ಮಹಿಳೆಯರು ಕೇಳುವ ಪ್ರಶ್ನೆಗಳನ್ನು ಸಮಾಜ ಜಾಣ್ಮೆಯಿಂದ ಬದಿಗೆ ಸರಿಸಿರುವುದೇ ಹೆಚ್ಚು. ಈಗಲೂ, ‘ಕೊಂದವರು ಯಾರು?’ ಎನ್ನುವ ಪ್ರಶ್ನೆಗೆ ಉತ್ತರ ದೊರೆತಿಲ್ಲ.
ಕರ್ನಾಟಕದ ವರ್ತಮಾನದ ಸಾರ್ವಜನಿಕ ಸಂಕಥನದಲ್ಲಿ ಎರಡು ಮುಖ್ಯ ಕವಲುಗಳು ಕಾಣುತ್ತಿವೆ. ಮೊದಲನೆಯದು, ರಾಜ್ಯದಾದ್ಯಂತ ನಿರಂತರವಾಗಿ, ಶಿಕ್ಷೆಯ ಆತಂಕವೂ ಇಲ್ಲದೆ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ ಮತ್ತು ಅಮಾಯಕರ ಕಗ್ಗೊಲೆಗಳು. ಸಾಮಾಜಿಕ ದೌರ್ಜನ್ಯ ಹಾಗೂ ಪಿಡುಗಿನ ರೂಪದಲ್ಲಿ ಕಾಣುತ್ತಿರುವುದು ಬಾಲ್ಯವಿವಾಹ ಮತ್ತು ಬಾಲಗರ್ಭಿಣಿಯರ ಹೆಚ್ಚಳ. ಮತ್ತೊಂದು ಸಂಕಥನ: ಮತೀಯತೆಯ ಪ್ರಹಸನಗಳು ಹಾಗೂ ದ್ವೇಷ ರಾಜಕಾರಣಕ್ಕೆ ಪೂರಕವಾದ ಸಾರ್ವಜನಿಕ ಚರ್ಚೆಗಳು. ಈ ಎರಡೂ ವಿದ್ಯಮಾನಗಳನ್ನು ತುಲನಾತ್ಮಕವಾಗಿ ನೋಡಿದಾಗ, ನಮ್ಮ ಸಾಮಾಜಿಕ ಪ್ರಜ್ಞೆ ಎಷ್ಟು ಪಾತಾಳಕ್ಕೆ ಕುಸಿದಿದೆ ಎನ್ನುವುದು ಅನುಮಾನಕ್ಕೆ ಆಸ್ಪದ ಇಲ್ಲದಂತೆ ಸ್ಪಷ್ಟವಾಗುತ್ತದೆ.
ಕರ್ನಾಟಕದ ಮಹಿಳಾ ಸಂಘಟನೆಗಳು ಮುಂದಿಟ್ಟಿರುವ ಒಂದು ಪ್ರಶ್ನೆ: ‘ಕೊಂದವರು ಯಾರು?’. ಬಹುಶಃ, ವರ್ತಮಾನದ ಸಮಾಜ ಉತ್ತರಿಸಲಾಗದ, ಅರಗಿಸಿಕೊಳ್ಳಲಾಗದ ಒಂದು ಜಿಜ್ಞಾಸೆಯಿದು. ಏಕೆಂದರೆ, ಈ ಪ್ರಶ್ನೆಯ ಹಿಂದೆ ಅತ್ಯಾಚಾರಕ್ಕೆ ಒಳಗಾಗಿರುವ, ಹತ್ಯೆಗೀಡಾಗಿರುವ, ದೌರ್ಜನ್ಯಕ್ಕೀಡಾಗಿರುವ ನೂರಾರು ಮಹಿಳೆಯರ ನೋವಿನ ದನಿ ಅಡಗಿದೆ. ಈ ಪ್ರಶ್ನೆಗೆ ಉತ್ತರಿಸುವ ನೈತಿಕ ಜವಾಬ್ದಾರಿ ಇರುವುದು ಸರ್ಕಾರ, ಕಾನೂನು ವ್ಯವಸ್ಥೆ ಮತ್ತು ಜನಪ್ರತಿನಿಧಿಗಳಿಗೆ. ಇದನ್ನೂ ಮೀರಿ ನಮ್ಮ ಸುಶಿಕ್ಷಿತ–ನಾಗರಿಕ ಎಂದು ಗುರುತಿಸಿಕೊಳ್ಳುವ ಹಿತವಲಯದ ಸಮಾಜಕ್ಕೆ. ಕೊಂದವರು ಯಾರು ಎಂಬ ಪ್ರಶ್ನೆಯ ಹಿಂದೆ ಇರುವುದು ಮಾನವೀಯ ಅಂತಃಕರಣ, ಸಹಾನುಭೂತಿ ಮತ್ತು ಮನುಜ ಸೂಕ್ಷ್ಮತೆಯ ಭಾವನೆಗಳು. ಈ ಪ್ರಶ್ನೆ ಮುನ್ನೆಲೆಗೆ ಬಂದಿರುವುದೇ ನಮ್ಮ ಆಳ್ವಿಕೆ ಮತ್ತು ಕಾನೂನು ವ್ಯವಸ್ಥೆಯ ನಿರ್ಲಕ್ಷ್ಯ, ವೈಫಲ್ಯ ಮತ್ತು ನಿಷ್ಕ್ರಿಯತೆಯನ್ನು ಎತ್ತಿ ತೋರಿಸುತ್ತದೆ.
