ADVERTISEMENT

ಸಂಗತ| ಶಿಕ್ಷಕ ವೃತ್ತಿ: ಕೀಳರಿಮೆ ಏಕೆ?

ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಕರು ಸಿಗಬೇಕು, ಆದರೆ ಆ ಮಕ್ಕಳು ಮಾತ್ರ ಶಿಕ್ಷಕರಾಗಬಾರದು ಎಂಬ ವಿಚಿತ್ರ ಭಾವನೆ ಸಮಾಜದಲ್ಲಿ ಮನೆಮಾಡಿದೆ

ಡಾ.ನಿರಂಜನ ವಾನಳ್ಳಿ
Published 25 ಫೆಬ್ರುವರಿ 2020, 20:04 IST
Last Updated 25 ಫೆಬ್ರುವರಿ 2020, 20:04 IST
ಸಂಗತ
ಸಂಗತ   

ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರ ವಾರ್ಷಿಕೋತ್ಸವದಲ್ಲಿ ಹೀಗೊಮ್ಮೆ ಅತಿಥಿಯಾಗಿ ಭಾಗವಹಿಸಿದ್ದೆ. ಸಾವಿರಾರು ಪಾಲಕರು ಸಭೆಯಲ್ಲಿದ್ದರು. ಅವರಿಗೆ ‘ನಿಮ್ಮಲ್ಲಿ ಎಷ್ಟು ಜನ ನಿಮ್ಮ ಮಕ್ಕಳು ಶಿಕ್ಷಕರಾಗಲಿ ಎಂದು ಬಯಸುತ್ತೀರಿ’ ಎಂದು ಕೇಳಿದೆ. ಸಾವಿರಾರು ಜನರ ಮಧ್ಯೆ ಒಂದೋ ಎರಡೋ ಕೈಗಳು ಮಾತ್ರ ಮೇಲೆ ಬಂದವು. ನಮ್ಮ ಮಕ್ಕಳಿಗೆ ಅತ್ಯುತ್ತಮ ಶಾಲೆ, ಅತ್ಯುತ್ತಮ ಶಿಕ್ಷಕರು ದೊರೆಯುವುದು ನಮಗೆ ಬೇಕು, ಆದರೆ ನಮ್ಮ ಮಕ್ಕಳು ಮಾತ್ರ ಶಿಕ್ಷಕರಾಗಬಾರದು! ಇದು ನಮ್ಮ ಸಮಕಾಲೀನ ಸಮಾಜದ ದುರಂತ.

ಸಮಾಜದಲ್ಲಿ ಶಿಕ್ಷಕರಾಗುವವರನ್ನು ಗಮನಿಸಿದರೆ, ಬಯಸಿ ಬಯಸಿ ಶಿಕ್ಷಕರಾಗುವವರು ಎಷ್ಟು ಜನ ಎಂಬ ಪ್ರಶ್ನೆ ಮೂಡುತ್ತದೆ. ಈ ಪ್ರಶ್ನೆಯನ್ನು ಶಿಕ್ಷಕರ ದಿನದ ಸಭೆಯೊಂದರಲ್ಲಿ ಕೇಳಿದಾಗ, ಹೆಚ್ಚಿನ ಕೈಗಳು ಮೇಲೆ ಬರಲಿಲ್ಲ! ವಾಸ್ತವವೆಂದರೆ, ಬೇರೆ ಯಾವ ಕೋರ್ಸಿಗೂ ಅವಕಾಶ ಸಿಗದೆ ಕೊನೆಗೆ ಅನಿವಾರ್ಯವಾಗಿ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡವರ ಸಂಖ್ಯೆಯೇಹೆಚ್ಚಾಗಿರುತ್ತದೆ. ಅವರು ಹೊಟ್ಟೆಪಾಡಿಗೆ ಶಿಕ್ಷಕರಾಗಿ ಉಳಿಯುತ್ತಾರೆಯೇ ವಿನಾ ಕಲಿಸುವ ವೃತ್ತಿಯ ಮೇಲಿನ ಪ್ರೀತಿಯಿಂದಲ್ಲ. ಅಂಥವರು ಇನ್ನೊಂದು ಸಾವಿರ ರೂಪಾಯಿ ಹೆಚ್ಚು ಸಿಗುವ ಕೆಲಸವೊಂದು ಸಿಕ್ಕರೆ, ಸೇರಲು ಕೊನೆಯವರೆಗೂ ಸಿದ್ಧರಿರುತ್ತಾರೆ.

