ADVERTISEMENT

ಸಂಗತ | ಕಲಿಕೆಯಲ್ಲೇಕೆ ಈ ಪರಿ ನಿರಾಸಕ್ತಿ?

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕುಂಠಿತವಾಗಲು ಕಾರಣವಾದ ಅಂಶಗಳನ್ನು ಗುರುತಿಸಿ, ಸರಿಪಡಿಸುವ ಕೆಲಸಕ್ಕೆ ಸಿಗಬೇಕು ಆದ್ಯತೆ

ಎಂ.ಜೆ.ಅಲ್ಫೋನ್ಸ್ ಪಿಂಟೋ ತೀರ್ಥಹಳ್ಳಿ
Published 15 ಏಪ್ರಿಲ್ 2025, 23:10 IST
Last Updated 15 ಏಪ್ರಿಲ್ 2025, 23:10 IST
<div class="paragraphs"><p>.ಸಂಗತ</p></div>

.ಸಂಗತ

   

ಗಿಡ ಮರಗಳಿಂದ ಆವೃತವಾದ ಮಲೆನಾಡಿನಲ್ಲೂ ಸುಡು ಬಿಸಿಲು ಜನರ ಬೆವರಿಳಿಸುತ್ತಿತ್ತು. ಆ ಬಿಸಿಲಿನ ಝಳದ ನಡುವೆ ಎಸ್ಎಸ್ಎಲ್‌ಸಿ ಪರೀಕ್ಷೆಯ ಬಿಸಿಯೂ ಸೇರಿ ಮಕ್ಕಳು ಮತ್ತು ಶಿಕ್ಷಕರು ಹೈರಾಣಾಗಿದ್ದರು. ಅಂತಹ ಒಂದು ದಿನ, ಆ ಶಾಲೆಯ ಆವರಣದಲ್ಲಿ ತಂಪಾದ ಮರದ ನೆರಳಿನ ಕೆಳಗೆ ಗುಂಪಾಗಿ ಕುಳಿತಿದ್ದ ಮಕ್ಕಳು ಒಮ್ಮೆಲೇ ಚಂಗನೆ ನೆಗೆದು ಓಡಲಾರಂಭಿಸಿದರು. ಅದನ್ನು ಕಂಡು ಕ್ಷಣಕಾಲ ದಂಗಾದೆ. ಮೊದಲೇ ಮಲೆನಾಡು, ಎಲ್ಲೋ ಮರದ ತಪ್ಪಲಿನಲ್ಲಿ ಕಾಳಿಂಗ ಸರ್ಪ ಬಂದಿರಬೇಕು, ಅದನ್ನು ಕಂಡು ಮಕ್ಕಳು ಹೌಹಾರಿರಬೇಕು ಎಂದುಕೊಂಡು ‘ಏನಾಯಿತು’ ಎಂದು ಕೂಗುತ್ತಾ ಮಕ್ಕಳತ್ತ ದೌಡಾಯಿಸಿದೆ. ಕೊನೆಗೆ ಮಕ್ಕಳು ಹಾಗೆ ಓಡಿಹೋದದ್ದು ಯಾಕೆಂಬುದು ತಿಳಿದಾಗ ಮನಸ್ಸು ಪೆಚ್ಚಾಯಿತು. ತಮ್ಮ ನೆಚ್ಚಿನ ಶಿಕ್ಷಕರು ಬಂದು ದನ್ನು ಕಂಡು ಅವರು ಹಾಗೆ ಓಡಿಹೋಗಿದ್ದರು. ಇಂದಿನ ಮಕ್ಕಳ ಇಂತಹ ಮನಃಸ್ಥಿತಿ ಕಂಡು ದಿಗಿಲಾಯಿತು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಕ್ಕಳನ್ನು ತಯಾರು ಮಾಡುವ ಸಲುವಾಗಿ ವಿಶೇಷ ತರಗತಿ ತೆಗೆದುಕೊಳ್ಳಲು, ಬಿಸಿಲಿನಲ್ಲಿ ಬಸವಳಿಯುತ್ತಾ ಬರುತ್ತಿದ್ದ ಶಿಕ್ಷಕರನ್ನು ಕಂಡು ಮಕ್ಕಳಿಗೆ ಕಾಳಿಂಗ ಸರ್ಪವನ್ನೇ ಕಂಡಷ್ಟು ಭಯ ಆಗಿರಬೇಕು. ಸತ್ತೆನೋ ಬದುಕಿದೆನೋ ಎಂಬಂತೆ ಸುಡು ಬಿಸಿಲಿನಲ್ಲಿ ಓಡಿ ಕಣ್ಮರೆಯಾಗಿದ್ದರು. ಇತ್ತ ಅದನ್ನು ಕಂಡ ಆ ಶಿಕ್ಷಕರು ನನ್ನನ್ನು ಉದ್ದೇಶಿಸಿ ‘ಹೋಗಲಿ ಬಿಡಿ ಸಾರ್, ಎಸ್ಎಸ್ಎಲ್‌ಸಿ ಪರೀಕ್ಷೆಗೆ ಮುಖ್ಯವಾದ ಪ್ರಶ್ನೆಗಳಿಗೆ ಉತ್ತರ ಹೇಳಿಕೊಡೋಣ ಅಂತ ಬಂದೆ. ಅವರಿಗೇ ಆಸಕ್ತಿ ಇಲ್ಲ ಅಂದರೆ ನಾನು ತಾನೆ ಏನು ಮಾಡಲು ಸಾಧ್ಯ?’ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

