
ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಬಾದಾಮಿ ಮರಗಳ ಹೂವಿನ ಪರಾಗಸ್ಪರ್ಶಕ್ಕಾಗಿ ಜೇನುಹುಳುಗಳನ್ನು ಬಾಡಿಗೆಗೆ ಪಡೆಯಲಾಗುತ್ತದೆ. ಹತ್ತು ವರ್ಷಗಳ ಹಿಂದೆ ಕ್ಯಾಲಿಫೋರ್ನಿಯಾದ ಮಡೆಸ್ಟೊ ಪಟ್ಟಣದಲ್ಲಿರುವ ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ಬೆಳೆಗಾರರರು ಈ ಮಾಹಿತಿ ಹಂಚಿಕೊಂಡಿದ್ದರು.
ವಿಶ್ವದ ಶೇ 80ರಷ್ಟು ಬಾದಾಮಿ ಬೇಡಿಕೆಯನ್ನು ಕ್ಯಾಲಿಫೋರ್ನಿಯಾ ಪೂರೈಸುತ್ತದೆ. ಅಲ್ಲಿನ ಲಕ್ಷಾಂತರ ಹೆಕ್ಟೇರ್ ಭೂಮಿಯಲ್ಲಿ ಬಾದಾಮಿ ಬೆಳೆಯಲಾಗುತ್ತದೆ. ಬಾದಾಮಿ ಮರಗಳಲ್ಲಿ ಹೂವುಗಳು ಅರಳಿದಾಗ ಏಕಕಾಲಕ್ಕೆಎಲ್ಲ ಮರಗಳಲ್ಲೂ ಪರಾಗಸ್ಪರ್ಶ ಕ್ರಿಯೆ ನಡೆಯಬೇಕು. ಒಂದು ಜೇನುನೊಣ ಒಂದೇ ಮರದ ವಿವಿಧ ಹೂವುಗಳಿಂದ ಪರಾಗರೇಣು ಕೊಂಡೊಯ್ದು ದೂರದಲ್ಲಿರುವ ಇತರ ಮರಗಳಿಗೆ ಹಂಚಲು ಸಾಧ್ಯ. ಆದರೆ, ಈ ಪ್ರಕ್ರಿಯೆ ಲಕ್ಷಾಂತರ ಹೆಕ್ಟೇರ್‌ನಲ್ಲಿ ನಡೆಯಬೇಕಿರುವ ಕಾರಣದಿಂದ, ಬಹಳ ದೊಡ್ಡ ಸಂಖ್ಯೆಯಲ್ಲಿ ಜೇನುನೊಣಗಳು ಬೇಕಾಗುತ್ತವೆ. ಅದಕ್ಕಾಗಿಯೇ ಬಾದಾಮಿ ಕೃಷಿಕರು ಮರಗಿಡಗಳು ಹೂ
ಬಿಡುವ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜೇನುಗೂಡುಗಳನ್ನು ಬಾಡಿಗೆಗೆ ಪಡೆಯುತ್ತಾರೆ; ‘ಜೇನುನೊಣಗಳು ಬಾದಾಮಿ ಕೃಷಿಯ ಜೀವಾಳ’ ಎನ್ನುತ್ತಾರೆ ಬಾದಾಮಿ ಬೆಳೆಗಾರರು.
ಇತ್ತೀಚೆಗೆ ಚಿಕ್ಕಮಗಳೂರಿನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಸಿಮ್ಸ್) ರಾಸಾಯನಿಕಗಳನ್ನು ಬಳಸಿ 84 ಜೇನುಗೂಡುಗಳನ್ನು ತೆರವುಗೊಳಿಸಿದ ಸುದ್ದಿ ಓದಿದಾಗ ಅಮೆರಿಕದ ‘ಬಾಡಿಗೆ ಜೇನುಹುಳುಗಳು’ ನೆನಪಾದವು.
ಕ್ಯಾಲಿಫೋರ್ನಿಯಾದಲ್ಲಿ ಬಾದಾಮಿ ಕೃಷಿಗೆ ಜೇನುಹುಳುಗಳು ಎಷ್ಟು ಮುಖ್ಯವೋ, ಚಿಕ್ಕಮಗಳೂರಿನ ಕಾಫಿಕೃಷಿಗೆ, ಪಶ್ಚಿಮಘಟ್ಟದ ಅರಣ್ಯ ಪರಿಸರ ಸಮತೋಲನ ರಕ್ಷಣೆಗೂ ಅಷ್ಟೇ ಮುಖ್ಯ. ಇಂಥ ಸೂಕ್ಷ್ಮ ವಿಷಯ ಅರಿಯದೆ ನಿರುಪದ್ರವಿ, ಪರೋಪಕಾರಿ ಹುಳುಗಳ ಗೂಡುಗಳನ್ನು ತೆರವುಗೊಳಿಸಲು ರಾಸಾಯನಿಕ ಹಾಕಿದರೆಂದು ಓದಿದಾಗ ವ್ಯಥೆಯಾಯಿತು. ವಿದ್ಯಾರ್ಥಿಗಳಲ್ಲಿ ಜೀವವೈವಿಧ್ಯದ ಅರಿವು, ಜಾಗೃತಿ ಮೂಡಿಸಬೇಕಾದ ವಿದ್ಯಾಸಂಸ್ಥೆಗಳೇ ಹೀಗೆ ಮಾಡಿದರೆ ಹೇಗೆ?