ಇದಕ್ಕೆ ಅವರನ್ನು ಆಕ್ಷೇಪಿಸುವಂತಿಲ್ಲ. ಸಮಾಜದಲ್ಲಿ ಶಿಕ್ಷಕ ವೃತ್ತಿ ಬಹಳ ಮುಖ್ಯವಾದರೂ ಆ ವೃತ್ತಿಯ ಬಗ್ಗೆ ಅವರಿಗೆ ಹೆಮ್ಮೆ ಮೂಡಿಸುವ ಪರಿಸರ ರೂಪಿಸಲು ನಾವು ವಿಫಲರಾಗಿದ್ದೇವೆ. ಮುಖ್ಯವಾಗಿ, ವ್ಯಕ್ತಿಯ ಗೌರವ ಅವರು ಗಳಿಸುವ ಸಂಬಳದ ಮೇಲೇ ನಿರ್ಧರಿತವಾಗುವ ಇಂದಿನ ಕಾಲದಲ್ಲಿ, ಶಿಕ್ಷಕ ವೃತ್ತಿಯು ಕೀಳರಿಮೆಯಿಂದ ನರಳುವಂತಾಗಿದೆ. ದಿನವಿಡೀ ಕೆಲಸ, ಕೆಲವೊಮ್ಮೆ ರಾತ್ರಿ ಮನೆಗೆ ಬಂದಮೇಲೂ ಶಾಲೆಯ ಕೆಲಸ ಮುಗಿಯುವುದಿಲ್ಲ.

ADVERTISEMENT

ಸರ್ಕಾರಿ ಶಾಲೆಯಲ್ಲಿ ದುಡಿಯುವ ಮತ್ತು ಖಾಸಗಿ ಶಾಲೆಯಲ್ಲಿ ದುಡಿಯುವ ಶಿಕ್ಷಕರಿಗೆ ಸಂಬಳದಲ್ಲಿ ಅಜಗಜಾಂತರ. ಸರ್ಕಾರಿ ಶಾಲೆಯ ಶಿಕ್ಷಕರು ಸಂಬಳದ ಮಟ್ಟಿಗೆ ಸುಖಿಗಳು. ಆದರೆ ಆ ಭಾಗ್ಯ, ಖಾಸಗಿ ಶಾಲೆಯಲ್ಲಿ ದುಡಿಯುವ ಶಿಕ್ಷಕರಿಗೆ ಇರುವುದಿಲ್ಲ. ಎಷ್ಟೋ ವೇಳೆ ಪ್ರತಿಷ್ಠಿತ ಶಾಲೆಗಳಲ್ಲಿ ಕೂಡಾ ಸಂಬಳದ ಪುಸ್ತಕಕ್ಕೆ ಸಹಿ ಮಾಡುವುದೇ ಬೇರೆ, ಕೈಗೆ ದೊರೆಯುವ ಸಂಬಳವೇ ಬೇರೆ. ಶಾಲೆ ನಡೆಸುವ ‘ಉದ್ಯಮಿಗಳು’ ಅಲ್ಲಿಯ ಶಿಕ್ಷಕರನ್ನು ಮಾತ್ರ ಕೂಲಿಗಳಂತೆ ಭಾವಿಸುವ ಹಾಗೆ ಕಾಣುತ್ತದೆ. ಖಾಸಗಿ ಶಾಲೆಗಳಲ್ಲಿ ಕಲಿಸುವ ಶಿಕ್ಷಕರಿಗೆ ದೊರೆಯುವ ನಿಜ ಸಂಬಳ ಕೇಳಿದರೆ ಅಯ್ಯೋ ಎನಿಸುತ್ತದೆ. ಕೆ.ಜಿ ತರಗತಿಯಿಂದ ಹಿಡಿದು ವಿಶ್ವವಿದ್ಯಾಲಯಗಳವರೆಗೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ನಡುವಿನ ಶಿಕ್ಷಕರ ಸಂಬಳದ ನಡುವಿನ ಅಂತರ ಉಳಿದೇ ಹೋಗುತ್ತದೆ.

ಸಮಾಜದಲ್ಲಿ ಎಲ್ಲರಿಗೂ ‘ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಕರು ಸಿಗಬೇಕು, ಆದರೆ ತಮ್ಮ ಮಕ್ಕಳು ಮಾತ್ರ ಶಿಕ್ಷಕರಾಗಬಾರದು’ ಎಂಬ ವಿಚಿತ್ರ ಭಾವನೆ ಮನೆಮಾಡಿರುವುದಕ್ಕೆ ಶಿಕ್ಷಕ ವೃತ್ತಿಗೆ ಅಂಟಿರುವ
ಈ ಕೀಳರಿಮೆಯೇ ಕಾರಣ. ಇದಕ್ಕೆ, ಹೆಚ್ಚಿನಸಂಖ್ಯೆಯಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಮಾಡುವ ಶಿಕ್ಷಕರಿಗೆ ಅವರ ಸೇವೆಗೆ ನ್ಯಾಯಸಮ್ಮತವಾದ ಸಂಬಳ ದೊರೆಯದಿರುವುದೇ ಮೂಲವಾಗಿದೆ. ಅಲ್ಲದೆ ಯಾವಾಗ ಬೇಕಾದರೂ ತಮ್ಮನ್ನು ಕೆಲಸದಿಂದ ತೆಗೆಯಬಹುದು ಎಂಬ ಆತಂಕ ಅವರನ್ನು ಸದಾ ಕಾಲವೂ ಕಾಡುತ್ತಿರುತ್ತದೆ.

