ADVERTISEMENT

ಸಂಗತ : ಬೇಕು, ಬೇಕು ಎಲ್ಲಾ ಬೇಕು! ದುಂದುವೆಚ್ಚದ ಗುಂಗಿನಿಂದ ಹೊರಬರಬೇಕಿದೆ

ಹಿಂದೆ ನಮ್ಮ ಬದುಕಿನ ಮಂತ್ರವಾಗಿದ್ದ ಮಿತವ್ಯಯವನ್ನು ಆವರಿಸಿಕೊಂಡಿರುವ ದುಂದುವೆಚ್ಚದ ಗುಂಗಿನಿಂದ ನಾವೆಲ್ಲರೂ ಹೊರಬರಬೇಕಿದೆ

ಡಾ.ವಿನಯ ಶ್ರೀನಿವಾಸ್
Published 27 ಅಕ್ಟೋಬರ್ 2021, 19:35 IST
Last Updated 27 ಅಕ್ಟೋಬರ್ 2021, 19:35 IST
parsimony
parsimony   

ಭಾರತದಲ್ಲಿ ಇದೇ 30ರಂದು ವಿಶ್ವ ಮಿತವ್ಯಯ ದಿನ ಆಚರಿಸಲಾಗುತ್ತದೆ. ಹೌದು, ನಮ್ಮ ಯುವಜನರಿಗೆ ಮಿತವ್ಯಯದ ಪಾಠವನ್ನು ಇಂತಹ ಆಚರಣೆಯ ಮೂಲಕ ಹೇಳಬೇಕಾಗಿದೆ. ನಾವು ವಿದ್ಯಾರ್ಥಿ ಗಳಾಗಿದ್ದಾಗ ಮಿತವ್ಯಯ ನಮ್ಮ ಬದುಕಿನ ಮಂತ್ರ ವಾಗಿತ್ತು. ಹಾಸ್ಟೆಲ್‍ನಲ್ಲಿರಲಿ, ಮನೆಯಲ್ಲಿರಲಿ ದಿನ ನಿತ್ಯದ ಖರ್ಚುಗಳನ್ನು ಸಣ್ಣ ಪುಸ್ತಕವೊಂದರಲ್ಲಿ ಬರೆದಿಡುವುದು, ಒಂದು ವೇಳೆ ಹಿಂದಿಗಿಂತಲೂ ಸ್ವಲ್ಪ ಹೆಚ್ಚು ಖರ್ಚು ಮಾಡಿದರೆ ಪಶ್ಚಾತ್ತಾಪಪಡುವುದು, ಮುಂದೆ ಅಂತಹ ಖರ್ಚನ್ನು ನಿಯಂತ್ರಿಸುವುದರ ಬಗ್ಗೆ ಯೋಜಿಸುತ್ತಿದ್ದೆವು. ಹಿರಿಯರೂ ನಮಗೆ ಮಿತವ್ಯಯದ ಪಾಠವನ್ನು ಆಗಾಗ್ಗೆ ಹೇಳುತ್ತಿದ್ದರು.

