ಸಂಗತ: ಮೌಢ್ಯಗಳ ವಿರುದ್ಧ ಅವಿರತ ಹೋರಾಟ
ದಾಬೋಲ್ಕರ್, ಪಾನ್ಸರೆ ಸೇರಿದಂತೆ ಹಲವು ಚಿಂತಕರ ಸ್ಮರಣೆಯ ರೂಪದಲ್ಲಿ ‘ವೈಜ್ಞಾನಿಕ ಮನೋವೃತ್ತಿ ದಿನಾಚರಣೆ’ ನಡೆಯುತ್ತಿದೆ. ಇದು ಪ್ರತಿದಿನವೂ ಜಾರಿಯಲ್ಲಿ ಇರಬೇಕಾದ ಆಚರಣೆ.
---
ಜನರನ್ನು ಬಾಧಿಸುತ್ತಿರುವ ಮೌಢ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಚಟುವಟಿಕೆಗಳಲ್ಲಿ ಅನೇಕ ಸಂಘಟನೆಗಳು, ವ್ಯಕ್ತಿಗಳು ತೊಡಗಿಕೊಂಡಿದ್ದಾರೆ. ದೇಶದಾದ್ಯಂತ ಇರುವ ಪ್ರಜ್ಞಾವಂತರು ಹಾಗೂ ವಿಜ್ಞಾನ ಸಂಘಟನೆಗಳ ಶ್ರಮದಿಂದಾಗಿ ಜಾಗೃತಿ ಮೂಡಿಸುವ ಕೆಲಸ ಒಂದು ಆಂದೋಲನವಾಗಿ ರೂಪುಗೊಂಡಿದೆ.
ಅಬ್ರಹಾಂ ಕೋವೂರ್, ಪ್ರೇಮಾನಂದ್, ಕರ್ನಾಟಕದ ಎಚ್. ನರಸಿಂಹಯ್ಯ, ಪ್ರೊ. ನರೇಂದ್ರನಾಯಕ್, ಹುಲಿಕಲ್ ನಟರಾಜು ಇವರ ಜೊತೆಗೆ ಅನೇಕ ಕಾರ್ಯಕರ್ತರು ಸಾವಿರಾರು ‘ಪವಾಡಗಳ ರಹಸ್ಯ ಬಯಲು’ ಕಾರ್ಯಕ್ರಮಗಳನ್ನು ನೀಡಿದ್ದಾರೆ, ನೀಡುತ್ತಿದ್ದಾರೆ. ಇದೆಲ್ಲದರ ಫಲವಾಗಿ ಜನರಲ್ಲಿ ವೈಜ್ಞಾನಿಕ ಜಾಗೃತಿ, ಅರಿವು ಮೂಡಬೇಕೆಂಬ ನಿರೀಕ್ಷೆಯಿತ್ತು. ಆದರೆ, ಮೌಢ್ಯಾಚರಣೆಗಳು ಹೆಚ್ಚುತ್ತಲೇ ಇವೆ.
ಅನಾರೋಗ್ಯವನ್ನು ಸರಿಪಡಿಸುವುದಾಗಿ ಲೈಂಗಿಕ ಶೋಷಣೆ, ಹಣವನ್ನು ದೋಚುವುದು, ಪ್ರಾಣ ಹಾನಿ, ಒಡವೆಗಳನ್ನು ಮತ್ತು ಹಣವನ್ನು ದ್ವಿಗುಣ ಮಾಡುವುದಾಗಿ ಮೋಸ ಮಾಡುವುದು, ಯಾರೋ ಮಾಟ–ಮಂತ್ರ ಮಾಡಿದ್ದಾರೆ ಎಂದು ಜನರನ್ನು ಹೆದರಿಸಿ ಹಣ ಕೀಳುವುದು, ಒಳ್ಳೆಯ ಕಾಲ– ಕೆಟ್ಟ ಕಾಲ ಎಂದು ನಂಬಿಸಿ ಜನರ ಕೆಲಸಗಳಿಗೆ ಅಡ್ಡಿಯುಂಟು ಮಾಡುವುದು, ಹೀಗೆ ನೂರಾರು ರೀತಿಯಲ್ಲಿ ಮೌಢ್ಯಾಚರಣೆಗಳು ಜನರನ್ನು ಕಾಡುತ್ತಿವೆ.
