ADVERTISEMENT

ಸಂಗತ: ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಕ್ಷಾಮ

ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಯಿಂದ ಸರ್ಕಾರ ಸಾಧಿಸಿರುವುದಾದರೂ ಏನು?

ರಾಜಕುಮಾರ ಕುಲಕರ್ಣಿ
Published 11 ಜೂನ್ 2025, 23:16 IST
Last Updated 11 ಜೂನ್ 2025, 23:16 IST
.....
.....   

ಜಮಖಂಡಿ ನಗರದ ಬಾಗಲಕೋಟೆ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಕಾರ್ಯಾಗಾರವೊಂದರ ಸಮಾರೋಪದಲ್ಲಿ ವಿಶ್ರಾಂತ ಕುಲಪತಿ ಪ್ರೊ.ಎನ್. ನರಸಿಂಹಮೂರ್ತಿ ಅವರು, ‘ವಿಶ್ವವಿದ್ಯಾ
ಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖ ಆಗುತ್ತಿದೆ. ಈ ಸಂಖ್ಯೆ ಹೆಚ್ಚಿಸುವ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದು ಹೇಳಿರುವುದು ಪತ್ರಿಕೆಯಲ್ಲಿ ವರದಿಯಾಗಿದೆ. ಅವರ ಮಾತು ಸತ್ಯಕ್ಕೆ ಹತ್ತಿರವಾದುದು. ಪ್ರಸ್ತುತ, ರಾಜ್ಯದಲ್ಲಿನ ಸರ್ಕಾರಿ ವಿಶ್ವವಿದ್ಯಾಲಯಗಳ ಸ್ಥಿತಿ ಶೋಚನೀಯವಾಗಿದೆ.

ರಾಜ್ಯದಲ್ಲಿ ಈ ಮೊದಲು ಕಂದಾಯ ವಿಭಾಗಕ್ಕೊಂದರಂತೆ ವಿಶ್ವವಿದ್ಯಾಲಯಗಳಿದ್ದವು. ಪ್ರತಿ ವಿಶ್ವವಿದ್ಯಾಲಯದಡಿ ಕಾಲೇಜುಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದು, ಪ್ರತಿವರ್ಷ ವಿದ್ಯಾರ್ಥಿಗಳ ಪ್ರವೇಶಕ್ಕೆ ಸ್ಪರ್ಧೆಯ ವಾತಾವರಣ ಇರುತ್ತಿತ್ತು. ವಿಶ್ವವಿದ್ಯಾಲಯಗಳ ಸಂಖ್ಯೆ ಕಡಿಮೆ ಇದ್ದಾಗ, ಅವುಗಳ ನಿರ್ವಹಣೆಗೆ ಅಗತ್ಯವಾದ ಹಣಕಾಸಿನ ನೆರವು ನೀಡುವುದು ಸರ್ಕಾರಕ್ಕೆ ಸುಲಭವಾಗಿತ್ತು. ಭೌಗೋಳಿಕ ಅಂತರವನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ನಾತಕೋತ್ತರ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿತ್ತು. ಬೋಧನೆ ಮತ್ತು ಸಂಶೋಧನೆಯ ಮೂಲಕ ವಿಶ್ವವಿದ್ಯಾಲಯಗಳು ರಾಜ್ಯದಲ್ಲಿ ಅತ್ಯುತ್ತಮ ಶೈಕ್ಷಣಿಕ ಪರಿಸರವನ್ನು ನಿರ್ಮಿಸಿದ್ದವು.

ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಆಯಾ ಕಾಲದ ಸರ್ಕಾರಗಳು ಹಟಕ್ಕೆ ಬಿದ್ದಂತೆ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದವು. ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಸರ್ಕಾರ ತನ್ನ ಹಿಂಬಾಲಕರನ್ನೋ ಅಥವಾ ಪಕ್ಷನಿಷ್ಠರನ್ನೊ ಆಯಕಟ್ಟಿನ ಜಾಗದಲ್ಲಿ ಕೂರಿಸುವುದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ. ಒಂದರ್ಥದಲ್ಲಿ
ವಿಶ್ವವಿದ್ಯಾಲಯಗಳು ಆಯಕಟ್ಟಿನ ಜಾಗಗಳನ್ನು ಅರಸುತ್ತಿದ್ದವರಿಗೆ ನೆಲೆ ಒದಗಿಸುವ ಪುನರ್ವಸತಿ ಕೇಂದ್ರಗಳಾಗಿವೆ.

