ಏಪ್ರಿಲ್ 30ರ ರಾತ್ರಿ 9.50ರ ಸುಮಾರಿಗೆ ತೀರ್ಥಹಳ್ಳಿಯ ರಸ್ತೆಯ ಬದಿಯಲ್ಲಿ, ಮನೆಯ ಮುಂದೆ ನಡೆದು ಹೋಗುತ್ತಾ ಇದ್ದೆ. ಹಿಂಬದಿಯಿಂದ ಯುವಕನೊಬ್ಬ ದ್ವಿಚಕ್ರ ವಾಹನವನ್ನು ನಿಯಮಬಾಹಿರವಾಗಿ ಚಾಲನೆ ಮಾಡುತ್ತ ಬಂದ. ಹಿಂಬದಿಯಿಂದ ಬಂದು ನನ್ನ ಕಾಲಿಗೆ ಆತ ಗುದ್ದಿದ ರಭಸಕ್ಕೆ ನನ್ನ ಕಾಲಿನ ಮೂಳೆ ಮುರಿದಿತ್ತು. ತಕ್ಷಣವೇ ಬಂದ ಆಂಬುಲೆನ್ಸ್ ನನ್ನನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿತು. ಪೋಲಿಸರು ನನ್ನಿಂದ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿದರು.
ನಂತರ ತುರ್ತು ಚಿಕಿತ್ಸೆಯ ಅಗತ್ಯ ಇದ್ದುದರಿಂದ ಸರ್ಕಾರಿ ಆಸ್ಪತ್ರೆಯಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ನನ್ನನ್ನು ಸಾಗಿಸಲಾಯಿತು. ತಕ್ಷಣವೇ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಇಡೀ ವೈದ್ಯಕೀಯ ವ್ಯವಸ್ಥೆಗೆ ಒಂದು ಧನ್ಯವಾದ. ಎರಡೇ ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಆಗಿ ಮನೆಗೆ ಬಂದೆ. ಅಪಘಾತ ಮಾಡಿದ್ದ ಯುವಕ ಹಾಗೂ ಅವನ ತಾಯಿ ನಾನು ಮನೆಗೆ ಮರಳಿದ ಕೆಲವೇ ಗಂಟೆಗಳಲ್ಲಿ ಭೇಟಿ ನೀಡಿದರು. ತಪ್ಪಿಗೆ ಕ್ಷಮೆ ಯಾಚಿಸಿ ಕಾಲಿಗೆ ಬೀಳಲು ಮುಂದಾದರು. ತಕ್ಷಣವೇ ಕಾಲನ್ನು ಸರಿಸಿದ ನಾನು, ನನ್ನ ಕಾಲು ಮುರಿದ ನೀನು ಕಾಲಿಗೆ ಬೀಳುವುದರಲ್ಲಿ ಯಾವ ಪುರುಷಾರ್ಥವಿದೆ ಎಂದು ಕಾಲು ನೀಡಲು ನಿರಾಕರಿಸಿದೆ.
ಆದರೂ ಬಿಡದೆ ಆ ಯುವಕ ಕಾಲಿಗೆ ಬಿದ್ದು ಹೋದ. ಆದರೆ ನನಗೆ ಅದಾಗಲೇ ಪರಿಚಿತರಾಗಿದ್ದ ತಾಯಿ ಮಾತ್ರ ತಮ್ಮ ಅಂತರಂಗದ ಅಳಲನ್ನು ತೋಡಿಕೊಂಡು ‘ನೀವಾದರೂ ಬುದ್ಧಿ ಹೇಳಿ ಸಾರ್, ನಮ್ಮ ಮಾತೇ ಕೇಳುವುದಿಲ್ಲ. ಆ ದಿನ ರಾತ್ರಿ 9.15ಕ್ಕೆ ಪುನಃ ಪೇಟೆಗೆ ಹೋಗುವುದು ಬೇಡ ಎಂದರೂ ಕೇಳಲಿಲ್ಲ’ ಎಂದರು. ಆ ಯುವಕ ತಾಯಿ–ತಂದೆಯ ಮಾತನ್ನು ಕಡೆಗಣಿಸಿ ಪಟ್ಟಣದ ಬಾರೊಂದರಲ್ಲಿ ಮತ್ತಷ್ಟು ಕುಡಿದು ಗಲಾಟೆ ಮಾಡಿದಾಗ, ಅಲ್ಲಿದ್ದ ಕೆಲವು ಹಿರಿಯರು ಈತನ ಬೈಕಿನ ಕೀ ಕಸಿದು ಈ ಸ್ಥಿತಿಯಲ್ಲಿ ಬೈಕ್ ಚಾಲನೆ ಮಾಡುವುದು ಬೇಡ, ಆಟೊದಲ್ಲಿ ಹೋಗುವಂತೆ ಪರಿಪರಿಯಾಗಿ ಹೇಳಿದರೂ ಅವರ ಮಾತನ್ನು ಉಲ್ಲಂಘಿಸಿ ಬೈಕ್ ಚಾಲನೆ ಮಾಡಿಕೊಂಡು ಬಂದಿದ್ದು ನನ್ನ ದುರದೃಷ್ಟವೇ ಸರಿ ಎನಿಸಿತು.