ಕಾಲೇಜು, ವಸತಿ ನಿಲಯಗಳ ಆವರಣದಲ್ಲಿ ಜೇನುಗೂಡುಗಳಿದ್ದಾಗ, ಅದರಿಂದ ತೊಂದರೆಯಾಗುತ್ತದೆ ಎಂಬ ಆತಂಕ ಸಹಜ. ಮುಂಜಾಗ್ರತಾ ಕ್ರಮವಾಗಿ ಕಾಲೇಜಿನ ಆಡಳಿತ ಮಂಡಳಿ ಇಂಥದ್ದೊಂದು ಹೆಜ್ಜೆ ಇಟ್ಟಿರಬಹುದು. ಆದರೆ, ಅವುಗಳನ್ನು ನಾಶಗೊಳಿಸುವ ಹಕ್ಕು ಅವರಿಗಿಲ್ಲ. ಜೇನುಹುಳುಗಳನ್ನು ಸುರಕ್ಷಿತವಾಗಿ ಬೇರೆಡೆಗೆ ವರ್ಗಾಯಿಸಲು ದಾರಿಗಳಿದ್ದವು. ಆ ಕೆಲಸಕ್ಕಾಗಿಯೇ ನುರಿತ ತಜ್ಞರಿದ್ದಾರೆ. ಜೇನುಗೂಡುಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ತಂಡಗಳಿವೆ. ಕೃಷಿ ವಿಶ್ವವಿದ್ಯಾಲಯಗಳಲ್ಲಿ ಜೇನು ಕೃಷಿ ವಿಭಾಗವಿದೆ. ಜೇನು ಸಾಕಾಣಿಕೆಯ ಪರಿಣತರಿದ್ದಾರೆ. ಕಾಲೇಜು ಆಡಳಿತ ಮಂಡಳಿ ಇಂಥ ಯಾರನ್ನಾದರೂ ಸಂಪರ್ಕಿಸಿದ್ದರೂ ಪರಿಸರಸ್ನೇಹಿ ಪರಿಹಾರ ಸಿಕ್ಕಿರುತ್ತಿತ್ತು.
ಜೇನುಹುಳುಗಳು ಒಳಗೆ ಪ್ರವೇಶಿಸದಂತೆ ಕಾಲೇಜು ಕೊಠಡಿಗಳ ಕಿಟಕಿಗಳಿಗೆ ಮೆಶ್ ಹಾಕಿದ್ದರೂ ಸಾಕಾಗಿತ್ತು. ಅದು ಬಿಟ್ಟು, ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುವ ಜೇನುಹುಳು
ಗಳನ್ನು ನಾಶಮಾಡಲು ಪ್ರಯತ್ನಿಸುವುದು ಸರಿಯಾದ ಕ್ರಮವಲ್ಲ ಎನ್ನುತ್ತಾರೆ ಚಿಕ್ಕಮಗಳೂರು ಜಿಲ್ಲೆಯ ಪರಿಸರ ಕಾರ್ಯಕರ್ತ ನಾಗರಾಜ ಕೂವೆ.
ಭೂಮಿಯ ಮೇಲಿನ ಶೇ 85ರಷ್ಟು ಜಾತಿಯ ಸಸ್ಯಗಳ ಉಳಿವು ಜೇನುನೊಣಗಳನ್ನು ಅವಲಂಬಿಸಿದೆ. ಕೃಷಿ ಕ್ಷೇತ್ರದಲ್ಲಿ ಅತಿಯಾದ ರಾಸಾಯನಿಕಗಳ ಬಳಕೆ, ಹವಾಮಾನ ವೈಪರೀತ್ಯ ಮತ್ತಿತರ
ಕಾರಣಗಳಿಂದಾಗಿ ಜೇನುಹುಳುಗಳು ಅಪಾಯ ಎದುರಿಸು ತ್ತಿವೆ. ಇಂಥ ಘಟನೆಗಳು ಮರುಕಳಿಸುತ್ತಿದ್ದರೆ ಭವಿಷ್ಯದಲ್ಲಿ ಬಹುದೊಡ್ಡ ಪರಿಸರ ಬಿಕ್ಕಟ್ಟನ್ನು ಎದುರಿಸಬೇಕಾದೀತು.
