ADVERTISEMENT

ಸಂಗತ | ಆಲಮಟ್ಟಿ ಜಲಾಶಯ: ಮುಳುಗದಿರಲಿ ಬದುಕು

ಮುಳುಗಡೆ ಭೀತಿಯಿಂದ ಅತಂತ್ರ ಸ್ಥಿತಿ ಅನುಭವಿಸುತ್ತಿರುವ ಗ್ರಾಮಸ್ಥರ ಸಂಕಟ ನಿವಾರಣೆಗೆ ಸರ್ಕಾರ ಇಚ್ಛಾಶಕ್ತಿ ತೋ

ಮಲ್ಲಿಕಾರ್ಜುನ ಹೆಗ್ಗಳಗಿ
Published 25 ಸೆಪ್ಟೆಂಬರ್ 2022, 19:30 IST
Last Updated 25 ಸೆಪ್ಟೆಂಬರ್ 2022, 19:30 IST
ಸಂಗತ
ಸಂಗತ   

ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಜಲಾಶಯದ ಎತ್ತರವನ್ನು ಈಗಿರುವ 519.60 ಮೀಟರ್‌ನಿಂದ 524.256 ಮೀಟರ್‌ಗೆ ಹೆಚ್ಚಿಸುವ ಮೂರನೇ ಹಂತದ ನಿರ್ಮಾಣ ಕಾರ್ಯ ಬಹಳ ದಿನಗಳಿಂದ ಉಳಿದುಕೊಂಡಿದೆ. ಜಲಾಶಯದಲ್ಲಿ 130 ಟಿಎಂಸಿ ಅಡಿ ನೀರನ್ನು ಹೆಚ್ಚಿಗೆ ಸಂಗ್ರಹಿಸಿ, ಹೊಸದಾಗಿ 5.3 ಲಕ್ಷ ಹೆಕ್ಟೇರ್ ಭೂಮಿಯನ್ನು ನೀರಾವರಿಗೆ ಒಳಪಡಿಸುವುದು ಈ ಯೋಜನೆಯ ಉದ್ದೇಶ.

ಜಲಾಶಯದ ಎತ್ತರ ಹೆಚ್ಚಿಸುವ ಈ ಯೋಜನೆಯಲ್ಲಿ 20 ಹಳ್ಳಿಗಳು ಹಾಗೂ 35 ಸಾವಿರ ಹೆಕ್ಟೇರ್ ಕೃಷಿಭೂಮಿ ಹಿನ್ನೀರಿನಲ್ಲಿ ಮುಳುಗಡೆಯಾಗಲಿವೆ. ಇಂತಹ ಗ್ರಾಮಗಳ ಹೆಸರು ಹಾಗೂ ಕೃಷಿ ಭೂಮಿಯ ಸರ್ವೆ ನಂಬರ್‌ ಗುರುತಿಸಿ ಸರ್ಕಾರವು 2012ರಲ್ಲಿ ಗೆಜೆಟ್ ನೋಟಿಫಿಕೇಷನ್ ಪ್ರಕಟಿಸಿದೆ. ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಆದರೆ ಇದರ ಮುಂದಿನ ಕಥೆ ಮಾತ್ರ ತುಂಬ ನೋವಿನಿಂದ ಕೂಡಿದೆ.

ಮುಳುಗಡೆಯಾಗಲಿರುವ ಗ್ರಾಮಗಳ ಜನ ಈ 10 ವರ್ಷಗಳಿಂದ ಅನುಭವಿಸುತ್ತಿರುವ ಅತಂತ್ರ ಸ್ಥಿತಿಯ ಸಂಕಟ ಅಷ್ಟಿಷ್ಟಲ್ಲ. ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ, ಕಾತರಕಿ, ಆಲಗುಂಡಿ, ಬುದ್ನಿ, ಹಿರೇಸಂಶಿ, ಗೋವಿಂದಕೊಪ್ಪ, ಉದಗಟ್ಟಿ, ಬಂಟನೂರು, ಬಾವಲತ್ತಿ, ಕುಂದರಗಿ, ಕೊಪ್ಪ, ಅಂಕಲಗಿ, ಚಿಕ್ಕೂರ, ಮಾಚಕನೂರ, ಹಿರೇಪಡಸಲಗಿ, ಸನಾಳ, ಕುಂಬಾರಹಳ್ಳ ಹಾಗೂ ವಿಜಯಪುರ ಜಿಲ್ಲೆಯ ಚಿಕ್ಕಗಲಗಲಿ, ಶಿರಬೂರ, ವಂದಾಲ ಇವು ಮುಳುಗಡೆಯಾಗಲಿರುವ ಗ್ರಾಮಗಳು.

