದು, ಈ ಭಾಷೆಯ ಮೇಲಿನ ನಮ್ಮ ತಾತ್ಸಾರ. ಇದು ಎಲ್ಲೆಡೆಯಲ್ಲೂ ನಿರ್ಲಕ್ಷ್ಯಕ್ಕೆ ಒಳಪಟ್ಟ ವಿಷಯ. ಶಾಲೆಯಲ್ಲಿ ಬೇರೆ ವಿಷಯಕ್ಕೆ ಸಿಗುವಷ್ಟು ಆದ್ಯತೆ ಕನ್ನಡಕ್ಕೆ ಸಿಗುವುದಿಲ್ಲ. ‘ಬಿಡಿ, ಕನ್ನಡ ಅಲ್ವಾ’ ಎಂಬ ಧೋರಣೆ. ವಿಶೇಷ ತರಗತಿಯಿಂದ ಹಿಡಿದು ಕೊನೆಗೆ ಪರೀಕ್ಷೆಯವರೆಗೂ ಅದನ್ನು ಗಂಭೀರವಾಗಿ ಪರಿಗಣಿಸಿದ್ದೇ ಇಲ್ಲ.
ಪಠ್ಯವು ಸರಳವೊ ಕಠಿಣವೊ ಅನ್ನುವುದಕ್ಕಿಂತ ಪಠ್ಯದಿಂದ ಪರೀಕ್ಷೆಗೆ ಕೇಳಲಾಗುವ ಪ್ರಶ್ನೆಗಳ ಸ್ವರೂಪ ತ್ರಾಸದಾಯಕವಾಗಿ ಇರುತ್ತದೆ. ಪದಗಳ ಅರ್ಥದ ಒಂದು ಪ್ರಶ್ನೆಗೆ, ಪಠ್ಯದಲ್ಲಿರುವ ಹಲವಾರು ಪದಗಳನ್ನು ಮಗು ಅರ್ಥೈಸಿಕೊಳ್ಳಬೇಕು. ಭಾಷೆ ಎಂದೂ ನೇರವಾದ ಉತ್ತರವನ್ನು ಬಯಸುವುದಿಲ್ಲ. ಅದು ಮಗುವಿನ ಭಾಷಾ ಸಾಮರ್ಥ್ಯ, ಪದ ಬಳಕೆ, ವಾಕ್ಯರಚನೆ, ಮಂಡನೆಯ ಶೈಲಿಯನ್ನು ಬಯಸುತ್ತದೆ. ಹೆಚ್ಚಿನವು ಪ್ರಬಂಧದ ಶೈಲಿಯಲ್ಲಿ ಇರುತ್ತವೆ. ಬಹುತೇಕ ಮಕ್ಕಳು ಪರೀಕ್ಷೆ ಬರೆದು ಬಂದ ಮೇಲೆ ‘ಸಮಯ ಸಾಲಲಿಲ್ಲ’, ‘ಉತ್ತರ ಗೊತ್ತಿತ್ತು, ಆದರೆ ಹೇಗೆ ಬರೆಯಬೇಕು ಎಂಬುದು ತಿಳಿಯಲಿಲ್ಲ’ ಎಂದೆಲ್ಲ ಹೇಳುತ್ತಾರೆ.
ಮಗುವಿಗೆ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸದಿರುವುದೇ ನಮ್ಮ ಮೊದಲ ಸೋಲು. ಮಗುವಿನ ಕನ್ನಡಕ್ಕೂ ಪಠ್ಯದ ಕನ್ನಡಕ್ಕೂ ವ್ಯತ್ಯಾಸವಿದೆ. ಅದೂ ಮಗುವನ್ನು ಪ್ರಭಾವಿಸಬಹುದು. ಆಯಾ ತರಗತಿಯಲ್ಲಿ ಮಗು ತಾನು ಎಷ್ಟರಮಟ್ಟಿಗೆ ಭಾಷೆಯನ್ನು ಕಲಿಯಬೇಕೋ ಅಷ್ಟರಮಟ್ಟಿಗೆ ಕಲಿಯದೆ ಹತ್ತನೇ ತರಗತಿಗೆ ಬಂದು ಕೂತಿರಬಹುದು. ಆಗ, ಒಂದು ಭಾಷೆ ಬಯಸುವ ಎಲ್ಲಾ ಕೌಶಲಗಳನ್ನು ಒಮ್ಮೆಲೇ ಪರೀಕ್ಷಿಸಲು ನಾವು ಮುಂದಾದಾಗ ಅದು ಕಂಗಾಲಾಗುತ್ತದೆ. ಮಾತೃಭಾಷೆಯಲ್ಲಿ ಅನುತ್ತೀರ್ಣವಾಗುವುದು ಶಿಕ್ಷಣದ ಬಗೆಗಿನ ಮಗುವಿನ ಆತ್ಮವಿಶ್ವಾಸವನ್ನು
ಕುಗ್ಗಿಸುತ್ತದೆ.
ಕನ್ನಡ ವಿಷಯವು ಪರೀಕ್ಷೆಯಲ್ಲಿ ಹೆಚ್ಚು ಬರೆಯುವುದನ್ನು ಬಯಸುತ್ತದೆ. ಉತ್ತೀರ್ಣವಾಗಲು ಮೂವತ್ತೈದು ಅಂಕ ಕಡ್ಡಾಯ. ಬೇರೆ ವಿಷಯಗಳಲ್ಲಿ ಇಪ್ಪತ್ತೆಂಟು ಅಂಕ ಸಾಕು. ಮಕ್ಕಳು ಕನ್ನಡ ವಿಷಯವನ್ನು ಮೂರು ಗಂಟೆಯಲ್ಲಿ ನೂರು ಅಂಕಕ್ಕೆ ಬರೆಯಬೇಕು. ಬೇರೆ ವಿಷಯಗಳು ಎಂಬತ್ತು ಅಂಕಕ್ಕೆ ಇರುತ್ತವೆ. ಇದರ ಅರ್ಥ, ಕನ್ನಡ ವಿಷಯ ಹೆಚ್ಚಿನ ಶ್ರಮವನ್ನು ಬೇಡುತ್ತದೆ. ಆದರೆ ಈ ವಿಷಯ ಉದಾಸೀನಕ್ಕೆ ಒಳಗಾದದ್ದೇ ಹೆಚ್ಚು.
