ADVERTISEMENT

ಬಹುಸಂಸ್ಕೃತಿ ನಾಡಿಗೇಕೆ ಏಕರೂಪಿ ಪಠ್ಯ?

ಇಂತಹ ಕ್ರಮ, ಪ್ರಾದೇಶಿಕ ವೈಶಿಷ್ಟ್ಯಗಳನ್ನು ನೇಪಥ್ಯಕ್ಕೆ ಸರಿಸುತ್ತದೆ

ಮೀನಾಕ್ಷಿ ಬಾಳಿ
Published 25 ಮೇ 2020, 15:51 IST
Last Updated 25 ಮೇ 2020, 15:51 IST
ಏಕರೂಪಿ ಪಠ್ಯ ಅಗತ್ಯವೇ?
ಏಕರೂಪಿ ಪಠ್ಯ ಅಗತ್ಯವೇ?   

ವಿಶ್ವವಿದ್ಯಾಲಯಗಳ ಅಧ್ಯಯನ ಕ್ರಮ ಕುರಿತಂತೆ ರಾಜ್ಯ ಉನ್ನತ ಶಿಕ್ಷಣ ಸಚಿವರು ಇತ್ತೀಚೆಗೆ ಆದೇಶವೊಂದನ್ನು ಹೊರಡಿಸಿದ್ದಾರೆ. ಅದರಂತೆ, ಪದವಿ ಮತ್ತು ಸ್ನಾತಕೋತ್ತರ ಮಟ್ಟದಲ್ಲಿ ರಾಜ್ಯದಾದ್ಯಂತ ಏಕರೂಪಿ ಪಠ್ಯಕ್ರಮವನ್ನು ಸಿದ್ಧಪಡಿಸಲು ಸಮಿತಿಯೊಂದನ್ನು ರಚಿಸಲಾಗಿದೆ.

ಪ್ರಸ್ತುತ ನಮ್ಮ ಒಂದೊಂದು ವಿಶ್ವವಿದ್ಯಾಲಯವೂ ತನ್ನದೇ ಭಿನ್ನ ಪಠ್ಯ, ಪ್ರವಚನ ಮತ್ತು ಅಕಾಡೆಮಿಕ್ ಕ್ಯಾಲೆಂಡರ್ ಇಟ್ಟುಕೊಂಡಿದ್ದು, ಪರಸ್ಪರ ತಾಳಮೇಳ ಇಲ್ಲದಂತಾಗಿದೆ. ಪ್ರತೀ ವಿಶ್ವವಿದ್ಯಾಲಯವೂ ತನ್ನದೇ ಅಕಾಡೆಮಿಕ್ ವರ್ಷ ಹೊಂದಿರುವುದರಿಂದ, ಬೇರೆ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಕೈಗೊಳ್ಳಲು ಬಯಸುವವರಿಗೆ ಅವಕಾಶ ಇಲ್ಲದಂತಾಗಿದೆ; ಆದ್ದರಿಂದ ಈ ಎಲ್ಲ ಗೊಂದಲಗಳನ್ನು ನಿವಾರಿಸಲು ಹಾಗೂ ಇನ್ನೂ ಹಲವಾರು ಶೈಕ್ಷಣಿಕ ತರತಮಗಳನ್ನು ಇಲ್ಲವಾಗಿಸಲು ಏಕರೂಪಿ ಪಠ್ಯಕ್ರಮ ಸಹಕಾರಿ ಎಂಬ ಅಭಿಪ್ರಾಯ ಮೂಡಿಸಲಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಈ ತೆರನಾಗಿ ಪ್ರತೀ ವಿಶ್ವವಿದ್ಯಾಲಯದಲ್ಲಿನ ಭಿನ್ನ ಪಠ್ಯ, ಪ್ರವಚನಗಳಿಂದ ವೆಚ್ಚ ಸಿಕ್ಕಾಪಟ್ಟೆ ಹೆಚ್ಚಳವಾಗುತ್ತಿದೆ, ಅಷ್ಟಕ್ಕೂ ಉನ್ನತ ಶಿಕ್ಷಣ ವಲಯವು ಅನುತ್ಪಾದಕ ಕ್ಷೇತ್ರವಾಗಿದ್ದು, ಸರ್ಕಾರದ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ ಎಂಬ ವಾದವು ಈಗಾಗಲೇ ಗಟ್ಟಿಗೊಂಡಿದೆ. ಆದರೆ ವಾಸ್ತವ ಸಂಗತಿ ಹಾಗಿಲ್ಲ. ಇದು, ವಿಶಾಲ ಭೂಪ್ರದೇಶ, ಅಪಾರ ಮಾನವ ಸಂಪನ್ಮೂಲ, ಬಹುಸಂಸ್ಕೃತಿ ಮತ್ತು ಭಿನ್ನ ಕಲಿಕಾ ಸಾಮರ್ಥ್ಯ ಹೊಂದಿರುವ ನಾಡಿಗೆ ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ.

