ADVERTISEMENT

ಸಂಗತ: ಘಟ್ಟಕ್ಕೆ ಅಪಾಯಕಾರಿ ಯೋಜನೆ ಬೇಕೆ?

ಶರಾವತಿ ನದಿ ಹರಿವು ಬಳಸಿಕೊಂಡು ವಿದ್ಯುತ್‌ ಉತ್ಪಾದಿಸುವ ಯೋಜನೆ ಪಶ್ಚಿಮ ಘಟ್ಟದ ನಿಬಿಡ ಅರಣ್ಯ ಹಾಗೂ ಜೀವವೈವಿಧ್ಯಕ್ಕೆ ಹಾನಿ ಉಂಟುಮಾಡುತ್ತದೆ.

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 22:30 IST
Last Updated 22 ಡಿಸೆಂಬರ್ 2025, 22:30 IST
ಸಂಗತ
ಸಂಗತ   

ಕಳೆದೊಂದು ದಶಕದಲ್ಲಿ ವಿದ್ಯುತ್‌ ಬೇಡಿಕೆಯ ಸ್ವರೂಪದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಗರಿಷ್ಠ ಬೇಡಿಕೆಯ ಸಮಯ ಬದಲಾಗಿದೆ. ಬಳಕೆಯ ಸ್ವರೂಪದ ಬದಲಾವಣೆ, ಸೌರ ವಿದ್ಯುತ್ ಉತ್ಪಾದನೆಯ ಹೆಚ್ಚಳ ಹಾಗೂ ಬೇಡಿಕೆ, ನಿರ್ವಹಣಾ ವ್ಯವಸ್ಥೆಗಳ ಸುಧಾರಣೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ.

ಲಭ್ಯವಿರುವ ದತ್ತಾಂಶಗಳ ಪ್ರಕಾರ, ಕರ್ನಾಟಕದಲ್ಲಿ ಇಂದಿನ ಪರಿಸ್ಥಿತಿಯಲ್ಲಿ ಬದಲಾಗುತ್ತಿರುವ ಈ ಬೇಡಿಕೆ
ಮಾದರಿಗಳನ್ನು ನಿರ್ವಹಿಸಲು ಸಾಕಷ್ಟು ನವೀಕರಿಸ ಬಹುದಾದ ಶಕ್ತಿ ಸಾಮರ್ಥ್ಯವಿದೆ. ಆದ್ದರಿಂದ ಗರಿಷ್ಠ ವಿದ್ಯುತ್ ಬೇಡಿಕೆ ನಿರ್ವಹಣೆ ಹಿಂದಿನಂತೆ ಗಂಭೀರ ಸಮಸ್ಯೆಯಾಗಿಲ್ಲ.

ಸೌರ ಫೋಟೊವೋಲ್ಟಾಯಿಕ್ ವ್ಯವಸ್ಥೆಗಳಿಗೆ ಬ್ಯಾಟರಿ ಶಕ್ತಿ ಸಂಗ್ರಹಣೆಯನ್ನು ಸಂಯೋಜಿಸುವುದು ತಾಂತ್ರಿಕವಾಗಿಯೂ ಹಾಗೂ ಆರ್ಥಿಕವಾಗಿಯೂ ಪರಿಣಾಮ ಕಾರಿ. ಇದಕ್ಕೆ ನಿದರ್ಶನವಾಗಿ, ಸೌರಶಕ್ತಿ ನಿಗಮ ಇತ್ತೀಚೆಗೆ ಹೊರಡಿಸಿರುವ ಟೆಂಡರ್‌ಗಳನ್ನು ಗಮನಿಸಬಹುದು. ‘ಆರ್‌ಇ–ಆರ್‌ಟಿಸಿ’ (ರೆನ್ಯೂಬಲ್ ಎನರ್ಜಿ– ರೌಂಡ್‌ ದಿ ಕ್ಲಾಕ್‌) ಟೆಂಡರ್‌ಗಳಲ್ಲಿ ವಿದ್ಯುತ್ ದರವು ಪ್ರತಿ ಯೂನಿಟ್‌ಗೆ ಸುಮಾರು ₹3ಕ್ಕೆ ಇಳಿದಿದೆ. ಇದಕ್ಕೆ ಹೋಲಿಸಿದರೆ, ಪಂಪ್ ಹೈಡ್ರೋ ಯೋಜನೆಗಳಿಂದ ಉತ್ಪಾದನೆಯಾಗುವ ವಿದ್ಯುತ್ ದರ ಪ್ರತಿ ಯೂನಿಟ್‌ಗೆ ಕನಿಷ್ಠ ₹6ರಿಂದ ₹8  ಆಗಿರುತ್ತದೆ.

