ADVERTISEMENT

ಸಂಗತ: ಸಂಕುಚಿತ ಚಿಂತನೆ ಯಾರಿಗೆ ಹಿತ?

ಸಮಸ್ಯೆಗಳು ಸಂಕೀರ್ಣವಾದಷ್ಟೂ ಅವುಗಳಿಗೆ ಪರಿಹಾರ ಅರಸುವ ಚಿಂತನೆಯ ಹರವೂ ವಿಸ್ತಾರಗೊಳ್ಳಬೇಕಲ್ಲವೇ?

ಎಚ್.ಕೆ.ಶರತ್
Published 25 ಜುಲೈ 2022, 19:30 IST
Last Updated 25 ಜುಲೈ 2022, 19:30 IST
Sangatha 26-07-2022.jpg
Sangatha 26-07-2022.jpg   

ಯಾವುದೇ ಉತ್ಪನ್ನದ ವಿನ್ಯಾಸ ಮಾಡಲು ಹೊರಡುವವರು ಯಾವ ಹಂತದಲ್ಲಿ ಚಿಂತಿಸಬೇಕು ಎಂಬುದನ್ನು ಎಂಜಿನಿಯರ್‌ಗಳಿಗೆ ಮನಗಾಣಿಸುವ ಪರಿಕಲ್ಪನೆಯು ಎಂಜಿನಿಯರಿಂಗ್ ಸಿಸ್ಟಮ್ ಡಿಸೈನ್ ಎಂಬ ವಿಷಯದಲ್ಲಿದೆ. ಹಿಂದಿನಂತೆ ಆಯಾ ಉತ್ಪನ್ನದ ಹಂತದಲ್ಲಿ(product level) ಮಾತ್ರ ಚಿಂತಿಸಲು ಮುಂದಾದರೆ ಅದರಿಂದ ಎದುರಾಗುವ ಸಮಸ್ಯೆಗಳು ಏನೇನು ಎಂಬುದಕ್ಕೆ ಈ ಪರಿಕಲ್ಪನೆ ಕನ್ನಡಿ ಹಿಡಿಯುತ್ತದೆ. ಯಾವುದೇ ಸಮಸ್ಯೆಗೆ ಪರಿಹಾರ ಹುಡುಕುವಾಗ ನಮ್ಮ ಚಿಂತನೆಯು ವ್ಯವಸ್ಥೆಯ ಹಂತದಲ್ಲಿ (system level) ಇರಬೇಕೆ ವಿನಾ ಉತ್ಪನ್ನದ ಹಂತದಲ್ಲಿ ಅಲ್ಲ ಎಂಬುದು ಈ ಪರಿಕಲ್ಪನೆಯ ಸಾರ.

ಉದಾಹರಣೆಗೆ, ಕಾರು ವಿನ್ಯಾಸ ಮಾಡುವವರು ಕೇವಲ ಕಾರಿನ ಅಳತೆ, ಬಾಹ್ಯರೂಪ, ಕಾರ್ಯಕ್ಷಮತೆ, ಬಳಕೆದಾರ ಸ್ನೇಹಿ, ಸುರಕ್ಷತೆ, ಆರ್ಥಿಕ ಲಾಭ-ನಷ್ಟದ ಕುರಿತು ಚಿಂತಿಸದೆ, ರಸ್ತೆಗಳ ಗುಣಮಟ್ಟ, ವಾಹನ ನಿಲುಗಡೆಗೆ ಸ್ಥಳಾವಕಾಶದ ಲಭ್ಯತೆ, ಪರಿಸರ ಮಾಲಿನ್ಯ ಹೀಗೆ ತಾವು ರೂಪಿಸಲಿರುವ ಉತ್ಪನ್ನದ ಯಶಸ್ಸನ್ನು ನೇರ ಮತ್ತು ಪರೋಕ್ಷವಾಗಿ ಪ್ರಭಾವಿಸುವ ಎಲ್ಲ ಅಂಶ ಗಳನ್ನೂ ಪರಿಗಣಿಸಬೇಕಾಗುತ್ತದೆ. ನಗರ ಯೋಜನೆ ಪರಿಕಲ್ಪನೆ ಅನುಷ್ಠಾನಕ್ಕೆ ಬರುವ ಮುನ್ನ, ಜನ ತಮಗೆ ಸೇರಿದ ಜಾಗದಲ್ಲಿ ಮೊದಲು ಮನೆ ಕಟ್ಟಿಕೊಂಡು ಆನಂತರ ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ, ನೀರಿನ ಲಭ್ಯತೆ ಕುರಿತು ಚಿಂತಿಸುತ್ತಿದ್ದರು. ಆದರೆ ಇಂದು ಮನೆಗೆ ಅಗತ್ಯವಿರುವ ಪೂರಕ ವ್ಯವಸ್ಥೆಗಳನ್ನು ಮೊದಲು ಸೃಷ್ಟಿಸಿಕೊಂಡ ನಂತರವೇ ಮನೆಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಈ ಬದಲಾವಣೆಯು ರಿಯಲ್ ಎಸ್ಟೇಟ್ ಉದ್ಯಮದ ಬೆಳವಣಿಗೆಗೂ ಕಾರಣವಾಗಿರುವುದು ಕಣ್ಣೆದುರೇ ಇದೆ. ಇದು ಕೂಡ ಉತ್ಪನ್ನ (ಮನೆ) ಹಂತದ ಚಿಂತನೆಯಿಂದ ವ್ಯವಸ್ಥೆಯ (ನಗರ) ಹಂತದ ಚಿಂತನೆಗೆ ಹೊರಳಿದ್ದಕ್ಕೆ ಒಂದು ನಿದರ್ಶನ.

