ADVERTISEMENT

ಸಂಗತ | ಕೋರ್ಸ್‌ ಆಯ್ಕೆ: ದಾರಿ ತಪ್ಪೀರಿ

ಗ್ರಾಮೀಣ ಪ್ರದೇಶದ ಮಕ್ಕಳು ಹೆಚ್ಚಾಗಿ ಕೋರ್ಸ್‌ ಆಯ್ಕೆ ಗೊಂದಲದಲ್ಲಿ ಇರುತ್ತಾರೆ. ಅಂತಹವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕಾದ ಗುರುತರ ಹೊಣೆ ಅಧ್ಯಾಪಕರದು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 19:40 IST
Last Updated 6 ಫೆಬ್ರುವರಿ 2024, 19:40 IST
Sangatha
Sangatha   

ಸರ್ಕಾರಿ ಪದವಿ ಕಾಲೇಜೊಂದರಲ್ಲಿ ಬಿಎಸ್‌ಡಬ್ಲ್ಯು (ಬ್ಯಾಚುಲರ್ ಆಫ್ ಸೋಷಿಯಲ್ ವರ್ಕ್) 3ನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿಗಳು ನನ್ನನ್ನು ಭೇಟಿ ಮಾಡಲು ಬಂದಿದ್ದರು. ಅವರ ಭೇಟಿಯ ಉದ್ದೇಶವು ‘ಹಿರಿಯ ನಾಗರಿಕರೊಂದಿಗೆ ಮಾತುಕತೆ’ ಆಗಿತ್ತು. ಅವರು ಪ್ರಶ್ನಿಸುವ ಮೊದಲೇ ನಾನೇ ಅವರನ್ನು ‘ನೀವು ಬಿಎಸ್‌ಡಬ್ಲ್ಯು ಕೋರ್ಸ್ ಆಯ್ಕೆ ಮಾಡಿಕೊಂಡದ್ದು ಯಾಕೆ?’ ಎಂದು ಕೇಳಿದೆ. ಅವರು ತಲೆ ಕೆರೆದುಕೊಂಡು ನಿಧಾನವಾಗಿ ಹೇಳಿದರು. ‘ಬಿಎಸ್‌ಡಬ್ಲ್ಯು ಪಾಠ ಮಾಡುವ ಅಧ್ಯಾಪಕರು ಬಹಳ ಒತ್ತಾಯ ಮಾಡಿದ್ದರಿಂದ ಈ ವಿಷಯ ಆಯ್ಕೆ ಮಾಡಿಕೊಂಡಿದ್ದೇವೆ. ವಿದ್ಯಾರ್ಥಿಗಳಿಲ್ಲದೆ ಈ ಕೋರ್ಸ್ ಮುಚ್ಚಿ ತಮಗಾಗುವ ವೈಯಕ್ತಿಕ ಹಾನಿ ತಪ್ಪಿಸಿಕೊಳ್ಳುವುದಕ್ಕೆ ನಮ್ಮನ್ನು ಬಲಿಪಶು ಮಾಡಿದರು’ ಎಂದರು. ಅವರ ಮಾತಿನಲ್ಲಿ ಅಧ್ಯಾಪಕರ ಬಗ್ಗೆ ಸಿಟ್ಟು, ಅಸಮಾಧಾನ ಸ್ಪಷ್ಟವಾಗಿ ಕಾಣುತ್ತಿತ್ತು.

ಇದು ಈ ಇಬ್ಬರು ವಿದ್ಯಾರ್ಥಿಗಳ ಗೊಂದಲ ಮಾತ್ರ ಅಲ್ಲ, ಪ್ರಾಥಮಿಕದಿಂದ ಪಿಎಚ್.ಡಿ. ಪದವಿಯವರೆಗೂ ಕೆಲವು ಅಧ್ಯಾಪಕರು ತಮ್ಮ ವೈಯಕ್ತಿಕ  ಹಿತಾಸಕ್ತಿ ಕಾಪಾಡಿಕೊಳ್ಳುವುದಕ್ಕಾಗಿ ವಿದ್ಯಾರ್ಥಿಗಳಿಗೆ ಆಸಕ್ತಿ ಇಲ್ಲದ ವಿಷಯಗಳನ್ನು ಕಲಿಕೆಗೆ ಆಯ್ಕೆ ಮಾಡಿಕೊಳ್ಳು
ವುದಕ್ಕೆ ಒತ್ತಾಯಪಡಿಸುತ್ತಾರೆ. ಇದು ವಿದ್ಯಾರ್ಥಿಗಳ ಭವಿಷ್ಯವನ್ನೇ ನುಂಗಿಹಾಕುವ ಆತಂಕದ ಸಂಗತಿಯಾಗಿದೆ.

