ADVERTISEMENT

ಸಂಗತ | ‘ನಾನು’ ಎಂಬ ಮೋಹದ ಪಾಶ

ಮನುಷ್ಯತ್ವವನ್ನು ಗೌರವಿಸುವುದು ಮತ್ತು ಮನುಷ್ಯತ್ವದೊಂದಿಗೆ ಬದುಕುವುದು ಮುಖ್ಯ

ಮಲ್ಲಿಕಾರ್ಜುನ ಹೆಗ್ಗಳಗಿ
Published 16 ಜನವರಿ 2025, 0:30 IST
Last Updated 16 ಜನವರಿ 2025, 0:30 IST
   

ರನ್ನ ಮಹಾಕವಿಯು ‘ಗದಾಯುದ್ಧ’ ಕಾವ್ಯದಲ್ಲಿ, ಅಧಿಕಾರ ಕೇಂದ್ರದಲ್ಲಿ ಇರುವವರು ಜೀವಪರವಾಗಿ, ಸರಳವಾಗಿ ಇದ್ದು, ಅಹಂ ಕಳೆದುಕೊಂಡ ಮೇಲೆಯೇ ಮನುಷ್ಯರಾಗುವುದು ಎಂದು ಬದುಕಿನ ಗಮ್ಯವನ್ನು ಬಹಳ ಸೊಗಸಾಗಿ ಬಿಚ್ಚಿಡುತ್ತಾನೆ.

‘ನಾನು ಕೂಡ ಮನುಷ್ಯ. ನಾನೂ ತಪ್ಪುಗಳನ್ನು ಮಾಡಬಹುದು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜೆರೋಧಾ ಸಂಸ್ಥೆಯ ಸಹಸಂಸ್ಥಾಪಕ ನಿಖಿಲ್ ಕಾಮತ್ ಅವರು ನಡೆಸಿಕೊಡುವ ‘ಪೀಪಲ್ ಬೈ ಡಬ್ಲ್ಯುಟಿಎಫ್’ ಪಾಡ್‌ಕಾಸ್ಟ್ ಸರಣಿಯಲ್ಲಿ ಹೇಳಿದ ಮಾತನ್ನು ಓದಿದಾಗ (ಪ್ರ.ವಾ., ಜ. 11), ರನ್ನ ಕವಿಯು ಅಧಿಕಾರದ ಕೇಂದ್ರದಲ್ಲಿರುವವರಿಗೆ ಬದುಕಿನ ಪಾಠ ಹೇಳಿದ್ದು ನೆನಪಾಯಿತು.

ಮೋದಿಯವರು 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ ಲೋಕಸಭೆಯ ಮೆಟ್ಟಿಲುಗಳಿಗೆ ಹಣೆ ಹಚ್ಚಿ ನಮಸ್ಕರಿಸಿ ‘ನಾನು ದೇಶದ ಪ್ರಧಾನ ಸೇವಕ’ ಎಂದಿದ್ದರು. ಹಿಂದಿನ ಲೋಕಸಭಾ ಚುನಾವಣಾ ಪ್ರಚಾರ ಭಾಷಣದಲ್ಲಿ ‘ನನ್ನನ್ನು ದೇವರೇ ಕಳಿಸಿದ್ದಾನೆ’ ಎಂದೂ ಹೇಳಿಕೊಂಡಿದ್ದರು. ಪ್ರಧಾನಿಯಾದ ಹೊಸದರಲ್ಲಿ ತುಸು ಭಾವುಕರಾಗಿ ತಾವು ಪ್ರಧಾನ ಸೇವಕ ಎಂದು ಅವರು ಹೇಳಿರಬಹುದು. ಚುನಾವಣಾ ಪ್ರಚಾರ ಸಂದರ್ಭದಲ್ಲಿ ತಮ್ಮನ್ನು ದೇವರು ಕಳಿಸಿದ್ದಾನೆ ಎಂದು ಹೇಳಿಕೊಂಡದ್ದು ಮತ ಸೆಳೆಯುವ ತಂತ್ರವಾಗಿರಬಹುದು. ಆದರೆ ಅವರು ಈಗ ‘ನಾನು ಕೂಡ ಮನುಷ್ಯ’ ಎಂದು ವಾಸ್ತವದ ನೆಲೆಯಲ್ಲಿ ನಮ್ರವಾಗಿ ಹೇಳಿದ್ದು ವಿಶೇಷ ಎನಿಸಿತು.