ADVERTISEMENT

ನಿರ್ದಿಷ್ಟ ಭೌಗೋಳಿಕ ವ್ಯಾಪ್ತಿಯಲ್ಲಿನ ಪದವಿ ಕಾಲೇಜುಗಳನ್ನು ಹೊಸದಾಗಿ ಅಸ್ತಿತ್ವಕ್ಕೆ ಬಂದ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಗೊಳಿಸಲಾಗುತ್ತದೆ. ಪರಿಣಾಮವಾಗಿ, ಎರಡು ಅಥವಾ ಎರಡಕ್ಕಿಂತ ಹೆಚ್ಚು ವಿಶ್ವವಿದ್ಯಾಲಯಗಳು ಈಗಾಗಲೇ ಅಸ್ತಿತ್ವದಲ್ಲಿರುವ ಕಾಲೇಜುಗಳನ್ನು ಸಮ ಪ್ರಮಾಣದಲ್ಲಿ ಹಂಚಿಕೊಳ್ಳುತ್ತವೆ. ಆಗ ವಿದ್ಯಾರ್ಥಿಗಳ ಸಂಖ್ಯೆಯ ಜೊತೆಗೆ ಆರ್ಥಿಕ ಸಂಪನ್ಮೂಲವೂ ಹಂಚಿಹೋಗುತ್ತದೆ. ಇದು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ದಾಖಲಾತಿ ಕಡಿಮೆಯಾಗಲು ಮಾತ್ರವಲ್ಲದೆ, ಆರ್ಥಿಕ ಸಂಪನ್ಮೂಲದ ಕೊರತೆಗೂ ಕಾರಣವಾಗುತ್ತದೆ.

ಹೊಸ ವಿಶ್ವವಿದ್ಯಾಲಯಗಳು ಮಾತ್ರವಲ್ಲದೆ, ಹಳೆಯ ವಿಶ್ವವಿದ್ಯಾಲಯಗಳೂ ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿವೆ. ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳೆಂಬ ಮನ್ನಣೆಗೆ ಪಾತ್ರವಾದ ಸಂಸ್ಥೆಗಳಲ್ಲಿಯೂ ಸಿಬ್ಬಂದಿಗೆ ನಿಯಮಿತವಾಗಿ ವೇತನ ಪಾವತಿಯಾಗುತ್ತಿಲ್ಲ ಎನ್ನುವ ದೂರುಗಳಿವೆ.

ಪೂರ್ಣಕಾಲಿಕ ಬೋಧಕರಿಲ್ಲದೆ ಅತಿಥಿ ಉಪನ್ಯಾಸಕರಿಂದ ವಿಭಾಗಗಳ ಶೈಕ್ಷಣಿಕ ಚಟುವಟಿಕೆಗಳು ನಿರ್ವಹಿಸಲ್ಪಡುತ್ತಿವೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯಗಳಲ್ಲಿನ ಸಮಸ್ಯೆಗಳೇ ಬೆಟ್ಟದಷ್ಟಿರುವಾಗ ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪಿಸಿ ಸರ್ಕಾರ ಸಾಧಿಸಿರುವುದಾದರೂ ಏನು?

ವಿದ್ಯಾರ್ಥಿಗಳ ಕೊರತೆಗೆ ವಿಶ್ವವಿದ್ಯಾಲಯದಲ್ಲಿನ ಸಮಸ್ಯೆಗಳು ಮಾತ್ರವಲ್ಲದೆ, ಅಲ್ಲಿ ಬೋಧಿಸುತ್ತಿರುವ ವಿಷಯಗಳ ಜನಪ್ರಿಯತೆ ಕುಂಠಿತಗೊಳ್ಳುತ್ತಿರುವುದೂ ಕಾರಣವಾಗಿದೆ. ಸದ್ಯದ ಸಂದರ್ಭದಲ್ಲಿ, ವೃತ್ತಿಪರ ಕೋರ್ಸ್‌ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿರುವುದರಿಂದ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಭಾಷೆ ಮತ್ತು ಲಲಿತಕಲೆಗಳನ್ನು ಅಧ್ಯಯನ ಮಾಡಲು ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಿಲ್ಲ.

