ADVERTISEMENT

ಸಂಗತ: ಶಿಕ್ಷಣ ಮುಂದುವರಿಕೆಯ ಸವಾಲು

ಸ್ಪಷ್ಟ ಕಣ್ಗಾವಲು ಮತ್ತು ಉತ್ತರದಾಯಿ ವ್ಯವಸ್ಥೆ ಜಾರಿಗೆ ತರುವುದು ತುರ್ತು ಅಗತ್ಯ

ಡಾ.ಎಚ್.ಬಿ.ಚಂದ್ರಶೇಖರ್
Published 24 ಜುಲೈ 2022, 18:19 IST
Last Updated 24 ಜುಲೈ 2022, 18:19 IST
Sangatha==25072022
Sangatha==25072022   

ತಂದೆ ಮತ್ತು ಮಗ ಬೇಸರ, ದುಃಖ, ನೋವಿನ ಭಾವಗಳಿಂದ ನನ್ನ ಮುಂದೆ ನಿಂತಿದ್ದರು. ಮಗ ಪ್ರಥಮ ಪಿಯುಸಿಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣನಾಗಿದ್ದ. ಒಂದು ವರ್ಷ ವ್ಯರ್ಥವಾಗುತ್ತದಲ್ಲಾ ಎಂಬ ನೋವು ಇಬ್ಬರಲ್ಲೂ ಇತ್ತು. ಮುಂದಿನ ಹಾದಿಯ ಬಗ್ಗೆ ಮಾರ್ಗದರ್ಶನ ಬಯಸಿ ಬಂದಿದ್ದರು. ಒಂದಷ್ಟು ಮಾತುಕತೆಯ ನಂತರ ತಿಳಿದಿದ್ದೆಂದರೆ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ ಬಳಿಕ ನಾಲ್ಕು ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದ. ಕಾಲೇಜು ಹಂತದಲ್ಲಿ ನಡೆದ ಪೂರಕ ಪರೀಕ್ಷೆಯಲ್ಲಿ ಮೂರು ವಿಷಯಗಳಲ್ಲಿ ಉತ್ತೀರ್ಣನಾಗಿ, ಇನ್ನೊಂದು ವಿಷಯದಲ್ಲಿ ಮತ್ತೊಮ್ಮೆ ಅನುತ್ತೀರ್ಣನಾಗಿದ್ದ. ಇವನು ಓದುತ್ತಿದ್ದ ಕಾಲೇಜಿನಲ್ಲಿ ಇತರೆ 140 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದ ವಿಷಯ ತಿಳಿಯಿತು.

ಕೋವಿಡ್ ಸಂಕಷ್ಟದ ನಡುವೆ ವಿದ್ಯಾರ್ಥಿಗಳ ಕಲಿಕೆಯ ಹಿನ್ನಡೆ ಹಾಗೂ ಅದರಿಂದ ಉದ್ಭವಿಸುವ ನೋವು, ಹತಾಶೆಗಳ ಸ್ವರೂಪದ ಉದಾಹರಣೆಗಳು ನಮ್ಮ ಮುಂದಿವೆ. ಒಂದಷ್ಟು ಆಲೋಚನೆ ನಡೆಸಿದ ನಾನು, ವಿಜ್ಞಾನ ವಿಷಯದ ಕಲಿಕೆಯನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಓಪನ್ ಸ್ಕೂಲಿಂಗ್ (ಎನ್.ಐ.ಒ.ಎಸ್) ಮೂಲಕ ಮುಂದುವರಿಸಬಹುದು ಎಂಬ ಮಾಹಿತಿ ತಿಳಿಸಿ, ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯ ಕಚೇರಿ ಪ್ರಾಂಗಣದಲ್ಲಿ ಕಾರ್ಯನಿರ್ವಹಿಸುತ್ತಿರುವ
ಎನ್.ಐ.ಒ.ಎಸ್‍ನ ಪ್ರಾಂತೀಯ ಕಚೇರಿಯನ್ನು ಸಂಪರ್ಕಿಸಲು ತಿಳಿಸಿದೆ. ಒಂದು ದಿನದ ನಂತರ ಎನ್.ಐ.ಒ.ಎಸ್ ಮೂಲಕ 12ನೇ ತರಗತಿ ವಿಜ್ಞಾನ ಶಿಕ್ಷಣವನ್ನು ಮುಂದುವರಿಸುವ ಬಗ್ಗೆ ತಂದೆ ಸಂತಸ ದಿಂದ ಕರೆ ಮಾಡಿ ತಿಳಿಸಿದರು. ‘ನಾನು ಹೇಗೆ ಓದಿ ತೋರಿಸುತ್ತೇನೆ ನೋಡು’ ಎಂದು ಮಗ ಉತ್ಸಾಹದಿಂದ ತಿಳಿಸಿದ್ದನ್ನೂ ತಂದೆ ನನ್ನೊಂದಿಗೆ ಹಂಚಿಕೊಂಡರು.

