ADVERTISEMENT

ಸಂಗತ | ಆಸ್ಪತ್ರೆಭಾಗ್ಯ: ಉತ್ತರ ಕನ್ನಡದ ಕಣ್ಣಿಗೆ ಸುಣ್ಣ

ಉತ್ತರ ಕನ್ನಡ ಜಿಲ್ಲೆಯ ಪ್ರಾಕೃತಿಕ ಸಂಪತ್ತು ಅಸಾಧಾರಣ. ಅಲ್ಲಿ ಇಲ್ಲದಿರುವುದು ಒಂದೇ– ಜನಸಾಮಾನ್ಯರಿಗೆ ಆರೋಗ್ಯಭಾಗ್ಯದ ಖಾತರಿ ನೀಡುವ ಸುಸಜ್ಜಿತ ಆಸ್ಪತ್ರೆ!

ನಾಗರಾಜ್ ಬಿ.ಎನ್‌.
Published 10 ನವೆಂಬರ್ 2025, 19:30 IST
Last Updated 10 ನವೆಂಬರ್ 2025, 19:30 IST
ಸಂಗತ
ಸಂಗತ   

‘ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬೇಕು’ – ಈ ಕೂಗು ಅರಣ್ಯರೋದನವೆ? ಅಥವಾ ನೇಪಾಳದ ಜೆನ್–ಜಿ ಪೀಳಿಗೆಯಂತೆ ಉತ್ತರ ಕನ್ನಡದ ಯುವಜನರು ದಂಗೆ ಏಳಬೇಕೆ?

ನಮ್ಮ ಸಂವಿಧಾನದಲ್ಲಿ ಆರೋಗ್ಯದ ಹಕ್ಕು ಸ್ಪಷ್ಟವಾಗಿ ಉಲ್ಲೇಖಗೊಂಡಿಲ್ಲ. ಆದರೆ, ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು 21ನೇ ವಿಧಿಯ ಅಡಿಯಲ್ಲಿ ಉಲ್ಲೇಖಿಸಲಾಗಿದೆ. ಆರೋಗ್ಯಕರ ಜೀವನ, ವೈದ್ಯಕೀಯ ನೆರವು, ಸೂಕ್ತ ಸಮಯದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಪಡೆಯುವ ಹಕ್ಕನ್ನು ಈ ವಿಧಿ ಪ್ರತಿಪಾದಿಸುತ್ತದೆ. ಆದರೆ, ಆಳುವ ವರ್ಗದ ಸ್ವಾರ್ಥ ಹಾಗೂ ಕೆಲವು ಉದ್ಯಮಿಗಳ ಲಾಬಿಯಿಂದ, ಸಂವಿಧಾನ ನೀಡಿರುವ ಮೂಲಭೂತ ಹಕ್ಕು ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಮರೀಚಿಕೆಯಾಗಿದೆ.

ಸುಸಜ್ಜಿತ ಆಸ್ಪತ್ರೆಗಾಗಿ ಉತ್ತರ ಕನ್ನಡ ಜಿಲ್ಲೆಯ ಜನರು ದಶಕಗಳಿಂದ ಬೇಡಿಕೆ ಸಲ್ಲಿಸುತ್ತಲೇ ಇದ್ದಾರೆ. ಪಕ್ಷಭೇದ ಮರೆತು ಜನಪ್ರತಿನಿಧಿಗಳು ಭರವಸೆ ನೀಡಿದ್ದಾರೆ, ಅಧಿವೇಶನದಲ್ಲೂ ಚರ್ಚಿಸಿದ್ದಾರೆ. ಚುನಾವಣೆ ಸಮೀಪಿಸುವಾಗ ಜಾಗದ ಪರಿಶೀಲನೆ ನಡೆದು, ಸರ್ಕಾರಕ್ಕೆ ವರದಿಯೂ ಸಲ್ಲಿಕೆಯಾಗುತ್ತದೆ. ಅಲ್ಲಿಂದ ಮುಂದಕ್ಕೆ ಪ್ರಕ್ರಿಯೆ ಮುಂದುವರಿಯುವುದೇ ಇಲ್ಲ.

