1970ರಿಂದಲೂ ಪ್ರತಿವರ್ಷ ಏಪ್ರಿಲ್ 22ರಂದು ‘ವಿಶ್ವ ಭೂಮಿ ದಿನ’ ಆಚರಿಸಲಾಗುತ್ತಿದೆ. ಇರುವುದೊಂದೇ ಭೂಮಿ, ಇಂತಹ ಪ್ರಶಸ್ತ ಆವಾಸ ಇನ್ನೊಂದಿಲ್ಲ, ಭೂಮಿಯನ್ನು ಜೋಪಾನವಾಗಿ ಇಟ್ಟುಕೊಳ್ಳೋಣ ಎಂದು ಸಾರುವ ಈ ಬಹು ಮಹತ್ವದ ದಿನ ಒಂದು ನೆನಪಿನೋಲೆ.
‘ನಮ್ಮ ಸಾಮರ್ಥ್ಯ, ನಮ್ಮ ಭೂಮಿ’ ಎನ್ನುವ ಧ್ಯೇಯವಾಕ್ಯದೊಂದಿಗೆ ಈ ಬಾರಿಯ ಜಾಗತಿಕ ಸಡಗರ ರಂಗೇರುತ್ತದೆ. ಅಂದು ಹಲವರು ಒಟ್ಟಾಗಿ ಗಾಳಿ, ಸಾಗರ, ಮಣ್ಣು, ಪರಿಸರ ವ್ಯವಸ್ಥೆ, ವನ್ಯಜೀವನ ಮತ್ತು ಮನುಷ್ಯರ ಆರೋಗ್ಯದ ಕುರಿತು ಜಾಗೃತಿ ಮೂಡಿಸುತ್ತಾರೆ. ಇಲ್ಲಿ ನಮ್ಮ ಶಕ್ತಿ ಎಂದರೆ, ನಾವು ಇಂಧನವಾಗಿ ಬಳಸುವ ವಾಯು, ಕಲ್ಲಿದ್ದಲು, ಕಟ್ಟಿಗೆ, ಪೆಟ್ರೋಲು, ಅನಿಲ. ನಮ್ಮ ಭೂಮಿ ಎಂದರೆ ಭೂಮಿಯನ್ನು ಕಾಪಾಡಲು ನಮಗಿರಬೇಕಾದ ಬದ್ಧತೆ. ಜೀವವೈವಿಧ್ಯವುಳ್ಳ ಏಕೈಕ ಗ್ರಹವಾದ ಭೂಮಿ ನಮ್ಮ ಮನೆ. ಉಸಿರಾಟಕ್ಕೆ ಸ್ವಚ್ಛ ಗಾಳಿ, ಕುಡಿಯಲು ಶುದ್ಧ ನೀರು ಒದಗಿಸುವುದಷ್ಟೇ ಸಾಕು ಭೂ ಗ್ರಹದ ಜೀವಿಗಳ ಸಿರಿವಂತಿಕೆಗೆ.
ಭೂಮಿಯ ಗಾತ್ರ ಮತ್ತು ಸೂರ್ಯನಿಂದ ಅಂತರ ವಿಶಿಷ್ಟವಾಗಿದ್ದು ಅದನ್ನು ವಾಸಯೋಗ್ಯವಾಗಿಸಿದೆ. ತಾಳಿಕೆಯ ಸೌಂದರ್ಯ, ಹಚ್ಚಹಸಿರು ಹುಲ್ಲುಗಾವಲು, ಗಿರಿಕಂದರ, ಕಡಲು, ನದಿ, ಸರೋವರ... ಏನೆಲ್ಲ ಅಚ್ಚರಿಗಳು ಭುವಿಯನ್ನು ಜೀವಂತವಾಗಿ ಇರಿಸಿವೆ. ಹಸಿರು ಭೂಮಿ ಮತ್ತು ಅದರ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗಳಿಗೆ ಸಂರಕ್ಷಿಸುವುದು ವಿಶ್ವಪ್ರಜೆಗಳೆಲ್ಲರ ಹೊಣೆ. ‘ವಿಶ್ವ ಭೂಮಿ ದಿನ’ದ ಸಂಭ್ರಮ ಒಂದು ದಿನದ್ದಾಗದೆ ಅದು ವರ್ಷದ ಎಲ್ಲ ದಿನಗಳದ್ದಾಗ ಬೇಕಿದೆ. ಏಕೆಂದರೆ ನಮ್ಮ ಗ್ರಹವನ್ನು ಸಂರಕ್ಷಿಸಿದರೆ ನಮ್ಮನ್ನು ನಾವೇ ಸಂರಕ್ಷಿಸಿಕೊಂಡಂತೆ. ಸ್ವಚ್ಛ, ಆರೋಗ್ಯಯುತ ಮತ್ತು ಸಮಾನ ಭವಿಷ್ಯ ನಮ್ಮದಾಗಲು ನಾವು ದೃಢವಾಗಿ ಕಾರ್ಯೋನ್ಮುಖರಾಗೋಣ. ಸುಸ್ಥಿರತೆಯು ಭೂಮಿಯ ಪ್ರವರ್ಧಮಾನದ ಕೀಲಿಕೈ.
