ADVERTISEMENT

‘ಶಕ್ತಿ ಭಂಡಾರ’: ಆಗಲಿ ಗರಿಷ್ಠ ಬಳಕೆ

ವಾತಾವರಣವನ್ನು ಕೊಳೆ ಮಾಡದ ಗಾಳಿ ವಿದ್ಯುತ್ ಉತ್ಪಾದನೆಗೆ ಮತ್ತು ಬಳಕೆಗೆ ಜಗತ್ತಿನ ಎಲ್ಲ ರಾಷ್ಟ್ರಗಳೂ ಒತ್ತು ನೀಡಿವೆ

ಗುರುರಾಜ್ ಎಸ್.ದಾವಣಗೆರೆ
Published 14 ಜೂನ್ 2020, 21:28 IST
Last Updated 14 ಜೂನ್ 2020, 21:28 IST
ಪವನ ಶಕ್ತಿ
ಪವನ ಶಕ್ತಿ   

ನಮ್ಮ ಸಂಸ್ಕೃತಿಯ ಪ್ರಕಾರ ‘ಗಾಳಿ’ ಪಂಚಭೂತಗಳಲ್ಲೊಂದು. ಹನುಮಂತನನ್ನು ಪವನಪುತ್ರ ಎನ್ನುವ ನಮ್ಮ ಪುರಾಣಗಳು, ಗಾಳಿಗೆ ದೈವತ್ವದ ಸ್ಥಾನ ನೀಡಿವೆ. ನಮ್ಮ ಸುತ್ತ ಬೀಸುವ ಗಾಳಿ ಕೇವಲ ಅನಿಲಗಳ ಸಮೂಹವಲ್ಲ. ಅದು ಶಕ್ತಿ ಭಂಡಾರ. ವಿದ್ಯುತ್ತಿನ ಆಗರ. ಸ್ವಚ್ಛಂದ ಬೀಸುವ ಗಾಳಿಯು ವಿದೇಶಿ ವಿನಿಮಯ ಗಳಿಸಿಕೊಡುವ ಸರಕು. ಪರಿಶುದ್ಧ ಬದುಕಿನ ಸಂಕೇತವೂ ಆಗಿರುವ ಶುದ್ಧ ಗಾಳಿ, ಬದುಕಿನ ಆಧಾರವೂ ಹೌದು.

ಬಯಲು, ನೀರು, ಪರ್ವತ, ಮರುಭೂಮಿಯ ಮೇಲೆ ಬೀಸುವ ಗಾಳಿಯನ್ನು ತಡೆದು, ವಿದ್ಯುತ್ ಉತ್ಪಾದಿಸಿ, ಜನರಿಗೆ ಬೇಕಾದ ಬೆಳಕು ಮತ್ತು ಇತರ ಕೆಲಸ ಮಾಡುವ ಶಕ್ತಿ ಒದಗಿಸುತ್ತಿರುವ ಸರ್ಕಾರಗಳು, ಗಾಳಿಯಿಂದ ಒದಗುವ ಶಕ್ತಿಯನ್ನು ‘ಕ್ಲೀನ್ ಅಂಡ್ ಗ್ರೀನ್ ಎನರ್ಜಿ’ ಎಂದು ಕರೆಯುತ್ತವೆ. ಗಾಳಿ ಶಕ್ತಿಯ ಪ್ರಾಮುಖ್ಯ ಮತ್ತು ಉಪಯೋಗ ತಿಳಿಸುವ ‘ಗಾಳಿ ದಿನ’ವನ್ನು ಪ್ರತೀ ಜೂನ್ 15ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಭೂಮಿಯ ಬಿಸಿ ಏರದಂತೆ ತಡೆಯಲು ಮಾಡಿಕೊಂಡ ಪ್ಯಾರಿಸ್ ಒಪ್ಪಂದದಂತೆ, ವಾತಾವರಣವನ್ನು ಕೊಳೆ ಮಾಡದ ಗಾಳಿ ವಿದ್ಯುತ್ ಉತ್ಪಾದನೆಗೆ ಮತ್ತು ಬಳಕೆಗೆ ಜಗತ್ತಿನ ಎಲ್ಲ ರಾಷ್ಟ್ರಗಳೂ ಒತ್ತು ನೀಡಿವೆ. ವಿಶ್ವದ 91 ರಾಷ್ಟ್ರಗಳು ಪವನ ವಿದ್ಯುತ್ ಸ್ಥಾವರ ಸ್ಥಾಪಿಸಿ ಸಾಕಷ್ಟು ಶಕ್ತಿ ಸಂಪಾದಿಸುತ್ತ ಮಾಲಿನ್ಯ ಕಡಿತಗೊಳಿಸಿವೆ.

