ಕಾಲ ಸರಿಯುವುದು, ಜೀವ ವಿಕಸಿಸುವುದು, ಯುಗಪಲ್ಲಟ ಜರುಗುವುದೆಲ್ಲವೂ ಸೃಷ್ಟಿಸಹಜ ವಿದ್ಯಮಾನ
ಗಳೇ. ಪ್ರತಿ ಕಾಲಘಟ್ಟದಲ್ಲಿಯೂ ಯುಗಧರ್ಮವೊಂದು ರಾರಾಜಿಸುತ್ತದೆ. ಬದುಕು–ಬರಹ, ಆದ್ಯತೆ–ಮಾನ್ಯತೆಯೂ ಪೂರಕವಾಗಿ ಬದಲಾಗುತ್ತವೆ. ಅಂತೆಯೇ ಇಂದಿನದು ತಂತ್ರಜ್ಞಾನವನ್ನು ಆತುಕೊಂಡ ಆಧುನಿಕತೆ. ಸಹಜವಾಗಿ ಅದು ವಿಜ್ಞಾನದ ಮೂಲ ಗುಣವಾದ ಸತ್ಯ, ವಾಸ್ತವ, ಮುಕ್ತತೆ, ವಿವೇಚನೆಯ ಕಡೆಗೆ ವಾಲಬೇಕು. ಆದರೆ ಯಾಕೋ ಹಾಗಾಗುತ್ತಿಲ್ಲ.
ಮಾನವಜಗತ್ತು ಕೃತಕ, ಸುಳ್ಳು, ಅವಾಸ್ತವ, ಭ್ರಾಂತಿಗಳಲ್ಲಿ ಮುಳುಗೇಳುತ್ತಿದೆ. ಸರಳ ಜೀವನಶೈಲಿ, ಸಂಪನ್ಮೂಲಗಳ ಹಿತಮಿತ ಬಳಕೆಯ ವಿವೇಕಮಾರ್ಗ ಮರೆತಂತಿದೆ. ವ್ಯವಸ್ಥೆಯು ಪರಿಸರಪೂರಕ ನೀತಿ–ನಿರೂಪಣೆಗಳನ್ನು ಒಳಗೊಳ್ಳಬೇಕಾದ ಹೊತ್ತಿನಲ್ಲಿ ಅಭಿವೃದ್ಧಿಯ ಅಂಧ ಮಾರ್ಗವನ್ನು ಪಠಿಸುತ್ತಿದೆ. ಸಹಬಾಳ್ವೆಯ ಮೂಲತತ್ವ ಮಾಯವಾಗಿ ದ್ವೇಷ, ಹಿಂಸೆ, ಕ್ರೌರ್ಯ, ಯುದ್ಧಗಳನ್ನು ಆರಾಧಿಸುತ್ತಿದೆ. ಪರಿಸರ ವ್ಯವಸ್ಥೆಯಲ್ಲಿ ಬರೀ ಸಣ್ಣ ಭಾಗವಾಗಿರುವ ನಾವು ಅಲ್ಪಾಯುಷಿಗಳೆಂಬ ಪ್ರಾಥಮಿಕ ತಿಳಿವು ಮಾತ್ರವೇ ನಮ್ಮ ನಾಗರಿಕತೆಯ ಪಥವನ್ನು ಸರಿಯಾದ ದಿಕ್ಕಿಗೆ ತಿರುಗಿಸಲು ಸಹಕರಿಸಬಹುದೇನೊ.