ದಶಕದ ಹಿಂದೆ ರಾಜ್ಯದಲ್ಲಿ ಪದವಿಪೂರ್ವ ಶಿಕ್ಷಣದ ಹಂತದಲ್ಲಿ ವೃತ್ತಿಪರ ಕೋರ್ಸ್‌ಗಳಿದ್ದವು. ಗ್ರಂಥಾಲಯ ವಿಜ್ಞಾನ, ಹೊಲಿಗೆ ಮತ್ತು ಕಸೂತಿ, ಬುಕ್ ಬೈಂಡಿಂಗ್‌ನಂಥ ಕೋರ್ಸ್‌ಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಈ ವೃತ್ತಿಪರ ಕೋರ್ಸ್‌ಗಳ ಶಿಕ್ಷಣವನ್ನು ಪದವಿಪೂರ್ವ ಶಿಕ್ಷಣಕ್ಕೆ ತತ್ಸಮಾನವೆಂದು ಪರಿಗಣಿಸಲಾಗುತ್ತಿತ್ತು. ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳನ್ನು ಶಿಕ್ಷಕರ ತರಬೇತಿ ಕೋರ್ಸ್‌ಗೆ ಪ್ರವೇಶ ಪಡೆಯಲು ಅನರ್ಹರೆಂದು ಸರ್ಕಾರ ಹೊಸ ನಿಯಮ ಜಾರಿಗೊಳಿಸಿತು. ನಂತರ, ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಮುಖವಾಯಿತು. 

‌ನಿರೀಕ್ಷಿತ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗದೇ ಇದ್ದಾಗ ಸಹಜವಾಗಿಯೇ ಆಯಾ ವಿಷಯಗಳ ಬೇಡಿಕೆ ಕುಸಿಯಲಾರಂಭಿಸುತ್ತದೆ. ಇನ್ನೊಂದೆಡೆ, ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸ್‌ಗಳು ಸೃಷ್ಟಿಸುತ್ತಿರುವ ಉದ್ಯೋಗಾವಕಾಶಗಳು ಆ ವಿಷಯಗಳತ್ತ ಹೆಚ್ಚಿನ ವಿದ್ಯಾರ್ಥಿಗಳು ಆಕರ್ಷಣೆಗೊಳ್ಳಲು ಕಾರಣವಾಗುತ್ತಿವೆ.

ಶಿಕ್ಷಣದ ಉದ್ದೇಶಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯಗಳ ಪಠ್ಯಕ್ರಮದಲ್ಲಿ ಬಹಳಷ್ಟು ಬದಲಾವಣೆಗಳಾಗಬೇಕಿದೆ. ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನೆಯನ್ನು ಉದ್ಯೋಗ ಮತ್ತು ವೇತನ ಬಡ್ತಿ ವ್ಯಾಪ್ತಿಯಿಂದ ಹೊರತರಬೇಕು. ಉನ್ನತ ಶಿಕ್ಷಣಕ್ಕೆ ಎಲ್ಲರಿಗೂ ಪ್ರವೇಶ ಎನ್ನುವುದಕ್ಕಿಂತ ಆಸಕ್ತರಿಗೆ ಮಾತ್ರ ಅವಕಾಶ ಎನ್ನುವಂತಾಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದಕ್ಕಿಂತ, ಅಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯಗಳನ್ನು ಅಭಿವೃದ್ಧಿಪಡಿಸುವತ್ತ ಸರ್ಕಾರ ಮನಹರಿಸಬೇಕು. ಸಾಧ್ಯವಾದರೆ, ಇನ್ನೂ ಅಭಿವೃದ್ಧಿಯನ್ನೇ ಕಾಣದ ವಿಶ್ವವಿದ್ಯಾಲಯಗಳನ್ನು ಮುಚ್ಚಿದರೂ ಯಾವುದೇ ತೊಂದರೆ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.