‘ಮರುಬಳಕೆ, ನವೀಕರಣ, ತಿರಸ್ಕಾರ’ ನಮ್ಮ ಇಂದಿನ ಜರೂರು ನಿಬಂಧನೆಯಾಗಬೇಕು. ಹಳೆಯದೇ ಸೌಟು ಬಳಸಿದೆ, ಮೊಂಡಾಗಿದ್ದ ಈಳಿಗೆ ಮಣೆಗೆ ಸಾಣೆ ಹಿಡಿಸಿ ಉಪಯೋಗಿಸಿದೆ, ಪ್ಲಾಸ್ಟಿಕ್ ಚೀಲ ಒಲ್ಲೆನೆಂದೆ- ಇಷ್ಟು ಸಾಕಲ್ಲ ಈ ಮಂತ್ರ ಉದಾಹರಿಸಲು. ನವೀಕರಿಸ ಬಹುದಾದ ಶಕ್ತಿ ಸಂಪನ್ಮೂಲಗಳೆಂದರೆ ಪರಮಾಣು ಮತ್ತು ಪಳೆಯುಳಿಕೆ ಇಂಧನಗಳಿಗೆ ಹೊರತಾದವು. ಅವು ಸರಬರಾಜು ಹಾಗೂ ಬೇಡಿಕೆಗಳಿಗೆ ಒಳಪಟ್ಟ ಇಂಧನ ಮೂಲಗಳು. ಅವು ನಿರಂತರವಾಗಿ ಮತ್ತು ಸ್ವಾಭಾವಿಕವಾಗಿ ನವೀಕೃತಗೊಳ್ಳುವ ಮೂಲಗಳಿಂದ ಒದಗಿಬರುವ ಕಾರಣ ಆ ಹೆಸರು.
ಮಾನವನ ಇತಿಹಾಸದಾದ್ಯಂತ ಒಂದಲ್ಲೊಂದು ಬಗೆಯಲ್ಲಿ ಮರುಬಳಕೆ ಪರಿಕಲ್ಪನೆ ಕಾರ್ಯರೂಪ ದಲ್ಲಿದೆ. ರೋಮನ್ನರು ಹೊಸ ಕಟ್ಟಡಗಳಿಗೆ ಹಳೆಯದರ ಸಾಮಗ್ರಿಗಳನ್ನು ಬಳಸುತ್ತಿದ್ದರು. ಕ್ರಿ.ಶ. 1031ರಲ್ಲಾಗಲೇ ಜಪಾನ್ ದೇಶವು ಕಾಗದವನ್ನು ಪುನರ್ ಉಪಯೋಗಿಸುತ್ತಿತ್ತು. ಸೌದೆ, ಇದ್ದಿಲಿನ ಒಲೆಯ ದಿನಗಳಲ್ಲಿ ಮನೆ ಮನೆಗಳಲ್ಲಿ ನಾನು ಕಂಡ ಅಂಶವೊಂದು ಕಣ್ಣಿಗೆ ಕಟ್ಟಿದಂತಿದೆ. ಸೌದೆ ಒಂದು ವೇಳೆ ಪೂರ್ತಿ ಉರಿಯುವ ಮುನ್ನವೇ ಅಡುಗೆಯಾಯಿತು ಅನ್ನಿ. ಕೊಳ್ಳಿಗೆ ನೀರು ಸಿಂಪಡಿಸಿ ಒಣಗಿಸಿ ಮುಂದಿನ ಅಡುಗೆಗೆ ಸಿದ್ಧವಾಗಿ ಇಟ್ಟುಕೊಳ್ಳುತ್ತಿದ್ದರು. ಅದನ್ನು ತುಂಡಾಗಿಸಿ ಇದ್ದಿಲು ಒಲೆಗೂ ಉರಿಸಬಹುದಿತ್ತು. ಶಕ್ತಿಯ ಬಳಕೆ ಕಡಿಮೆಯಾದಷ್ಟೂ ಕೊಳ್ಳುಬಾಕತನಕ್ಕೆ ಕಡಿವಾಣ ಬೀಳುತ್ತದೆ.
ಹಳೆಯ ಪಾತ್ರೆ ಪಡಗ, ಮರದ ಪೀಠೋಪಕರಣ ಗಳನ್ನು ಹೊಸ ವಿನ್ಯಾಸಗಳಿಗೆ ಹಪಹಪಿಸದೆ ಹಾಗೆಯೇ ಉಪಯೋಗಿಸಬೇಕು. ಅವನ್ನು ತಯಾರಿಸಲು ಅದೆಷ್ಟು ಇಂಧನ ವ್ಯಯವಾಗಿದೆ, ಎಷ್ಟು ಮರಮಟ್ಟು ಕತ್ತರಿಸ ಲಾಗಿದೆ ಎಂಬುದನ್ನು ಪರ್ಯಾಲೋಚಿಸಬೇಕು. ಮರುಬಳಕೆ ನಮ್ಮ ಪರಂಪರೆಯಲ್ಲೇ ಇದೆ ಎನ್ನಲು ಇದೊಂದು ಸರಳ ನಿದರ್ಶನವಷ್ಟೆ.