ಹೌದು, ಸಾಮಾಜಿಕ ಬದುಕಿನಲ್ಲಿ ನೈತಿಕತೆ ಎಂಬುದೀಗ ಸವಕಲು ನಾಣ್ಯ. ಭೋಗ ಜೀವನವೇ ಎಲ್ಲರ ಧ್ಯಾನ, ಸ್ವಾರ್ಥಚಿಂತನೆಯೇ ಆರಾಧನೆ, ವೈಯಕ್ತಿಕ ಸಂಪತ್ತಿನ ವೃದ್ಧಿಯೇ ನಿತ್ಯದ ಬಯಕೆ, ಕನವರಿಕೆ. ಮುಂದಿನ ದಿನಗಳು ಸಹ್ಯವಾಗಬೇಕೆಂದರೆ ಇಂತಹ ಸಂಕೀರ್ಣ ಮನಃಸ್ಥಿತಿಯುಳ್ಳ ಇಂದಿನ ಜಮಾನಾದ ಪಯಣದ ದಿಕ್ಕು ಬದಲಾಗಲೇಬೇಕು. ಹಾಗಾಗಲು, ಮೊದಲಿಗೆ ನಮ್ಮ ಅಭಿವೃದ್ಧಿಯ ಪರಿಭಾಷೆ ಬದಲಾಗಬೇಕು, ಪ್ರಜಾಪ್ರಭುತ್ವ ವ್ಯವಸ್ಥೆಯಡಿಯೇ ರಾಜಕೀಯ ವ್ಯವಸ್ಥೆಗಳ ಪುನರ್‌ರಚನೆ ಸಾಧ್ಯವಾಗ
ಬೇಕು. ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ನಿಲುವುಗಳೂ ಬದಲಾಗಬೇಕು. ಇಂದಿನ ಜಾಗತೀಕೃತ ಜೀವನಶೈಲಿಯ ಆಧಾರದಲ್ಲಿ ಅವು ಒಂದಕ್ಕೊಂದು ಪೂರಕವಾಗಿರಬೇಕು.
ಅತಿಯಾದ ಉತ್ಪಾದನೆ, ಬೇಕಾಬಿಟ್ಟಿ ಕೊಳ್ಳುವಿಕೆ, ಅರೆಬರೆ ಬಳಸುವಿಕೆ, ಎಸೆಯುವಿಕೆಗಳ ಮೇಲೆ ಕೊಳ್ಳುಬಾಕ ಸಂಸ್ಕೃತಿ ನಿಂತಿದೆ. ಕೃಷಿ, ಕೈಗಾರಿಕಾ ಉತ್ಪನ್ನಗಳು, ಮನರಂಜನೆಯ ಉಪಕರಣಗಳು, ಐಷಾರಾಮಿ ವಾಹನಗಳು, ಅಗಲವಾದ ರಸ್ತೆಗಳು, ಆಧುನಿಕ ರೈಲು, ವಿಮಾನಯಾನ, ಸುರಂಗಮಾರ್ಗ, ಫ್ಲೈಓವರ್, ಬಹುಮಹಡಿ ಕಟ್ಟಡ, ಉದ್ದಿಮೆಗಳು ಎಲ್ಲವೂ ಇದರಲ್ಲಿ ಒಳಗೊಳ್ಳುತ್ತವೆ.
ಆರ್ಥಿಕ ಪ್ರಗತಿಯನ್ನು ಆಳೆಯುವ ಇಂದಿನ ಮಾಪಕ, ಸೂಚಿಗಳು ಬರೀ ಹಣದ ಮೂಲ ಮತ್ತು ಹರಿವಿನ ಕುರಿತಾಗಿವೆ. ನೈಸರ್ಗಿಕ ಸಂಪನ್ಮೂಲಗಳನ್ನು ರೂಪಾಂತರಿಸಿ ತಯಾರಿಸುವ ಸರಕುಗಳೇ ಎಲ್ಲದಕ್ಕೂ ಮೂಲವಾಗಿವೆ. ಆದರೆ ಹಕ್ಕು ಹೊಂದಿರುವ ಸರ್ಕಾರಕ್ಕಾಗಲಿ, ಖಾಸಗಿ ಸಂಸ್ಥೆಗಳಿಗಾಗಲಿ ನೈಸರ್ಗಿಕ ಸಂಪತ್ತುಗಳನ್ನು ಹಣವನ್ನಾಗಿ ಪರಿವರ್ತಿಸುವ ಕಡೆಗೆ ಆಸಕ್ತಿಯೇ ವಿನಾ ಕಳೆದುಕೊಳ್ಳುತ್ತಿರುವ ನೈಸರ್ಗಿಕ ಸಂಪತ್ತು, ಅದರ ಮೌಲ್ಯದ ಕುರಿತು ಇಲ್ಲ. ಹಾಗಾಗಿ, ಜನಮಾನಸಕ್ಕೆ ಪರಿಸರ ನಾಶವೂ ಅಭಿವೃದ್ಧಿಯಂತೆಯೇ ತೋರುತ್ತಿದೆ.