ನಗರ ಪ್ರದೇಶಗಳಲ್ಲಿ ಜೇನುಹುಳುಗಳನ್ನು ನಾಶ ಮಾಡುವ ಕೆಲಸಗಳು ನಡೆಯುತ್ತಿರುತ್ತವೆ. ಅವೆಲ್ಲ ಸುದ್ದಿ
ಆಗುವುದಿಲ್ಲ. ನಗರದ ಎಷ್ಟೋ ಕಟ್ಟಡಗಳಲ್ಲಿ (ವಿಶೇಷವಾಗಿ ಸರ್ಕಾರಿ ಕಚೇರಿಗಳಲ್ಲೇ) ಬೆಂಕಿ ಹಾಕಿ ಜೇನುಹುಳುಗಳನ್ನು ಓಡಿಸಿರುವ ಉದಾಹರಣೆಗಳಿವೆ.
ಅನೇಕರಿಗೆ ಜೇನುಗೂಡುಗಳನ್ನು ಹೇಗೆ ನಿರ್ವಹಣೆ ಮಾಡಬೇಕು, ವೈಜ್ಞಾನಿಕವಾಗಿ ಹೇಗೆ ಸ್ಥಳಾಂತರಿಸಬೇಕು, ಈ ಬಗ್ಗೆ ಎಲ್ಲಿ ವಿಚಾರಿಸಬೇಕು ಎಂಬುದರ ಬಗ್ಗೆ ಅರಿವು ಇರುವುದಿಲ್ಲ. ಜೇನುಹುಳುಗಳು ದಾಳಿ ಮಾಡಿ ಕಚ್ಚುತ್ತವೆ ಎನ್ನುವ ಭಯವೂ ದುಡುಕಲು ಕಾರಣವಾಗುತ್ತದೆ. ಅಮೃತ ನೀಡುವ ಜೇನುಹುಳುಗಳನ್ನು ವಿಷಕೀಟಗಳಂತೆ ಕಾಣಲಾಗುತ್ತದೆ.
ಜೇನುಹುಳುಗಳನ್ನು ನಾಶಗೊಳಿಸುವ ಪ್ರಯತ್ನ ತಡೆಯುವುದಕ್ಕಾಗಿ, ವೈಜ್ಞಾನಿಕವಾಗಿ ಜೇನುಗೂಡು ಸ್ಥಳಾಂತರಿಸುವ ತಂಡದ ವಿವರಗಳು ಒಂದೆಡೆ ಸಿಗುವಂತೆ ಮಾಡಬೇಕು. ಈ ಮಾಹಿತಿಗಾಗಿ ಸಂಪರ್ಕಿಸಲು ಒಂದು ಸಹಾಯವಾಣಿ ಸ್ಥಾಪಿಸಬೇಕು. ‘ಜೇನುಗೂಡು ಸ್ಥಳಾಂತರಿಸುವ ಅಗತ್ಯ ಇದ್ದವರು, ಈ ಸಹಾಯವಾಣಿಗೆ ಕರೆ ಮಾಡಿ’ ಎಂದು ಜನರಲ್ಲಿ ಜಾಗೃತಿ ಮೂಡಿಸಬೇಕು.
ಸರ್ಕಾರ, ತೋಟಗಾರಿಕೆ ಇಲಾಖೆಯಲ್ಲಿ ಜೇನುಕೃಷಿ ವಿಭಾಗವನ್ನು ಸೇರಿಸಿದೆ. ಅದೇ ವಿಭಾಗದಲ್ಲಿ ಈ ಸಹಾಯ ವಾಣಿ ಆರಂಭಿಸುವ ಪ್ರಯತ್ನ ಮಾಡಬಹುದು. ಪ್ರಸ್ತುತ ರಾಜ್ಯದಾದ್ಯಂತ ಬಹುತೇಕ ಹಳ್ಳಿ–ಪಟ್ಟಣಗಳಲ್ಲಿ ಜೇನುಕೃಷಿಕರು ಇದ್ದಾರೆ. ಕೆಲವು ಕಡೆ ಜೇನುಗೂಡು ಬಿಡಿಸುವ ತಂಡಗಳಿವೆ. ಇಂಥವರಿಗೆ ಇನ್ನಷ್ಟು ತರಬೇತಿ ನೀಡಿ ಈ ‘ಸಹಾಯವಾಣಿ’ ಕಾರ್ಯಕ್ಕೆ ನೆರವಾಗಲು ಬಳಸಿಕೊಳ್ಳಬಹುದು, ಸೂಕ್ತ ಸಂಭಾವನೆ ನೀಡಬಹುದು. ಇದರಿಂದ ಸ್ಥಳೀಯವಾಗಿ ಜೇನುಕೃಷಿಕರಿಗೆ ಉದ್ಯೋಗ ಲಭಿಸಿದಂತಾಗುತ್ತದೆ. ಸಾರ್ವಜನಿಕರಿಗೆ ಜೇನು ಸ್ಥಳಾಂತರಕ್ಕೆ ನೆರವಾದಂತೆಯೂ ಆಗುತ್ತದೆ. ಇಂಥದ್ದೊಂದು ಕ್ರಮದ ಬಗ್ಗೆ ಸರ್ಕಾರ ಚಿಂತನೆ ನಡೆಸಬಹುದು. ಜೇನುಗಳ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.