ಯಾವುದೇ ಸಮಸ್ಯೆಗೆ ಸರಿಯಾದ, ವೈಜ್ಞಾನಿಕ ಪರಿಹಾರವನ್ನು ಕಂಡುಕೊಳ್ಳುವಂತೆ ಜನರನ್ನು ಸಶಕ್ತರನ್ನಾಗಿಸುವುದು ವಿಜ್ಞಾನ ಸಂಘಟನೆಗಳ ಹಾಗೂ ವಿಚಾರವಾದಿ ಸಂಘಟನೆಗಳ ಉದ್ದೇಶವಾಗಿದೆ. ಇಲ್ಲಿ ದೇವರು, ಧರ್ಮದ ವಿಷಯವನ್ನು ಪ್ರಸ್ತಾಪಿಸುವುದಿಲ್ಲ. ಅನಾರೋಗ್ಯ ಪರಿಹಾರಕ್ಕಾಗಿ, ಮನೆ ನಿರ್ಮಾಣ ತಡವಾದರೆ ‘ತಡೆ ಹೊಡೆಸುವುದು’ ಸಾಮಾನ್ಯ ಆಚರಣೆಯಾಗಿದೆ. ಇದರಿಂದ ಸಮಸ್ಯೆ ಪರಿಹಾರವಾಗುತ್ತದೆಯೇ ಅಥವಾ ಸರಿಯಾದ ಮಾರ್ಗ ಯಾವುದು ಎಂಬುದನ್ನು ಚಿಂತಿಸಿ ಮುಂದುವರಿಯಬೇಕೆ ಎನ್ನುವ ಬಗ್ಗೆ ಜನರನ್ನು ಚಿಂತನೆಗೆ ಹಚ್ಚುವ ಕೆಲಸ ನಿತ್ಯ ನಡೆಯಬೇಕಾಗಿದೆ.
ವೈಜ್ಞಾನಿಕ ಸಂಶೋಧನೆಯ ಕಡೆಗೆ ಪ್ರೇರೇಪಿಸಲು, ವಿಜ್ಞಾನವನ್ನು ಜನಪ್ರಿಯಗೊಳಿಸಲು, ವಿಜ್ಞಾನಾಸಕ್ತಿ ಬೆಳೆಸಲು ಪುಣೆಯ ವೈದ್ಯ ಡಾ. ನರೇಂದ್ರ ದಾಬೋಲ್ಕರ್ ‘ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಂಸ್ಥೆ’ ಸ್ಥಾಪಿಸಿ, ಅದರ ಮೂಲಕ ಮಹಾರಾಷ್ಟ್ರದ ಜನರಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವ, ಮೌಢ್ಯಾಚರಣೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದರು. ಮಹಾರಾಷ್ಟ್ರ ಸರ್ಕಾರವನ್ನು ‘ಅಂಧಶ್ರದ್ಧಾ ನಿಯಂತ್ರಣ ಕಾನೂನು’ ತರುವಂತೆ ಒತ್ತಾಯಿಸುತ್ತಿದ್ದರು. ಮೌಢ್ಯಾಚರಣೆ ವಿರುದ್ಧದ ಜಾಗೃತಿ ಕಾರ್ಯಕ್ರಮಗಳಲ್ಲಿ ದಾಬೋಲ್ಕರ್ ಹೇಳುತ್ತಿದ್ದುದು, ‘ಪುರಾವೆ ಇದ್ದಷ್ಟು ನಂಬಿ’ ಎಂದು. ಇದರಿಂದ ಫಲ ಜ್ಯೋತಿಷ್ಯ ಹೇಳುವವರು, ಮಾಟ–ಮಂತ್ರ ಹಾಗೂ ವಾಮಾಚಾರ ಮಾಡುವವರಿಗೆ ಕೆಲಸ ಕಡಿಮೆಯಾಯಿತು. ಕೆಲವು ಯಥಾಸ್ಥಿತಿವಾದಿಗಳಿಗೂ ದಾಬೋಲ್ಕರ್ ಸಹ್ಯವಾಗಲಿಲ್ಲ. 2013ರ ಆಗಸ್ಟ್ 20ರಂದು ಮುಂಜಾನೆ ವಾಯುವಿಹಾರದಲ್ಲಿದ್ದಾಗ ದುಷ್ಕರ್ಮಿಗಳು ಅವರಿಗೆ ಗುಂಡಿಕ್ಕಿ ಕೊಂದರು.
