ADVERTISEMENT

ಸಂಗತ: ಸಾಮಾಜಿಕ ಜಾಲತಾಣ: ಅಪರಾಧಿ ಯಾರು?!

ಮಾಧ್ಯಮಗಳನ್ನು ಬಳಸುವ, ಗ್ರಹಿಸುವ, ಬೆಳೆಸುವ ಮಾರ್ಗದಲ್ಲಿ ಆತ್ಮಸಾಕ್ಷಿಯ ಪಾಠವನ್ನು ನಾವು ಕಲಿಯಬೇಕಾಗಿದೆ

ಡಾ.ಕೆ.ಎಸ್.ಪವಿತ್ರ
Published 29 ಅಕ್ಟೋಬರ್ 2021, 21:21 IST
Last Updated 29 ಅಕ್ಟೋಬರ್ 2021, 21:21 IST
ಅಪರಾಧಿ
ಅಪರಾಧಿ   

ಜಗತ್ತು ಕೋವಿಡ್‍ನಂತಹ ಪ್ಯಾಂಡೆಮಿಕ್‍ ಅನ್ನು ಹಲವು ಬಾರಿ ನೋಡಿದೆ. ಆದರೆ ‘ಸೋಷಿಯಲ್ ಮೀಡಿಯಾ ಪ್ಯಾಂಡೆಮಿಕ್’ (ಸಾಮಾಜಿಕ ಮಾಧ್ಯಮಗಳ ಸೋಂಕು) ಅನ್ನು ಮೊದಲ ಬಾರಿಗೆ ನೋಡುತ್ತಿದೆ! ಸಾಮಾಜಿಕ ಜಾಲತಾಣ ಸಂಸ್ಥೆಯೊಂದರ ವಿರುದ್ಧ ಮಾಜಿಉದ್ಯೋಗಿಯೊಬ್ಬರು ಮಾಡಿರುವ ಆರೋಪಗಳ ಬಗೆಗೆ ಮೊನ್ನೆ ವರದಿಯಾಗಿದೆ.

ತಮ್ಮ ಸಂದರ್ಶನವೊಂದರಲ್ಲಿ ‘ತಪ್ಪು ಮಾಹಿತಿ ಹರಡುವಿಕೆಯಿಂದ, ಮುಖ್ಯವಾಗಿ ಹದಿಹರೆಯದ ಹೆಣ್ಣುಮಕ್ಕಳ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಅರಿವಿದ್ದರೂ ಫೇಸ್‍ಬುಕ್ ಅದರ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ’ ಎಂಬ ಕಾಳಜಿಯನ್ನು ಅವರು ಹಂಚಿಕೊಂಡಿದ್ದಾರೆ. ಆದರೆ ಸಂಗತಿ ‘ಫೇಸ್‍ಬುಕ್’ ಒಂದೇ ನಿಯಂತ್ರಿಸುವಷ್ಟು ಸರಳವಾಗಿಲ್ಲ.

ಯಾವುದೇ ಮಾಧ್ಯಮಗಳ ಗುರಿ ಗ್ರಾಹಕನ ‘ಮನಸ್ಸು’. ಈವರೆಗೆ ಕೆಲವು ಗಂಟೆಗಳಷ್ಟು ಕಾಲ ಫೇಸ್‍ಬುಕ್, ವಾಟ್ಸ್ಆ್ಯಪ್‍ಗಳಲ್ಲಿ ನಾವು ಕಾಲ ಕಳೆಯು ತ್ತಿದ್ದೆವು. ಇದೀಗ ಕೋವಿಡ್‍ನಿಂದ ಉಂಟಾದ ದೈಹಿಕ ಅಂತರದ ಕಾರಣ, ಸಾಮಾಜಿಕ ಅಂತರದ ಅಪಾಯ ವನ್ನು ಹೋಗಿಸಲೋಸುಗ ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರ ಸಂಪರ್ಕ ಕಾಯ್ದುಕೊಳ್ಳುವ ಸ್ಥಿತಿಗೆ ತಲು ಪಿದ್ದೇವೆ. ಜನರೊಡನೆ ಸಂಪರ್ಕ ಸಾಧ್ಯವೋ ಇಲ್ಲವೋ ‘ತೆರೆ’ಯೊಂದಿಗಂತೂ ನಾವೆಲ್ಲರೂ ಅಬಾಧಿತವಾದ ಸಂಪರ್ಕವನ್ನು ಬಯಸುತ್ತೇವೆ. ಹೀಗಿರುವಾಗ ಇಲ್ಲಿಯವರೆಗಿದ್ದ ‘ಮಾಧ್ಯಮ’ಗಳ ಪರಿಸ್ಥಿತಿಯೂ ಬದಲಾಗಿದೆ.