ನಾನು ಸ್ನಾತಕೋತ್ತರ ಪದವಿ ಓದುತ್ತಿದ್ದಾಗ ನಮ್ಮ ಪ್ರಾಧ್ಯಾಪಕರೊಬ್ಬರು ಒಂದು ಮಾತು ಹೇಳುತ್ತಿದ್ದರು. ಅದೆಂದರೆ, ನಮ್ಮ ಗಳಿಕೆಯನ್ನು ನಾಲ್ಕು ಭಾಗಗಳನ್ನಾಗಿಸಿ, ಅದರಲ್ಲಿ ಒಂದು ಭಾಗವನ್ನು ನನ್ನದಲ್ಲ ಎಂದು ಮುಂದಿನ ಜೀವನಕ್ಕಾಗಿ ಉಳಿತಾಯ ಮಾಡಬೇಕು, ಮತ್ತೊಂದು ಭಾಗವನ್ನು ಅಸಹಾಯಕರು- ದೀನ ದಲಿತರ ನೆರವಿಗಾಗಿ ಮುಡಿಪಾಗಿಡಬೇಕು, ಮಗದೊಂದು ಭಾಗವನ್ನು ನಮ್ಮ ವೃತ್ತಿ ಅಥವಾ ಉದ್ದಿಮೆಯನ್ನು ಇನ್ನೂ ಎತ್ತರಕ್ಕೇರಿಸಲು ಹೂಡಿಕೆಯ ಹಣವನ್ನಾಗಿ ಕಾದಿಡಬೇಕು, ಉಳಿದ ಕಡೆಯ ಭಾಗದ ಹಣದಿಂದ ಮಾತ್ರವೇ ನಮ್ಮ ಖರ್ಚುವೆಚ್ಚ ಭರಿಸಬೇಕು. ಇದು ಸ್ನಾತಕೋತ್ತರ ಅಧ್ಯಯನ ಮುಗಿಸಿ ವೃತ್ತಿಜೀವನ ಆರಂಭಿಸಲು ಅಣಿಯಾಗುತ್ತಿದ್ದ ತಮ್ಮ ವಿದ್ಯಾರ್ಥಿಗಳಿಗೆ ಅವರ ಕಿವಿಮಾತು!

ಇಂತಹ ಮಾತುಗಳು ಇಂದಿನ ಯುವಜನರಿಗೆ ರುಚಿಸವು. ಹಣ ದೊರೆತಾಗ ಖರ್ಚು ಮಾಡಬೇಕು, ಇಷ್ಟವಾದದ್ದನ್ನೆಲ್ಲ ಖರೀದಿಸಬೇಕು, ಮಜವಾಗಿ ಬದುಕಬೇಕು ಎಂಬುದು ಬದುಕಿನ ಬಗೆಗಿನ ಅವರ ಪರಿಕಲ್ಪನೆ. ಅವರ ನಿಘಂಟಿನಲ್ಲಿ ಬಹುಶಃ ಮಿತವ್ಯಯ ಎಂಬ ಪದವೇ ಇದ್ದಂತಿಲ್ಲ. ಹೆಚ್ಚಿನವರು ಕೊಳ್ಳುಬಾಕ ಸಂಸ್ಕೃತಿಗೆ ಸಂಪೂರ್ಣವಾಗಿ ಶರಣಾಗಿದ್ದಾರೆ. ವಸ್ತುಗಳನ್ನು ಕೊಳ್ಳುವಾಗ ಅದರ ಅಗತ್ಯ ಅಥವಾ ಬೆಲೆಯ ಬಗ್ಗೆ ಯೋಚಿಸುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ತಮ್ಮ ಗೆಳೆಯರು ಬಳಸುವಂತಹ ಬ್ರ್ಯಾಂಡೆಡ್ ವಸ್ತುವೇ ತನ್ನಲ್ಲಿಯೂ ಇರಬೇಕೆಂಬುದು ಕೆಲವರ ಅಭಿಲಾಷೆಯಾದರೆ ಇನ್ನು ಕೆಲವರದ್ದು ವಾಣಿಜ್ಯ ಸಂಕೀರ್ಣಗಳಲ್ಲಿನ ಅಂಗಡಿಗಳು ಕೊಡುವ ರಿಯಾಯಿತಿಯ ಪ್ರಯೋಜನ ಪಡೆಯುವ ತವಕ! ಆ ರಿಯಾಯಿತಿಯ ಬೆನ್ನು ಹತ್ತಿ, ನಾವು ನಿಜಕ್ಕೂ ಹಣವನ್ನು ಉಳಿಸಿದ್ದೇವೆಯೇ ಎಂಬುದರ ಬಗ್ಗೆಯೂ ವಿಶ್ಲೇಷಿಸುವುದಿಲ್ಲ.

