ADVERTISEMENT

ಸಂಗತ: ಜಲಸಾಕ್ಷರತೆ– ಬತ್ತದಿರಲಿ ಒರತೆ

ಶುದ್ಧಜಲ ಮರೀಚಿಕೆಯಾಗಿರುವ ಈ ಸಂದರ್ಭದಲ್ಲಿ ಜಲಸಾಕ್ಷರರಾಗುವುದೇ ನಮ್ಮ ಮುಂದೆ ಇರುವ ಏಕೈಕ ಪರಿಹಾರ ಮಾರ್ಗ

ಡಾ.ಮುರಳೀಧರ ಕಿರಣಕೆರೆ
Published 9 ಡಿಸೆಂಬರ್ 2024, 20:10 IST
Last Updated 9 ಡಿಸೆಂಬರ್ 2024, 20:10 IST
<div class="paragraphs"><p>ಸಂಗತ: ಜಲಸಾಕ್ಷರತೆ– ಬತ್ತದಿರಲಿ ಒರತೆ</p></div>

ಸಂಗತ: ಜಲಸಾಕ್ಷರತೆ– ಬತ್ತದಿರಲಿ ಒರತೆ

   

‘ಅಮೃತಸದೃಶ ಜೀವಜಲವನ್ನಾಗಲಿ, ಪಾನೀಯ ವನ್ನಾಗಲಿ ಪ್ಲಾಸ್ಟಿಕ್‌ ಎಂಬ ವಿಷಕಾರಿ ಬಟ್ಟಲಿನಲ್ಲಿ ನೀಡಬಾರದು’ ಎಂಬುದು ಆ ಸಹೋದರರ ದೃಢ ನಿಲುವು. ಪ್ಲಾಸ್ಟಿಕ್‌ ತ್ಯಾಜ್ಯವು ಜನ, ಜಾನುವಾರು, ಜಲಚರ, ಖಗ-ಮೃಗಗಳು ಸೇರಿದಂತೆ ಇಡೀ ಪರಿಸರಕ್ಕೆ ವಿಷಕಾರಿಯಷ್ಟೇ ಅಲ್ಲ ವಿನಾಶಕಾರಿಯೂ ಹೌದು. ನೆಲ, ಜಲ, ವಾಯುಮಂಡಲವು ಅಪಾಯಕಾರಿ ಪ್ಲಾಸ್ಟಿಕ್‌ ಕಣಗಳಿಂದ ಮಲಿನವಾಗುವುದನ್ನು ತಪ್ಪಿಸಲು ಅವರು ‘ಲೋಟಗಳ ಬ್ಯಾಂಕ್’ ಎಂಬ ಪುಟ್ಟ ಪ್ರಯತ್ನ ಪ್ರಾರಂಭಿಸಿದ್ದಾರೆ.

ಸಭೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್‌ ಕಪ್‌ಗಳ ಬಳಕೆ ತಪ್ಪಿಸುವ ದಿಸೆಯಲ್ಲಿ ನೀರು ಮತ್ತು ಕಾಫಿ ಕುಡಿಯುವುದಕ್ಕಾಗಿ ತಲಾ 500 ಸ್ಟೀಲ್ ಲೋಟಗಳ ವ್ಯವಸ್ಥೆ ಮಾಡಿದ್ದಾರೆ. ಅಗತ್ಯವಿರುವವರು ತಮ್ಮ ಕಾರ್ಯ
ಕ್ರಮಕ್ಕೆ ಈ ಲೋಟಗಳನ್ನು ತೆಗೆದುಕೊಳ್ಳಬಹುದು. ಇದಕ್ಕೆ ಬಾಡಿಗೆ ಕೊಡಬೇಕಾಗಿಲ್ಲ. ಕಾರ್ಯಕ್ರಮ ಮುಗಿದ ನಂತರ ತೊಳೆದು, ಸ್ವಚ್ಛವಾಗಿ ಮರಳಿಸಬೇಕೆಂಬ ಒಂದೇ ಷರತ್ತು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಆದಷ್ಟುಮಟ್ಟಿಗೆ ಪ್ಲಾಸ್ಟಿಕ್‌ ಬಾಟಲ್‌, ಲೋಟಗಳ ಬಳಕೆ ತಪ್ಪಿಸುವ ಉದ್ದೇಶ. ಇದರಿಂದ ಮಾಲಿನ್ಯ ಮಿತಗೊಳಿಸುವ ಜೊತೆಗೆ ನೀರು ಪೋಲಾಗುವುದೂ ತಪ್ಪುತ್ತದೆಯೆಂದು ಅವರು ತೋರಿಸುತ್ತಿದ್ದಾರೆ.