‘ಮಾರುಕಟ್ಟೆ ಆಧಾರಿತ’ ಮಾದರಿಗಳ ರೂಪದಲ್ಲಿ ದೊರೆತ ಪೆಟ್ರೊರಾಸಾಯನಿಕಗಳು, ಪ್ಲಾಸ್ಟಿಕ್ ಎಂಬ ರಾಕ್ಷಸ ಅವತಾರಗಳನ್ನು ತಾಳಿಕೊಳ್ಳುವುದು ಪರಿಸರಕ್ಕೆ ಕಷ್ಟ. ತಂತ್ರಜ್ಞಾನವನ್ನು ಬಲ್ಲವರಲ್ಲಿ ಇರುವ ಇತರ ಕ್ಷೇತ್ರಗಳ ಬಗೆಗಿನ ಅಜ್ಞಾನ, ಮಾಹಿತಿ ಕೊರತೆ ಮತ್ತು ಎಲ್ಲವನ್ನೂ ಹಣದ ಲೆಕ್ಕಾಚಾರದಲ್ಲಿ ನೋಡುವ ಮನೋಭಾವದಲ್ಲಿ ಇಡಿಯ ನಾಗರಿಕತೆಯೇ ಸ್ವಾರ್ಥ, ಸಂಕುಚಿತ ಮತ್ತು ಸ್ವಕೇಂದ್ರಿತವಾಗಿ ರೂಪುಗೊಂಡಿದೆ. ನಾಲ್ಕು ತಲೆಮಾರುಗಳಿಗೆ ಆಗುವಷ್ಟು ಸ್ಥಿರಾಸ್ತಿ, ಧನಕನಕಗಳನ್ನು ಕಾಪಿಡುವ ಮಂದಿ, ಮುಂದೆ ಆ ಸಂಪತ್ತಿನ ಬಳಕೆಗಾದರೂ ಆರೋಗ್ಯಕರ ಪರಿಸರವನ್ನು ಉಳಿಸಿ ಹೋಗುವುದನ್ನು ಮರೆತಿರುತ್ತಾರೆ.
ಇಂತಹ ಮನಃಸ್ಥಿತಿಯಿಂದ ನಾಗರಿಕ ಸಮಾಜ ಬಿಡುಗಡೆಗೊಳ್ಳಬೇಕು. ಅದಕ್ಕೊಂದು ಅಂತರಂಗದ ಚಳವಳಿ ಬೇಕು. ಶ್ರಮಸಂಸ್ಕೃತಿ, ಸರಳ ವ್ಯಕ್ತಿತ್ವಗಳನ್ನು ಗೌರವಿಸುವ ಸಮಾಜ ಮತ್ತು ಸಾರ್ವಕಾಲಿಕ ಜೀವನಮೌಲ್ಯ, ವೃತ್ತಿಕೌಶಲಗಳನ್ನು ಬೆಳೆಸುವಂತಹ ಶಿಕ್ಷಣವಷ್ಟೇ ನಮ್ಮ ಆಯ್ಕೆಯಾಗಬೇಕು. ಅದೊಂದೇ ಮುಂಬರುವ ನೈತಿಕ ಅಧಃಪತನ, ಪರಿಸರ ಪ್ರಕೋಪ, ಶಕ್ತಿ ಮುಗ್ಗಟ್ಟಿನ ದುರಿತ ಕಾಲದಲ್ಲಿ ನಮ್ಮನ್ನು ಉಳಿಸೀತು..