ಆಡಳಿತದ ಅಸೂಕ್ಷ್ಮತೆಯೇನೂ ಅಚ್ಚರಿ ಮೂಡಿಸುವುದಿಲ್ಲ. ಅದಕ್ಕೆ ಬದಲಾಗಿ ಸೋಜಿಗ ಎನಿಸುವುದು, ಅಧಿಕಾರ ರಾಜಕಾರಣದ ಮೂಲಕ, ಸಾಮಾಜಿಕ ಚಟುವಟಿಕೆಗಳ ಮೂಲಕ ಹಾಗೂ ಸಾಂಸ್ಕೃತಿಕ ಚಿಂತನೆಗಳ ಮುಖೇನ ಸಮಾಜದಲ್ಲಿ ನಡೆಯುವ ಎಲ್ಲ ರೀತಿಯ ಅಮಾನವೀಯ ಘಟನೆಗಳಿಗೂ ಸ್ಪಂದಿಸುವ ನೈತಿಕ ಜವಾಬ್ದಾರಿ ಇರುವ ಒಂದು ಸಾಮಾಜಿಕ ವರ್ಗದ ವರ್ತನೆ. ಜನಪ್ರತಿನಿಧಿಗಳಿಗೆ, ‘ಜನತೆ’ ಎನ್ನುವುದೇ ವಿಭಜಿಸಿ ನೋಡುವ ಒಂದು ಜಗತ್ತು ಆಗಿಹೋಗಿದೆ. ಆದರೆ, ಸಕ್ರಿಯವಾಗಿರುವ ವಿಭಜಿತ ರಾಜಕಾರಣದಾಚೆಗೆ, ಸಮಾಜದಲ್ಲಿ ಸದಾ ಸದ್ದು ಮಾಡುವ ಒಂದು ವರ್ಗ ಸಾಮಾಜಿಕವಾಗಿ ಯಾವಾಗಲೂ ಸಕ್ರಿಯವಾಗಿರುತ್ತದೆ. ಈ ವರ್ಗವೂ ದೌರ್ಜನ್ಯಗಳಿಗೆ ಕುರುಡಾಗುವುದು ಹಾಗೂ ಕಿವುಡಾಗುವುದು, ಅಸ್ಮಿತೆ ಆಧಾರಿತ ಸಾಂಸ್ಕೃತಿಕ ರಾಜಕಾರಣದ ಒಂದು ದುರಂತ ಆಯಾಮ.
ಹೆಣ್ಣುಮಕ್ಕಳು ‘ಕೊಂದವರು ಯಾರು?’ ಎಂದು ನೋವಿನಿಂದ ಕೇಳುತ್ತಿರುವ ಸಂದರ್ಭದಲ್ಲೇ, ವಿಶಾಲ ಸಮಾಜದ ಪ್ರತಿನಿಧಿಗಳು ಹಾಗೂ ಸಾಂಸ್ಕೃತಿಕ ದನಿಗಳು, ಯಾರೋ ಒಬ್ಬ ಮತಿಹೀನನ ‘ಜಿಂದಾಬಾದ್’ ಘೋಷಣೆಯನ್ನು ಮುನ್ನೆಲೆಗೆ ತರುತ್ತವೆ; ಹಾದಿ ತಪ್ಪಿದ ಯುವಕರ ಕಲ್ಲೆಸೆತ, ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ರೀತಿಯ ವಿಚಾರಗಳ ಸುತ್ತ ತಮ್ಮ ನಿರೂಪಣೆಗಳನ್ನು, ವೀರಾವೇಶದ ಘೋಷಣೆಗಳನ್ನು, ಸಮೀಪ ದೃಷ್ಟಿಯ ಅನಿಸಿಕೆಗಳನ್ನು ಸಾರ್ವಜನಿಕ ಸಂಕಥನದ ಮುಖ್ಯ ಭಾಗವನ್ನಾಗಿ ಮಾಡುತ್ತಿದ್ದಾರೆ. ಈ ಮೂಲಕ ಸಮಾಜ ಚರ್ಚಿಸಲೇಬೇಕಾದ ಸಂಗತಿಗಳನ್ನು ಹಿನ್ನೆಲೆಗೆ ಸರಿಸಲಾಗುತ್ತದೆ. ಸಮಾಜವನ್ನು ಕಾಡುತ್ತಿರುವ ಜೀವಹಾನಿಯ ಜಟಿಲ ಸಮಸ್ಯೆಗಳ ಬಗ್ಗೆ ಈ ಗುಂಪಿನಿಂದ ಒಂದೇ ಒಂದು ಕೀರಲು ಧ್ವನಿಯೂ ಕೇಳಿಬರುವುದಿಲ್ಲ.