ADVERTISEMENT

ಮುಂದೆ ಸ್ಟೀಲ್‌ ತಟ್ಟೆಗಳನ್ನೂ ಹೀಗೆ ನೀಡುವ ಆಲೋಚನೆಯಲ್ಲಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನವರಾದ ಅಶೋಕ್‌ ಮತ್ತು ಅರವಿಂದ್‌ ಸಹೋದರರ ಪರಿಸರ ರಕ್ಷಣೆಯ ಈ ಪುಟ್ಟ ಹೆಜ್ಜೆ ನಿಜಕ್ಕೂ ಪ್ರಶಂಸಾರ್ಹ. ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆಯು ಹತ್ತು ಸಾವಿರ ಸ್ಟೀಲ್‌ ತಟ್ಟೆ, ಲೋಟ, ಚಮಚಗಳ ‘ಪ್ಲೇಟ್‌ ಬ್ಯಾಂಕ್’ ನಡೆಸುತ್ತಾ ಶುಲ್ಕರಹಿತವಾಗಿ ಬಾಡಿಗೆಗೆ ನೀಡುತ್ತಿರುವ ಕಾರ್ಯವೇ ಇವರಿಗೆ ಸ್ಫೂರ್ತಿ.

ಈ ಅನುಕರಣೀಯ ಕಾರ್ಯ ದೊಡ್ಡ ಮಟ್ಟದಲ್ಲಿ ಪ್ರಚಾರಕ್ಕೆ ಬಂದಿದ್ದು ಶೃಂಗೇರಿಯಿಂದ ಹರಿಹರದವರೆಗೆ ಇತ್ತೀಚೆಗೆ ನಡೆದ ‘ನಿರ್ಮಲ ತುಂಗಭದ್ರಾ ಅಭಿಯಾನ’ದ ಮೊದಲ ಚರಣದಲ್ಲಿ. ಜನಜಾಗೃತಿ, ಜಲಜಾಗೃತಿ, ಜನಾಗ್ರಹದ ಸಂಕಲ್ಪ ಹೊತ್ತು ನದಿಯಗುಂಟ ನಡೆದ ಈ ಪಾದಯಾತ್ರೆಯು ಸಾರ್ವಜನಿಕರಲ್ಲಿ, ಅದರಲ್ಲೂ ಪ್ರಮುಖವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಜಲಮಾಲಿನ್ಯದ ಬಗ್ಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಹಲವರ ಮನಃಪರಿವರ್ತನೆಗೂ ಕಾರಣವಾಗಿದೆ.

ಈ ಅಭಿಯಾನದಲ್ಲಿ ಪಾಲ್ಗೊಂಡ ಶಿವಮೊಗ್ಗದ ಬಾಳೆಕಾಯಿ ಮಂಡಿಯ ವರ್ತಕರೊಬ್ಬರು ಹಣ್ಣು
ಗಳನ್ನು ಪ್ಲಾಸ್ಟಿಕ್‌ ಕವರ್‌ ಬದಲಿಗೆ ಕಾಗದದಲ್ಲಿ ಸುತ್ತಿ ಕೊಡುತ್ತಾ, ಪ್ಲಾಸ್ಟಿಕ್‌ ತ್ಯಾಜ್ಯದ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸುವ ಜೊತೆಗೆ ತಾವೇ ಮಾದರಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಮಕ್ಕಳನ್ನು ಜಲಸಾಕ್ಷರರನ್ನಾಗಿ ಮಾಡಲು ಶಾಲಾ ಕಾಲೇಜುಗಳಲ್ಲಿ ‘ಜಲ ಸಂಘ’ (ವಾಟರ್‌ ಕ್ಲಬ್) ಸ್ಥಾಪಿಸಬೇಕೆಂಬ ಒತ್ತಾಯದ ಧ್ವನಿಯೂ ಈ ಅಭಿಯಾನದಲ್ಲಿ ಹೊರಹೊಮ್ಮಿದೆ. ಜೀವಜಲದ ಮಿತಬಳಕೆ, ಪುನರ್ಬಳಕೆ, ಜಲಮೂಲಗಳ ಅರಿವು, ಅವುಗಳನ್ನು ಮಲಿನಗೊಳಿಸದಿರುವ ಪ್ರಜ್ಞೆ, ನೀರು ಇಂಗಿಸುವಲ್ಲಿ ಕೆರೆಕಟ್ಟೆಗಳ ಪಾತ್ರ, ಮಳೆನೀರು ಸಂಗ್ರಹದಂತಹ ವಿಚಾರಗಳಲ್ಲಿ ವಿದ್ಯಾರ್ಥಿಗಳಲ್ಲಿ ತಿಳಿವಳಿಕೆ ಮೂಡಿಸಬೇಕಿರುವುದು ಸದ್ಯದ ತುರ್ತು. ಜಲಸಂಘದ ಮೂಲಕ ಜಲಸಂರಕ್ಷಣೆಯ ಮಹತ್ವವನ್ನು ಮನದಟ್ಟು ಮಾಡಿಸಿದಾಗ ಮಾತ್ರ ಜಲಕ್ಷಾಮವನ್ನು ತಡೆಯಲು ಸಾಧ್ಯ. ನಮ್ಮ ವಿದ್ಯಾಲಯಗಳಲ್ಲಿ ಪಠ್ಯದ ಹೊರೆಯನ್ನು ಕಡಿತಗೊಳಿಸಿ, ಬದುಕಿನ ಪಾಠ, ಜೀವನ ಕೌಶಲಗಳಿಗೂ ತರಗತಿಗಳಲ್ಲಿ ಒತ್ತು ನೀಡಬೇಕಿರುವ ಸಂಧಿಕಾಲವಿದು.