225 ಗಿ.ವಾ. ಉತ್ಪಾದನಾ ಸಾಮರ್ಥ್ಯ ಹೊಂದಿರುವ ಚೀನಾ, ವಿಶ್ವದಲ್ಲಿ ಉತ್ಪಾದನೆಯಾಗುವ ಒಟ್ಟು ಪವನ ವಿದ್ಯುತ್‍ನ ಶೇ 30ರಷ್ಟು ಪಾಲು ಹೊಂದಿ ನಂಬರ್ ಒನ್ ಸ್ಥಾನದಲ್ಲಿದೆ. 96.4 ಗಿ.ವಾ. ಸಾಮರ್ಥ್ಯದ ಅಮೆರಿಕ, 59.3 ಗಿ.ವಾ. ಸಾಮರ್ಥ್ಯದ ಜರ್ಮನಿ ಕ್ರಮವಾಗಿ ಎರಡು ಹಾಗೂ ಮೂರನೆಯ ಸ್ಥಾನದಲ್ಲಿವೆ. 37.66 ಗಿ.ವಾ. ಸಾಮರ್ಥ್ಯದ ನಾವು ನಾಲ್ಕರಲ್ಲಿದ್ದೇವೆ.

ADVERTISEMENT

ನಮ್ಮಲ್ಲಿ ದೊರೆಯುವ ಕಳಪೆ ಕಲ್ಲಿದ್ದಲನ್ನು ಉರಿಸುವುದರಿಂದ ಕೊಳೆ ಜಾಸ್ತಿ, ಮುಂಗಾರಿನ ಸಮಯದಲ್ಲಿ ಮಾತ್ರ ಜಲ ವಿದ್ಯುತ್ ಉತ್ಪಾದನೆ ಸಾಧ್ಯ, ಪರಮಾಣು ಸ್ಥಾವರ ಸುರಕ್ಷಿತವಲ್ಲ ಎಂಬ ಮಿತಿಗಳನ್ನು ಕೇಂದ್ರ ಸರ್ಕಾರ ಗಮನದಲ್ಲಿ ಇಟ್ಟುಕೊಂಡಿದೆ. ಏರುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಅಕ್ಷಯ ಮೂಲಗಳನ್ನು ಬಳಸಿಕೊಳ್ಳುವ ಮನಸ್ಸು ಮಾಡಿ, 2015ರಲ್ಲಿ ಯೋಜನೆ ಪ್ರಾರಂಭಿಸಿ, ಸೂರ್ಯನಿಂದ 100, ಗಾಳಿಯಿಂದ 60, ಜೀವಿಶ್ಯೇಷದಿಂದ (ಬಯೊಮಾಸ್‌) 10 ಹಾಗೂ ನೀರಿನಿಂದ 5 ಹೀಗೆ ಒಟ್ಟು 175 ಗಿ.ವಾ. ವಿದ್ಯುತ್ ಉತ್ಪಾದನೆಯ ಗುರಿ ಹೊಂದಿದ್ದು, ಇನ್ನೆರಡು ವರ್ಷಗಳಲ್ಲಿ ಅದನ್ನು ಸಾಧಿಸಬೇಕಿದೆ. ಯೋಜನೆಯ ಅನುಷ್ಠಾನಕ್ಕೆ ಮಿನಿಸ್ಟ್ರಿ ಆಫ್ ನ್ಯೂ ಅಂಡ್ ರಿನ್ಯುವಬಲ್ ಎನರ್ಜಿ(ಎಂ.ಎನ್.ಆರ್.ಇ) ಎಂಬ ಹೊಸ ಸಚಿವಾಲಯವನ್ನೇ ಸ್ಥಾಪಿಸಲಾಗಿದೆ.

ಪ್ಯಾರಿಸ್ ಒಪ್ಪಂದಕ್ಕೆ ಸಹಿ ಮಾಡಿರುವ ನಾವು, 2030ರ ವೇಳೆಗೆ ನಮ್ಮ ಬಳಕೆಯ ಶುದ್ಧ ವಿದ್ಯುತ್‍ನ ಪ್ರಮಾಣ ಶೇ 40 ಇರಲಿದೆ ಎಂದು ಹೇಳಿದ್ದೇವೆ. ಅಕ್ಷಯ ಮೂಲಗಳಿಂದ ಈಗ ನಾವು ಪಡೆಯುತ್ತಿರುವ ಶಕ್ತಿ ಕೇವಲ ಶೇ 10ರಷ್ಟಿದೆ.

