ADVERTISEMENT

ಆಚರಣೆ, ಅರಿವು ಮತ್ತು ಬದ್ಧತೆ

ರಾಘವೇಂದ್ರ ಈ ಹೊರಬೈಲು
Published 5 ಸೆಪ್ಟೆಂಬರ್ 2019, 19:00 IST
Last Updated 5 ಸೆಪ್ಟೆಂಬರ್ 2019, 19:00 IST
   

ಪ್ರೌಢಶಾಲಾ ಶಿಕ್ಷಕನಾದ ನಾನು ಎಂದಿನಂತೆ ಶಾಲೆಗೆ ಹೊರಟೆ. ನಾನಿರುವ ಮನೆಗೂ ನಮ್ಮ ಶಾಲೆಗೂ ಸ್ವಲ್ಪವೇ ದೂರ. ನಾನಿರುವುದು ಪಟ್ಟಣವೂ ಅಲ್ಲದ, ತೀರಾ ಸಣ್ಣ ಹಳ್ಳಿಯೂ ಅಲ್ಲದ ಒಂದು ಗ್ರಾಮ. ಮನೆಯಿಂದ ಶಾಲೆಗೆ ಹೋಗುವ ದಾರಿಯಲ್ಲಿ ನಾಲ್ಕೈದು ಅಂಗಡಿಗಳು, ಒಂದು ಸಣ್ಣ ಬೇಕರಿ, ಮತ್ತೊಂದು ಚಿಕನ್ ಅಂಗಡಿ ಇಷ್ಟೇ ಇರುವುದು. ಹಾಗಾಗಿ ಕೆಲವು ಜನರಷ್ಟೇ ಅಲ್ಲಿ ಓಡಾಡುತ್ತಿರುತ್ತಾರೆ. ಆದರೆ ಯಾವಾಗಲೂ ಬೆರಳೆಣಿಕೆಯಷ್ಟು ಗ್ರಾಹಕರಿರುತ್ತಿದ್ದ ಚಿಕನ್ ಅಂಗಡಿಯ ಮುಂದೆ ಅಂದು ನಾನು ದಾಟಿ ಹೋಗಲೂ ಕಷ್ಟವಾಗುವಂತೆ ಜನರ ದೊಡ್ಡ ಸಾಲೇ ನಿಂತಿತ್ತು. ಅಚ್ಚರಿಯಿಂದ ಕಣ್ಣು ಹಾಯಿಸಿದರೆ, ಎಲ್ಲರೂ ಮುಗಿಬಿದ್ದು ಚಿಕನ್ ಕೊಳ್ಳುವ ತರಾತುರಿಯಲ್ಲಿದ್ದರು. ಒಂದು ತಿಂಗಳಿನಿಂದ ಬಾಗಿಲು ತೆರೆಯದೆ ಬಿಕೋ ಎನ್ನುತ್ತಿದ್ದ ಅಂಗಡಿ, ಜನರ ನೂಕುನುಗ್ಗಲಿನಿಂದ ಲಕಲಕ ಎನ್ನುತ್ತಿತ್ತು. ತಕ್ಷಣ ಅರ್ಥವಾಯ್ತು, ಶ್ರಾವಣ ಮಾಸ ಮುಕ್ತಾಯವಾಗಿದ್ದರಿಂದ ಜನರು ಇಲ್ಲಿಗೆ ದಾಂಗುಡಿಯಿಟ್ಟಿದ್ದಾರೆ ಎಂದು.

‘ಅಲ್ಲ, ಶ್ರಾವಣ ಮುಗೀತು ಅಂತ ಎಲ್ರೂ ಇವತ್ತೇ ಮಾಂಸದಂಗಡಿಗಳಿಗೆ ಮುಗಿಬಿದ್ದು ಕೊಳ್ಳುತ್ತಾರಲ್ಲ ಯಾಕೆ’ ಅಂದಿದ್ದಕ್ಕೆ ಒಬ್ಬರು, ‘ಒಂದು ತಿಂಗ್ಳಿಂದ ಮಾಂಸ ಬಿಟ್ಟಿರ್ತೀವಲ್ಲ ಸಾರ್, ಯಾವಾಗ ಶ್ರಾವಣ ಮುಗಿಯುತ್ತೋ ಅಂತ ಕಾಯ್ತಿರ್ತೀವಿ. ನಿನ್ನೆ ಮುಗೀತು ಅದ್ಕೆ ಇವತ್ತು ಚೆನ್ನಾಗಿ ತಿನ್ಬೇಕು ಅಂತ ತಗಂಡೋಗೋಕೆ ಬಂದಿದೀವಿ’ ಅಂದ್ರು. ‘ಇವತ್ತೊಂದೇ ದಿನ ತಿನ್ಬೇಕಾ, ನಾಳೆನೂ ತಿನ್ಬೋದಲ್ಲ’ ಅಂದಿದ್ದಕ್ಕೆ ‘ಅದೆಲ್ಲ ಗೊತ್ತಿಲ್ಲ ಸಾರ್, ತಲೆತಲಾಂತರದಿಂದ ಹಿಂಗೇ ನಡ್ಕೊಂಡ್ ಬಂದೈತೆ’ ಅಂದ್ರು.

