ಬೆಳಕು ಇಲ್ಲದಿದ್ದರೆ ನಮ್ಮ ಭೂಗ್ರಹವು ಶೈತ್ಯ ಮತ್ತು ಬಂಜರು ಸ್ಥಳವಾಗಿರುತ್ತಿತ್ತು. ಬೆಳಕಿರುವಲ್ಲಿ ಸಮೃದ್ಧ ಬದುಕಿರುತ್ತದೆ. ಬೆಳಕು ಜ್ಞಾನದ ಪ್ರತೀಕ. ಸರಿಯಾದ ಬೆಳಕಿನಲ್ಲಿ ಸರಿಯಾದ ಸಮಯದಲ್ಲಿ ಪ್ರತಿಯೊಂದೂ ಅಸಾಮಾನ್ಯ ಎಂಬ ನುಡಿಯಿದೆ. ಜಗತ್ತನ್ನು ಬೆಳಕೆಂಬ ಮಸೂರದ ಮೂಲಕವೇ ನೋಡಿ ತಿಳಿಯಲು ಸಾಧ್ಯ. ಶಕ್ತಿಯ ಸ್ವರೂಪವಾದ ಬೆಳಕು ಬಹು ಶುದ್ಧ. ಅನನ್ಯ ವೇಗದ ಸಂಪರ್ಕ ಕಲ್ಪಿಸುವ ಅದು ಭವಿಷ್ಯವನ್ನು ಸಾಧ್ಯವಾಗಿಸುವ ಚೈತನ್ಯ. ಕತ್ತಲೆಯಲ್ಲಿ ಭೇಟಿಯಾಗುವ ಅಪೂರ್ವ ಅತಿಥಿ, ತಮಸ್ಸಿನ ವೈದ್ಯ, ಬೆಳಕು ಕಿರಿದಾದರೇನು ದಟ್ಟ ಕತ್ತಲನ್ನು ಬೆಳಗಲು... ಹೀಗೆ ಬೆಳಕಿಗೆ ಅದೆಷ್ಟು ವಿಶೇಷಣಗಳು.
ಕತ್ತಲೆಯ ನಿವಾರಣೆಗೆ ಅನಾದಿಕಾಲದಲ್ಲಿ ಪ್ರಾಣಿಗಳ ಕೊಬ್ಬು, ಕಟ್ಟಿಗೆ, ದೀಪ, ಮೋಂಬತ್ತಿಯಂತಹ ವಸ್ತುಗಳನ್ನು ಉರಿಸುತ್ತಿದ್ದರು. ಅಮೆರಿಕದ ಭೌತವಿಜ್ಞಾನಿ ಥಿಯೋಡರ್ ಮೈಮನ್ 1960ರ ಮೇ 16ರಂದು ತಾವು ಆವಿಷ್ಕರಿಸಿದ ಲೇಸರ್ ಅನ್ನು (ಲೈಟ್ ಆ್ಯಂಪ್ಲಿಫಿಕೇಷನ್ ಬೈ ಸ್ಟಿಮ್ಯುಲೇಟೆಡ್ ಎಮಿಷನ್ ಆಫ್ ರೇಡಿಯೇಷನ್) ಮೊದಲಿಗೆ ಶಸ್ತ್ರಕ್ರಿಯೆಗೆ ಯಶಸ್ವಿಯಾಗಿ ಬಳಸಿದರು. ಯುನೆಸ್ಕೊ 2018ರಲ್ಲಿ ಪ್ರತಿವರ್ಷ ಮೇ 16ರಂದು ‘ಅಂತರ ರಾಷ್ಟ್ರೀಯ ಬೆಳಕಿನ ದಿನ’ವನ್ನಾಗಿ ಆಚರಿಸಲು ಕರೆ ನೀಡಿತು. ಶಸ್ತ್ರಚಿಕಿತ್ಸೆ, ಮುದ್ರಣ, ಬೆಸುಗೆ, ದ್ಯುತಿ ಸಂವಹನಕ್ಕೆ ವಿವಿಧ ಲೇಸರ್‌ಗಳನ್ನು ಬಳಸಲಾಗುತ್ತದೆ. ಬೆಳಕು ಆಧಾರಿತ ತಂತ್ರಜ್ಞಾನದಲ್ಲಿ ಲೇಸರ್ ಅದ್ಭುತ ಮೈಲಿಗಲ್ಲು. ಬೆಳಕಿನ ಮಹತ್ವದ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ ಯುನೆಸ್ಕೊ ಈ ವಾರ್ಷಿಕ ಸಡಗರವನ್ನು ಆಯೋಜಿಸಿದೆ. ಈ ಜಾಗತಿಕ ಬೆಳಕಿನ ಹಬ್ಬವು ಬೆಳಕನ್ನು ಮೆಚ್ಚುವ ಮತ್ತು ವಿಜ್ಞಾನ, ಸಂಸ್ಕೃತಿ, ಕಲೆ, ಶಿಕ್ಷಣ ಕ್ಷೇತ್ರಗಳಲ್ಲಿ ಅದರ ಪಾತ್ರವನ್ನು ಅರಿಯುವ ಸಂದರ್ಭವಾಗಿದೆ.