ಗ್ರಾಮೀಣ ಪ್ರದೇಶದ ಬಹಳಷ್ಟು ಪಾಲಕರು ಮತ್ತು ವಿದ್ಯಾರ್ಥಿಗಳಿಗೆ ವಿಷಯ ಆಯ್ಕೆಯ ಖಚಿತತೆ ಇರುವುದಿಲ್ಲ. ತಮ್ಮ ಕಾರ್ಯ ಸರಿದೂಗಿಸಿಕೊಳ್ಳಲು
ಅಧ್ಯಾಪಕರು ಇಂಥವರನ್ನು ಬಳಸಿಕೊಳ್ಳುತ್ತಾರೆ.
ಪದವಿ ಪ್ರಥಮ ವರ್ಷದ ಪ್ರವೇಶ ಪಡೆಯುವ ಬಹಳಷ್ಟು ವಿದ್ಯಾರ್ಥಿಗಳು ಸಾಮಾನ್ಯವಾಗಿ ವಿಷಯ ಆಯ್ಕೆಯ ಗೊಂದಲದಲ್ಲಿ ಇರುತ್ತಾರೆ. ಮಾರ್ಗದರ್ಶನಕ್ಕಾಗಿ ಅಧ್ಯಾಪಕರನ್ನು ಸಂಪರ್ಕಿಸಿದಾಗ ಅವರು ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಅನುವಾಗುವಂತಹ ಸಲಹೆ ನೀಡುವ ಸಂದರ್ಭಗಳೇ ಹೆಚ್ಚು. ಇನ್ನು ಕೆಲವು ಅಧ್ಯಾಪಕರು ತಾವೇ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ‘ನಾನು ಪಾಠ ಮಾಡುವ ವಿಷಯವನ್ನೇ ಆಯ್ಕೆ ಮಾಡಿಕೊಳ್ಳಿ. ವಿಷಯ ಸರಳವಾಗಿದೆ. ಹೆಚ್ಚು ಅಂಕಗಳು ಬರುತ್ತವೆ. ಉದ್ಯೋಗ ಬೇಗ ಸಿಗುತ್ತದೆ. ನಾನೂ ಸಹಾಯ ಮಾಡುತ್ತೇನೆ’ ಎಂದು ಹುರಿದುಂಬಿಸುತ್ತಾರೆ.

ADVERTISEMENT

ಕಲಿಕೆಯು ನದಿಯ ಪ್ರವಾಹ ಇದ್ದ ಹಾಗೆ. ಅದು ಮುಂದಕ್ಕೆ ಹರಿಯುತ್ತದೆ, ಹಿಂದಕ್ಕೆ ಹೋಗಲು ಆಗುವುದಿಲ್ಲ. ಎಷ್ಟೋ ವಿದ್ಯಾರ್ಥಿಗಳು ಒತ್ತಾಯಕ್ಕೆ ಒಳಗಾಗಿ ಇಷ್ಟವಿಲ್ಲದ ವಿಷಯ ಆಯ್ಕೆ ಮಾಡಿಕೊಂಡು ಬದುಕಿನ ಉದ್ದಕ್ಕೂ ನರಳುತ್ತಾರೆ. ಪ್ರಾಚಾರ್ಯರನ್ನು ಒಳಗೊಂಡು ಅಧ್ಯಾಪಕರು, ಶಿಕ್ಷಕರು ತಮ್ಮ ಸೇವಾ ಭದ್ರತೆಗೆ ಅನುಕೂಲವಾಗುವಂತೆ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿರುವುದು ನೋವಿನ ಸಂಗತಿ. ‘ಹಿಂದಿ ಪಾಠ ಮಾಡುವ ಪ್ರಿನ್ಸಿಪಾಲರು ಒತ್ತಾಯ ಮಾಡಿದ್ದರಿಂದ ಕನ್ನಡ ಬಿಟ್ಟು ಹಿಂದಿ ಆಯ್ಕೆ ಮಾಡಿಕೊಂಡೆ’ ಎಂದು ನನ್ನ ಮೊಮ್ಮಗ ಹೇಳಿದಾಗ ನಾನು ಅನುಭವಿಸಿದ ಸಂಕಟ ಅಷ್ಟಿಷ್ಟಲ್ಲ.

ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುವವರು ಪಾಠ ಮಾಡುವುದಕ್ಕಿಂತ ಹೆಚ್ಚಾಗಿ ಶಿಕ್ಷಣವನ್ನು ಮಾರ್ಕೆಟಿಂಗ್ ಮಾಡುವುದರಲ್ಲಿ ಹೆಚ್ಚಿನ ಪರಿಣತಿ ತೋರಿಸಬೇಕಾಗುತ್ತದೆ. ತಮ್ಮ ಶಾಲೆಗೆ ಯಾರು ಹೆಚ್ಚು ಮಕ್ಕಳನ್ನು ಕರೆತರುತ್ತಾರೋ ಅವರಿಗೆ ಮುಖ್ಯ ಅಧ್ಯಾಪಕ, ಉಪ ಪ್ರಾಚಾರ್ಯ, ಪ್ರಾಚಾರ್ಯ ಹುದ್ದೆ ನೀಡುವುದಾಗಿ ಶಿಕ್ಷಕರ ಮಧ್ಯೆ ಸ್ಪರ್ಧೆ ಹುಟ್ಟುಹಾಕುತ್ತಾರೆ. ಶಿಕ್ಷಕರು ಸ್ಪರ್ಧೆಗೆ ಇಳಿದು ಪಾಲಕರು ಮತ್ತು ವಿದ್ಯಾರ್ಥಿಗಳಿಗೆ ಏನೇನೋ ಹೇಳಿ ತಮ್ಮ ಶಾಲೆ, ಕಾಲೇಜುಗಳಿಗೆ ಕರೆತರುತ್ತಾರೆ. ಶಿಕ್ಷಕರ ಮಾತು ಕೇಳಿ ಪ್ರವೇಶ ಪಡೆದ ಶಾಲೆ ಕಾಲೇಜುಗಳಲ್ಲಿ ಸೂಕ್ತ ಸೌಲಭ್ಯಗಳು ಇರುವುದಿಲ್ಲ. ಆಯ್ಕೆ ಮಾಡಿಕೊಳ್ಳುವುದಕ್ಕೆಹೆಚ್ಚು ವಿಷಯಗಳು ಇರುವುದಿಲ್ಲ. ಹಾಸ್ಟೆಲ್ ವ್ಯವಸ್ಥೆ ಚೆನ್ನಾಗಿರುವುದಿಲ್ಲ. ಇದು ವಿದ್ಯಾರ್ಥಿಗಳ ಹಿನ್ನಡೆಗೆ ಕಾರಣವಾಗುತ್ತದೆ ಮಾತ್ರವಲ್ಲ ತಮ್ಮನ್ನು ಅಲ್ಲಿಗೆ ಕರೆತಂದ ಶಿಕ್ಷಕರ ಬಗ್ಗೆ ಗೌರವ ಕಡಿಮೆಯಾಗುತ್ತದೆ.