ADVERTISEMENT

ಗಂಭೀರ ಕಾಯಿಲೆ ಅಥವಾ ಅಪಘಾತಕ್ಕೆ ಒಳಗಾದವರನ್ನು ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರ ಕಾರವಾರದಿಂದ 285 ಕಿ.ಮೀ. ದೂರವಿರುವ ಮಂಗಳೂರಿಗೆ ಅಥವಾ 165 ಕಿ.ಮೀ. ದೂರವಿರುವ ಹುಬ್ಬಳ್ಳಿಗೆ ಕರೆತರಬೇಕು. ಇಲ್ಲವೇ, ಗಡಿ ರಾಜ್ಯವಾದ ಗೋವಾದ ಪಣಜಿಗೆ 97 ಕಿ.ಮೀ. ಕ್ರಮಿಸಬೇಕು. ಮಾರ್ಗಮಧ್ಯದಲ್ಲಿ ಉಸಿರು ಚೆಲ್ಲಿದ ಜೀವಗಳ ಕುಟುಂಬಗಳ ಸಂಕಟಕ್ಕೆ ಜನ ಪ್ರತಿನಿಧಿಗಳು ಕುರುಡಾಗಿದ್ದಾರೆ.

ಕರಾವಳಿ, ಮಲೆನಾಡು ಹಾಗೂ ಬಯಲುಸೀಮೆ ಪ್ರದೇಶ ಹೊಂದಿರುವ ರಾಜ್ಯದ ಏಕೈಕ ಜಿಲ್ಲೆ ಉತ್ತರ ಕನ್ನಡ. ಶರಾವತಿ, ಅಘನಾಶಿನಿ, ಕಾಳಿ ನದಿಗಳು ಜಿಲ್ಲೆ ಯನ್ನು ಸಂಪದ್ಭರಿತಗೊಳಿಸಿವೆ. 193 ಕಿ.ಮೀ. ಉದ್ದದ ಕರಾವಳಿ ಪ್ರದೇಶ ಪ್ರವಾಸೋದ್ಯಮದ ಬೆಳವಣಿಗೆಯ ಜೊತೆಗೆ ಮತ್ಸೋದ್ಯಮಕ್ಕೂ ಅವಕಾಶ ಕಲ್ಪಿಸಿದೆ. ಕೈಗಾ, ಸೀಬರ್ಡ್‌ ನೌಕಾನೆಲೆಯಂಥ ಬೃಹತ್‌ ಯೋಜನೆಗಳು ಅನುಷ್ಠಾನಗೊಂಡು, ದೇಶದ ಅಭಿವೃದ್ಧಿಗೆ ಹಾಗೂ ರಕ್ಷಣೆಗೆ ದೊಡ್ಡ ಪಾಲು ನೀಡುತ್ತಿವೆ. ಇದೀಗ ಹೊನ್ನಾವರ ಮತ್ತು ಬೇಲೆಕೇರಿಯಲ್ಲಿ ಬಂದರು ನಿರ್ಮಾಣ ಅನುಷ್ಠಾನದ ಹಂತದಲ್ಲಿದೆ; ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ್ ಹಾಗೂ ಅಘನಾಶಿನಿ ನದಿ ತಿರುವು ಯೋಜನೆಗಳು ಗುಮ್ಮನಾಗಿ ಕಾಡುತ್ತಿವೆ. ಹೀಗೆ, ಸಾವಿರಾರು ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಉತ್ತರ ಕನ್ನಡ ಬೇಕು. ಆದರೆ, ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಬಹುದಾದ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವ ಬಗ್ಗೆ ಮಾತ್ರ ಎಲ್ಲರದೂ ದಿವ್ಯ ನಿರ್ಲಕ್ಷ್ಯ.

ಉತ್ತರ ಕನ್ನಡದಲ್ಲಿ ನಾಡು ಮತ್ತು ದೇಶದ ಹೆಮ್ಮೆಗೆ ಕಾರಣವಾದ ಅನೇಕ ಸಂಗತಿಗಳಿವೆ. ಇಲ್ಲದಿರುವುದು ಒಂದೇ– ಸ್ಥಳೀಯರಿಗೆ ತುರ್ತು ಚಿಕಿತ್ಸೆಯ ಖಾತರಿ ಒದಗಿಸುವ ಸುಸಜ್ಜಿತ ಆಸ್ಪತ್ರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದ ಕಾರಣದಿಂದಾಗಿ ಉಂಟಾಗುತ್ತಿರುವ ಸಾವುಗಳು, ಸ್ಥಳೀಯ ‍ಪ್ರತಿನಿಧಿಗಳಲ್ಲಿ ಲಜ್ಜೆ ಹುಟ್ಟಿಸುತ್ತಿಲ್ಲ, ಪಾಪಪ್ರಜ್ಞೆಗೆ ಕಾರಣವಾಗಿಲ್ಲ.