ಉನ್ನತ ಶಿಕ್ಷಣಕ್ಕೆ ದೇಶದ ಅತ್ಯುತ್ತಮ ಪ್ರತಿಭೆಗಳನ್ನು ಸೆಳೆಯಬೇಕಾದರೆ ಹೆಚ್ಚಿನ ಸಂಬಳ-ಸಾರಿಗೆ
ಯನ್ನು ಉನ್ನತ ಶಿಕ್ಷಣದಲ್ಲಿ ಇರುವವರಿಗೆ ನೀಡಬೇಕು ಎಂಬ ವಾದವಿದೆ. ಅದೇ ಕಾರಣಕ್ಕೆ ಯುಜಿಸಿ ವೇತನಶ್ರೇಣಿ ಅತಿಹೆಚ್ಚಿನ ಮಟ್ಟದ್ದಾಗಿದೆ. ಆದರೆ ಸಮಾಜ ನಿರ್ಮಾಣದಲ್ಲಿ ಉನ್ನತ ಶಿಕ್ಷಣಕ್ಕಿಂತ ಪ್ರಾಥಮಿಕ ಶಿಕ್ಷಕರ ಪಾತ್ರವೇ ಅತಿ ಮುಖ್ಯವೂ ನಿರ್ಣಾಯಕವೂ ಆಗಿದ್ದೆಂದು ಉನ್ನತ ಶಿಕ್ಷಣದಲ್ಲಿ ಮೂರು ದಶಕಗಳ ಕಾಲ ಪಾಠ ಮಾಡಿದ ಮೇಲೆ ನನಗೆ ಸ್ಪಷ್ಟವಾಗಿ ಅರ್ಥವಾಗಿದೆ. ಪ್ರಾಥಮಿಕ ಶಿಕ್ಷಣವನ್ನು ಉನ್ನತ ಮಟ್ಟದಲ್ಲಿ ಇಡುವುದಕ್ಕೆ ಸೋತಿರುವುದೇ ನಮ್ಮ ಹಲವಾರು ಸಮಸ್ಯೆಗಳಿಗೆ ಮೂಲ ಕಾರಣ.
ಪ್ರಾಥಮಿಕ ಶಿಕ್ಷಣ ಸೋತರೆ ಆ ದೇಶಕ್ಕೆ ಭವಿಷ್ಯ ಇರುವುದಿಲ್ಲ. ಅಂದಮೇಲೆ ಅತಿ ಹೆಚ್ಚು ಸಂಬಳ
ನೀಡಿ ನಾವು ಅತ್ಯುನ್ನತ ಪ್ರತಿಭೆಗಳನ್ನು ಸೆಳೆಯಬೇಕಿರುವುದು ಶಾಲಾ ಶಿಕ್ಷಣಕ್ಕಾಗೇ ವಿನಾ ಉನ್ನತ ಶಿಕ್ಷಣಕ್ಕಲ್ಲ.

ಶ್ರೇಷ್ಠ ಪ್ರತಿಭೆಗಳು, ನೈಜ ಮಾನವೀಯ ಕಾಳಜಿ ಇರುವವರು ಪ್ರಾಥಮಿಕ ಶಿಕ್ಷಣಕ್ಕೆ ಬರುವಂತೆ ನಾವು ಮನವೊಲಿಸದಿದ್ದರೆ ಮುಂದಿನ ತಲೆಮಾರನ್ನು ನಾವೇ ಹಾಳು ಮಾಡಿದಂತೆ. ದುರಂತವೆಂದರೆ, ನಮ್ಮ ವಿಶ್ವವಿದ್ಯಾಲಯಗಳ ಬಗ್ಗೆ ನಡೆಯುವಷ್ಟು ಚರ್ಚೆಗಳು ಪ್ರಾಥಮಿಕ ಶಿಕ್ಷಣದ ಬಗ್ಗೆ ನಡೆಯುವುದೇ ಇಲ್ಲ. ಪ್ರಾಥಮಿಕ ಶಿಕ್ಷಕರಲ್ಲಿ ಇರುವ ಕೀಳರಿಮೆ ಹೋಗುವ ವಾತಾವರಣ ನಿರ್ಮಾಣವಾಗಿ, ತಮ್ಮ ಮಕ್ಕಳು ಶಿಕ್ಷಕರಾಗಲಿ ಎಂಬ ಹೆಮ್ಮೆಯು ಪಾಲಕರಲ್ಲಿ ಬೆಳೆಯದ ವಿನಾ ದೇಶದ ಪ್ರಾಥಮಿಕ ಶಿಕ್ಷಣಕ್ಕೆ ತಟ್ಟಿರುವ ಶಾಪ ನಿವಾರಣೆಯಾಗದು. ಅಷ್ಟೇ ಅಲ್ಲ, ನಾಗರಿಕ ಸಮಾಜವನ್ನು ನಿರ್ಮಿಸುವ ಪ್ರಯತ್ನವೂ ವಿಫಲವಾದೀತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.