ADVERTISEMENT

ದೇಶ ಮೊದಲು ಎಂದರೇನು?

ದೇಶ ಎಂದರೆ ಗಡಿ ಮತ್ತು ಸೈನ್ಯ ಮಾತ್ರವೇ? ಹಾಗಿದ್ದರೆ, ಅದರಲ್ಲಿ ಜನ ಮತ್ತು ಅವರ ಕಷ್ಟ-ಸುಖಗಳು ಸೇರಿಯೇ ಇಲ್ಲವೇ?

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 20:00 IST
Last Updated 18 ಏಪ್ರಿಲ್ 2019, 20:00 IST
.
.   

ನರೇಂದ್ರ ಮೋದಿಯವರು ಏನಲ್ಲದಿದ್ದರೂ ಚತುರ ಮಾತುಗಾರರು. ಮೊನ್ನೆ ಅವರು ಚಿತ್ರದುರ್ಗದಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ, ಬಿಜೆಪಿಗೆ ದೇಶ ಮೊದಲಾದರೆ, ವಿರೋಧ ಪಕ್ಷಗಳಿಗೆ ಕುಟುಂಬ ಮೊದಲು ಎಂದು ಹೇಳುವ ಮೂಲಕ ಇದನ್ನು ಸಾಬೀತುಪಡಿಸಿದ್ದಾರೆ (ಪ್ರ.ವಾ., ಏ.12). ಕರ್ನಾಟಕದ ರಾಜಕಾರಣವನ್ನು ಗಮನಿಸುತ್ತಾ ಬಂದ ಸಾಮಾನ್ಯ ಜನರ ಮನಸ್ಸಿಗೆ ಮೋದಿಯವರ ಈ ಮಾತಿನ ಬಾಣ ಸರಾಗವಾಗಿ ಹೋಗುತ್ತದೆ.

ಆದರೆ ಈಗಿನ ಲೋಕಸಭಾ ಚುನಾವಣೆ ಸಂದರ್ಭವನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ, ಮೋದಿಯವರ ಮಾತು ಸಂಪೂರ್ಣ ಸತ್ಯವೇನಲ್ಲ ಎಂದು ಗೊತ್ತಾಗುತ್ತದೆ. ಏಕೆಂದರೆ ಇವರ ಪಕ್ಷಕ್ಕೂ ರಾಜ್ಯದಲ್ಲಿ ಕುಟುಂಬ ರಾಜಕಾರಣದ ದೀರ್ಘ ಇತಿಹಾಸವಿದ್ದು, ಈ ಚುನಾವಣೆಯಲ್ಲೇ ಶಿವಮೊಗ್ಗ, ಹಾವೇರಿ, ದಾವಣಗೆರೆ, ಚಿಕ್ಕೋಡಿ ಕ್ಷೇತ್ರಗಳಲ್ಲಿ ಇವರು ಪೋಷಿಸುತ್ತಿರುವುದೂ ಕುಟುಂಬ ರಾಜಕಾರಣವನ್ನೇ ಎಂಬುದು ತಿಳಿಯುತ್ತದೆ.

ಇನ್ನು ಇವರ ‘ದೇಶ ಮೊದಲು’ ಎಂಬ ಮಾತನ್ನಷ್ಟೇ ಪರಿಶೀಲಿಸೋಣ. ದೇಶ ಎಂದರೆ ಏನು? ಗಡಿ ಮತ್ತು ಸೈನ್ಯವೇ? ಅದರಲ್ಲಿ ಜನ ಮತ್ತು ಅವರ ಕಷ್ಟ-ಸುಖಗಳು ಸೇರಿಯೇ ಇಲ್ಲವೇ? ಮೋದಿಯವರ ಆಳ್ವಿಕೆಯ ಕಾಲದಲ್ಲೇ ನಮ್ಮ ಸೇನಾ ಸಂಸ್ಥಾಪನೆಗಳ ಮೇಲೆ ನೆರೆದೇಶದ ಹೆಚ್ಚು ದಾಳಿಗಳು ನಡೆದಿರುವುದು ಎಂಬುದನ್ನು ಜನ ಮರೆತಿಲ್ಲ. ಮುಖ್ಯವಾಗಿ ಉರಿ, ಪಠಾಣ್‍ಕೋಟ್ ದಾಳಿಗಳು, ನಂತರ ಇತ್ತೀಚಿನ ಪುಲ್ವಾಮಾ ದಾಳಿ. ಈ ಘಟನೆಗಳಿಗೆ, ಇದರಿಂದಾಗಿ ನಮ್ಮ ಸೇನೆ ಅನುಭವಿಸಿದ ಕಷ್ಟ ನಷ್ಟಗಳಿಗೆ ಯಾರ ಆಡಳಿತ ಹೊಣೆ? ಬಾಲಾಕೋಟ್ ನಿರ್ದಿಷ್ಟ ದಾಳಿ ನಡೆಸಿದ ವೀರ ಯೋಧರ ನೆನಪಲ್ಲಿ ತಮ್ಮ ಪಕ್ಷಕ್ಕೆ ಮತ ಹಾಕಬೇಕೆಂದು ಮೋದಿ ಹೊಸ ಮತದಾರರಿಗೆ ಕರೆ ಬೇರೆ ಕೊಟ್ಟಿದ್ದಾರೆ! ಇದು ಪಾಕಿಸ್ತಾನದೊಡನೆ ಯುದ್ಧ ಮಾಡಿ ಗೆದ್ದ ಈವರೆಗಿನ ಯಾವ ಸರ್ಕಾರವೂ ಇಳಿಯದಂತಹ ರಾಜಕೀಯ ಮಟ್ಟದ ಮಾತು ಎಂದು ವಿಷಾದದಿಂದ ಹೇಳಬೇಕಿದೆ.