ADVERTISEMENT

ಇನ್ನೇನು ಮುಳುಗಿಯೇ ಹೋಗುತ್ತವೆ ಎನ್ನುವ ಕಾರಣಕ್ಕೆ ಗ್ರಾಮಗಳ ಅಭಿವೃದ್ಧಿ ಕಾರ್ಯಗಳು ಪೂರ್ಣ ಸ್ಥಗಿತಗೊಂಡಿವೆ. ಮನೆಗಳಿಗೆ ಸುಣ್ಣ-ಬಣ್ಣ ಹಚ್ಚುವುದು, ರಿಪೇರಿ ಮಾಡುವುದು ನಿಂತುಬಿಟ್ಟಿವೆ. ಹೊಲಗಳಲ್ಲಿ ಕೃಷಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಮನೆಯ ಮುಂದೆ ಹೂ ಗಿಡ ನೆಡುವುದು, ಮುಂಜಾನೆ ರಂಗೋಲಿ ಹಾಕುವುದಕ್ಕೂ ಮಹಿಳೆಯರು ಮನಸ್ಸು ಮಾಡುತ್ತಿಲ್ಲ. ಹಾಲು, ಮೊಸರಿಗಾಗಿ ಎಮ್ಮೆ-ಆಕಳು ಸಾಕುತ್ತಿದ್ದರು. ಅದೂ ಈಗ ಮಾಯವಾಗಿದೆ. ಅತ್ಯಂತ ಬೇಸರದ ಸಂಗತಿಯೆಂದರೆ, ಮಕ್ಕಳ ಮದುವೆಗೂ ಅಡೆತಡೆಯಾಗಿದೆ. ಜಮೀನು, ಆಸ್ತಿ ಮಾರಾಟ ಸ್ಥಗಿತಗೊಂಡಿದೆ. ಮುಳುಗಡೆ ನೆಪ ಹೇಳಿ ಬ್ಯಾಂಕ್‍ಗಳು ಸಾಲ ಕೊಡುತ್ತಿಲ್ಲ. ಈ ಗ್ರಾಮಗಳಲ್ಲಿ ಒಂದು ಸುತ್ತು ನಡೆದು ಬಂದರೆ, ಜನರ ಜಡತ್ವ, ಹತಾಶೆ, ಸಿಟ್ಟು ಧುತ್ತನೆ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಗ್ರಾಮದ ಹಿರಿಯರು ‘ನಮ್ಮ ಬದುಕೇ ಮುಳುಗಿಹೋಗಿದೆ’ ಎಂದು ಕಣ್ಣೀರು ಹಾಕುತ್ತಿದ್ದಾರೆ.

‘ನಾವೆಲ್ಲ ಒಮ್ಮೆಗೇ ಮುದುಕರಾಗಿಬಿಟ್ಟಿದ್ದೇವೆ ಅಂಕಲ್, ಉತ್ಸಾಹವೇ ಇಲ್ಲ. ನಮ್ಮ ಊರು, ಸುತ್ತಮುತ್ತಲಿನ ಹಳ್ಳಿಗಳು ಮುಳುಗಡೆಯಾಗಲಿವೆ. ಹೀಗಾಗಿ ನಮ್ಮ ಬದುಕು ಡಲ್ ಆಗಿಬಿಟ್ಟಿದೆ’ ಎಂದು ವಿವರಿಸಿದ ಇಬ್ಬರು ಪರಿಚಿತ ಯುವಕರ ನಿಟ್ಟುಸಿರು ನೋಡಿ ಸಂಕಟವಾಯಿತು.

ಮುಳುಗಡೆಯಾಗಲಿರುವ ಗ್ರಾಮಗಳ ಜನರ ಸ್ಥಳಾಂತರ, ಸಮರ್ಪಕ ಪುನರ್ವಸತಿ, ಮುಳುಗಡೆಯಾಗಲಿರುವ ಕೃಷಿ ಭೂಮಿಗೆ ಸೂಕ್ತ ಪರಿಹಾರ ಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಎತ್ತರ ಹೆಚ್ಚಿಸುವ ಯೋಜನೆಯ ವೆಚ್ಚ 2012ರಲ್ಲಿ ₹ 17 ಸಾವಿರ ಕೋಟಿ ಇತ್ತು. ಈಗ ಅದು ₹ 75 ಸಾವಿರ ಕೋಟಿ ದಾಟಬಹುದು ಎಂದು ಅಂದಾಜಿಸಲಾಗಿದೆ.

ಸರ್ಕಾರವು 34 ಸಾವಿರ ಎಕರೆ ಭೂ ಸ್ವಾಧೀನಕ್ಕೆ ರೈತರಿಗೆ ನೋಟಿಸ್‌ ಜಾರಿ ಮಾಡಿದೆ. ಆದರೆ ಭೂಮಿಯ ಬೆಲೆ ನಿಗದಿ ಬಗ್ಗೆ ವಿವಾದ ಎದ್ದಿದೆ. ಬೇಗ ಪುನರ್ವಸತಿ ಕಲ್ಪಿಸಬೇಕು, ಭೂಮಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಹೋರಾಟ, ಧರಣಿ, ರಸ್ತೆತಡೆ ನಡೆಸುತ್ತಿದ್ದಾರೆ. ಆದರೆ ಮನವಿ ಸ್ವೀಕರಿಸುವುದಕ್ಕಷ್ಟೇ ಸರ್ಕಾರದ ಕೆಲಸ ಸೀಮಿತವಾಗಿದೆ.