ADVERTISEMENT

ಬ್ಯಾಟರಿ ಸಂಗ್ರಹಣೆ ವ್ಯವಸ್ಥೆಯಲ್ಲಿ ಸಾಕಷ್ಟು ಲಾಭಗಳಿವೆ. ಆ ಲಾಭಗಳಲ್ಲಿ, ಕಡಿಮೆ ಅವಧಿಯಲ್ಲಿ ಸ್ಥಾಪನೆ ಸಾಧ್ಯ, ಹಂತ ಹಂತವಾಗಿ ವಿಸ್ತರಿಸಬಹುದಾದ ವ್ಯವಸ್ಥೆ, ವಿಶಾಲ ಭೂಮಿ ಅಥವಾ ಅರಣ್ಯ ಮುಳುಗಡೆ ಇಲ್ಲದಿರುವುದು, ದೊಡ್ಡ ಜಲವಿದ್ಯುತ್ ಯೋಜನೆ ಗಳಿಗಿಂತ ಬಹಳ ಕಡಿಮೆ ಪರಿಸರ ಹಾನಿ ಸೇರಿವೆ.

ಪಂಪ್ ಹೈಡ್ರೋ ಯೋಜನೆಗಳ ಪರಿಣಾಮಗಳು ನಿರ್ಮಾಣ ಸ್ಥಳಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಇವು ಭೂಮಿಯ ಹಾಗೂ ಜಲ ಪರಿಸರ ವ್ಯವಸ್ಥೆಗಳ ಮೇಲೆ ವ್ಯವಸ್ಥಾತ್ಮಕ, ಪರೋಕ್ಷ ಮತ್ತು ಸಂಚಯಾತ್ಮಕ ಪರಿಣಾಮ ಉಂಟುಮಾಡುತ್ತವೆ.

ಪಶ್ಚಿಮಘಟ್ಟಗಳಲ್ಲಿನ ನಿತ್ಯಹರಿದ್ವರ್ಣ ಹಾಗೂ ಅರೆ ನಿತ್ಯಹರಿದ್ವರ್ಣ ಕಾಡುಗಳು ಅತ್ಯಧಿಕ ಕಾರ್ಬನ್ ಸಂಗ್ರಹ ಸಾಮರ್ಥ್ಯ ಹೊಂದಿವೆ. ಒಮ್ಮೆ ಹಾನಿಗೊಳಗಾದರೆ, ಇವು ತಮ್ಮ ಮೂಲ ಕಾರ್ಬನ್ ಸಂಗ್ರಹ ಸಾಮರ್ಥ್ಯವನ್ನು ಮರುಪಡೆಯಲು 100ರಿಂದ 300 ವರ್ಷ ಬೇಕಾಗುತ್ತದೆ. ಪಂಪ್ ಹೈಡ್ರೋ ಯೋಜನೆಗಳು ನೈಸರ್ಗಿಕ ನೀರಿನ ಹರಿವಿನ ಕ್ರಮವನ್ನು ಬದಲಾಯಿಸುತ್ತವೆ. ಇದರ ಪರಿಣಾಮವಾಗಿ– ಮಣ್ಣಿನ ತೇವಾಂಶ, ಆವೋತ್ಪ್ರಸರಣ (Evapotranspiration) ಮಾದರಿಗಳು ಹಾಗೂ ಭೂಗರ್ಭ ಜಲ ಪುನರ್ಭರಣ ಮಾದರಿಗಳಲ್ಲಿ ವ್ಯತ್ಯಯ ಉಂಟಾಗುತ್ತದೆ. ಇದರಿಂದ ಕಾಡು–ನದಿ–ವಾತಾವರಣದ ನಡುವಿನ ನೈಸರ್ಗಿಕ ಸಂಬಂಧ ದುರ್ಬಲಗೊಳ್ಳುತ್ತದೆ. ದೀರ್ಘಾವಧಿಯಲ್ಲಿ, ಸ್ಥಳೀಯ ತಾಪಮಾನ ಏರಿಕೆ, ವಾತಾವರಣದ ತೇವಾಂಶ ಪುನರಾವರ್ತನೆ ಕುಗ್ಗುವುದು ಹಾಗೂ ಉಪ ಪ್ರಾದೇಶಿಕ ಮಟ್ಟದಲ್ಲಿ ಮಳೆಗಾಲದ ಮಾದರಿಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ.