ADVERTISEMENT

ನಮ್ಮ ವೀರಯೋಧರು ದೇಶಕ್ಕೆ ಸೇರಿದವರು. ಯಾವುದೇ ಸರ್ಕಾರದ ಅಥವಾ ಪಕ್ಷದ ಸ್ವತ್ತಲ್ಲ. ಆದರೆ ಮೋದಿಯವರು ಸೇನೆಯನ್ನು ಮತ ಯಾಚಿಸುವ ಸಾಧನವನ್ನಾಗಿ ಪರಿವರ್ತಿಸಿಕೊಂಡು ಸೇನೆಯ ಘನತೆ, ಪಾವಿತ್ರ್ಯಕ್ಕೆ ಅಪಚಾರವೆಸಗಿದ್ದಾರೆ. ಇದರ ಜೊತೆಗೇ ಗಮನಿಸಬೇಕಾದ ಇನ್ನೆರಡು ಸಂಗತಿಗಳೆಂದರೆ, ಈ ನಿರ್ದಿಷ್ಟ ದಾಳಿಯ ಪರಿಣಾಮಗಳು ಬಿಜೆಪಿ ನಾಯಕರ ಮಾತುಗಳಾಚೆ ಅಂತರರಾಷ್ಟ್ರೀಯ ವಲಯಗಳಲ್ಲಿ ಇನ್ನೂ ಖಚಿತವಾಗಿ ಸಾಬೀತಾಗಬೇಕಿದೆ ಎಂಬುದು ಒಂದು. ಇನ್ನೊಂದು ಸಂಗತಿ, ಇಂತಹ ನಿರ್ದಿಷ್ಟ ದಾಳಿಗಳು ಈ ಹಿಂದಿನ ಸರ್ಕಾರಗಳ ಆಳ್ವಿಕೆಯ ಸಮಯಗಳಲ್ಲೂ ನಡೆದಿದ್ದು, ಅವಕ್ಕೆ ಸಕಾರಣವಾಗಿಯೇ ಪ್ರಚಾರ ನೀಡಿಲ್ಲ ಎಂಬುದು.

ವಾಸ್ತವ ಮಟ್ಟದಲ್ಲಿ ಯೋಚಿಸುವುದಾದರೆ, ದೇಶ ಅಂದರೆ ನಿಜವಾಗಿ ಜನ. ಅವರ ಕಷ್ಟ ಸುಖಗಳು. ಆದರೆ ಮೋದಿಯವರು ಈಗ ಈ ಹಿಂದಿನ ಚುನಾವಣೆಗಳ ಸಮಯದಲ್ಲಿ ಜನರ ಬದುಕನ್ನು ಹಸನು ಮಾಡುವುದಾಗಿ ಹೇಳಿದ್ದ ತಮ್ಮ ಯಾವ ಯೋಜನೆ, ವಾಗ್ದಾನಗಳ ಪ್ರಸ್ತಾಪವನ್ನೂ ಮಾಡದೆ ದೇಶ, ಸೇನೆ, ವಿರೋಧ ಪಕ್ಷ ಎಂದು ಭಾವಾವೇಶದ ಜಾಣ ಮಾತುಗಳನ್ನಾಡುತ್ತಿರುವುದು ಏಕೆಂದು ಅರ್ಥವಾಗುತ್ತಿಲ್ಲ. ಅವರೇ ವಾಗ್ದಾನ ಮಾಡಿದ್ದಂತೆ ವಿದೇಶಗಳಿಂದ ಕಪ್ಪುಹಣ ತಂದು ನಮಗೆ ಹಂಚಲು ಅವರಿಗೆ ಏಕೆ ಸಾಧ್ಯವಾಗಲಿಲ್ಲ?