ನನಗೆ ಇಷ್ಟು ಪೆಟ್ಟಾದರೂ ಆತನಿಗೆ ಏನೂ ಪೆಟ್ಟಾಗದೇ ಇದ್ದುದನ್ನು ಕಂಡ ಕೆಲವರು ‘ಅವನ ಹೊಟ್ಟೆಯಲ್ಲಿದ್ದ ಪರಮಾತ್ಮ ಅವನನ್ನು ಕಾಪಾಡಿದ’ ಎಂದು ತಮಾಷೆ ಮಾಡಿದರು. ನಾನು ಪ್ರಾಥಮಿಕ ಶಾಲೆಯಲ್ಲಿ ಇದ್ದಾಗ ಗಿಳಿಪಾಠದಂತೆ ಕುಡಿತದ ದುಷ್ಪರಿಣಾಮಗಳ ಬಗ್ಗೆ ಭಾಷಣ ಮಾಡುತ್ತಿದ್ದುದು ನೆನಪಿಗೆ ಬಂದಿತು. ಅಂದು ಕುಡಿತದ ದುಷ್ಪರಿಣಾಮದ ಸಾಕ್ಷಾತ್ ದರ್ಶನವಾಗಿತ್ತು. ನಾನೇನೋ ನಿವೃತ ನೌಕರ. ಆದರೆ, ಕೂಲಿ ಮಾಡಿ ಬದುಕುವವರಿಗೆ ಹೀಗಾದರೆ ಅವರ ಪರಿಸ್ಥಿತಿ ಏನಾಗಬಹುದು ಎಂದು ಚಿಂತಿಸಿ ಅತೀವ ವೇದನೆಯಾಯಿತು.
ಜೀವಕ್ಕೆ ಏನೂ ಅಪಾಯ ಆಗಲಿಲ್ಲವಲ್ಲಾ ಎಂದು ಚಿಂತಿಸಿ ಭಗವಂತನಿಗೆ ಮನದಲ್ಲೇ ನಮಸ್ಕರಿಸಿದೆ. ಬಹುಶಃ ಅಂದು ಆ ಯುವಕ ತಂದೆ–ತಾಯಿಯ ಮಾತನ್ನು ಪಾಲಿಸಿದ್ದರೆ, ಹಿರಿಯರ ಮಾತನ್ನು ಕೇಳಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ. ವಾಹನ ಚಾಲನೆಯ ನಿಯಮಗಳನ್ನೇನೋ ಸರ್ಕಾರ ರಚಿಸಿದೆ. ಆದರೆ ಅವುಗಳನ್ನು ಪಾಲಿಸದೇ ಇದ್ದರೆ ಯಾರು ಹೊಣೆ? ಪೊಲೀಸ್ ಇಲಾಖೆ ಹತ್ತು ಹಲವು ವಿಧಗಳಲ್ಲಿ ದಂಡ ವಸೂಲಿ ಮಾಡುತ್ತಿದೆ. ಸಂಸ್ಕಾರದ ಕೊರತೆ ಇರುವ ನಮ್ಮ ಕೆಲವು ಯುವಕರಿಗೆ ಇದು ಅರ್ಥವಾಗುವುದಾದರೂ ಹೇಗೆ?