ಪಶ್ಚಿಮಘಟ್ಟಗಳು ಜಾಗತಿಕವಾಗಿ ಅತ್ಯಂತ ಪ್ರಮುಖ ಜೀವವೈವಿಧ್ಯ ತಾಣಗಳಾಗಿವೆ. ಅರಣ್ಯ ತುಂಡಾಗು ವಿಕೆ ಮತ್ತು ಜಲಚಕ್ರದ ವ್ಯತ್ಯಯಗಳು ಉಭಯಚರಗಳನ್ನು ಗಂಭೀರ ಅಪಾಯಕ್ಕೆ ಒಳಪಡಿಸುತ್ತವೆ. ‘ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ’ಗೆ ಸಂಬಂಧಿಸಿದಂತೆ ಈ ಎಲ್ಲ ಸೂಕ್ಷ್ಮಗಳನ್ನು ಗಮನಿಸ ಬೇಕಾಗಿದೆ.

ಸರ್ಕಾರವು ಶರಾವತಿ ನದಿಯ ಹರಿವನ್ನು ಬಳಸಿಕೊಂಡು ಸುಮಾರು 2,000 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯನ್ನು ರೂಪಿಸಿದೆ. ಆ ಪ್ರದೇಶದ ಗಂಭೀರ ಪರಿಸರ ಪರಿಣಾಮಗಳನ್ನು ಸಮರ್ಪಕವಾಗಿ ಪರಿಗಣಿಸದೆ, ಅಲ್ಲಿರುವ ಅಮೂಲ್ಯ ಸಸ್ಯಸಂಪತ್ತು ಮತ್ತು ಜೀವಸಂಕುಲಕ್ಕೆ ಭಾರೀ ಹಾನಿ ಉಂಟುಮಾಡುವ ಸಾಧ್ಯತೆ ಯಿದೆ. ಶತಮಾನಗಳ ಕಾಲದಲ್ಲಿ ರೂಪುಗೊಂಡಿರುವ ಈ ಪರಿಸರ ವ್ಯವಸ್ಥೆ ಅಲ್ಪ ವ್ಯತ್ಯಯಕ್ಕೂ ಅತ್ಯಂತ ಸಂವೇದನಾಶೀಲವಾಗಿದೆ. ಸ್ಥಳ ಪರಿಶೀಲನೆ ನಡೆಸಿದ ಅರಣ್ಯ ಸಲಹಾ ಸಮಿತಿ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಈ ಯೋಜನೆಗೆ ಗಂಭೀರ ಆಕ್ಷೇಪಣೆ  ವ್ಯಕ್ತಪಡಿಸಿದ್ದಾರೆ. ಪರಿಸರ ಸಚಿವಾಲಯದ ಅಧಿಕಾರಿಗಳು, ಪಶ್ಚಿಮಘಟ್ಟಗಳಿಗೆ ಮಾತ್ರ ಸೀಮಿತವಾದ ಸಿಂಹಬಾಲದ ಸಿಂಗಳೀಕಗಳ ಮೇಲೆ ಬೀರುವ ಪರಿಣಾಮದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ದಾಖಲೆಗಳ ಪ್ರಕಾರ, ಈ ಜಾತಿಯ ಸುಮಾರು 730 ಪ್ರಾಣಿಗಳು ಮಾತ್ರ ಉಳಿದಿವೆ.