ವಿಜ್ಞಾನ-ತಂತ್ರಜ್ಞಾನದ ಪ್ರಗತಿಯಿಂದಾಗಿ ಇಂದು ಬಹಳಷ್ಟು ಆವಿಷ್ಕಾರಗಳು ನಡೆದಿವೆ. ಜಲಾಶಯಗಳ ಎತ್ತರ ಹೆಚ್ಚಿಸುವುದಕ್ಕೆ ನಾರ್ವೆ ದೇಶದಲ್ಲಿ ತಡೆಗೋಡೆ ನಿರ್ಮಿಸುವ ಅತ್ಯಂತ ಸರಳ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದೆ. ರಷ್ಯಾ ಹಾಗೂ ಇನ್ನು ಕೆಲವು ದೇಶಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರಲಾಗಿದೆ. ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾ
ಗಿದ್ದ ಅವಧಿಯಲ್ಲಿ ನಾರ್ವೆ ತಂತ್ರಜ್ಞಾನದ ತಡೆಗೋಡೆ ನಿರ್ಮಿಸುವ ಸಲಹೆಯನ್ನು ತಜ್ಞರು ಸರ್ಕಾರಕ್ಕೆ ನೀಡಿದ್ದರು. ಹೆಚ್ಚಿಗೆ ಹಣ ಖರ್ಚು ಮಾಡಬೇಕಾಗಿಲ್ಲ, ಮುಖ್ಯವಾಗಿ ಗ್ರಾಮಗಳ ಹಾಗೂ ಕೃಷಿ ಭೂಮಿಯ ಮುಳುಗಡೆ ಸಮಸ್ಯೆ ತಪ್ಪಿಸಬಹುದು ಎಂದು ಹೇಳಿದ್ದರು. ಇದೊಂದು ವಿನೂತನ ಚಿಂತನೆಯಾಗಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಬ್ಯಾರೇಜ್‍ಗೆ 500 ಮೀಟರ್ ಉದ್ದದ ತಡೆಗೋಡೆ ನಿರ್ಮಿಸಲು ಸರ್ಕಾರ ಈಚೆಗೆ ಅನುಮೋದನೆ ನೀಡಿದೆ. ಇದನ್ನು ಮಾದರಿಯಾಗಿಟ್ಟು ಕೊಂಡು ಆಲಮಟ್ಟಿಗೆ ತಡೆಗೋಡೆ ನಿರ್ಮಿಸುವ ತಂತ್ರಜ್ಞಾನದ ಬಗ್ಗೆ ನಿರ್ಧರಿಸಬಹುದು.

ಕೃಷ್ಣಾ ನದಿಗೆ ಅವಿಭಜಿತ ಆಂಧ್ರಪ್ರದೇಶದಲ್ಲಿ ನಾಗಾರ್ಜುನ ಸಾಗರ ಹಾಗೂ ಕರ್ನಾಟಕದಲ್ಲಿ ಆಲಮಟ್ಟಿ ಜಲಾಶಯ ಕಟ್ಟಲು ಏಕಕಾಲಕ್ಕೆ ಚಾಲನೆ ನೀಡಲಾಯಿತು. ನಾಗಾರ್ಜುನ ಸಾಗರ ನಿರ್ಮಾಣ ಕಾರ್ಯ 1967ರಲ್ಲಿಯೇ ಪೂರ್ಣಗೊಂಡಿದೆ. ಇಷ್ಟು ದೀರ್ಘಕಾಲದ ನಂತರವೂ ಆಲಮಟ್ಟಿ ಕೆಲಸ ಇನ್ನೂ ಬಾಕಿ ಉಳಿದಿದೆ.

ಸರ್ಕಾರ ಸ್ಪಷ್ಟ ನಿಲುವು ಹಾಗೂ ಅದಮ್ಯ ಇಚ್ಛಾಶಕ್ತಿ ಯಿಂದ ಕೆಲಸ ಮಾಡಿ, ಆಲಮಟ್ಟಿ ಮೂರನೇ ಹಂತದ ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಬೇಕು ಹಾಗೂ ಮುಳುಗಡೆಯ ಅತಂತ್ರಸ್ಥಿತಿ ಅನುಭವಿಸುತ್ತಿರುವ ಗ್ರಾಮಸ್ಥರಿಗೆ ನೆಮ್ಮದಿಯ ಬದುಕು ಕಲ್ಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.