‘ಬೆಳಕಿನ ನಾವೀನ್ಯ ಮತ್ತು ಸಮಾಜ’ ಈ ಬಾರಿಯ ಸಂಭ್ರಮದ ಧ್ಯೇಯವಾಕ್ಯವಾಗಿದೆ. ಹಾಗಾಗಿ, ಮಕ್ಕಳಿಗೆ ಬೆಳಕಿನ ವಿದ್ಯಮಾನವನ್ನು ಸ್ವಾರಸ್ಯಕರವಾಗಿ ವಿವರಿಸಲು ಈ ಸನ್ನಿವೇಶವು ಅವಕಾಶವಾಗಲಿ. ಅವರನ್ನು ವಿಜ್ಞಾನ ವಸ್ತುಪ್ರದರ್ಶನಕ್ಕೆ, ಉಪನ್ಯಾಸಕ್ಕೆ, ಕಮ್ಮಟಗಳಿಗೆ ಶಿಕ್ಷಕರು, ಹಿರಿಯರು ಕರೆದೊಯ್ಯ
ಬಹುದು. ಮನೆಯಲ್ಲೇ ಪೆರಿಸ್ಕೋಪ್, ಕಾಮನಬಿಲ್ಲು, ಏಳು ಬಣ್ಣಗಳುಳ್ಳ ಚಕ್ರದಂತಹ ವಿನ್ಯಾಸಗಳನ್ನು ತಯಾರಿಸಲು ನಿರ್ದೇಶಿಸಬಹುದು.
ದೈನಂದಿನ ಬದುಕಿಗೆ ಮಾತ್ರವಲ್ಲ ತಂತ್ರಜ್ಞಾನದ ಅಭಿವೃದ್ಧಿಗೂ ಬೆಳಕು ಬೇಕು. ಫೈಬರ್ ಆಪ್ಟಿಕ್ ಕೇಬಲ್‌ಗಳು ದಟ್ಟ ಸಾಗರಗಳ ಮೂಲಕ ಬೆಳಕಿನ ವೇಗದಲ್ಲಿ ಮಾಹಿತಿಗಳನ್ನು ವಿಶ್ವದ ಒಂದೆಡೆಯಿಂದ ಇನ್ನೊಂದೆಡೆಗೆ ರವಾನಿಸುತ್ತವೆ. ಬೆಳಕಿನ ವಿಜ್ಞಾನ ನಮ್ಮ ಕಲ್ಪನೆಯನ್ನು ಮೀರಿ ಗ್ರಹ, ನಕ್ಷತ್ರ, ಗೆಲಾಕ್ಸಿ
ಗಳಾಚೆಗಿನ ಬ್ರಹ್ಮಾಂಡದ ಶೋಧಕ್ಕೆ ಅನುವು ಮಾಡಿದೆ. ಬೆಳಕು ಸಂಬಂಧಿ ತಂತ್ರಜ್ಞಾನವು ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಮಂದಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿದೆ.
ಯಾವುದೇ ವಸ್ತುವಾಗಲಿ, ಶಕ್ತಿಯಾಗಲಿ ಬೆಳಕಿ ಗಿಂತ ವೇಗವಾಗಿ ಚಲಿಸುವುದು ಅಸಂಭವವೆಂದೇ
ಪರಿಭಾವಿಸಲಾಗಿದೆ. ಎಂದಮೇಲೆ ಬೆಳಕಿಗೂ ತ್ವರಿತವಾಗಿ ಸುದ್ದಿ ಮುಟ್ಟಿಸುವ ಟಪಾಲಿನವ ಇನ್ನೊಬ್ಬನಿಲ್ಲ. ಒಂದು ವೇಳೆ ಬೆಳಕಿನ ವೇಗ ಈಗಿರುವುದರ ಮೂರನೇ ಎರಡರಷ್ಟು ಇದ್ದಿದ್ದರೆ, ಆಗ ಪರಮಾಣುವಿನ ಸ್ಫೋಟದಲ್ಲಿ ಬಿಡುಗಡೆಯಾಗುವ ಶಕ್ತಿ ಬರೀ ಒಂದು ಭಿನ್ನರಾಶಿಯಷ್ಟಿರುತ್ತಿತ್ತು!