ಗ್ರಾಮೀಣ ಪ್ರದೇಶದ ಬಡ ಮುಸ್ಲಿಂ ಕುಟುಂಬಗಳ ಮಕ್ಕಳು ಉರ್ದು ಮಾಧ್ಯಮ ಶಾಲೆಗಳಿಗೆ ಹೋಗುತ್ತಾರೆ. ಇವರಿಗೆ ಉರ್ದು ಮಾಧ್ಯಮದಲ್ಲಿ ಕಲಿಯುವ ಆಸಕ್ತಿ ಇರದಿದ್ದರೂ ಅಲ್ಲಿನ ಶಿಕ್ಷಕರು ತಮ್ಮ ಶಾಲೆಯ ಮಕ್ಕಳ ಕನಿಷ್ಠ ಹಾಜರಾತಿ ಸಂಖ್ಯೆ ಕಾಯ್ದುಕೊಳ್ಳುವ ಉದ್ದೇಶದಿಂದ ಆಗ್ರಹಪಡಿಸಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುತ್ತಿರುವ ಉದಾಹರಣೆಗಳು ಬಹಳಷ್ಟಿವೆ. ಗ್ರಾಮೀಣ ಉರ್ದು ಶಾಲೆಗಳು ಬರೀ ಪ್ರಾಥಮಿಕ 5ನೇ ವರ್ಗದವರೆಗೆ ಮಾತ್ರ ಇರುವುದರಿಂದ ಆ ಶಾಲೆಗೆ ಸೇರಿಕೊಂಡ ಬಹಳಷ್ಟು ಮಕ್ಕಳು ಹೆಚ್ಚಿನ ಶಿಕ್ಷಣದಿಂದ ವಂಚಿತರಾಗುತ್ತಾರೆ. ಮುಸ್ಲಿಂ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಲ್ಲಿ ಹಿಂದುಳಿಯುವು
ದಕ್ಕೆ ಇರುವ ಪ್ರಮುಖ ಕಾರಣಗಳಲ್ಲಿ ಇದೂ ಒಂದು.

ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ವಾರ್ಷಿಕ ಗುರಿ ನಿಗದಿಪಡಿಸುತ್ತವೆ. ಆ ಗುರಿ ತಲುಪುವುದಕ್ಕೆ ಸಿಬ್ಬಂದಿ ಶ್ರಮಿಸಬೇಕು ಎಂದು ಸೂಚಿಸುತ್ತವೆ. ಮಾರ್ಕೆಟಿಂಗ್‌ ತಂತ್ರಗಳಲ್ಲಿ ಶಿಕ್ಷಕರೂ ಸಹಭಾಗಿ ಆಗಬೇಕಾಗುತ್ತದೆ. ಇವರು ‘ನಮ್ಮ ಕಾಲೇಜಿಗೆ ಸೇರಿಕೊಂಡರೆ ವೈದ್ಯರಾಗುತ್ತೀರಿ, ಎಂಜಿನಿಯರ್ ಆಗುತ್ತೀರಿ, ಐಎಎಸ್ ಪಾಸ್ ಆಗುತ್ತೀರಿ’ ಎಂದೆಲ್ಲ ವಿದ್ಯಾರ್ಥಿಗಳನ್ನು ಪುಸಲಾಯಿಸುವುದನ್ನು ನೋಡಿದರೆ ನಗು ಬರುತ್ತದೆ. ವಿದ್ಯಾರ್ಥಿಗಳ ಒಲವು, ಪಾಲಕರ ಮಿತಿಯನ್ನು ಗಮನದಲ್ಲಿಟ್ಟು, ಮುಂದಿನ ಬದುಕಿಗೆ ಬೆಳಕಾಗುವಂತೆ ಪಠ್ಯ ವಿಷಯ, ಕೋರ್ಸ್ ಆಯ್ಕೆಗೆ ಶಿಕ್ಷಕರು ಮಾರ್ಗದರ್ಶನ ಮಾಡಬೇಕು. ವಿಶಾಲವಾದ ಅನುಗ್ರಹ ಭಾವನೆಯನ್ನು ಅವರು ಹೊಂದಿರಬೇಕು. ಗುರು ಎಂಥ ಒತ್ತಡದ ನಡುವೆಯೂ ವಿವೇಕ ಮತ್ತು ವಿವೇಚನೆ ಕಳೆದುಕೊಳ್ಳಬಾರದು. ನಿಜ ಅರ್ಥದಲ್ಲಿ ಮಾರ್ಗದರ್ಶಕನಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.