ADVERTISEMENT

ಮನುಷ್ಯರಾಗುವುದಕ್ಕೆ ಆವರಣಗಳನ್ನು ಕಳಚಬೇಕು. ಸಾರ್ವಜನಿಕ ಬದುಕಿನಲ್ಲಿ ಹುದ್ದೆ, ಪ್ರಶಸ್ತಿ, ಬಿರುದು, ಬಹುಪರಾಕು ಬರುತ್ತವೆ. ಇವು ತಾನು ವಿಶೇಷ ವ್ಯಕ್ತಿ, ಉಳಿದವರಿಗಿಂತ ಮೇಲಿನವನು ಎಂಬ ಅಹಂ ಸೃಷ್ಟಿಸುವ ಅಪಾಯವಿರುತ್ತದೆ. ಆದರೆ ಮೂಲಭೂತವಾಗಿ ನಿಜವಾದ ಅರ್ಥದಲ್ಲಿ ನಾವೆಲ್ಲ ಸಾಮಾನ್ಯ ಮನುಷ್ಯರು. ಮನುಷ್ಯತ್ವದ ಹಿರಿಮೆ ಮತ್ತು ಮರ್ಯಾದೆ ಕ್ಷೀಣಿಸದಂತೆ ಮನುಷ್ಯತ್ವವನ್ನು ಗೌರವಿಸುವುದು ಮತ್ತು ಮನುಷ್ಯತ್ವದೊಂದಿಗೆ ಬದುಕುವುದು ಅವಶ್ಯ.

ಕುವೆಂಪು ಅವರ ‘ಸ್ವರ್ಗ ದ್ವಾರದಿ ಯಕ್ಷಪ್ರಶ್ನೆ’ ಎಂಬ ಕವಿತೆ ನಿಜದ ನೆಲೆಯನ್ನು ವಿವರಿಸುತ್ತದೆ: ಕುವೆಂಪು ಸ್ವರ್ಗದ ಬಾಗಿಲಲ್ಲಿ ಬಂದು ನಿಂತುಕೊಳ್ಳುತ್ತಾರೆ. ದ್ವಾರಪಾಲಕ ಒಳಗೆ ಬಿಡಲು ನಿರಾಕರಿಸುತ್ತಾನೆ. ಕುವೆಂಪು ತಮ್ಮ ಪದವಿ, ಪ್ರಶಸ್ತಿ, ಹುದ್ದೆ ಹೇಳುತ್ತಾರೆ. ದ್ವಾರಪಾಲಕ ಬಿಡುವುದಿಲ್ಲ. ತಾನು ರಾಷ್ಟ್ರಕವಿ ಎಂದೂ ಹೇಳಿಕೊಳ್ಳುತ್ತಾರೆ. ಇದಕ್ಕೂ ದ್ವಾರಪಾಲಕ ಒಪ್ಪುವುದಿಲ್ಲ. ‘ಲೋಕದ ಹುದ್ದೆಗಳು ಬೇಕಾಗಿಲ್ಲ. ನೀನು ನಿಜವಾಗಿ ಯಾರಾಗಿರುವಿ, ಏನಾಗಿರುವಿ ಹೇಳು. ನಿನ್ನ ಅಂತರಾತ್ಮದ ಹೆಸರು ಹೇಳು’ ಎಂದು ದ್ವಾರಪಾಲಕ ಜೋರು ಮಾಡುತ್ತಾನೆ. ಕೊನೆಗೆ ಕುವೆಂಪು ‘ನಾನು ಹೇಮಿಯ ಗಂಡ’ ಎಂದು ಹೇಳುತ್ತಾರೆ. ಒಳಗೆ ಪ್ರವೇಶಿಸಲು ಅವಕಾಶ ದೊರೆಯುತ್ತದೆ. ನಿದ್ರೆಯಲ್ಲಿ ಕನಸು ಕಾಣುತ್ತಿದ್ದ ಕವಿಗೆ ಎಚ್ಚರವಾಗುತ್ತದೆ.

ಕವಿ ದ.ರಾ.ಬೇಂದ್ರೆ ಅವರು ತಮ್ಮ ‘ನಾನು’ ಎಂಬ ಕವನದಲ್ಲಿ ‘ಅದು ಇದು ಏನೂ ಅಲ್ಲ, ನಾನೊಬ್ಬ ನರನು ಮಾತ್ರ’ ಎಂಬ ಅರ್ಥ ಬರುವ ರೀತಿಯಲ್ಲಿ ಬರೆದಿದ್ದಾರೆ.

ಈಗ ಬಿರುದು, ಪದವಿ ಹುಚ್ಚು ವಿಪರೀತ ಹೆಚ್ಚಾಗಿದೆ. ಹಣ ಕೊಟ್ಟು ನಕಲಿ ಗೌರವ ಡಾಕ್ಟರೇಟ್ ಪಡೆದುಕೊಳ್ಳುತ್ತಾರೆ. ತಾವು ಪ್ರಶಸ್ತಿ ಪಡೆದ ಬಗ್ಗೆ ಗಲ್ಲಿ ಗಲ್ಲಿಗಳಲ್ಲಿ ಬ್ಯಾನರ್ ಕಟ್ಟುತ್ತಾರೆ. ಹಣ ಕೊಟ್ಟು ಸನ್ಮಾನ, ಮೆರವಣಿಗೆ ಮಾಡಿಸಿಕೊಳ್ಳುತ್ತಾರೆ.