ಭಾರತದ ಸರ್ ಸಿ.ವಿ. ರಾಮನ್ ಅವರೂ ಸೇರಿದಂತೆ ಜಗತ್ತಿನ ಹಲವು ಭೌತವಿಜ್ಞಾನಿಗಳು
ಬೆಳಕಿನ ಬೆನ್ನಟ್ಟಿದವರೇ. ಹೈಗನ್, ಫೌಕಾಲ್ಟ್, ಫಿಜೋ, ನ್ಯೂಟನ್ ಅವರಂತಹ ಅತಿರಥರು ದ್ಯುತಿ ವಿಜ್ಞಾನದ ಸಂಶೋಧನೆಗೆ ತಮ್ಮ ಜೀವಮಾನವನ್ನೇ ಮುಡಿಪಿಟ್ಟರು. ಆಲ್ಬರ್ಟ್ ಐನ್‌ಸ್ಟೀನ್ ಅವರ ಅಮೋಘ ಸಾಧನೆಗಳಿಗೆ ಬೆಳಕೇ ಅಂಬಾರಿ. ಬೆಳಕಿನ ಬಹುದೊಡ್ಡ ವಿಸ್ಮಯವೆಂದರೆ ಅದೊಂದು ವಿದ್ಯುತ್ಕಾಂತ ತರಂಗ. ವಿದ್ಯುತ್ ಮತ್ತು ಕಾಂತಕ್ಷೇತ್ರದ ಎರಡು ಅಂತರಾವಲಂಬಿ ಅಲೆಗಳ ತರಂಗವದು. ಮುಕ್ತ ಆಕಾಶದಲ್ಲಿ ಬೆಳಕಿನಷ್ಟೇ ವೇಗದಲ್ಲಿ ವಿದ್ಯುತ್ಕಾಂತ ತರಂಗ ಚಲಿಸುತ್ತದೆ. ಶಬ್ದವು ಸಾಗು
ವುದು ವಿದ್ಯುತ್ಕಾಂತ ತರಂಗವಾಗಿಯೆ. ಬಹಳಷ್ಟು ಹಿಂದೆ ಡೆನ್ಮಾರ್ಕಿನ ವಿಜ್ಞಾನಿ ರೋಮರ್ ಬೆಳಕಿನ ವೇಗವನ್ನು ಅಳೆಯಲೆತ್ನಿಸುವ ತನಕ ಬೆಳಕಿನ ವೇಗ ಅನಂತ ಎಂದೇ ತಿಳಿಯಲಾಗಿತ್ತು.
ಮರ ಅಥವಾ ಕಟ್ಟಡದ ನೆರಳಿದ್ದರೆ ಸಸಿಗಳು ಬೆಳೆಯವು ಎನ್ನುವುದು ಅನುಭವವೇದ್ಯ. ಸಸ್ಯಗಳು ದ್ಯುತಿ ಸಂಶ್ಲೇಷಣೆ ಪ್ರಕ್ರಿಯೆಯಲ್ಲಿ ಸೂರ್ಯನ ಬೆಳಕಿನ ಶಕ್ತಿಯನ್ನು ರಾಸಾಯನಿಕ ಶಕ್ತಿಯಾಗಿ ಪರಿವರ್ತಿಸಿಕೊಳ್ಳುತ್ತವೆ. ನೀರಿನ ಅಣುಗಳನ್ನು ವಿಭಜಿಸಿ ಉಪಉತ್ಪನ್ನವಾಗಿ ಆಮ್ಲಜನಕವನ್ನು
ಪಡೆದುಕೊಳ್ಳುತ್ತವೆ. ಬೆಳಕಿನ ದಿನದ ಸಂಭ್ರಮದಲ್ಲಿ ‘ನಮ್ಮೊಳಗೆ ಪ್ರಜ್ವಲಿಸುವ ಬೆಳಕೇ ಅತ್ಯಂತ ಪ್ರಖರ’ ಎಂಬ ಸತ್ಯವನ್ನು ಮರೆಯುವಂತಿಲ್ಲ.
ಕಣ್ಣು ಕೋರೈಸುವ ಬೆಳಕು ಎಂದಿಗೂ ಅಪಾಯಕಾರಿ. ಬೆಳಕಿನ ಮಾಲಿನ್ಯದಿಂದ ಇರುಳಾಗಸದ ವೈಭವವನ್ನು ಕಣ್ತುಂಬಿಕೊಳ್ಳಲಾಗದು. ಬೆಳಕಿನ ತೀವ್ರತೆ ಕತ್ತಲೆಯ ಮೌಲ್ಯವನ್ನು ಕಳೆಯಬಾರದು. ಬರಿಗಣ್ಣಿನಿಂದ ಖಗೋಳ ವಿದ್ಯಮಾನಗಳ ವೀಕ್ಷಣೆಗೆ ಮಹಾನಗರದಿಂದ ಕತ್ತಲೆ ಅರಸಿ ಹಲವು ಕಿ.ಮೀ.ಗಳವರೆಗೆ ಹೊರಹೋಗಬೇಕೇ? ಅಂದಹಾಗೆ ಯಾವುದೇ ಅದ್ದೂರಿಗೆ ಪಾರಂಪರಿಕ ಕಟ್ಟಡ, ನೆಲಹರವು, ಜಲಪಾತ, ವೃಕ್ಷಗಳನ್ನು ವಿದ್ಯುದ್ದೀಪ ಗಳಿಂದ ಅಲಂಕರಿಸಿ ಪ್ರಾಣಿಪಕ್ಷಿಗಳ ಬದುಕಿನ ಲಯ ತಪ್ಪಿಸಬಾರದಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.