ಮಾನವನ ನಾಗರಿಕತೆಗೂ ಒಂದು ಮಿತಿ ಇದೆ. ಐಷಾರಾಮಿತನದ ಮೇಲುಗೈನಿಂದ ವ್ಯತಿರಿಕ್ತ ಆಗುಹೋಗುಗಳಾಗುತ್ತಿವೆ. ನೀರ್ಗಲ್ಲು ಕರಗಿ ಹಿಮಪ್ರವಾಹ, ತಾಪಮಾನವೇರಿ ಕಾಳ್ಗಿಚ್ಚು, ಹವಾಮಾನ ವೈಪರೀತ್ಯ, ಪದೇ ಪದೇ ಚಂಡಮಾರುತ, ಬರ, ಮಾಲಿನ್ಯ, ಆಮ್ಲಜನಕದ ಅಭಾವ... ಒಂದೇ? ಎರಡೇ? ಸೌರ, ಪವನ ಹಾಗೂ ಜಲ ಶಕ್ತಿಯನ್ನು ಹೆಚ್ಚು ಅವಲಂಬಿಸುವುದು ನಮ್ಮ ಬದುಕಿನ ಶೈಲಿಯಾಗಬೇಕು. ಪರಿಯಾವರಣದ ರಕ್ಷಣೆಗೆ ಪೂರಕವಾದ ಅಭ್ಯಾಸಗಳು ಅಗತ್ಯ. ಅದುವೇ ಪ್ರಕೃತಿಯೊಂದಿಗೆ ನಮ್ಮ ವರ್ತನೆಯ ತುರ್ತು ಮೂಲಭೂತ ಪಲ್ಲಟ. ಮನುಷ್ಯನ ಚಟುವಟಿಕೆಗಳಿಗೂ ಪ್ರಕೃತಿಗೂ ಸಾಮರಸ್ಯ ಇಲ್ಲದಿದ್ದರೆ ಅದಕ್ಕೆ ಆತ ಮಾತ್ರ ಅಲ್ಲ, ಸಸ್ಯಗಳೂ ಪ್ರಾಣಿಗಳೂ ಸೊರಗುತ್ತವೆ. ಅವುಗಳ ನೆಮ್ಮದಿ ಕೆಟ್ಟರೆ ಮತ್ತೆ ಮನುಷ್ಯಕುಲಕ್ಕೇ ಆಪತ್ತು. ಏಕೆಂದರೆ ಧರೆಯಲ್ಲಿ ಸಕಲ ಜೀವಿಗಳೂ ಪರಸ್ಪರ ನೆಚ್ಚಿಕೊಂಡಿವೆ. ಮರಗಳು ಭೂಮಿಯು ಆಗಸದ ಮೇಲೆ ಬರೆಯುವ ಪದ್ಯಗಳು ಎನ್ನುತ್ತಾರೆ.
ಆಯಾ ಸ್ಥಳೀಯ ಆಡಳಿತಕ್ಕೆ ನವೀಕರಿಸಬಹುದಾದ ಶಕ್ತಿ ಮೂಲಗಳನ್ನು ಉತ್ತೇಜಿಸಲು ಒತ್ತಾಯ, ಪ್ಲಾಸ್ಟಿಕ್ ಉತ್ಪಾದನೆಯ ವಿರುದ್ಧ ಕ್ರಮ, ಪ್ರತಿ ಶಾಲೆಯಲ್ಲೂ ಹವಾಮಾನ ಶಿಕ್ಷಣಕ್ಕೆ ವ್ಯವಸ್ಥೆ- ಹೀಗೆ ಆನ್‌ಲೈನ್ ಮೂಲಕವೇ ಯಾವುದೇ ಸಂಘಟನೆ ‘ವಿಶ್ವ ಭೂಮಿ ದಿನ’ ದಲ್ಲಿ ತೊಡಗಬಹುದು. ‘ನಮಗೆ ಭೂಮಿ ಸೇರಿದ್ದಲ್ಲ, ನಾವು ಭೂಮಿಗೆ ಸೇರಿದವರು. ನಾವು ಭೂಮಿಯ ಸವಾರರೂ ಅಲ್ಲ, ಸರದಾರರೂ ಅಲ್ಲ. ಅದರ ಮೇಲ್ವಿಚಾರಕರು’ ಎನ್ನುವುದನ್ನು ನೆನಪಿಡೋಣ. ಮೊದಲಿಗೆ, ನಾವು ಇತರರಲ್ಲಿ ಬಯಸುವ ಸುಧಾರಣೆಗೆ ಉದಾಹರಣೆಯಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.