ADVERTISEMENT

ಚುರುಮುರಿ | ಕಪ್ ಯಾರಿಗೆ?

ಮಣ್ಣೆ ರಾಜು
Published 29 ಸೆಪ್ಟೆಂಬರ್ 2020, 18:10 IST
Last Updated 29 ಸೆಪ್ಟೆಂಬರ್ 2020, 18:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

‘ರೀ, ಈ ಸಾರಿ ಐಪಿಎಲ್ ಕ್ರಿಕೆಟ್‍ನಲ್ಲಿ ಕಪ್ ಯಾರಿಗೆ?’ ಟೀವಿಯಲ್ಲಿ ಕ್ರಿಕೆಟ್ ನೋಡುತ್ತಿದ್ದ ಸುಮಿಗೆ ಕುತೂಹಲ.

‘ಟೂರ್ನಿ ಆರಂಭವಾಗುವ ಮೊದಲೇ ಕೊರೊನಾ ಐಪಿಎಲ್ ಕಪ್ ಗೆದ್ದುಬಿಟ್ಟಿದೆಯಲ್ಲ...’ ಅಂದ ಶಂಕ್ರಿ.

‘ಬೌಂಡರಿ ಬಾರಿಸಲಿಲ್ಲ, ಕ್ಯಾಚ್ ಹಿಡಿಯಲಿಲ್ಲ, ವಿಕೆಟ್ ಪಡೆಯಲಿಲ್ಲ ಕೊರೊನಾಗೆ ಯಾಕೆ ಕೊಡಬೇಕು ಕಪ್ಪೂ?’ ಸುಮಿಗೆ ಸಿಟ್ಟು.

ADVERTISEMENT

‘ಇಂಡಿಯಾ ಗ್ರೌಂಡ್‍ಗಳಲ್ಲಿ ಕೊರೊನಾ ಆಲ್‍ರೌಂಡರ್ ಆಟವಾಡಿ, ಐಪಿಎಲ್ ಕ್ರಿಕೆಟ್ ಫೀಲ್ಡಿಗಿಳಿಯಲೂ ಬಿಡದೆ ಸೋಲಿಸಿ ವಿದೇಶಕ್ಕೆ ಓಡಿಸಿದೆಯಲ್ಲ. ಪರದೇಶದ ಖಾಲಿ ಕ್ರೀಡಾಂಗಣದಲ್ಲಿ ನಮ್ಮ ಆಟಗಾರರು ಕ್ರಿಕೆಟ್ ಆಡುವಂಥ ದುಃಸ್ಥಿತಿಗೆ ತಂದೊಡ್ಡಿದೆಯಲ್ಲ’.

‘ಹೌದೂರೀ, ಐಪಿಎಲ್ ಕ್ರೀಡಾಂಗಣದಲ್ಲಿ ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸೋ ಪ್ರೇಕ್ಷಕರಿಲ್ಲ, ಚೈತನ್ಯ ತುಂಬುವ ಚಿಯರ್‌ ಗರ್ಲ್ಸ್‌ ಇಲ್ಲ, ಗ್ಯಾಲರಿಯಲ್ಲಿ ಕುಳಿತು ಸ್ಫೂರ್ತಿ ತುಂಬುವ ಆಟಗಾರರ ಪತ್ನಿ, ಪ್ರೇಯಸಿಯರಿಲ್ಲ. ಉಪ್ಪೂ ಇಲ್ಲ, ಖಾರವೂ ಇಲ್ಲ... ಈ ಐಪಿಎಲ್ ಕ್ರಿಕೆಟ್ಟು ಸಪ್ಪೆಯಾಗಿ, ಆಡೋರಿಗೂ ಬೋರಾಗುತ್ತಿದೆ’.

‘ಆದರೆ, ಐಪಿಲ್ ಕ್ರಿಕೆಟ್ ಶುರುವಾಗಿಬಿಟ್ಟರೆ ಜನ ನಮ್ಮನ್ನು ಮರೆತೇಬಿಡ್ತಾರೆ, ಟಿಆರ್‌ಪಿ ಬಿದ್ದು ಹೋಗುತ್ತೆ ಅಂತ ಟೀವಿ ಚಾನೆಲ್‍ಗಳು ಆತಂಕ
ಪಟ್ಟಿದ್ದವು. ಹೇಗೋ ಕೊರೊನಾ ಟೂರ್ನಿ, ಡ್ರಗ್ಸ್‌ ಪಂದ್ಯಾವಳಿಗಳು ಶುರುವಾಗಿ ಚಾನೆಲ್‍ಗಳ ಟಿಆರ್‌ಪಿಯನ್ನ ಎಂಆರ್‌ಪಿ ಮೀರಿಸಿ ಏರಿಸಿ ನೆರವಾಗಿವೆ’.

‘ಬೆಳ್ಳಗೆ ಹೊಳೆಯುತ್ತಿದ್ದ ಬೆಳ್ಳಿ ಪರದೆಗೆ ಕಪ್ಪು ಬಳಿದು ಕೊಳೆ ಮಾಡಿದ ಡ್ರಗ್ಸ್‌ ಕ್ರೀಡಾಪಟು
ಗಳಿಗೂ ಯಾವುದಾದ್ರೂ ಕಪ್ ಕೊಡಬೇಕೇನ್ರೀ?’

‘ಐಪಿಎಲ್ ಕ್ರಿಕೆಟ್ಟನ್ನೇ ಸೋಲಿಸುವ ಮಟ್ಟದಲ್ಲಿ ಭರ್ಜರಿ ಆಟವಾಡುತ್ತಿರುವ ಡ್ರಗ್ಸ್‌
ಪಟುಗಳಿಗೂ ಒಂದು ಕಪ್ ಕೊಡಬೇಕಾಗುತ್ತೆ...’

‘ಸಿಸಿಬಿಯವರು ಡ್ರಗ್ಸ್‌ ಆಟಗಾರರನ್ನು ಕ್ಯಾಚ್ ಹಿಡಿದು ಔಟ್ ಮಾಡಿ, ಪರಪ್ಪನ ಅಗ್ರಹಾರದ ಪೆವಿಲಿಯನ್‍ಗೆ ಕಳಿಸಿ, ಅಲ್ಲಿ ದೊಡ್ಡ ಕಪ್ಪು ಕೊಡ್ತಾರೆ, ಲಾ-ಕಪ್...’ ಟೀವಿ ಆಫ್ ಮಾಡಿ ಎದ್ದಳು ಸುಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.