ಇಂದು ನಾವು ಎದುರಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಅರಸಬೇಕಿರುವುದು ವ್ಯವಸ್ಥೆಯ ಹಂತದಲ್ಲಿ ಎಂಬುದನ್ನು ಮನಗಾಣಿಸಲು ನಮ್ಮ ನೀತಿ ನಿರೂಪಕರು ಮುತುವರ್ಜಿ ತೋರದಿರು ವುದು ಕಣ್ಣೆದುರಿನ ವಾಸ್ತವ. ಇಂತಹದೊಂದು ಅರಿವು ನಮ್ಮಲ್ಲಿ ಸ್ವತಃ ಮೂಡದೇ ಹೋದಲ್ಲಿ ನಮ್ಮ ಬಹುತೇಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಕಷ್ಟಸಾಧ್ಯ.

ADVERTISEMENT

‘ಅನ್ಯ’ರನ್ನು ಗುರುತಿಸಿ, ಅವರ ಕುರಿತು ಉಳಿದ ವರಲ್ಲಿ ತಪ್ಪುಗ್ರಹಿಕೆ ಮೂಡಿಸುವ ಕಾರ್ಯಸೂಚಿ ಜಾರಿ ಯಲ್ಲಿರುವ ಹೊತ್ತಿನಲ್ಲಿ, ಮುಂದಾಗುವ ಪರಿಣಾಮಗಳ ಕುರಿತು ಚಿಂತಿಸದೆ ಕೋಮು ದ್ವೇಷದ ನಂಜು ಹಾಗೂ ಸುಳ್ಳು ಹರಡಲು ಪ್ರಭುತ್ವದೊಂದಿಗೆ ಕೈಜೋಡಿಸುತ್ತಿರುವವರು ಕೂಡ ವ್ಯವಸ್ಥೆಯ ಹಂತದಲ್ಲಿ ಚಿಂತಿಸಲು ಮುಂದಾಗಬೇಕಿದೆ. ಕೋಮು ದ್ವೇಷವೆಂಬುದು ಎರಡು ಅಲಗಿನ ಕತ್ತಿಯಾಗಿರುವುದರಿಂದ, ಒಂದು ಅಲಗು ಅನ್ಯರತ್ತ ಗುರಿ ಮಾಡಿದ್ದರೆ, ಮತ್ತೊಂದು ಅಲಗು ಉಳಿದವರನ್ನೂ ಗಾಸಿಗೊಳಿಸಲಿದೆ. ತಮ್ಮ ಮಕ್ಕಳನ್ನೂ ಒಳಗೊಳ್ಳುವ ಮುಂದಿನ ತಲೆಮಾರಿನ ಕುರಿತು ಕಾಳಜಿ ಹೊಂದಿರುವ ಯಾರೇ ಆದರೂ, ಕಾನೂನು ಸುವ್ಯವಸ್ಥೆಗೆ ಮನ್ನಣೆ ನೀಡುವ ಸಮಾಜ ನಿರ್ಮಿಸುವುದರೆಡೆಗೆ ಮುತುವರ್ಜಿ ತೋರಬೇಕು. ಅದರ ಬದಲಿಗೆ, ಅಧಿಕಾರದಾಸೆಗೆ ಧರ್ಮದ ಆಧಾರ ದಲ್ಲಿ ಮನಸ್ಸುಗಳನ್ನು ಒಡೆಯುವವರ ಒಡ್ಡೋಲಗಕ್ಕೆ ಕುಣಿಯುವ ಹೊಣೆಗೇಡಿತನ ಪ್ರದರ್ಶಿಸಬಾರದು. ನಾವು- ಅವರು ಎನ್ನುವುದು ಈ ಕಾಲಕ್ಕೆ ಸೂಕ್ತವಲ್ಲದ ಉತ್ಪನ್ನ ಹಂತದ ಚಿಂತನೆ. ಇದು, ರೋಗಗ್ರಸ್ತ ಸಮಾಜ ಸೃಷ್ಟಿಸಲಷ್ಟೇ ಶಕ್ತವಾದುದು.