ಈ ಬಗ್ಗೆ ಒಂದು ಸಾಲಿನ ಕ್ಷಮಾಪಣೆಯ ಸೌಜನ್ಯದ ಮಾತೂ ಬೇಡವೇ? ರೈತರ ಬೆಳೆಗೆ ಸೂಕ್ತ ಬೆಲೆ ಕೊಟ್ಟು ಅವರ ಆದಾಯ ಹೆಚ್ಚಿಸುವ ಮೂಲಕ, ಅವರ ಆತ್ಮಹತ್ಯೆಗಳನ್ನು ಏಕೆ ನಿಲ್ಲಿಸಲಾಗಲಿಲ್ಲ? ಕಪ್ಪುಹಣ, ಭಯೋತ್ಪಾದನೆ ಮತ್ತು ನಕ್ಸಲ್ ಹಿಂಸೆಯ ವಿರುದ್ಧದ ಕಾರ್ಯಾಚರಣೆ ಎಂದು ಘೋಷಿಸಿ ಜಾರಿಗೆ ತಂದ ನೋಟು ಅಮಾನ್ಯೀಕರಣ ಇವಾವುದನ್ನೂ ಸಾಧಿಸದೆ, ಕೆಲವರು ಕಪ್ಪುಹಣ ಬಿಳಿ ಮಾಡಿಕೊಳ್ಳಲು ಅವಕಾಶ ಒದಗಿದ್ದು ಹೇಗೆ? ಕಾಶ್ಮೀರದಲ್ಲಿ ಹಿಂದೆಂದಿಗಿಂತ ಹೆಚ್ಚು ಪ್ರತ್ಯೇಕತಾವಾದದ ಪರ ವಾತಾವರಣ ಸೃಷ್ಟಿಯಾಗಿ ಸ್ಥಳೀಯರೂ ಭಯೋತ್ಪಾದನೆಯತ್ತ ಒಲಿಯುತ್ತಿರುವ ಹೊಸ ಬೆಳವಣಿಗೆಗೆ ಏನು ಕಾರಣ?

ರಾಜ್ಯಪಾಲರೊಬ್ಬರು, ಕಾಶ್ಮೀರಿಗರನ್ನೂ ಅವರ ಉತ್ಪನ್ನಗಳನ್ನೂ ಬಹಿಷ್ಕರಿಸಿ ಎಂಬ ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವಂತಹ ಹೇಳಿಕೆ ನೀಡಿಯೂ ಆ ಸ್ಥಾನದಲ್ಲಿ ಹೇಗೆ ಮುಂದುವರಿದಿದ್ದಾರೆ? ದೇಶವು ದಾಖಲೆ ಮಟ್ಟದಲ್ಲಿ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವುದೇಕೆ? ಕೈಗಾರಿಕಾ ಉತ್ಪಾದನೆ, ವಿದೇಶಿ ಬಂಡವಾಳ ಹೂಡಿಕೆ ಅತಿ ಕೆಳಕ್ಕೆ ಇಳಿದಿರುವುದೇಕೆ? ಇವುಗಳ ನಡುವೆಯೂ ನಮ್ಮ ದೇಶದ ಪ್ರಗತಿ ದರ ಹೆಚ್ಚಿ, ಕೋಟ್ಯಧೀಶ್ವರರ ಸಂಖ್ಯೆಯೂ ಹೆಚ್ಚಲು ಹೇಗೆ ಸಾಧ್ಯ? ವಿಜಯ್‌ ಮಲ್ಯ, ನೀರವ್‌ ಮೋದಿಯಂಥ ವಂಚಕರು ದೇಶಬಿಟ್ಟು ಹೊರಕ್ಕೆ ಹಾರಿದ್ದು ಹೇಗೆ ಇತ್ಯಾದಿ ಜನಸಂಬಂಧಿ ಪ್ರಶ್ನೆಗಳಿಗೆ ಉತ್ತರವನ್ನಾಗಲೀ, ವಿವರಣೆಯನ್ನಾಗಲೀ ಮೋದಿಯವರು ಏಕೆ ನೀಡುತ್ತಿಲ್ಲ?

ಮೋದಿ ಅವರು ಮುಂದಿನ ಹಂತದ ಪ್ರಚಾರ ಸಭೆಗಳಲ್ಲಾದರೂ ಈ ವಿಷಯಗಳ ಬಗ್ಗೆ ಮಾತನಾಡಿ, ತಮ್ಮ ‘ಅಚ್ಛೇ ದಿನ’ಗಳನ್ನು ಜನ ಯಾವಾಗ ನಿರೀಕ್ಷಿಸಬಹುದು ಎಂಬುದನ್ನು ಹೇಳುವರು ಎಂದು ಆಶಿಸಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.