ಈವರೆಗೂ ನಾವು ಪ್ರತೀ ವಿಶ್ವವಿದ್ಯಾಲಯವನ್ನೂ ಪ್ರತ್ಯೇಕ ಘಟಕವೆಂದು ಪರಿಗಣಿಸಿದ್ದೆವು. ಅದರಂತೆ, ಆಯಾ ವಿಶ್ವವಿದ್ಯಾಲಯವು ತನ್ನ ಪ್ರಾದೇಶಿಕ ವೈಶಿಷ್ಟ್ಯ, ಭೌಗೋಳಿಕತೆ, ತನ್ನದೇ ಸಂಸ್ಕೃತಿ, ವಿದ್ಯಾರ್ಥಿಗಳ ಧಾರಣಾಶಕ್ತಿ ಇತ್ಯಾದಿಗಳನ್ನು ಪರಿಗಣಿಸಿ, ತನ್ನದೇ ಪಠ್ಯಕ್ರಮ, ಪಠ್ಯವಸ್ತು, ಪಠ್ಯಪುಸ್ತಕಗಳನ್ನು ರೂಪಿಸಿಕೊಳ್ಳುತ್ತಿತ್ತು. ಹೀಗೆ ಮಾಡಿಕೊಳ್ಳುವಲ್ಲಿ ತಲೆದೋರುತ್ತಿದ್ದ ಮಿತಿಗಳನ್ನೇ ನೆವ ಮಾಡಿಕೊಂಡು ಈಗ ಏಕರೂಪಿ ಪಠ್ಯಕ್ರಮ ರೂಪಿಸಲು ಹೊರಟಿರುವುದು ತೀರಾ ಅವೈಜ್ಞಾನಿಕ ಮತ್ತು ಅತಾರ್ಕಿಕ. ಈ ಕುರಿತು ನಾಡಿನ ಶಿಕ್ಷಣ ತಜ್ಞರು, ವಿಜ್ಞಾನಿಗಳು, ಭಾಷಾ ವಿದ್ವಾಂಸರು, ಸಮಾಜವಿಜ್ಞಾನಿಗಳು, ಅರ್ಥಶಾಸ್ತ್ರಜ್ಞರು ಹೀಗೆ ಎಲ್ಲರಿಂದಲೂ ಸಂವಾದ ಏರ್ಪಡಿಸಲಿ. ಇದರ ಸಾಧಕ- ಬಾಧಕಗಳ ಕುರಿತು ಚರ್ಚೆಯಾಗಲಿ.

