ADVERTISEMENT

ಸಂಗತ | ಸುಸ್ಥಿರ ಶೌಚಾಲಯ: ಎಲ್ಲರ ಹೊಣೆ

ಶೌಚಾಲಯದ ಸ್ವಚ್ಛತೆ ಆರೋಗ್ಯದ ಆಕರವೆಂಬ ಜನಜಾಗೃತಿ ಮೂಡಬೇಕು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 3:19 IST
Last Updated 20 ನವೆಂಬರ್ 2020, 3:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸುಮಾರು ಏಳು ಸಾವಿರ ವರ್ಷಗಳಿಗೂ ಹಿಂದಿನ ಸಿಂಧೂ ಕಣಿವೆ ನಾಗರಿಕತೆಯಲ್ಲಿ ‘ನೀರು ನುಗ್ಗು’ ತಾಂತ್ರಿಕತೆಯ ಶೌಚಾಲಯಗಳು ರಚಿತವಾಗಿದ್ದವೆನ್ನಲು ಅವಶೇಷಗಳೇ ಪುರಾವೆ. ಮಹಾಭಾರತದಲ್ಲಿ ದೀರ್ಘಾಯುಷ್ಯಕ್ಕಾಗಿ ಭೀಷ್ಮನ ಕಿವಿಮಾತುಗಳು ಗಮನಾರ್ಹ. ಆ ಪೈಕಿ ‘ಸಾರ್ವಜನಿಕ ಸ್ಥಳಗಳಲ್ಲಿ, ಭತ್ತದ ಗದ್ದೆಗಳಲ್ಲಿ, ಸಾಕು ಪ್ರಾಣಿಗಳ ಕೊಟ್ಟಿಗೆಗಳಲ್ಲಿ ಮಲಮೂತ್ರ ವಿಸರ್ಜಿಸಬಾರದು’ ಎಂಬ ಸಲಹೆ, ಅಂದಿನ ದಿನಮಾನಗಳಲ್ಲಿ ಶೌಚಾಲಯಗಳಿಗಿದ್ದ ಪ್ರಾಧಾನ್ಯವನ್ನು ಪರೋಕ್ಷವಾಗಿ ಬಿಂಬಿಸುತ್ತದೆ.

‘ಶೌಚಾತ್ ಸ್ವಾನಂಗಜುಗುಪ್ಸಾ ಪರೈರಸಂಸರ್ಗಾಃ’ (ಶುಚಿತ್ವದಿಂದ ಒಬ್ಬರ ರಕ್ಷಣೆ ಹಾಗೂ ಸಮುದಾಯಕ್ಕೆ ಇತರರಿಂದ ಹರಡಬಹುದಾದ ಸೋಂಕಿಗೆ ತಡೆ) ಎನ್ನುವುದು ಪತಂಜಲಿಯ ಆರೋಗ್ಯ ಸೂತ್ರ. ಪಾಯಖಾನೆ ಎಲ್ಲ ಬಗೆಯ ಕ್ರಿಮಿ, ಕೀಟ, ಸೂಕ್ಷ್ಮಾಣು ಜೀವಿಗಳೂ ನಮ್ಮ ಶರೀರವನ್ನು ಆಕ್ರಮಿಸುವ ಸ್ಥಳ. ಹಾಗಾಗಿ ಅದರ ಶುಭ್ರತೆಗೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆಯೆ. ನಮ್ಮ ಜನಪದರು ಆರೋಗ್ಯದ ಗುಟ್ಟನ್ನು ‘ಮುದ್ದೆ-ನಿದ್ದೆ-ಲದ್ದಿ’ ಎಂಬ ಮೂರು ಪದಗಳ ಪುಂಜದಲ್ಲಿ ಅಚ್ಚುಕಟ್ಟಾಗಿ ಹಿಡಿದಿಟ್ಟಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಮಾನವ ತ್ಯಾಜ್ಯಗಳಾದ ಮಲ, ಮೂತ್ರ ಅದರ ರೊಚ್ಚು ಗುಂಡಿಯಿದ ಸಂಸ್ಕರಣಾ ಘಟಕದವರೆಗೆ ಅತಿ ಸುರಕ್ಷಿತವಾಗಿ ಸಾಗುವುದು ಮಹತ್ವದ್ದಾಗಿದೆ. ಸಂಪರ್ಕ ಜಾಲದಲ್ಲಿ ಅಲ್ಪಸ್ವಲ್ಪ ಏರುಪೇರಾದರೂ ಪರಿಣಾಮ ವಿವರಿಸಬೇಕಾದ್ದಿಲ್ಲ. ಜಗತ್ತಿನ ಜನಸಂಖ್ಯೆಯ ಶೇಕಡ 60ರಷ್ಟು ಮಂದಿಗೆ ಶೌಚಾಲಯ ಸೌಲಭ್ಯವಿಲ್ಲ! ವಿಶ್ವದಾದ್ಯಂತ ದಿನಕ್ಕೆ 800 ಮಕ್ಕಳು ಕುಡಿಯುವ ನೀರು ಮತ್ತು ನೈರ್ಮಲ್ಯದ ಕನಿಷ್ಠತಮ ಸೌಕರ್ಯವೂ ಇಲ್ಲದ ಕಾರಣ ಅತಿಸಾರಕ್ಕೆ ತುತ್ತಾಗಿ ಸಾವಿಗೀಡಾಗುತ್ತಿದ್ದಾರೆ. ಅಸಮರ್ಪಕ ನೈರ್ಮಲ್ಯದಿಂದ ರೋಗಪೀಡಿತ
ರಾಗುವವರು ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳೇ ಎಂದು ಬೇರೆ ಹೇಳಬೇಕಿಲ್ಲ. ಬಹಿರ್ದೆಸೆಗೆ ತೆರಳಲು ಕತ್ತಲಾಗುವುದನ್ನೇ ನಿರೀಕ್ಷಿಸುವ ಗ್ರಾಮಗಳೆಷ್ಟೋ?