ADVERTISEMENT

‘ಸರ್ಕಾರಿ ಶಾಲೆ ಮಕ್ಕಳೇ ಹೀಗೆ. ಅವರಿಗೆ ಯಾವುದೂ ಬೇಡ. ಅವರ ಪೋಷಕರಿಗಂತೂ ಇದ್ಯಾವುದರ ಪರಿವೆಯೇ ಇರುವುದಿಲ್ಲ. ನಮ್ಮ ಅಧಿಕಾರಿಗಳು ಒಳ್ಳೇ ರಿಸಲ್ಟ್ ಕೊಡಿ ಅಂತ ನಮ್ಮ ಜೀವ ತಿಂತಾರೆ. ಕಡಿಮೆ ರಿಸಲ್ಟ್ ಬಂದ್ರೆ ನಮ್ಮ ಇನ್‌ಕ್ರಿಮೆಂಟ್ ಕಟ್ ಮಾಡ್ತಾರೆ. ಇಂತಹ ಮಕ್ಕಳನ್ನು ಕಟ್ಕಂಡು ನಾವು ಒಳ್ಳೆಯ ರಿಸಲ್ಟ್ ತರೋದಾದ್ರೂ ಹ್ಯಾಗೆ?’ ಎಂದು ಅಳಲು ತೋಡಿಕೊಂಡರು. ‘ಇವತ್ತು ತಪ್ಪಿಸ್ಕೊಂಡು ಹೋದ್ರು. ನಾಳೆನಾದ್ರೂ ಬರ್ತಾರ ನೋಡೋಣ. ಎಲ್ಲರಿಗೂ ನಾಳೆ ಬರೋಕೆ ಮೆಸೇಜ್ ಆದ್ರೂ ಹಾಕ್ತೀನಿ’ ಎಂದುಕೊಂಡು ಬೆವರು ಒರೆಸಿಕೊಳ್ಳುತ್ತಾ, ಜೇಬಿನಿಂದ ಮೊಬೈಲ್ ಫೋನ್‌ ತೆಗೆದು ಮೆಸೇಜ್ ಮಾಡುತ್ತಾ ಸ್ಟಾಫ್‌ ರೂಮಿನತ್ತ ನಡೆದರು.