ವಿಶ್ವವಿದ್ಯಾಲಯಗಳು ನೀಡುವ ಗೌರವ ಡಾಕ್ಟರೇಟ್, ನಾಡೋಜದಂತಹ ಪದವಿಗಳನ್ನು ತಮ್ಮ ಹೆಸರಿನೊಂದಿಗೆ ಬರೆದುಕೊಳ್ಳಬಾರದು ಎಂಬ ನೀತಿಸೂತ್ರ ಇದೆ. ನ್ಯಾಯಾಲಯದ ಆದೇಶವೂ ಇದೆ. ಡಾಕ್ಟರೇಟ್ ಗೌರವಕ್ಕೆ ಪಾತ್ರರಾದವರು ಇದನ್ನು ಉಲ್ಲಂಘಿಸಿ ನಡೆಯುವುದನ್ನು ನೋಡಿದಾಗ ಬೇಸರವಾಗುತ್ತದೆ.

ಮುಖ್ಯಮಂತ್ರಿ ಆಗಿದ್ದ ಎಸ್.ಬಂಗಾರಪ್ಪ ಅವರ ಎದುರು ಕಾರ್ಮಿಕ ನಾಯಕ ಕೆ.ಎಸ್.ಶರ್ಮಾ ಕಾರ್ಮಿಕರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದರು. ಶರ್ಮಾ ಮುಖ್ಯಮಂತ್ರಿ ಬಳಿಗೆ ಮುನ್ನುಗ್ಗಲು ಪ್ರಯತ್ನಿಸುತ್ತಿದ್ದಾಗ ಅಧಿಕಾರಿಗಳು ತಡೆದು ನಿಲ್ಲಿಸಿದ್ದರು. ಇದನ್ನು ಗಮನಿಸಿದ ಬಂಗಾರಪ್ಪ, ಪ್ರತಿಭಟನ
ಕಾರರ ಬಳಿಗೆ ಬಂದು, ಅಧಿಕಾರಿಗಳನ್ನು ಕರೆದು, ‘ಶರ್ಮಾ ಅವರು ನಾನು ಲಾ ಓದುತ್ತಿದ್ದಾಗ ಸಹಪಾಠಿಯಾಗಿದ್ದರು. ಓದಿನಲ್ಲಿ ನನಗಿಂತ ಮುಂದಿದ್ದರು. ನನಗೆ ಮಾರ್ಗದರ್ಶನ ಕೂಡ ಮಾಡಿದ್ದಾರೆ. ಬದುಕಿನ ಓಟದಲ್ಲಿ ನಾನು ಮುಖ್ಯಮಂತ್ರಿ ಆಗಿದ್ದೇನೆ, ಅವರು ಕಾರ್ಮಿಕ ನಾಯಕರಾಗಿದ್ದಾರೆ. ಅವರನ್ನು ನನ್ನಷ್ಟೇ ಗೌರವದಿಂದ ಕಾಣಬೇಕು. ಅವರ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹರಿಸಿಕೊಡಿ’ ಎಂದು ಹೇಳಿದ್ದರು.

ಮನುಷ್ಯರು ಉಪಾಧಿಗಳನ್ನು ನಿರಾಕರಿಸಿ ಮುಕ್ತವಾದರೆ ಮಾತ್ರ ಸಮಾಧಾನದಿಂದ ಬದುಕಬಹುದು. ಇದು ಲೋಕದಲ್ಲಿ ಲೇಸೆನಿಸಿಕೊಂಡು ಬಾಳುವ ದಾರಿ ಎಂದು ಶರಣರು ಹೇಳಿದ್ದಾರೆ. ವೈವಿಧ್ಯದಿಂದ ಕೂಡಿದ ಈ ಬದುಕಿನಲ್ಲಿ ಭಿನ್ನ ಭಿನ್ನ ಅವಕಾಶಗಳು ನಮಗೆ ಒಲಿದುಬರುತ್ತವೆ. ಮೇಲು– ಕೀಳು ಎಂಬುದೆಲ್ಲ ನಾವೇ ಸೃಷ್ಟಿಸಿದ ಗೋಡೆಗಳು. ಈ ಎಚ್ಚರ ಸದಾ ನಮ್ಮಲ್ಲಿ ಇರಲಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.