ADVERTISEMENT

ಈಗ ‘ಮಾಧ್ಯಮ’ ಎಂದರೆ? ಯಾರೂ ಆಗ ಬಹುದು! ಏಕೆಂದರೆ ಈಗ ಮಾಧ್ಯಮಗಳಲ್ಲಿ ಬರೆ ಯಲು, ಅಭಿಪ್ರಾಯ ವ್ಯಕ್ತಪಡಿಸಲು ಸಂಪಾದಕರು ತಿರಸ್ಕರಿಸಬಹುದು, ಕತ್ತರಿ ಹಾಕಬಹುದು ಎಂಬ ಭಯವೇ ಇಲ್ಲ. ನಿಮಗೆ ಅನ್ನಿಸಿದ್ದನ್ನು, ಬೇಕಾದ್ದನ್ನು, ಬೇಡವಾದ್ದನ್ನು ನೀವು ಹರಿಬಿಡಬಹುದು, ಹಂಚ ಬಹುದು. ಸುದ್ದಿಗಳ ‘ಜೀವಿತಾವಧಿ’ ಕಡಿಮೆಯೇ ಇರಬಹುದಾದರೂ ಒಂದಿಷ್ಟು ‘ಲೈಕ್’ಗಳಿಗೆ, ಕಮೆಂಟ್‍ಗಳಿಗೆ ಕೊರತೆಯಂತೂ ಇರಲಾರದು.

ಇವೆಲ್ಲವೂ ಸಾಮಾಜಿಕ ಬಾಂಧವ್ಯದ ದೃಷ್ಟಿಯಲ್ಲಿ ಒಳ್ಳೆಯವೇ. ಆದರೆ ಸಮಸ್ಯೆಯೆಂದರೆ ‘ತಪ್ಪು ಮಾಹಿತಿ’ಯೂ ಕತ್ತರಿ ಇಲ್ಲದೆ, ‘ಎಡಿಟರ್ ಕಣ್ಣು’ ನೋಡದೆ ಸಾಮಾಜಿಕ ಮಾಧ್ಯಮಗಳಲ್ಲಿ ಸುತ್ತುತ್ತಲೇ ಇರುವುದು. ಇಂತಹ ತಪ್ಪು ಮಾಹಿತಿಗಳಿಂದ ಜೀವ ಕಳೆದುಕೊಂಡ ಉದಾಹರಣೆಗಳೂ ಇವೆ. ಸಾಮಾಜಿಕ ಮಾಧ್ಯಮಗಳೇ ನಮ್ಮ ಸಂಪರ್ಕಸೇತುವಾಗಿದ್ದ ಲಾಕ್‍ಡೌನ್‌ನ ದಿನಗಳಲ್ಲಿ ಕೊರೊನಾ ಸೋಂಕಿನ ಬಗ್ಗೆ ಹರಿದಾಡುತ್ತಿದ್ದ ತಪ್ಪು ಮಾಹಿತಿಗಳಿಂದ ಕೆಲವರು ತಪ್ಪು ಔಷಧಿ ಸೇವಿಸಿದ್ದಾರೆ, ಪ್ರಾಣವನ್ನೂ ಕಳೆದುಕೊಂಡಿ ದ್ದಾರೆ. ಆತ್ಮಹತ್ಯೆಗೆ ಪ್ರಚೋದನೆಯನ್ನೂ ಈ ತಪ್ಪು ಮಾಹಿತಿಗಳು ನೀಡಿವೆ. ಆದರೆ ಇಂತಹ ಪ್ರಕರಣಗಳ ಬಗ್ಗೆ ಮಾಧ್ಯಮಗಳೆಲ್ಲವೂ ಮೌನ ವಹಿಸಿವೆ. ಅಂದರೆ ಸದ್ಯದಲ್ಲಿ ‘ಮಾಧ್ಯಮ’ದವರೇ ಆಗಿರುವ ನಾವೆಲ್ಲರೂ!