ಮಕ್ಕಳು ಶಾಲೆ ಬಿಡುವುದು ಮತ್ತು ತರಗತಿಗಳಲ್ಲಿ ಅನುತ್ತೀರ್ಣತೆಯ ಸಂಗತಿಗಳು ಶಿಕ್ಷಣ ಕ್ಷೇತ್ರದಲ್ಲಿ ಸಂಭವಿಸುವ ಅಪವ್ಯಯದ ಬಹು ಮುಖ್ಯ ಕಾರಣಗಳು. ಒಂದು ಸಣ್ಣ ವಿಶ್ಲೇಷಣೆ ಮಾಡುವುದಾದರೆ 2006- 07ರಲ್ಲಿ ರಾಜ್ಯದಲ್ಲಿ ಒಂದನೇ ತರಗತಿಯಲ್ಲಿ ವಿದ್ಯಾರ್ಥಿಗಳ ಒಟ್ಟು ದಾಖಲಾತಿ 11,89,635 ಇತ್ತು. ಹತ್ತು ವರ್ಷಗಳ ನಂತರ 2015-16ರಲ್ಲಿ ಹತ್ತನೇ ತರಗತಿಯ ಪರೀಕ್ಷೆಯನ್ನು ಬರೆದ ವಿದ್ಯಾರ್ಥಿಗಳ ಒಟ್ಟು ಸಂಖ್ಯೆ 8,37,357. ಇದರಲ್ಲಿ ಉತ್ತೀರ್ಣರಾದವರು 6,85,156 ಮಂದಿ. 2015-16ರಲ್ಲಿ ಪ್ರಥಮ ಪಿಯುಸಿಗೆ ದಾಖಲಾದ ಒಟ್ಟು ವಿದ್ಯಾರ್ಥಿಗಳು 6,48,877. ಸಾಧಾರಣವಾಗಿ ಪ್ರಥಮ ಪಿಯುಸಿಯಲ್ಲಿ ವಾರ್ಷಿಕ ಒಟ್ಟು ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ.

ADVERTISEMENT

ಹತ್ತು ವರ್ಷಗಳಲ್ಲಿ 3,52,278 ಅಂದರೆ ಶೇ 30ರಷ್ಟು ವಿದ್ಯಾರ್ಥಿಗಳು ತಮ್ಮ ಶಾಲಾ ಶಿಕ್ಷಣದ ವಿವಿಧ ತರಗತಿಗಳಲ್ಲಿ ಶಾಲೆ ಬಿಡುತ್ತಾ ಹೋಗಿರು ವುದನ್ನು ಗಮನಿಸಬಹುದು. ಹತ್ತನೇ ತರಗತಿಯೆಂಬ ಶಿಕ್ಷಣದ ಪ್ರಮುಖ ಘಟ್ಟವನ್ನು ಪೂರೈಸುವ ಮಕ್ಕಳ ಸಂಖ್ಯೆ ಶೇ 60ರಷ್ಟು ಮಾತ್ರ ಎಂಬುದು ಆಘಾತಕಾರಿ. ದ್ವಿತೀಯ ಪಿಯುಸಿಯ ಘಟ್ಟವನ್ನು ಪೂರೈಸುವ ಮಕ್ಕಳ ಸಂಖ್ಯೆ ಶೇ 50ಕ್ಕಿಂತ ಕಡಿಮೆ.

ವಿವಿಧ ಕಾರಣಗಳಿಂದ ಶಾಲೆಯನ್ನು ಮಧ್ಯೆ ತೊರೆಯುವ ಸನ್ನಿವೇಶ ನಿರ್ಮಾಣವಾಗುತ್ತದೆ. ಪ್ರತೀ ವಿದ್ಯಾರ್ಥಿಯ ದಾಖಲಾತಿ, ಕಲಿಕೆ, ಶಿಕ್ಷಣದ ಮುಂದುವರಿಕೆಯ ಪ್ರಗತಿಯ ಮೇಲೆ ಕಣ್ಗಾವಲಿಡಲು ತಂತ್ರಜ್ಞಾನದ ನೆರವು ಪಡೆಯಲಾಗುತ್ತಿದೆ. ತಂತ್ರಜ್ಞಾನಕ್ಕೂ ಮಿತಿಗಳಿವೆ. ಸರ್ವರ್ ಸಮಸ್ಯೆ, ಬಳಕೆದಾರರು ಸಮರ್ಪಕವಾದ ವಿಶ್ಲೇಷಣೆ ಮಾಡದಿರು ವುದು ಮುಂತಾದ ಸವಾಲುಗಳು ಎದುರಾಗುತ್ತವೆ.