ನಿರುದ್ಯೋಗ ಸಮಸ್ಯೆ ತೀವ್ರವಾದಷ್ಟೂ ಮಾರುಕಟ್ಟೆಯಲ್ಲಿ ಸರಕು- ಸೇವೆಗಳಿಗೆ ಬೇಡಿಕೆ ಕುಸಿಯುತ್ತ ಬಹುತೇಕರ ಆದಾಯದ ಮೂಲಗಳಿಗೂ ಕತ್ತರಿ ಬೀಳಲಿದೆ. ದುಡಿಯುವ ದಾರಿ ಕಂಡುಕೊಳ್ಳಲಾಗದೆ ಹತಾಶರಾಗುವವರು ಅಪರಾಧ ಕೃತ್ಯಗಳಲ್ಲಿ ತೊಡಗುವ ಸಾಧ್ಯತೆ ಹೆಚ್ಚಿರುವುದರಿಂದ ಕಾನೂನು- ಸುವ್ಯವಸ್ಥೆಗೂ ಧಕ್ಕೆಯಾಗಲಿದೆ. ನಿರುದ್ಯೋಗ ಸಮಸ್ಯೆ ಕೆಲಸವಿಲ್ಲದವರ ಸಮಸ್ಯೆ ಮಾತ್ರವಲ್ಲವೆಂಬ ಅರಿವು ದಯಪಾಲಿಸುವುದು ವ್ಯವಸ್ಥೆ ಹಂತದ ಚಿಂತನೆ.

ಜಾಗತಿಕ ತಾಪಮಾನ ಏರಿಕೆ, ತ್ಯಾಜ್ಯ ನಿರ್ವಹಣೆ ಹೀಗೆ ಬಹುತೇಕ ಸಮಸ್ಯೆಗಳಿಗೆ ಪರಿಹಾರವಿರುವುದು ವ್ಯವಸ್ಥೆ ಹಂತದ ಚಿಂತನೆಯಲ್ಲೇ ವಿನಾ ಉತ್ಪನ್ನ ಹಂತದ ಚಿಂತನೆಗಳಲ್ಲಿ ಅಲ್ಲ. ಉತ್ಪನ್ನ ಹಂತದ ಚಿಂತನೆಗಳು ಕೆಲವೊಮ್ಮೆ ಸೂಕ್ತ ಪರಿಹಾರವೆಂಬಂತೆ ತೋರಿದರೂ ಅವುಗಳ ಪರಿಣಾಮ ಸೀಮಿತವಾದುದು ಎಂಬುದೂ ವಾಸ್ತವವೇ. ತಮಗೆ ಲಾಭವಾಗುವುದಿ ದ್ದರೆ ಮೊದಲು ರಸ್ತೆ ನಿರ್ಮಿಸಿ, ನಂತರ ಚರಂಡಿ ನಿರ್ಮಾಣಕ್ಕಾಗಿ, ವಿದ್ಯುತ್ ಕಂಬಗಳ ಸ್ಥಳಾಂತರಕ್ಕಾಗಿ ಹೊಸದಾಗಿ ನಿರ್ಮಿಸಿದ ರಸ್ತೆಯನ್ನೇ ಅಗೆಸುವ ಅಧಿಕಾರಿಶಾಹಿ ಹಾಗೂ ಜನಪ್ರತಿನಿಧಿಗಳಿಗೆ, ವ್ಯವಸ್ಥೆಯ ಹಂತದ ಚಿಂತನೆಗಿಂತ ಘಟಕ ಹಂತದ (component level) ಚಿಂತನೆಯೇ ಹೆಚ್ಚು ಲಾಭದಾಯಕವಾಗಿ ತೋರುವುದು ಅಚ್ಚರಿಯ ಬೆಳವಣಿಗೆಯೇನಲ್ಲ. ಇದೇ ಪ್ರವೃತ್ತಿ ದೇಶ ಮತ್ತು ರಾಜ್ಯ ಆಳುವವರಲ್ಲೂ ಮೈಗೂಡಿರುವಾಗ ಸಮಸ್ಯೆಗಳನ್ನು ಸಮಗ್ರವಾಗಿ ಗ್ರಹಿಸಿ, ದೀರ್ಘಕಾಲೀನ ಪರಿಹಾರ ಒದಗಿಸುವರೆಂಬ ಭರವಸೆ ಹೊಂದಬಹುದೇ?

ಧರ್ಮ, ಭಾಷೆ, ಜಾತಿ, ಸಂಸ್ಕೃತಿ, ಹುಟ್ಟಿನ ಮೂಲ ಹೀಗೆ ಯಾವುದನ್ನಾದರೂ ಆಧರಿಸಿ ಒಡೆದು ಆಳುವ ನೀತಿ ಎಂದಿಗೂ ವ್ಯವಸ್ಥೆಯ ಹಂತದ ಚಿಂತನೆಗಳಿಗೆ ದಾರಿ ಮಾಡಿಕೊಡಲಾರದು. ಸಮಸ್ಯೆಗಳು ಸಂಕೀರ್ಣ ವಾದಷ್ಟೂ ಅವುಗಳಿಗೆ ಪರಿಹಾರ ಅರಸುವ ಚಿಂತನೆಯ ಹರವೂ ವಿಸ್ತಾರಗೊಳ್ಳಬೇಕಲ್ಲವೇ?

ಲೇಖಕ: ಸಹಾಯಕ ಪ್ರಾಧ್ಯಾಪಕ, ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.