ಹಾಗಿದ್ದರೆ ‘ಮಾಧ್ಯಮಗಳು ಮತ್ತು ಆರೋಗ್ಯ’ದ ಬಗ್ಗೆ ಕೆಲಸ ಮಾಡುತ್ತಿರುವ ವಿಶ್ವ ಆರೋಗ್ಯ ಸಂಸ್ಥೆ ಏನು ಮಾಡುತ್ತಿದೆ? ಅದು ಕೋವಿಡ್‍ಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ತಡೆಯಲು ಫೇಸ್‍ಬುಕ್, ಟ್ವಿಟರ್ ಮತ್ತು ಇತರ ಜಾಲತಾಣಗಳ ಜೊತೆ ಕೈ ಜೋಡಿಸಿದೆ. ಸರಿಯಾದ ಮಾಹಿತಿಯನ್ನು ಯುಟ್ಯೂಬ್, ಇನ್‌ಸ್ಟಾಗ್ರಾಂನಂತಹ ತಾಣಗಳಲ್ಲಿ ಪ್ರಕಟಿಸಲಾಗುತ್ತಿದೆ. ಪ್ರತಿ ಯೊಬ್ಬರ ಫೇಸ್‍ಬುಕ್ ಖಾತೆಯಲ್ಲಿಯೂ ಗೂಗಲ್, ಮೈಕ್ರೊಸಾಫ್ಟ್, ಟ್ವಿಟರ್, ರೆಡ್ಡಿಟ್, ಯುಟ್ಯೂಬ್, ಲಿಂಕ್ಡ್ ಇನ್‍ಗಳ ಜೊತೆ ಸೇರಿ ತಪ್ಪು ಮಾಹಿತಿಯನ್ನು ತೆಗೆಯುವ, ಸರಿ ಮಾಹಿತಿಯ ಸಾಲು ಕಾಣುವಂತೆ ಕ್ರಮ ಕೈಗೊಳ್ಳಲಾಗಿದೆ. ಸಾಮಾಜಿಕ ಜಾಲತಾಣ ಕಂಪನಿಗಳು ‘ಫ್ಯಾಕ್ಟ್ ಚೆಕ್’ ಮತ್ತು ‘ಆ್ಯಕ್ಯುರೆಸಿ ನಡ್ಜ್‌ ಇಂಟರ್‌ವೆನ್ಷನ್ಸ್‌’ನಂತಹ (ನಿಖರತೆಯ ಸ್ಪಷ್ಟನೆ) ವಿಧಾನಗಳನ್ನು ಲಕ್ಷಾಂತರ ರೂಪಾಯಿ ವ್ಯಯಿಸಿ ಅಳವಡಿಸಿವೆ. ಆದರೆ ಇವು ಯಾವಾಗಲೂ ಸರಿಯಾಗಿಯೇ ಕೆಲಸ ಮಾಡು ತ್ತವೆಯೆಂದು ಹೇಳಲು ಬರುವಂತಿಲ್ಲ. ಒಳ್ಳೆಯ ಕಾದಂಬರಿಯ ಮುಖಪುಟದ ಚಿತ್ರವೊಂದನ್ನು ‘ಅಶ್ಲೀಲ ವಸ್ತು’ ಹೊಂದಿದೆ ಎಂದು ‘ಫೇಸ್‍ಬುಕ್’ ತೆಗೆದುಹಾಕಿದ ಪ್ರಕರಣವನ್ನು ಉದಾಹರಿಸಬಹುದು. ಒಂದೆರಡು ಬಾರಿ ಗ್ರಾಹಕ ಬಿಡದೆ ಮತ್ತೆ ಮತ್ತೆ ಪ್ರಶ್ನಿಸಿದ ತಕ್ಷಣ ‘ಕ್ಷಮಿಸಿ, ತಪ್ಪಾಗಿದೆ’ ಎಂಬ ಸಂದೇಶ ಬರಬಹುದು, ಮಾಹಿತಿಯನ್ನು ಮತ್ತೆ ಹಾಕಲು ಬಿಡಬಹುದು. ಇದು ತಪ್ಪು ಮಾಹಿತಿಗೂ ಸಾಧ್ಯವಾಗಬಹುದಷ್ಟೆ!