ದಾಬೋಲ್ಕರ್ ಅವರ ಕೊಲೆ ದೇಶದಾದ್ಯಂತ ಹಾಗೂ ಪ್ರಪಂಚದ ಹಲವೆಡೆ ಗಮನ ಸೆಳೆಯಿತು. ಪ್ರತಿಭಟನೆಗಳಾದವು. ಮಹಾರಾಷ್ಟ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ‘ಮೌಢ್ಯಾಚರಣೆ ಪ್ರತಿಬಂಧಕ ಕಾನೂನು’ ಜಾರಿಗೊಳಿಸಿತು. ‘ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಂಸ್ಥೆ’ಯ ಚಟುವಟಿಕೆಗಳೂ ಮುಂದುವರಿದವು. ದಾಬೋಲ್ಕರ್ ಹತ್ಯೆಯ ಮುಂದುವರಿಕೆಯಂತೆ ಮಹಾರಾಷ್ಟ್ರದ ಎಡಪಂಥೀಯ ಚಿಂತಕ ಗೋವಿಂದ ಪಾನ್ಸರೆ ಅವರ ಕೊಲೆಯಾಯಿತು. ಕರ್ನಾಟಕದಲ್ಲಿ
ಎಂ.ಎಂ. ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಹತ್ಯೆಯಾಯಿತು. ಇವೆಲ್ಲವೂ ಒಂದೇ ರೀತಿಯ ಘಟನೆಗಳಾಗಿದ್ದವು.
ಮೌಢ್ಯಾಚರಣೆಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವನ್ನು ಮನಗಂಡು 2017ರಂದು ‘ಅಖಿಲ ಭಾರತ ಜನ ವಿಜ್ಞಾನ ಸಂಘಟನೆ’ಗಳ ಜಾಲ ಮತ್ತು ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಂಸ್ಥೆಗಳು ಜನರಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಒತ್ತು ನೀಡುವುದಕ್ಕೆ ನಿರ್ದಿಷ್ಟ ದಿನವೊಂದನ್ನು ನಿಗದಿಪಡಿಸಲು ಸಮಾಲೋಚನೆ ನಡೆಸಿದವು. ದಾಬೋಲ್ಕರ್ ಹತ್ಯೆಯಾದ ಆಗಸ್ಟ್ 20ರಂದು ‘ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆ’ಯನ್ನು ಸಂಘಟಿಸಲು ತೀರ್ಮಾನಿಸಿದವು. 2018ರಿಂದ ಸಮಾನ ಮನಸ್ಕ ಸಂಘಟನೆಗಳು ಕೂಡಿಕೊಂಡು ಪ್ರತಿ ವರ್ಷ ಆಗಸ್ಟ್ 20ರಂದು ‘ವೈಜ್ಞಾನಿಕ ಮನೋವೃತ್ತಿ ದಿನಾಚರಣೆ’ಯನ್ನು ಸಂಘಟಿಸುತ್ತಿವೆ.
ಕರ್ನಾಟಕದಲ್ಲಿ ವಿವಿಧ ವಿಜ್ಞಾನ–ವೈಚಾರಿಕ ಸಂಘಟನೆಗಳು ಕೂಡಿಕೊಂಡು ‘ಕರ್ನಾಟಕ ವೈಜ್ಞಾನಿಕ ಮನೋವೃತ್ತಿ ವೇದಿಕೆ’ಯನ್ನು ರಚಿಸಿಕೊಂಡಿವೆ. ಈ ವೇದಿಕೆಯ ಮೂಲಕ ‘ವೈಜ್ಞಾನಿಕ ಮನೋವೃತ್ತಿ ದಿನಾಚರಣೆ’ಯೂ ನಡೆದಿದೆ.
ಮೌಢ್ಯಗಳ ವಿರುದ್ಧದ ಜಾಗೃತಿ ಯಾವುದೋ ಒಂದು ದಿನಕ್ಕೆ ಸೀಮಿತವಾದುದಲ್ಲ. ವೈಜ್ಞಾನಿಕ ಜಾಗೃತಿ ನಿರಂತರವಾಗಿ ನಡೆಯಬೇಕಾದುದು. ಜನರಲ್ಲಿ ಅರಿವು ಮೂಡಿ, ಅವರು ಮೋಸ ಹೋಗದಂತೆ ಹಾಗೂ ತಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸಬಲರಾಗಬೇಕಿದೆ. ಆತ್ಮಘನತೆಗೆ ಧಕ್ಕೆ ಉಂಟು ಮಾಡುವ ಹಾಗೂ ಧನ–ಪ್ರಾಣ ಹಾನಿ ಉಂಟು ಮಾಡುವ ಯಾವುದೇ ಆಚರಣೆಗಳ ಬಗ್ಗೆ ಜನರು ಚಿಕಿತ್ಸಕ ದೃಷ್ಟಿಯನ್ನು ಹೊಂದುವುದು ಅಗತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.