ಈ ಯೋಜನೆಯು ಎರಡು ಜಲಾಶಯಗಳ ನಿರ್ಮಾಣ, ಗರಿಷ್ಠ 3.2 ಕಿ.ಮೀ ಉದ್ದದ ಸುರಂಗ, ಗರಿಷ್ಠ 500 ಮೀಟರ್ ಆಳದವರೆಗೆ ತೋಡಿಕೆ, ಹಾಗೂ ಭೂಗತ ಕಾಮಗಾರಿಗಳಿಗೆ ಡ್ರಿಲ್ಲಿಂಗ್ ಮತ್ತು ಸ್ಫೋಟ ಕಾರ್ಯಗಳನ್ನು ಒಳಗೊಂಡಿದೆ. ಯೋಜನಾ ಪ್ರದೇಶವು ಭೂಕಂಪ ವಲಯ–3ರಲ್ಲಿ ಇರುವುದಾಗಿ ಸಮಿತಿ ಹೇಳಿದ್ದು, ಇಳಿಜಾರು ಕತ್ತರಿಕೆ, ಸ್ಫೋಟ ಕಾರ್ಯಗಳು ಮತ್ತು ಭಾರಿ ಮಾನ್ಸೂನ್ ಮಳೆಯ ಸಂಯೋಜನೆಯಿಂದ ಭೂಕುಸಿತ ಮತ್ತು ಮಣ್ಣು ಕೊಚ್ಚುವ ಅಪಾಯಗಳು ಹೆಚ್ಚಾಗುವ ಸಾಧ್ಯತೆ ಇದೆ.

ಪರಿಸರದ ದೃಷ್ಟಿಯಿಂದ ಅತ್ಯಂತ ಸಂವೇದನಾಶೀಲವಾದ ಪ್ರದೇಶದಲ್ಲಿ 54 ಎಕರೆ ಅರಣ್ಯ ಭೂಮಿಯನ್ನು ಪರಿವರ್ತಿಸುವುದು ಮತ್ತು ಸುಮಾರು 15,000 ಮರಗಳನ್ನು ಕಡಿಯುವ ಪ್ರಸ್ತಾವಕ್ಕೆ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇಂತಹ ಕ್ರಮಗಳು ಈಗಾಗಲೇ ಅಪರೂಪವಾಗುತ್ತಿರುವ ಮತ್ತು ಮರುಸ್ಥಾಪಿಸಲಾಗದ ಅರಣ್ಯಗಳಿಗೆ ಭಾರೀ ಅಪಾಯಉಂಟುಮಾಡುತ್ತವೆ. ಶರಾವತಿ ಕಣಿವೆ ಅಭಯಾರಣ್ಯದ ಒಳಭಾಗದಲ್ಲಿರುವುದು ಹಾಗೂ ಮಧ್ಯ ಪಶ್ಚಿಮಘಟ್ಟಗಳ ಪರಿಸರ ಸಂವೇದನಾಶೀಲತೆಯನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆ ಮೇಲ್ನೋಟಕ್ಕೆ ಆಕರ್ಷಕವಾಗಿ ಕಂಡರೂ, ಪರಿಸರ ಹಾನಿಯ ಬೆಲೆತೆತ್ತು ಸಾಕಾರಗೊಳ್ಳುವ ಯೋಜನೆಯನ್ನು ರಾಜ್ಯ ಸರ್ಕಾರ ಕೈಬಿಡುವುದೇ ಒಳ್ಳೆಯದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.