ADVERTISEMENT

ಇನ್ನು ಒಂದು ಗುಂಪಿನ ಯುವಜನರಿಗೆ ತಮ್ಮ ದೈನಂದಿನ ಎಲ್ಲ ಮುಖ್ಯ ಘಟನಾವಳಿಗಳ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರದ ರ್ಶಿಸುವ ಹುಚ್ಚು. ಅಲ್ಲಿ ತಾವು ಧರಿಸಿದ ಉಡುಗೆ ತೊಡುಗೆ ಪುನರಾವರ್ತನೆ ಆಗುವಂತಿಲ್ಲವಲ್ಲ! ಹೀಗೆ ಮಾಡುವಾಗ ಎಷ್ಟೋ ಜನ ಮನೆಯ ಆರ್ಥಿಕ ಸ್ಥಿತಿ ಗತಿಯನ್ನು ಅರ್ಥ ಮಾಡಿಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಕೆಲವು ಪೋಷಕರು ಮಕ್ಕಳ ಆಸೆಗೆ ತಣ್ಣೀರೆರಚಲು ಇಷ್ಟಪಡದೆ ಕಷ್ಟಪಟ್ಟಾದರೂ ಹಣ ಹೊಂದಿಸುತ್ತಾರೆ.

ಮಾಲ್‌ಗಳಲ್ಲಿ ಒಮ್ಮೆ ಸುತ್ತಾಡಿದರೆ ಸಾಕು, ಹಣದ ಕಟ್ಟುಗಳು ಕರಗುವುದೇ ಗೊತ್ತಾಗುವುದಿಲ್ಲ. ಹಿಂದೆಲ್ಲ ನಮಗೆ ಬೇಕಾದ ವಸ್ತುಗಳನ್ನು ಅಂಗಡಿಯಾತ ತೆಗೆದು ತೋರಿಸಿದ್ದರಲ್ಲಿ ನಮಗೆ ಇಷ್ಟವಾದುದನ್ನು ಆರಿಸಿ ಖರೀದಿಸುತ್ತಿದ್ದೆವು. ಆದರೆ ಈಗ ಮಾಲ್‌ಗಳಲ್ಲಿ ಬಹುತೇಕ ಎಲ್ಲಾ ವಸ್ತುಗಳನ್ನು ಪ್ರಕಾಶಮಾನವಾದ ಬೆಳಕಿನ ಅಡಿಯಲ್ಲಿ ಸುಂದರವಾಗಿ ಪ್ರದರ್ಶನಕ್ಕಿಟ್ಟಿರುತ್ತಾರೆ. ಶಾಪಿಂಗ್‌ಗೆ ಹೋದವರು ಮಂತ್ರಮುಗ್ಧರಂತೆ, ಎಷ್ಟೋ ಬಾರಿ ಅದರ ಅಗತ್ಯ ಅನಗತ್ಯದ ಬಗ್ಗೆ ವಿಚಾರವನ್ನೇ ಮಾಡದೆ ವಸ್ತುಗಳನ್ನು ಖರೀದಿಸುತ್ತಾರೆ.

ಗಾಂಧೀಜಿ ‘ಅಗತ್ಯವಿಲ್ಲದ ಅಥವಾ ನನ್ನದಲ್ಲದ ವಸ್ತುವೊಂದು ನನ್ನ ಬಳಿ ಬಂದರೆ ತಪ್ಪಿತಸ್ಥ ಅಥವಾ ಅಪರಾಧಿ ಮನೋಭಾವ ನನ್ನನ್ನು ಕಾಡುತ್ತದೆ’ ಎನ್ನುತ್ತಿದ್ದರಂತೆ. ಇಂದಿನ ಯುವಜನರನ್ನು ನೋಡಿದ್ದರೆ ಆ ಮಹಾತ್ಮ ಏನು ಹೇಳುತ್ತಿದ್ದರೋ!