ಮೇಲ್ನೋಟಕ್ಕೆ ಇದು ಒಂದು ಶಾಲೆಯ ಸಮಸ್ಯೆ ಎನಿಸಿದರೂ ಅನೇಕ ಸರ್ಕಾರಿ ಶಾಲೆಗಳಲ್ಲಿನ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಮಕ್ಕಳಲ್ಲಿ ಹಲವರಿಗೆ ಶಿಕ್ಷಣ ವೊಂದನ್ನು ಬಿಟ್ಟು ಉಳಿದೆಲ್ಲ ವಿಷಯಗಳಲ್ಲೂ ಆಸಕ್ತಿ ಇರುತ್ತದೆ. ಇದನ್ನು ಕಂಡರೆ, ನಮ್ಮ ಶಿಕ್ಷಣ ವ್ಯವಸ್ಥೆ ಎತ್ತ ಸಾಗುತ್ತಿದೆ ಎಂದು ವೇದನೆಯಾಗುತ್ತದೆ. ಮುಂದೆ ಇಂತಹ ಮಕ್ಕಳಿಂದ ಎಂತಹ ಸಮಾಜ ನಿರ್ಮಾಣವಾಗಬಹುದು ಎಂದು ಚಿಂತಿಸಿದರೆ ಭಯವಾಗುತ್ತದೆ. ಎಷ್ಟೋ ವಿದ್ಯಾರ್ಥಿಗಳಿಗೆ ಕನಿಷ್ಠ ಅಕ್ಷರ ಜ್ಞಾನವೂ ಇರುವುದಿಲ್ಲ. ಮಕ್ಕಳ ಭವಿಷ್ಯದ ಬಗ್ಗೆ ಕೆಲವು ಪೋಷಕರಲ್ಲೂ ಹೆಚ್ಚಿನ ಕಾಳಜಿ ಇರುವುದಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿರುವ ಮಕ್ಕಳು ಲಂಗು ಲಗಾಮಿಲ್ಲದ ಕುದುರೆಯಂತೆ, ಮನ ಬಂದಂತೆ ಓಡುವುದೇ ಜೀವನ ಎಂದುಕೊಂಡಿರುತ್ತಾರೆ.

ಈ ರೀತಿಯ ಮಕ್ಕಳನ್ನು ಸರಿದಾರಿಗೆ ತಂದು, ಎಸ್ಎಸ್ಎಲ್‌ಸಿಯಲ್ಲಿ ಅವರು ಉತ್ತೀರ್ಣರಾಗುವಂತೆ ಮಾಡಲು ಅಧಿಕಾರಿ ವರ್ಗ ವಿಶೇಷ ಸಭೆಗಳನ್ನು ನಡೆಸುತ್ತದೆ. ಹೆಚ್ಚುವರಿ ತರಗತಿ, ರಾತ್ರಿ ತರಗತಿ, ಕಿರು ಪರೀಕ್ಷೆಗಳಂತಹ ಹತ್ತು ಹಲವು ಕ್ರಮಗಳ ಮೂಲಕ ಶ್ರಮಿಸಲು ಶಿಕ್ಷಕರಿಗೆ ಸೂಚನೆ ನೀಡುತ್ತದೆ. ಎಸ್‌ಡಿಎಂಸಿ, ಸ್ಥಳೀಯ ಸಂಘ– ಸಂಸ್ಥೆಗಳು ಇಂತಹ ಕಾರ್ಯಗಳಿಗೆ ಕೈ ಜೋಡಿಸುತ್ತವೆ. ಆದರೆ ಶಿಕ್ಷಕ ವರ್ಗದ ಉತ್ಸಾಹಕ್ಕೆ ಮಾತ್ರ ವಿದ್ಯಾರ್ಥಿಗಳ ನಿರಾಸಕ್ತಿ ತಣ್ಣೀರೆರಚಿದಂತೆ ಆಗುತ್ತದೆ. ಇತ್ತ ಮಕ್ಕಳಿಗೆ ಶಿಕ್ಷೆ ಕೊಡುವಂತೆಯೂ ಇಲ್ಲ, ಅತ್ತ ಅವರನ್ನು ಹಾಗೇ ಬಿಡುವಂತೆಯೂ ಇಲ್ಲ. ಸಾಮಾಜಿಕ ಜಾಲತಾಣಗಳ ದಾಸರಾಗಿರುವ ಮಕ್ಕಳಿಗೆ ವಯೋಸಹಜ ಆಕರ್ಷಣೆಗಳು ಬೇರೆ. ಶಿಕ್ಷಣದ ಪ್ರಗತಿ ಕುಂಠಿತವಾಗಲು ಇವೆಲ್ಲ ಪ್ರಮುಖ ಕಾರಣಗಳಾಗಿವೆ.