ಆಚರಣೆಗಳನ್ನು ತಮ್ಮ ಕೊರಳಿಗೇ ಕಟ್ಟಿಕೊಂಡಂತಿರುವ ಅನೇಕ ಪರಿಚಿತರೂ ಈ ಶ್ರಾವಣ ಮಾಸದ ಸಂದರ್ಭದಲ್ಲಿ ಹಲವಾರು ಬಾರಿ ‘ಅಯ್ಯೋ, ಸುಮಾರ್ ದಿನದಿಂದ ನಾನ್‌ವೆಜ್ ತಿನ್ನದೆ ಬಾಯೆಲ್ಲ ಕೆಟ್ಟೋಗಿದೆ. ಯಾವಾಗ ಮುಗಿಯುತ್ತಪ್ಪಾ ಈ ಶ್ರಾವಣ ಮಾಸ, ಒಂದು ತಿಂಗ್ಳು ಅದ್ಯಾರು ಮಾಡಿದ್ರಪ್ಪ’ ಎಂದಿದ್ದನ್ನು ಕೇಳಿಸಿಕೊಂಡಿದ್ದೇನೆ.

ADVERTISEMENT

ಇಷ್ಟಕ್ಕೂ ಶ್ರಾವಣ ಮಾಸದಲ್ಲಿ ಮಾಂಸ ಸೇವನೆ ವರ್ಜ್ಯವೇಕೆ ಎಂಬುದನ್ನು ವೈಜ್ಞಾನಿಕವಾಗಿ ತಿಳಿದುಕೊಳ್ಳಲೂ ಅನೇಕರು ಪ್ರಯತ್ನಿಸದಿರುವುದು ವಿಪರ್ಯಾಸ. ಈ ತಿಂಗಳಲ್ಲಿ ಮಾಂಸಾಹಾರ ಸೇವಿಸಬಾರದು ಎಂದು ಹಿರಿಯರು ನಿಯಮ ಮಾಡಿಕೊಂಡಿರುವುದಕ್ಕೆ ಮುಖ್ಯವಾಗಿ ಮೂರು ಕಾರಣಗಳಿವೆ ಅಂತ ಅನ್ನಿಸುತ್ತದೆ.

ಮೊದಲನೆಯದಾಗಿ, ಶ್ರಾವಣ ಮಾಸದಲ್ಲಿ ಮಳೆಗಾಲ ಉಚ್ಛ್ರಾಯ ಸ್ಥಿತಿಯಲ್ಲಿರುತ್ತದೆ. ಈ ದಿನಗಳಲ್ಲಿ ಕ್ರಿಮಿಕೀಟಗಳ ಸಂಖ್ಯೆ ವೃದ್ಧಿಸಿರುತ್ತದೆ. ಅವು ನಾವು ತಿನ್ನುವ ಪ್ರಾಣಿಗಳಾದ ಕುರಿ, ಕೋಳಿ, ಮೀನುಗಳಿಗೆ ಕಚ್ಚುವ, ಮೈಯಲ್ಲಿ ಸೇರಿಕೊಂಡು ರೋಗ ಹರಡುವ ಸಾಧ್ಯತೆ ಹೆಚ್ಚು. ಅಂತಹ ಪ್ರಾಣಿ-ಪಕ್ಷಿಗಳನ್ನು ತಿಂದಾಗ ಮನುಷ್ಯನಿಗೂ ರೋಗ ಹರಡಬಹುದು ಎಂಬ ಕಾರಣ. ಎರಡನೆಯದು, ಈ ತಿಂಗಳಲ್ಲಿ ಅನೇಕ ಪ್ರಾಣಿಗಳು, ಅದರಲ್ಲಿಯೂ ಮೀನುಗಳು ಗರ್ಭ ಧರಿಸುವ ಕಾಲ. ಈ ಸಂದರ್ಭದಲ್ಲಿ ಅವುಗಳನ್ನು ಕೊಂದು ತಿನ್ನುವುದು ಅವುಗಳ ಪೀಳಿಗೆಯನ್ನು ಕಡಿಮೆ ಮಾಡಿದಂತೆ ಎಂಬುದು. ಇನ್ನು ಮೂರನೆಯದು, ಈ ತಿಂಗಳು ಎಲ್ಲೆಲ್ಲೂ ಮಳೆ ಇರುವುದರಿಂದ ಬಿಸಿಲಿನ ಪ್ರಮಾಣ ಕಡಿಮೆಯಾಗಿರುತ್ತದೆ. ಹಾಗಾಗಿ ತಿನ್ನುವ ಆಹಾರ ಜೀರ್ಣವಾಗುವುದಕ್ಕೆ ದೀರ್ಘ ಸಮಯ ಬೇಕಾಗುತ್ತದೆ. ಮಾಂಸಾಹಾರ ಜೀರ್ಣವಾಗುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಈ ಸಮಯದಲ್ಲಿ ಮಾಂಸಾಹಾರ ಸೇವನೆ ಬೇಡವೆನ್ನುವುದು ಹಿರಿಯರ ಅಭಿಪ್ರಾಯ ಆಗಿದ್ದಿರಬಹುದು. ಇದರೊಂದಿಗೆ ಕೆಲವು ಧಾರ್ಮಿಕ ಕಾರಣಗಳೂ ಇದ್ದಿರಬಹುದು. ಹೀಗೆ ಇದ್ದಿರಬಹುದಾದ ಕಾರಣಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಗೋಜಿಗೇ ಹೋಗದೆ ಈಗ ನಾವು ಆಚರಿಸುತ್ತಿದ್ದೇವೆ.