ಈಗಿನವರನ್ನು ಮೋಡಿ ಮಾಡಿರುವ ಇನ್ನೊಂದು ವ್ಯವಸ್ಥೆ ಆನ್‍ಲೈನ್ ಶಾಪಿಂಗ್. ಮೊಬೈಲ್ ಹಿಡಿದು, ಕಣ್ಣಿಗೆ ಸುಂದರವಾಗಿ ಕಂಡದ್ದನ್ನೆಲ್ಲ ಕುಳಿತಲ್ಲಿಯೇ ಆದೇಶ ಮಾಡಿ ತರಿಸಿಕೊಳ್ಳುತ್ತಾರೆ. ಆನ್‌ಲೈನ್‌ ಮೂಲಕ ಹಣ ಪಾವತಿಸುವಾಗ ಒಮ್ಮೊಮ್ಮೆ ಎಷ್ಟು ಖರ್ಚಾಯಿತೆಂಬುದರ ಪರಿವೆಯೂ ಇರುವುದಿಲ್ಲ.

ಹಿಂದೆ ವಸ್ತುಗಳು ಹಾಳಾದರೆ ರಿಪೇರಿ ಮಾಡಿ ಮರುಬಳಸುವ ಬಗ್ಗೆ ಆಲೋಚಿಸುವುದಿತ್ತು. ಈಗ ಒಮ್ಮೆ ವಸ್ತುವು ಕೆಲಸಕ್ಕೆ ಬರುವುದಿಲ್ಲ ಎಂದಾದರೆ ಆ ಜಾಗಕ್ಕೆ ಹೊಸ ವಸ್ತುವೇ ಬರಬೇಕು. ಕನಿಷ್ಠೀಯತೆ(ಮಿನಿಮಲಿಸಮ್) ಪ್ರತಿಪಾದಿಸುವವರು ‘ಒಂದು ವರ್ಷದವರೆಗೆ ನೀವು ಉಪಯೋಗಿಸದ ಯಾವುದೇ ವಸ್ತುವನ್ನು ಇನ್ನು ಮುಂದೆ ನೀವು ಉಪಯೋಗಿಸುವ ಸಂಭವ ಬಹಳ ಕಡಿಮೆ’ ಎನ್ನುತ್ತಾರೆ. ಅಷ್ಟೇ ಅಲ್ಲ, ನೀವು ಒಂದು ತಿಂಗಳವರೆಗೆ ಬಳಸುವ ವಸ್ತುಗಳನ್ನೆಲ್ಲಾ ಒಂದೆಡೆ ಪ್ರತ್ಯೇಕವಾಗಿರಿಸಿ ನೋಡಿ, ಅದು ನಿಮ್ಮಲ್ಲಿರುವ ಒಟ್ಟು ವಸ್ತುಗಳ ಶೇಕಡ 10- 15ರಷ್ಟು ಮಾತ್ರವೇ ಇರಬಹುದು ಎನ್ನುವುದೂ ಅವರ ವಾದ.

ಈ ಅನಗತ್ಯ ಅಥವಾ ದುಂದುವೆಚ್ಚದ ಗುಂಗಿನಿಂದ ನಾವೆಲ್ಲರೂ ಹೊರಬರಬೇಕಿದೆ. ಮತ್ತೆ ಮಿತವ್ಯಯದ ಪಾಠವನ್ನು ನಮ್ಮ ಮಕ್ಕಳಿಗೆ ಹೇಳಿಕೊಡಬೇಕಾಗಿದೆ. ನಾವು ಉಪಯೋಗಿಸದ, ಉತ್ತಮ ಸ್ಥಿತಿಯಲ್ಲಿರುವ ವಸ್ತುಗಳನ್ನು ಅದರ ಅಗತ್ಯ ಇರುವವರಿಗೆ ಆಗಾಗ್ಗೆ ಕೊಡುವ ಪರಿಪಾಟ ಬೆಳೆಸಿಕೊಳ್ಳಬೇಕಾಗಿದೆ. ಎಷ್ಟು ಬೇಕೋ ಅಷ್ಟೇ ಕೊಂಡುಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.