ಶಾಲೆಯ ಅಭ್ಯಾಸದ ಅವಧಿಯಲ್ಲಿ ಇರಬೇಕಾದ ಶಿಸ್ತು, ಕಲಿಯುವ ಆಸಕ್ತಿ, ಕನಿಷ್ಠ ಸಂಯಮ, ಸ್ವಚ್ಛತೆ ಕಾಯ್ದುಕೊಳ್ಳುವಂತಹ ಗುಣಗಳು ಹೆಚ್ಚಿನ ವಿದ್ಯಾರ್ಥಿ ಗಳಲ್ಲಿ ಕಣ್ಮರೆಯಾಗುತ್ತಿವೆಯೇನೋ ಅನ್ನಿಸುತ್ತದೆ. ಪ್ರಾಥಮಿಕ ಹಂತದಲ್ಲಿ ಸರಿಯಾದ ತಳಪಾಯವಿಲ್ಲದೆ ಪ್ರೌಢ ಹಂತಕ್ಕೆ ಕಾಲಿರಿಸುವಂತಹ ಸಂದಿಗ್ಧ ಪರಿಸ್ಥಿತಿ ಇದೆ.

ಇಂತಹ ಸ್ಥಿತಿಯಲ್ಲಿ, ಪರೀಕ್ಷಾ ಫಲಿತಾಂಶಕ್ಕಷ್ಟೇ ಗಮನ ಕೇಂದ್ರೀಕರಿಸದೆ, ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ನೀಡಬೇಕಾದ ಅಗತ್ಯ ಇದೆ. ನ್ಯೂನತೆಗಳನ್ನು ಗುರುತಿಸಿ, ಸರಿಪಡಿಸುವ ಕೆಲಸ ಆಗಬೇಕಿದೆ. ಈ ಮೂಲಕ ಸ್ವಸ್ಥ ಸಮಾಜ ನಿರ್ಮಾಣದತ್ತ ಗಮನಹರಿಸಬೇಕಾಗಿದೆ. ಈ ದಿಸೆಯಲ್ಲಿ ಶಿಕ್ಷಣ ತಜ್ಞರು, ಅಧಿಕಾರಿಗಳು, ಸಂಘ– ಸಂಸ್ಥೆಗಳು, ಸಮಾಜ ಗಂಭೀರವಾಗಿ ಚಿಂತಿಸಬೇಕಾದ ಅನಿವಾರ್ಯ ಇದೆ. ಇಲ್ಲವಾದಲ್ಲಿ, ವಿದ್ಯಾರ್ಥಿಯೊಬ್ಬ ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದರೂ ನೈತಿಕ ಶಿಕ್ಷಣದ ಕೊರತೆ ಇದ್ದರೆ ಆತನಿಂದಲೇ ಸಮಾಜದಲ್ಲಿ ಅಶಾಂತಿ ತಲೆದೋರಬಹುದಾದ ದಿನಗಳು ದೂರವಿಲ್ಲವೇನೊ.

ಲೇಖಕ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನಿವೃತ್ತ ನೌಕರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.