ಪಠ್ಯ ಸರಳವೂ ಆಕರ್ಷಕವೂ ಆಗಬೇಕಾಗಿದೆ. ಕೆಲವೊಂದು ಪಾಠಗಳು ಏನು ಹೇಳುತ್ತವೆ ಎಂಬುದನ್ನು ಮಕ್ಕಳಿಗೆ ತಲುಪಿಸಲು ಕಷ್ಟವಾಗುತ್ತದೆ ಎನ್ನುವುದು ಶಿಕ್ಷಕರ ಅನುಭವ. ಹಳೆಗನ್ನಡ ಮತ್ತು ವ್ಯಾಕರಣದಂತಹ ಶುಷ್ಕ ವಿಷಯಗಳು ಮಗುವಿನ ಆಸಕ್ತಿಯನ್ನು ಕುಗ್ಗಿಸುತ್ತವೆ. ಇಂಗ್ಲಿಷ್ ಭಾಷೆಯ ಬಗೆಗಿನ ಪೋಷಕರ ವ್ಯಾಮೋಹ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವವರ ಸಂಖ್ಯೆಯಲ್ಲಿನ ಹೆಚ್ಚಳವು ಕನ್ನಡದ ಕಲಿಕೆ ಗಟ್ಟಿಯಾಗುವಲ್ಲಿ ತೊಡಕಾಗಿವೆ.
ಈ ಬೆಳವಣಿಗೆಯಿಂದ ಕನ್ನಡ ಭಾಷೆ ಗಂಭೀರವಾದ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ನಮ್ಮ ಮುಂದಿನ ತಲೆಮಾರಿಗೆ ನಾವು ಭಾಷೆಯನ್ನು ನಮ್ಮ ಮಕ್ಕಳ ಮೂಲಕವೇ ಸಮರ್ಥವಾಗಿ ತಲುಪಿಸಬೇಕು. ಮಕ್ಕಳು ಭಾಷೆಯ ಕಲಿಕೆಯಲ್ಲಿ ಸೋತಾಗ ಅದರ ನೇರ ಪರಿಣಾಮ ಭಾಷೆಯ ಮೇಲಾಗುತ್ತದೆ.
ಕನ್ನಡವನ್ನು ಕ್ಲಿಷ್ಟ ಮಾಡಿಟ್ಟಾಗ ಮಕ್ಕಳು ಕ್ರಮೇಣ ಅದರಿಂದ ದೂರ ಸರಿಯುತ್ತಾರೆ. ಇದು ಕನ್ನಡ ಭಾಷೆಯ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪರಂಪರೆಯ ಬಗ್ಗೆ ಅವರಲ್ಲಿ ಅನಾಸಕ್ತಿ ಮೂಡಿಸಬಹುದು. ಕನ್ನಡದ ಕಾವ್ಯ, ಗದ್ಯ ಮತ್ತು ಐತಿಹಾಸಿಕ ಸಾಹಿತ್ಯದ ಆಳವಾದ ತಿಳಿವಳಿಕೆಯಿಲ್ಲದೆ ಕನ್ನಡದ ಶ್ರೀಮಂತ ಪರಂಪರೆ ಮಸುಕಾಗುತ್ತದೆ. ದೀರ್ಘಕಾಲದಲ್ಲಿ ಕನ್ನಡ ಭಾಷೆಯ ಬಳಕೆ ಮತ್ತು ಜನಪ್ರಿಯತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಈಗಾಗಲೇ ಬೇರೆ ಬೇರೆ ಪ್ರಭಾವಗಳು ಕನ್ನಡದ ಬಳಕೆಯನ್ನು ಕಡಿಮೆ ಮಾಡುತ್ತಿರುವಾಗ, ಶೈಕ್ಷಣಿಕ ವ್ಯವಸ್ಥೆಯಲ್ಲಿ ಕನ್ನಡದ ಕಷ್ಟಕರ ಸ್ವರೂಪವು ಅದನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ.
ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಶಿಕ್ಷಣ ಮತ್ತು ಆಡಳಿತದಲ್ಲಿ ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಭಾಷಾ ನೀತಿಯು ಈ ಸವಾಲಿನಿಂದ ದುರ್ಬಲವಾಗುತ್ತದೆ. ಇದು ಕನ್ನಡ ಭಾಷೆಯ ಶೈಕ್ಷಣಿಕ ಬಳಕೆಯನ್ನು ಕಡಿಮೆ ಮಾಡುತ್ತದೆ.
ಕನ್ನಡ ಉಳಿಯಬೇಕಾದರೆ ಕನ್ನಡ ಕಲಿಯಬೇಕು, ಬಳಸಲ್ಪಡಬೇಕು. ಕನ್ನಡದ ಬಳಕೆಯೇ ಕಡಿಮೆಯಾಗುತ್ತಿರುವಾಗ ಅದನ್ನು ಶಾಲಾ ಹಂತದಲ್ಲಾದರೂ ವ್ಯವಸ್ಥಿತವಾಗಿ ಕಲಿಸುವ ಪ್ರಯತ್ನಗಳಾಗಬೇಕು. ಆ ದಿಸೆಯಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.