ಈಗ ಶುದ್ಧಜಲ ಎಂಬುದು ನಿಜಕ್ಕೂ ಮರೀಚಿಕೆ. ವಿಷಯುಕ್ತ, ತ್ಯಾಜ್ಯ ತುಂಬಿದ, ರೋಗಾಣುಗಳ ಆಗರ
ಆಗಿರುವ ನೀರಿನಿಂದಾಗಿ ಪರಿಸರದ ಸ್ವಾಸ್ಥ್ಯ ಬಿಗಡಾಯಿಸುತ್ತಿದೆ. ಎಳೆಯರಲ್ಲಿ ಈ ಕುರಿತು ಸರಿಯಾಗಿ ಜಾಗೃತಿ ಮೂಡಿಸಿದಾಗ ಮುಂದೆ ಅವರು ಜವಾಬ್ದಾರಿಯುತ ನಾಗರಿಕರಾಗಿ ನಡೆದುಕೊಳ್ಳುತ್ತಾರೆ. ಜಲಸಾಕ್ಷರತೆಯ ಬಗ್ಗೆ ಮಾತನಾಡಿದರೆ ಕೇಳುವ ವಯಸ್ಕರು ಕಡಿಮೆ. ಅದೇ ಮಕ್ಕಳಿಗೆ ಮನದಟ್ಟು ಮಾಡಿಸಿದರೆ ತಾವು ಪಾಲಿಸುವ ಜೊತೆಗೆ ಮನೆಯ ಹಿರಿಯರಿಗೂ ಕಲಿಸುತ್ತಾರೆ.

ನಮ್ಮ ರಾಷ್ಟ್ರದ ಬೃಹತ್‌ ಜನಸಂಖ್ಯೆಯನ್ನು ಪರಿಗಣಿಸಿದರೆ ಸಾಕ್ಷರತೆಯ ಮಟ್ಟವೇನೊ ತೃಪ್ತಿಕರ. ಅದೇ ಜಲಸಾಕ್ಷರತೆಯ ವಿಚಾರಕ್ಕೆ ಬಂದರೆ ನಮ್ಮದು ತುಂಬಾ ಶೋಚನೀಯ ಸ್ಥಿತಿ. ಹಳ್ಳಿಗಳು ಸೇರಿದಂತೆ ಪಟ್ಟಣಗಳು, ನಗರಗಳಲ್ಲಿ ಮನೆ ಮುಂದಿನ ಅಂಗಳ, ರಸ್ತೆ, ವಾಹನಗಳನ್ನು ತೊಳೆಯಲು ಅಮೂಲ್ಯ ಕುಡಿಯುವ ನೀರನ್ನು ಮನಸೋಇಚ್ಛೆ ಬಳಸಲಾಗುತ್ತಿದೆ. ಹೆಚ್ಚೆಂದರೆ ಒಂದೆರಡು ಬಕೆಟ್ ನೀರಿನಲ್ಲಿ ಆಗುವ ಕೆಲಸಕ್ಕೆ ನಿತ್ಯವೂ ಸಾವಿರಾರು ಲೀಟರ್‌ ನೀರು ಪೋಲಾಗುತ್ತಿದೆ. ಮಾನವನ ದುರಾಸೆಗೆ ಅರಣ್ಯ ಪ್ರದೇಶ, ಹಸಿರು ತಾಣಗಳು ಬಲಿಯಾಗುತ್ತಿರುವಂತೆಯೇ ಜಲಮೂಲ ಗಳೂ ಬತ್ತುತ್ತಿವೆ. ಬರಡು ನೆಲದಲ್ಲಿ ಬಸಿಯಲಾಗದೆ ಮಳೆನೀರು ಹರಿದು ವ್ಯರ್ಥವಾಗುತ್ತಿದೆ.

ಪರಿಣಾಮವಾಗಿ, ಅಂತರ್ಜಲದ ಮಟ್ಟ ಆತಂಕಕಾರಿಯಾಗಿ ಕುಸಿಯುತ್ತಿದೆ. ಕೆರೆಕಟ್ಟೆಗಳು, ಹಳ್ಳಕೊಳ್ಳ
ಗಳು, ನದಿಗಳಂತಹ ಜೀವದಾಯಿಗಳು ಮಾನವನ ಅನಾಚಾರದ ವರ್ತನೆಗಳಿಂದ ಮಾರಕ ಸಾಂಕ್ರಾಮಿಕ, ಅಸಾಂಕ್ರಾಮಿಕ ಕಾಯಿಲೆಗಳ ತೊಟ್ಟಿಲುಗಳಾಗುತ್ತಿರುವುದು ಆತಂಕಕಾರಿ ವಿದ್ಯಮಾನ. ಜಲಸಾಕ್ಷರರಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದೊಂದೇ ನಮ್ಮೆದುರಿಗೆ ಇರುವ ಏಕೈಕ ಪರಿಹಾರ ಮಾರ್ಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.