ADVERTISEMENT

ಏಕೆಂದರೆ, ವಿಶಾಲವಾದ ಕರ್ನಾಟಕದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಹಲವಾರು ಭಾಷಿಕ, ಸಾಂಸ್ಕೃತಿಕ, ಪಾರಿಸರಿಕ, ಭೌಗೋಳಿಕ, ವ್ಯಾವಹಾರಿಕ ವೈಶಿಷ್ಟ್ಯಗಳಿವೆ. ಈ ಹಿನ್ನೆಲೆಯಲ್ಲಿಯೇ ನಾವು ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯ, ಉಪಭಾಷಿಕ ವೈಶಿಷ್ಟ್ಯ, ಬಹು ಸಂಸ್ಕೃತಿಯ ಮಹತ್ವಗಳನ್ನು ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತಾ ಬರುತ್ತಿದ್ದೇವೆ. ಅದಕ್ಕೆಂದೇ ವಿಶಾಲವಾದ ದೇಶ ಅಥವಾ ರಾಜ್ಯಗಳನ್ನು ಭಿನ್ನ ಆಡಳಿತ ವಿಭಾಗಗಳಾಗಿ ರೂಪಿಸಿಕೊಂಡು, ಗಣತಂತ್ರ ಪದ್ಧತಿಯನ್ನು ಅನುಸರಿಸಿಕೊಂಡು ಬರಲಾಗಿದೆ. ಈಗ ಇವೆಲ್ಲವನ್ನೂ ಮೂಲೆಗುಂಪು ಮಾಡುವ ಪ್ರಯತ್ನದಲ್ಲಿ ಏಕರೂಪಿ ಪಠ್ಯವೂ ಒಂದಾಗಿದೆ. ಇದರ ದೂರಗಾಮಿ ಪರಿಣಾಮವೆಂದರೆ, ಅಧಿಕಾರದ ಕೇಂದ್ರೀಕರಣ ಮತ್ತು ಕೆಲವರ ಹಿತಾಸಕ್ತಿ ರಕ್ಷಣೆಯೇ ಆಗಿರುತ್ತದೆ.

ಇಂತಹ ಕ್ರಮದಿಂದ ಪ್ರಾದೇಶಿಕ ವೈಶಿಷ್ಟ್ಯಗಳು ನೇಪಥ್ಯಕ್ಕೆ ಸರಿಯುತ್ತವೆ. ಮೇಲ್ವರ್ಗ, ಮೇಲ್ಜಾತಿಯ ಅಲ್ಪಸಂಖ್ಯಾತರ ಹಿತಾಸಕ್ತಿ ಕಾಪಾಡುವಂತಹ ನಡೆಗಳು ಮುಂಚೂಣಿಗೆ ಬರುತ್ತವೆ. ಈಗಾಗಲೇ ಈ ಅವಾಂತರಗಳನ್ನು ನಾವು ಉತ್ತರ ಕರ್ನಾಟಕದ ಜನ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಮಂಡಳಿಗಳಲ್ಲಿ ಅನುಭವಿಸುತ್ತಿದ್ದೇವೆ. ಈ ಹಂತದ ಪಠ್ಯಗಳಲ್ಲಿ ನಮ್ಮ ಪ್ರದೇಶದ ಭಾಷೆ, ಬದುಕು, ಸಂಸ್ಕೃತಿಯನ್ನು ದೂರವಾಗಿಸಿ ನಾಡಿನ ವೈವಿಧ್ಯವನ್ನು ಅಪ್ರಧಾನವಾಗಿಸಲಾಗಿದೆ. ಸಮಾಜವಿಜ್ಞಾನ, ನೈಸರ್ಗಿಕ ವಿಜ್ಞಾನ, ವಾಣಿಜ್ಯ ಶಾಸ್ತ್ರ, ಭಾಷಾ ನಿಕಾಯ ಹೀಗೆ ಎಲ್ಲ ಜ್ಞಾನಶಿಸ್ತುಗಳಲ್ಲಿಯೂ ಪ್ರಾದೇಶಿಕ ಅಸಮತೋಲನ, ಸಾಮಾಜಿಕ ಅಸಮಾನತೆ, ಅವ್ಯವಹಾರ ತಾನೇ ತಾನಾಗಿ ವಿಜೃಂಭಿಸುತ್ತಿವೆ. ಹೀಗಾಗಿಯೇ ಈ ಭಾಗದ ವಿದ್ಯಾರ್ಥಿಗಳು ಪ್ರತೀ ವರ್ಷದ ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿ ಇರುವುದು ಆಕಸ್ಮಿಕವೇನಲ್ಲ.