2022ರಲ್ಲಿ ಭಟ್ಕಳದ ಶಿರೂರು ಟೋಲ್ ಪ್ಲಾಜಾ ಬಳಿ ಚಾಲಕನ ನಿಯಂತ್ರಣ ತಪ್ಪಿ ಆ್ಯಂಬುಲೆನ್ಸ್‌ನಲ್ಲಿದ್ದ ರೋಗಿ ಸೇರಿ ನಾಲ್ವರು ಮೃತಪಟ್ಟಿದ್ದರು.‌ ಕೆಲವು ತಿಂಗಳ ಹಿಂದೆ ಕೊಡ್ಕಣಿ ನಿವಾಸಿಯೊಬ್ಬರು ನಸುಕಿನ 5 ಗಂಟೆ ಸುಮಾರಿಗೆ ಹೃದಯಾಘಾತಕ್ಕೊಳಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ತಜ್ಞ ವೈದ್ಯರು ಇಲ್ಲದ ಕಾರಣ, ಸೂಕ್ತ ಚಿಕಿತ್ಸೆ ದೊರೆಯದೆ ಮೃತಪಟ್ಟರು. ವಾರದ ಹಿಂದಷ್ಟೇ ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದ ಅಂಕೋಲಾದ ಕೂಲಿ ಕಾರ್ಮಿಕ ಚಂದ್ರಹಾಸ ಆಗೇರ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಶಿಫಾರಸು ಮಾಡಲಾಗಿತ್ತು. ಅಲ್ಲಿಯ ಖಾಸಗಿ ಆಸ್ಪತ್ರೆಗಳು ಆಯುಷ್ಮಾನ್ ಕಾರ್ಡ್ ನಿರಾಕರಿಸಿದ ಹಿನ್ನೆಲೆಯಲ್ಲಿ, ಅವರು ಆ್ಯಂಬುಲೆನ್ಸ್‌ನಲ್ಲಿಯೇ ಪ್ರಾಣಬಿಟ್ಟರು. ಬರೋಬ್ಬರಿ‌ 12 ತಾಸು ಆ್ಯಂಬುಲೆನ್ಸ್‌ನಲ್ಲಿ ಅಲೆದಾಡಿರುವುದಾಗಿ ಅವರ ಕುಟುಂಬದವರು ಹೇಳುತ್ತಾರೆ.

ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ರತಿನಿತ್ಯ ವಾಹನ ಅಪಘಾತಗಳು ಸಂಭವಿಸುತ್ತಿವೆ. ಗಂಭೀರವಾಗಿ ಗಾಯಗೊಂಡವರು ಚಿಕಿತ್ಸೆಗಾಗಿ ಹೊರ ಜಿಲ್ಲೆಗಳನ್ನೇ ಅವಲಂಬಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಸಜ್ಜಿತ ಆಸ್ಪತ್ರೆಯ ಬೇಡಿಕೆಯ ದನಿ ಆಗಾಗ ಮಾರ್ದನಿಸಿ, ಆಳುವ ವರ್ಗಕ್ಕೆ ತಲಪುತ್ತದೆ. ಹತ್ತಿಕ್ಕುವ ಪ್ರಯತ್ನಗಳು ಸಹ ಅಷ್ಟೇ ವ್ಯವಸ್ಥಿತವಾಗಿ ನಡೆಯುತ್ತವೆ.

ಪ್ರಾಕೃತಿಕ‌ ಸಂಪತ್ತು ಮತ್ತು ಸುಶಿಕ್ಷಿತರ ದೊಡ್ಡ ಪಡೆ ಉತ್ತರ ಕನ್ನಡ ಜಿಲ್ಲೆಯ ಬಹುದೊಡ್ಡ ಆಸ್ತಿ. ಈ ಮಣ್ಣಿನ ಪ್ರತಿಭಾವಂತರು ದೇಶ–ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ. ರಾಜಕಾರಣ ಸೇರಿ ಆಡಳಿತ ವ್ಯವಸ್ಥೆಯಲ್ಲೂ ನಿರ್ಣಾಯಕರಾಗಿದ್ದಾರೆ. ಧರ್ಮ, ಜಾತಿ, ಸ್ವಾರ್ಥ, ರಾಜಕೀಯವನ್ನೆಲ್ಲ ಬಿಟ್ಟು, ಮಾನವೀಯತೆಗೆ ಇವರ ಮನಸ್ಸು ಮಿಡಿದರೆ, ಜಿಲ್ಲೆಯ ನಾಗರಿಕರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣದ ಬಹುದಿನಗಳ ಕನಸು ನನಸಾಗುವುದು ಕಷ್ಟವೇನಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.