ಕಣ್ಣೆದುರಿನ ದೌರ್ಜನ್ಯಗಳಿಗೆ, ಹಿಂಸೆ–ಅತ್ಯಾಚಾರಗಳಿಗೆ ಸಮಾಜದ ಒಂದು ದೊಡ್ಡ ವರ್ಗ ಕುರುಡಾಗಿರುವುದು ದುರದೃಷ್ಟಕರ. ಮಹಿಳೆಯರ ಪ್ರಶ್ನೆಗೆ ಉತ್ತರಿಸಬೇಕಾದ ನೈತಿಕಪ್ರಜ್ಞೆ ಇರುವ ಸಮಾಜವೊಂದು ಹೀಗೆ ವಾಸ್ತವಕ್ಕೆ ಕುರುಡಾಗಿ, ರೋಚಕತೆಗೆ, ಭಾವನಾತ್ಮಕತೆಗೆ, ಸ್ವಹಿತಾಸಕ್ತಿಯ ಭಾವಾವೇಶಗಳಿಗೆ ಕಣ್ತೆರೆಯುವುದು ಸಮಾಜದ ನೈತಿಕ ಅಧಃಪತನದ ಸಂಕೇತವಾಗಿಯೇ ಕಾಣುತ್ತದೆ.
‘ಸಂಸ್ಕೃತಿ’ ಎಂಬ ವಿಶಾಲ ಅರ್ಥದ ಪದವನ್ನು ಪ್ರಸ್ತುತ ‘ಧರ್ಮ’ ಎಂಬ ನಿರ್ದಿಷ್ಟ ಸಾಂಸ್ಥಿಕ ವಿದ್ಯಮಾನಕ್ಕೆ ಸಂವಾದಿಯಾಗಿ ಬಳಸಲಾಗುತ್ತಿದೆ. ಈ ಮೂಲಕ, ನಮ್ಮ ಸಮಾಜ, ಅದರೊಳಗಿನ ಒಂದು ಮುಂದುವರಿದ– ಸುಶಿಕ್ಷಿತ– ಹಿತವಲಯದ ವರ್ಗ, ಮನುಷ್ಯನಲ್ಲಿ ಇರಬೇಕಾದ ಮಾನವೀಯ ಸಂಸ್ಕೃತಿಯನ್ನೇ ನಗಣ್ಯಗೊಳಿಸುತ್ತಿದೆ.
ಈ ಜಟಿಲ ಪ್ರಶ್ನೆಗೆ ನಾವು ಉತ್ತರ ಶೋಧಿಸಬೇಕಿದೆ. ಸಾರ್ವಜನಿಕವಾಗಿ ಗುರುತಿಸಿಕೊಳ್ಳುವ ಅಥವಾ ಅಲ್ಲೊಂದು ಅವಕಾಶ/ಸ್ಥಾನ ಕಲ್ಪಿಸಿಕೊಳ್ಳುವ ಸಾಂಘಿಕ, ಸಾಂಸ್ಥಿಕ, ವೈಯಕ್ತಿಕ ಪ್ರಯತ್ನಗಳು ನಮ್ಮ ಯುವ ಸಮಾಜದ ಒಂದು ವರ್ಗವನ್ನು ದಿಕ್ಕುತಪ್ಪಿಸುತ್ತಿರುವುದು ಈ ಹೊತ್ತಿನ ದುರಂತ, ಆಧುನಿಕತೆ ಮತ್ತು ನಾಗರಿಕತೆಯ ಚೋದ್ಯ. ನೊಂದವರ ವೇದನೆಗಳಿಗೆ ವಿಮುಖವಾದ ಸಮಾಜವನ್ನು ನಾಗರಿಕ ಎನ್ನುವುದಾದರೂ ಹೇಗೆ?
‘ಸ್ತ್ರೀಮತವನುತ್ತರಿಸಲಾಗದೆ ಧರ್ಮಶಾಸ್ತ್ರದೊಳು’ ಎನ್ನುವ ಕುಮಾರವ್ಯಾಸನ ದ್ರೌಪದಿಯ ಪ್ರಶ್ನೆಗೆ, ಕುರುಸಭೆಯಲ್ಲಿ ಉತ್ತರ ಇರಲಿಲ್ಲ. ಆ ಪ್ರಶ್ನೆಯೇ ಈಗ ಬೇರೊಂದು ರೂಪದಲ್ಲಿ ಎದುರಾಗಿದೆ. ಆದರೆ, ಉತ್ತರಿಸಬೇಕಾದವರ ಜಾಣ ಮೌನ ಎಂದಿನಂತೆ ಮುಂದುವರಿದಿದೆ. ಉತ್ತರ ದೊರಕದ ಪ್ರಶ್ನೆಗಳು ಮುಂದುವರಿದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.