ನಾವು ಪರಿಸರ ವಿಜ್ಞಾನದಲ್ಲಿ ಪಶ್ಚಿಮ ಘಟ್ಟಗಳ ಕುರಿತು ಓದಿದಂತೆ ಇವತ್ತಿಗೂ ಉತ್ತರ ಕರ್ನಾಟಕ ಹಾಗೂ ಅಂಚಿನ ಕರ್ನಾಟಕದ ಒಣ ಬೇಸಾಯದ ಭೂ ಲಕ್ಷಣ, ಇಲ್ಲಿನ ಬೆಳೆಗಳು, ಅವುಗಳ ಪೌಷ್ಟಿಕತೆ, ಪ್ರಾದೇಶಿಕ ಧಾರಣಾಶಕ್ತಿ ಇತ್ಯಾದಿಗಳನ್ನು ಅಧ್ಯಯನ ವಸ್ತು ಆಗಿಸಿಯೇ ಇಲ್ಲ. ವಿಪುಲವಾಗಿರುವ ಭಾಷಿಕ ವೈಶಿಷ್ಟ್ಯಗಳು, ಸಾಂಸ್ಕೃತಿಕ ಸಂಕಥನಗಳು, ಭಿನ್ನ ಸಾಮಾಜಿಕ ಸ್ವರೂಪಗಳು, ವಿಭಿನ್ನ ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವ ರಾಜಕೀಯ ನಡೆಗಳನ್ನು ಅಧ್ಯಯನಕ್ಕೆ ಒಳಪಡಿಸಿಲ್ಲ. ಏಕೆಂದರೆ ಈವರೆಗಿನ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಮಟ್ಟದಲ್ಲಿ ಇವುಗಳನ್ನು ಪರಿಗಣಿಸಿಯೇ ಇಲ್ಲ. ಪಠ್ಯದ ಕೇಂದ್ರೀಕರಣವೇ ಇದಕ್ಕೆಲ್ಲ ಕಾರಣ ಎಂಬುದನ್ನು ಮರೆಯಬಾರದು.

ಇನ್ನೇನು ಪದವಿ, ಸ್ನಾತಕೋತ್ತರ ಮಟ್ಟದಲ್ಲಾದರೂ ವಿಶ್ವಾತ್ಮಕ ಕ್ಯಾನ್‌ವಾಸಿನಲ್ಲಿ ಸ್ಥಳೀಯತೆಯನ್ನು ಮುಖಾಮುಖಿಯಾಗಿಸಬಲ್ಲ ಚಿಕ್ಕ ಸಾಧ್ಯತೆ ಇತ್ತು. ಈಗ ಅದನ್ನೂ ಹಾಳುಮಾಡಲು ಹೊರಟಿರುವುದು ಸರಿಯಲ್ಲ. ಕರ್ನಾಟಕದ ಇತರ ಭಾಗದ ಒಟ್ಟಾರೆ ಬದುಕು-ಬವಣೆಯನ್ನು ಅಲಕ್ಷಿಸುವ ಏಕರೂಪಿ ಪಠ್ಯವು ಪ್ರಾದೇಶಿಕ ಅಸ್ಮಿತೆಗೆ ಧಕ್ಕೆ ತರುತ್ತದೆ. ಹೀಗಾಗಿ, ಏಕರೂಪಿ ಪಠ್ಯದ ಸರ್ವಾಧಿಕಾರವು ಸ್ವೀಕಾರಾರ್ಹವಲ್ಲ ಎಂಬುದನ್ನು ಒತ್ತಿ ಹೇಳಬೇಕಾಗಿದೆ.

ಲೇಖಕಿ: ಕನ್ನಡ ಪ್ರಾಧ್ಯಾಪಕಿ,ವಿ.ಜಿ. ಮಹಿಳಾ ಕಾಲೇಜು, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.