ದುಂದುವೆಚ್ಚ, ಐಷಾರಾಮಿ ಬದುಕನ್ನು ನಿರಾಕರಿಸಿ, ಬಾಹ್ಯಾಡಂಬರ ಮತ್ತು ಸಂಪತ್ತಿನ ಅಸಹ್ಯಕರ ಪ್ರದರ್ಶನಕ್ಕೆ ಹಂಬಲಿಸದೆ ಪರಿಸರಕ್ಕೆ ಪೂರಕವಾದ ಸರಳ ಮಾದರಿಯನ್ನು ಒಪ್ಪಿಕೊಳ್ಳುವುದು, ಅಪ್ಪಿಕೊಳ್ಳು
ವುದು, ನೈತಿಕ ಔನ್ನತ್ಯದೆಡೆಗೆ ನಮ್ಮ ವ್ಯಕ್ತಿತ್ವವನ್ನು ತಿರುಗಿಸುವುದು, ಮಕ್ಕಳೆದುರು ಸ್ವತಃ ಮಾದರಿಯಾಗಿ ಉಳಿಯುವುದು, ಯಂತ್ರದಲ್ಲಿ ತಯಾರಾದ ಉತ್ಪನ್ನಗಳು ಮತ್ತು ಸಿದ್ಧಪಡಿಸಿದ ಆಹಾರ ಪದಾರ್ಥ
ಗಳ ಬಳಕೆಯನ್ನು ನಿಯಂತ್ರಿಸಿಕೊಳ್ಳುವುದು, ನಮ್ಮ ಹಳ್ಳಿಗಳಿಗೆ, ಸಂಸ್ಕೃತಿಯ ಬೇರುಗಳಿಗೇ ಹಿಂದಿರುಗು
ವುದು, ಸ್ವಾವಲಂಬನೆಯ ಕೃಷಿ, ಕೈಮಗ್ಗ, ಗೃಹೋಪಯೋಗಿ ವಸ್ತುಗಳ ತಯಾರಿಕೆಯಲ್ಲಿ ತೊಡಗಿಕೊಳ್ಳುವುದು, ಶರಣರು ಪ್ರತಿಪಾದಿಸಿದ ಕಾಯಕ ಧರ್ಮದ ಪಾಲನೆ, ಅಸಂಗ್ರಹ ಮಾದರಿ, ದಾಸೋಹ, ಸಮಸಮಾಜ ತತ್ವಗಳನ್ನು ಅಳವಡಿಸಿಕೊಳ್ಳುವುದು, ಪರಿಸರದ ಘಟಕಗಳಾದ ಮಣ್ಣು, ನೀರು, ಗಾಳಿಯ ಮೂಲಗುಣ ಮುಕ್ಕಾಗದಂತೆ ಕಾಳಜಿಯ ಜೀವನಕ್ರಮದೆಡೆಗೆ ಹೆಜ್ಜೆ ಹಾಕುವುದು... ಹೀಗೆ.
ಎಲ್ಲ ನಾಗರಿಕತೆಗಳೂ ನಾಶ ಹೊಂದುವಂತೆ ಇಂದಿನ ಕಾಲಘಟ್ಟವೂ ನಾಳೆಗೆ ಸ್ಥಿತ್ಯಂತರ ಕಾಣಬಹುದು. ಅದು ಅಪಾಯಕಾರಿಯಾಗಿ, ಭವಿಷ್ಯದಲ್ಲಿ ಬದುಕುವವರ ನಿದ್ದೆ, ನೆಮ್ಮದಿ ಕಸಿದುಕೊಳ್ಳಬಾರದೆಂದರೆ ನಾವೀಗ ವಿವೇಕದ ಹಾದಿ ತುಳಿಯಬೇಕು. ಸಮಗ್ರ ಶಿಕ್ಷಣ ಮತ್ತು ಮೌಲ್ಯಯುತ ಸಮಾಜಗಳು ಮಾತ್ರ ಆ ದಿಕ್ಕಿನಲ್ಲಿ ತಲೆಮಾರುಗಳನ್ನು ಕೈಹಿಡಿದು ನಡೆಸಬಲ್ಲವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.