ಈ ಸವಾಲುಗಳಿಗೆ ಸೂಕ್ತ ಪರಿಹಾರವೆಂದರೆ ಗ್ರಾಮ– ವಾರ್ಡ್ ಮಟ್ಟದಲ್ಲಿ ಮಕ್ಕಳ ದಾಖಲಾತಿ, ಹಾಜರಾತಿ, ಕಲಿಕೆಯ ಪ್ರಗತಿ, ಶಿಕ್ಷಣದ ಮುಂದು ವರಿಕೆಯ ಕುರಿತಾದ ಸ್ಪಷ್ಟ ಕಣ್ಗಾವಲು ಮತ್ತು ಉತ್ತರ ದಾಯಿ ವ್ಯವಸ್ಥೆ ಜಾರಿಗೆ ತರುವುದು. ಇದರ ಜೊತೆ ಔಪಚಾರಿಕ ಶಿಕ್ಷಣ ವ್ಯವಸ್ಥೆಗೆ ಎನ್.ಐ.ಒ.ಎಸ್.ನಂತಹ ಅನೌಪಚಾರಿಕ ಶಿಕ್ಷಣ ವ್ಯವಸ್ಥೆಗಳ ಜಾಲವು ದೊಡ್ಡ ಮಟ್ಟದಲ್ಲಿ ವಿಸ್ತರಣೆಯಾಗುವ ಅಗತ್ಯ ಇದೆ.

ಎನ್.ಐ.ಒ.ಎಸ್. ಅಡಿ ಪಡೆಯಲಾಗುವ ಶಿಕ್ಷಣಕ್ಕೆ ಶಾಲೆ, ಕಾಲೇಜುಗಳಿಗೆ ದಾಖಲಾಗಿ ಪಡೆಯುವಷ್ಟೇ ಮಾನ್ಯತೆ ಇದೆ ಎಂಬ ಜಾಗೃತಿಯನ್ನು ಸಾರ್ವಜನಿಕರಿಗೆ ಮೂಡಿಸಬೇಕಿದೆ. ಎನ್.ಐ.ಒ.ಎಸ್. ಅಡಿ 10ನೇ ತರಗತಿಗೆ ದಾಖಲಾಗಲು 14 ವರ್ಷ ಪೂರೈಸಿದ್ದು, 8ನೇ ತರಗತಿಯ ಪಾಸಾದವರು ದಾಖಲಾಗಬಹುದು. 8ನೇ ತರಗತಿ ಪೂರ್ವ ವಿದ್ಯಾರ್ಹತೆ ಇಲ್ಲದವರೂ ಸಹ ತಾನು ಹತ್ತನೇ ತರಗತಿಯನ್ನು ಓದಲು ಶಕ್ತನಿದ್ದೇನೆ ಎಂಬ ದೃಢೀಕರಣ ನೀಡಿಯೂ ಹತ್ತನೇ ತರಗತಿಗೆ ದಾಖಲಾಗಬಹುದು. ಹತ್ತನೇ ತರಗತಿ ಪಾಸಾಗಿ, 15 ವರ್ಷ ಪೂರೈಸಿದವರು ನೇರವಾಗಿ 12ನೇ ತರಗತಿಗೆ ಸೇರಿ, ತಮ್ಮ ಇಚ್ಛೆಯ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಓದಬಹುದು. ಎನ್.ಐ.ಒ.ಎಸ್. ಮೂಲಕ 12ನೇ ತರಗತಿ ಪಾಸಾದವರು ಜೆ.ಇ.ಇ., ನೀಟ್, ಕರ್ನಾಟಕ ಸಿ.ಇ.ಟಿ., ಲಾ ಸ್ಕೂಲ್ ಪರೀಕ್ಷೆಗಳನ್ನು ಎದುರಿಸಿ, ತಮ್ಮ ಇಚ್ಛೆಯ ಕೋರ್ಸ್‌ಗಳನ್ನು ಪೂರೈಸಲು ಅವಕಾಶವಿದೆ. ವಿವರಗಳಿಗೆ
ಎನ್.ಐ.ಒ.ಎಸ್. ಜಾಲತಾಣ https://www.nios.ac.in ನೋಡಬಹುದು.

ಲೇಖಕ: ಹಿರಿಯ ಉಪನ್ಯಾಸಕ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್‌), ಬೆಂಗಳೂರು ನಗರ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.