2013ರಿಂದ ವಿಶ್ವಸಂಸ್ಥೆ ಆಯೋಜಿಸುವ ‘ವಿಶ್ವ ಶೌಚಾಲಯ ದಿನ’ ನಿನ್ನೆಯಷ್ಟೆ (ನ. 19) ಸಂಪನ್ನಗೊಂಡಿದೆ. ಈ ಬಾರಿಯ ಚರ್ಚಾ ವಿಷಯ ‘ಸುಸ್ಥಿರ ನೈರ್ಮಲ್ಯ ಮತ್ತು ವಾಯುಗುಣ ವ್ಯತ್ಯಯ’. ಗುರಿ, 2030ರ ವೇಳೆಗೆ ಎಲ್ಲರಿಗೂ ನೀರು ಮತ್ತು ನೈರ್ಮಲ್ಯ. ನೈರ್ಮಲ್ಯ ಮನುಷ್ಯನ ಹಕ್ಕು. ಮಾತ್ರವಲ್ಲ ಅದು ಗಂಭೀರ ಹೊಣೆಗಾರಿಕೆಯೂ. ಸಾರ್ವಜನಿಕ ಆರೋಗ್ಯಕ್ಕೆ ಬಯಲು ಮಲವಿಸರ್ಜನೆ ಬಹುಮಾರಕ. ಈ ಅಸಹ್ಯಕರ ಮತ್ತು ಅನಾಗರಿಕ ಪಾಡನ್ನು ಕೊನೆಗಾಣಿಸಬೇಕು. ಇದು ಬಹುತೇಕ ಮನುಷ್ಯರೇ ಸೃಷ್ಟಿಸಿಕೊಳ್ಳುವ ಅಸಹಾಯಕತೆ. ವಿಪರ್ಯಾಸವೆಂದರೆ, ಅನೇಕರಿಗೆ ಮೊಬೈಲ್ ಫೋನಿದೆ, ಶೌಚಾಲಯವಿಲ್ಲ! ನೀರು ಮತ್ತು ನೈರ್ಮಲ್ಯದ ಮೇಲೆ ಹೂಡುವ ಒಂದು ರೂಪಾಯಿ ಬಂಡವಾಳದಿಂದ ಆರೋಗ್ಯ ಮತ್ತು ನೆಮ್ಮದಿಯ ಮೂಲಕ ನಾಲ್ಕೂವರೆ ರೂಪಾಯಿಗಳ ಇಳುವರಿ ಲಭ್ಯವೆಂಬ ವಾಸ್ತವ ನಮಗೆ ತಿಳಿಯಬೇಕಿದೆ.

ಯಾವುದೇ ಆವಿಷ್ಕಾರವೂ ಶೌಚಾಲಯದಷ್ಟು ಅಧಿಕ ಸಂಖ್ಯೆಯಲ್ಲಿ ಜೀವಗಳನ್ನು ರಕ್ಷಿಸಿಲ್ಲ ಎಂಬ ಮಾರ್ಮಿಕ ಮಾತಿದೆ. ‘ಸ್ವಚ್ಛ ಭಾರತ ಅಭಿಯಾನ’ ಯೋಜನೆಯಡಿ 2014ರ ಲಾಗಾಯ್ತಿನಿಂದ 50 ಕೋಟಿ ಮಂದಿ ಮಲವಿಸರ್ಜನೆಗೆ ಬಯಲನ್ನು ಅವಲಂಬಿಸದೆ ತಮ್ಮದೇ ಪಾಯಿಖಾನೆ ಕಟ್ಟಿಕೊಂಡಿದ್ದಾರೆ. ಯುನಿಸೆಫ್ ಈ ಬೆಳವಣಿಗೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದೆ.

ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿದ್ದಾಗ, ಶೌಚಾಲಯಗಳನ್ನು ಸ್ವಚ್ಛಗೊಳಿಸುವುದು ಪ್ರತಿಯೊಬ್ಬರ ದಿನಚರಿಯ ಒಂದು ಭಾಗವಾಗಬೇಕೆಂದು ಅಲ್ಲಿನ ಸಮುದಾಯಗಳಿಗೆ ಪ್ರಾತ್ಯಕ್ಷಿಕೆ ನೀಡಿಯೇ ಆರೋಗ್ಯ ಪಾಠ ಬೋಧಿಸಿದರು. ತಮ್ಮ ಆಶ್ರಮಕ್ಕೆ ಯಾರೇ ಹೊಸಬರು ಬಂದರೂ ಶೌಚಾಲಯ ತೊಳೆಯಲು ಸೂಚಿಸುವುದರ ಮೂಲಕವೇ ಅವರ ಮನೋಬಲ ಪರೀಕ್ಷಿಸುತ್ತಿದ್ದುದು ಸಾಮಾನ್ಯ ಸಂಗತಿಯಲ್ಲ.

ಶೌಚಾಲಯ ನಿರ್ಮಿಸಿಕೊಳ್ಳುವುದಷ್ಟೇ ಅಲ್ಲ, ಅದರ ಸಮರ್ಥ ನಿರ್ವಹಣೆಗೆ ನಿಗಾ ಇಡಬೇಕಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಮನೆಯ ಶೌಚಾಲಯಕ್ಕೆ ವಿಶೇಷ ಮಹತ್ವ ನೀಡುತ್ತಾರೆ. ಕನ್ನಡಿಯಂತೆ ಅದು ಥಳಥಳಿಸುತ್ತದೆ. ಹೂಕುಂಡಗಳನ್ನು ಇರಿಸಿರುತ್ತಾರೆ. ಒಂದು ಬದಿಗೆ ದಿನಪತ್ರಿಕೆ, ಕಿರು ಹೊತ್ತಿಗೆ ಒಳಗೊಂಡ ಶೌಚಾಲಯವು ವಾಚನಾಲಯದಂತೆ ತೋರುತ್ತದೆ. ಶೌಚಾಲಯದ ಸ್ವಚ್ಛತೆಯು ಆರೋಗ್ಯದ ಆಕರವೆಂಬ ಜನಜಾಗೃತಿ ಮೂಡಬೇಕು. ಈ ನಿಟ್ಟಿನಲ್ಲಿ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಪೀಠಗಳು ಆರಂಭಗೊಳ್ಳಬೇಕು.

ಬಿ.ಬಸವಲಿಂಗಪ್ಪನವರು ರಾಜ್ಯದಲ್ಲಿ ಸಚಿವರಾಗಿದ್ದಾಗ ತಲೆ ಮೇಲೆ ಮಲ ಹೊರುವ ಪದ್ಧತಿ ನಿಷೇಧಿಸುವ ಕಾನೂನು ರೂಪಿಸುವ ದಿಟ್ಟ ಹೆಜ್ಜೆಯಿಟ್ಟರು. ಯಾವುದೇ ಪಂಗಡ, ವರ್ಗ ತನ್ನ ಬೇಡಿಕೆಗಳೇನೇ ಇರಲಿ, ಆವೇಶಕ್ಕೊಳಗಾಗಿ ಮೈಮೇಲೆ ಮಲ ಮೂತ್ರ ಸುರಿದುಕೊಂಡು ಪ್ರತಿಭಟಿಸುವ ಮನೋವೃತ್ತಿ ತಳೆಯಬಾರದು, ಕೈಯಾರೆ ಕೀಳರಿಮೆಯನ್ನು ಆವಾಹಿಸಿಕೊಳ್ಳುವುದು ಸಲ್ಲದು.

ಸಿಂಗಪುರದ ಕೈಗಾರಿಕೋದ್ಯಮಿ ಜಾಕ್ ಸಿಮ್ ಅವರು 2001ರಲ್ಲಿ ಡಬ್ಲ್ಯು.ಟಿ.ಒ. (World toilet organisation) ಸಂಸ್ಥೆ ಸ್ಥಾಪಿಸಿದರು. ಅವರು ವಿಶ್ವದಾದ್ಯಂತ ಮಾಧ್ಯಮಗಳ ಮೂಲಕ ನವಿರು ನುಡಿಗಳಿಂದ ಶೌಚಾಲಯದ ನಿರ್ವಹಣೆ ಬಗ್ಗೆ ಜನಜಾಗೃತಿ ಮೂಡಿಸುತ್ತಾರೆ. ಸಂಸ್ಥೆಯ ವತಿಯಿಂದ ಪ್ರತಿವರ್ಷ ಅಲ್ಲಲ್ಲಿ ಶೃಂಗಸಭೆಗಳು ಸೇರುತ್ತವೆ. ಶೌಚಾಲಯ ತನ್ನ ಬಳಸುವವರಿಗೆ ಹೀಗೆ ಹೇಳೀತು: ‘ನನ್ನನ್ನು ಗೌರವಿಸಿ, ಚೊಕ್ಕಟವಾಗಿಡಿ. ನಾನು ನೋಡಿದ್ದನ್ನು ಯಾರಿಗೂ ಹೇಳುವುದಿಲ್ಲ’.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.