ಶ್ರಾವಣ ಯಾವಾಗ ಮುಗಿಯುತ್ತದೋ, ಮಾಂಸ ಯಾವಾಗ ತಿನ್ನುತ್ತೇವೆಯೋ ಎಂದು ಕನವರಿಸುತ್ತಲೇ ಶ್ರಾವಣ ಆಚರಿಸುವಂತಹ ಹಟಕ್ಕೆ ಅರ್ಥ ಇದೆಯೇ? ಹಬ್ಬದ ದಿನ ಉಪವಾಸ ಮಾಡುತ್ತೇನೆಂದು, ಹಸಿವೆಯಾದಾಗಲೆಲ್ಲ ಹೊಟ್ಟೆಯ ಬಗ್ಗೆಯೇ ಯೋಚಿಸಿದಂತೆ ಆಗುತ್ತದೆ ಇಂತಹ ಹಟ!

ಆಚರಣೆಗಳು ಮೂಲತಃ ನಂಬಿಕೆಯನ್ನು ಆಧರಿಸಿವೆ. ಅವನ್ನು ಅನುಸರಿಸುತ್ತೇವೆ ಎಂದರೆ ಆ ನಂಬಿಕೆಗೆ ಮನಃಪೂರ್ವಕವಾಗಿ ಬದ್ಧರಾಗಿರಬೇಕು. ಅದಕ್ಕೆ ಬೇಕಾದ ‘ತ್ಯಾಗ’ಕ್ಕೆ ಸಿದ್ಧರಿರಬೇಕು. ಹಾಗೆ ಆಚರಿಸಲು ಸಾಧ್ಯವಾಗದೇ ಹೋದರೆ ಅವುಗಳಿಂದ ದೂರ ಉಳಿಯುವುದೇ ಲೇಸು. ಅಕ್ಕಪಕ್ಕದವರುತಪ್ಪು ತಿಳಿದಾರು ಎಂದೋ, ಅಜ್ಜನ ಕಾಲದಿಂದ ಆಚರಿಸುತ್ತಿದ್ದೇವೆ ಎಂಬ ಕಾರಣಕ್ಕೋ ಆಚರಣೆಗಳಿಗೆ ಜೋತು ಬೀಳುವ ಅಗತ್ಯ ಇಲ್ಲವೆನಿಸುತ್ತದೆ.ಆಚರಣೆಯ ಹಿಂದಿನ ಆಶಯವನ್ನು ಅರ್ಥ ಮಾಡಿಕೊಂಡು, ಅದು ಈಗಿನ ಸಂದರ್ಭಕ್ಕೂ ಒಪ್ಪುತ್ತದೆ ಎಂದು ಮನವರಿಕೆಯಾದರೆ ಅಂತಹವುಗಳನ್ನು ಉಳಿಸಿಕೊಳ್ಳಬೇಕು. ಬೇಡವಾದದ್ದನ್ನು ಬಿಟ್ಟು ಕಾಲದ
ಜೊತೆ ಹೆಜ್ಜೆ ಇಡುವುದು ಒಳಿತು ಅಂತ ಅನ್ನಿಸುವುದಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.