ಇದು ಒಂದು ಕುಟುಂಬದ ಸಮಸ್ಯೆಯಲ್ಲ. ಇಂದು ಹಲವು ಕುಟುಂಬಗಳು ಯುವಜನರ ದುಶ್ಚಟದಿಂದಾಗಿ ಕಣ್ಣೀರಿನಲ್ಲಿ ಕೈತೊಳೆಯುತ್ತಿವೆ. ಸಮಾಜ ಹಾಗೂ ಸರ್ಕಾರಕ್ಕೆ ನುಂಗಲಾರದ ತುತ್ತಾಗುತ್ತಿದ್ದಾರೆ ಇಂತಹ ಯುವಕರು. ಮಾದಕ ವಸ್ತುಗಳಿಗೆ ಬಲಿಯಾಗಿ ಯುವ ಜನಾಂಗ ತನ್ನ ಯೌವನದ ಬಹುಪಾಲನ್ನು ಕಳೆದುಕೊಂಡು, ಬದುಕನ್ನು ಕಟ್ಟಿಕೊಳ್ಳಲಾಗದೆ ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಹೊರೆಯಾಗುತ್ತಿದೆಯೇನೋ ಅನಿಸುತ್ತದೆ. ದೇಶದ ಕಾನೂನನ್ನು ನಮ್ಮ ಯುವಕರು ಪಾಲಿಸದೇ ಇದ್ದರೆ ಇನ್ನು ಯಾರು ಅದನ್ನು ಪಾಲಿಸುವವರು?
ಇಂದಿನ ವ್ಯವಸ್ಥೆಯಲ್ಲಿ ನೈತಿಕ ಶಿಕ್ಷಣದ ಕೊರತೆ ಇರುವುದರಿಂದಲೋ ಏನೋ ಯುವಕರಲ್ಲಿ ಹಲವರು ಹಾದಿ ತಪ್ಪುತ್ತಿದ್ದಾರೆ. ವಿದೇಶಿ ಸಂಸ್ಕೃತಿಯ ಭರಾಟೆಯಲ್ಲಿ ದೇಶದ ಸಂಸ್ಕೃತಿಯನ್ನು ಕಡೆಗಣಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದೇನೋ? ಅದೇನೇ ಇರಲಿ, ಇಂತಹ ದಾರಿತಪ್ಪಿದ ಯುವ ಸಮೂಹದಿಂದ ಮುಂದೆ ಅದೆಂತಹ ಸಮಾಜ ನಿರ್ಮಾಣವಾಗಬಹುದು? ಈ ಬಗ್ಗೆ ಚಿಂತಿಸಿದರೆ ಭಯವಾಗುತ್ತದೆ. ಪ್ರೌಢಶಾಲೆಯೊಂದರಲ್ಲಿ ಶಾಲೆಯ ಶಿಸ್ತಿಗೆ ಅನುಗುಣವಾಗಿ ಕೆಲವರ ತಲೆಗೂದಲಿನ ವಿನ್ಯಾಸ ಬದಲಾಯಿಸಲು ಶಿಕ್ಷಕರು ಮೂರು ವರ್ಷ ಪ್ರಯತ್ನಪಟ್ಟರು. ಮುಖ್ಯ ಶಿಕ್ಷಕರು, ಸಿಬ್ಬಂದಿ, ಎಸ್‌ಡಿಎಂಸಿ ಹಾಗೂ ಬಿಇಒ ಪ್ರಯತ್ನಪಟ್ಟರೂ ಕೇಶವಿನ್ಯಾಸ ಬದಲು ಮಾಡಲು ಆಗಲಿಲ್ಲ. ಇದನ್ನು ಕಂಡಾಗ ಇಂದಿನ ಯುವಕರು ಗುರು ಹಿರಿಯರಿಗೆ, ಪೋಷಕರಿಗೆ ಯಾವ ರೀತಿಯ ಗೌರವ ಕೊಡುತ್ತಾರೆ ಎಂಬ ಒಂದಿಷ್ಟು ಅರಿವಾಗುತ್ತದೆ.
ಮುಂದಿನ ಪೀಳಿಗೆಯ ಹಿತವನ್ನು ಕಾಯುವ ದೃಷ್ಟಿಯಿಂದ ಚಿಂತಕರು, ಸಮಾಜ, ಸರ್ಕಾರ, ಧಾರ್ಮಿಕ ಮುಖಂಡರು ಒಂದಿಷ್ಟು ಚಿಂತನ–ಮಥನ ನಡೆಸಿ, ದುಶ್ಚಟಗಳಿಗೆ ಬಲಿಯಾಗಿರುವ ಯುವಕರನ್ನು ಸರಿದಾರಿಗೆ ತರಲು ಪ್ರಯತ್ನ ನಡೆಸಬೇಕಾಗಿದೆ.
ಲೇಖಕ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನಿವೃತ್ತ ನೌಕರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.