‘ಸತ್ಯ ನಡೆದಾಡಲು ಇನ್ನೂ ಚಪ್ಪಲಿ ಹಾಕಿಕೊಳ್ಳು ವುದರಲ್ಲಿರುವಾಗ, ಸುಳ್ಳು ಇಡೀ ಜಗತ್ತನ್ನು ಅರ್ಧ ತಿರುಗಿರುತ್ತದೆ’ ಎಂಬ ಮಾತನ್ನು ಇಲ್ಲಿ ನೆನಪಿಸಿಕೊಳ್ಳ ಬೇಕು. ಯಾವುದೇ ಮಾಹಿತಿಯನ್ನು ‘ಶೇರ್’ ಮಾಡುವ, ‘ಫಾರ್ವರ್ಡ್’ ಮಾಡುವ ಮುನ್ನ ಅಥವಾ ನಾವೇ ‘ಸೃಷ್ಟಿ’ಸುವ ಮೊದಲು ಕನಿಷ್ಠ 20 ಸೆಕೆಂಡುಗಳನ್ನು ತೆಗೆದುಕೊಳ್ಳುವುದು, ಯಾವುದೇ ಚಿಕಿತ್ಸೆಯ ಬಗ್ಗೆ ಅಸ್ಪಷ್ಟ ಮಾಹಿತಿ ಹರಡದಿರುವುದು, ಭಯದಲ್ಲಿ ಹುಟ್ಟಿಕೊಳ್ಳುವ, ಹರಿಯಬಿಡುವ ಮಾಹಿತಿ ಬಗೆಗೆ ಎಚ್ಚರದಿಂದಿರುವುದು, ಮಾಹಿತಿ ಪ್ರಸಾರ ಮಾಡುವಾಗ ರಾಜಕಾರಣವನ್ನು ಹೊರಗಿಡುವುದು ನಮ್ಮಂತಹ ಜನಸಾಮಾನ್ಯರು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು.

ಕೋವಿಡ್‌ ಪ್ಯಾಂಡೆಮಿಕ್‍ನ ಸಂದರ್ಭದಲ್ಲಿ ನಾವು ಕಲಿತ ಜೀವನಪಾಠಗಳು ಹಲವು. ಮಾಧ್ಯಮಗಳನ್ನು ಬಳಸುವ, ಗ್ರಹಿಸುವ, ಬೆಳೆಸುವ ಮಾರ್ಗದಲ್ಲಿಯೂ ‘ಆತ್ಮಸಾಕ್ಷಿ’ಯ ಪಾಠವನ್ನು ನಾವು ಕಲಿಯಬೇಕಾಗಿದೆ. ಕೇವಲ ಕೊರೊನಾ ಸಂದರ್ಭಕ್ಕಲ್ಲದೆ, ಸಮಾಜದ ಹಲವು ಸಮಸ್ಯೆಗಳಿಗೆ ಕಾರಣವಾಗುವ ಬದಲು ಪರಿ ಹಾರದ ಮಾರ್ಗವಾಗುವಂತೆ ಮಾಧ್ಯಮಗಳನ್ನು ದುಡಿಸಿಕೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.