ಗಾಳಿ ವಿದ್ಯುತ್‍ನ ವಾರ್ಷಿಕ ಉತ್ಪಾದನೆಯಶೇ 70ರಷ್ಟು ಭಾಗ ಮುಂಗಾರು ಮಾರುತದ ಐದು ತಿಂಗಳಿನಲ್ಲೇ ಆಗುತ್ತದೆ. ಆಧುನಿಕ ತಂತ್ರಜ್ಞಾನ ಬಳಸಿ ಹೆಚ್ಚು ಉತ್ಪಾದನೆ ಮಾಡುವ ಧನಿಕ ರಾಷ್ಟ್ರಗಳು, ಮುಖ್ಯವಾಗಿ ಸೋರಿಕೆ ತಡೆಯುತ್ತವೆ. ನಮ್ಮಲ್ಲಿ ಮಾರ್ಗ ಮಧ್ಯದಲ್ಲಿಯೇ ಶೇ 20ರಷ್ಟು ವಿದ್ಯುತ್ತು ಸೋರಿ ಹೋಗುತ್ತದೆ.

ದೇಶದ ಒಟ್ಟು ಗಾಳಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ ತಮಿಳುನಾಡು ಶೇ 29ರಷ್ಟು ಭಾಗ ಹೊಂದಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಕರ್ನಾಟಕ, ಆಂಧ್ರಪ್ರದೇಶ, ಮಧ್ಯಪ್ರದೇಶ, ತೆಲಂಗಾಣ ಮತ್ತು ಕೇರಳವು ಗಾಳಿ ವಿದ್ಯುತ್ ಉತ್ಪಾದನೆಗೆ ಹೇಳಿ ಮಾಡಿಸಿದ ರಾಜ್ಯಗಳೆನಿಸಿದ್ದು, ಹೆಚ್ಚು ಗಾಳಿ ಬೀಸುವ ಕನ್ಯಾಕುಮಾರಿ, ಜೈಸಲ್ಮೇರ್, ಸಾಂಗ್ಲಿ, ಸತಾರ, ಧುಲೆ, ಬೆಳಗುಪ್ಪ, ತಿರುಪ್ಪೂರ್, ಚಿತ್ರದುರ್ಗ, ಗದಗ, ಜಸ್ದಾನ್, ಲಂಬಾ, ಚೆನ್ನೈ ಜಿಲ್ಲೆಗಳಲ್ಲಿ ವಿವಿಧ ಶಕ್ತಿಯ ಸಮುದ್ರ ಸ್ಥಾವರ ಮತ್ತು ಭೂಮಿ ಸ್ಥಾವರ ಗಾಳಿ ಗಿರಣಿಗಳನ್ನು ಸ್ಥಾಪಿಸಿ ವಿದ್ಯುತ್ ಪಡೆಯಲಾಗುತ್ತಿದೆ.

ತಮಿಳುನಾಡು ಮತ್ತು ಗುಜರಾತ್‍ನ ಕರಾವಳಿಯಲ್ಲೇ ಸುಮಾರು 70 ಗಿ.ವಾ. ಸಮುದ್ರ ಸ್ಥಾವರ ವಿದ್ಯುತ್ ಉತ್ಪಾದನೆ ಸಾಧ್ಯವಿದೆ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವಿಂಡ್ ಎನರ್ಜಿ ಹೇಳಿದೆ. ಕೇಂದ್ರ ಸರ್ಕಾರವು ಕ್ಲೀನ್ ಎನರ್ಜಿ ಪಡೆಯಲು ನಾಲ್ಕು ಲಕ್ಷ ಕೋಟಿ ರೂಪಾಯಿ ವ್ಯಯಿಸುತ್ತಿದೆ. ನಾಗರಿಕರು ಸಹ ತಂತಮ್ಮ ಮನೆಗಳ ಮೇಲೆ ಗಾಳಿ ಗಿರಣಿ ಸ್ಥಾಪಿಸಿಕೊಂಡು ಮನೆಗೆ ಬೇಕಾದ ವಿದ್ಯುತ್ ಪಡೆಯಬಹುದಾಗಿದೆ. ಮೇಕ್ ಇನ್ ಇಂಡಿಯಾ ಮೂಲದ ಆರ್ಕಿಮಿಡೀಸ್ ಗ್ರೀನ್ ಎನರ್ಜಿ ಕಂಪನಿಯ ಕಡಿಮೆ ತೂಕದ, ಡಿಶ್ ಆ್ಯಂಟೆನಾ ಗಾತ್ರದ ಗಾಳಿ ಯಂತ್ರವು ವಾರ್ಷಿಕ 1,500 ಕಿ.ವಾ. ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಅದನ್ನು ತಾರಸಿ ಸೋಲಾರ್ ಪ್ಯಾನೆಲ್‍ಗೆ ಜೋಡಿಸಿಕೊಂಡರೆ, ಮನೆಗೆ ಬೇಕಾದ ವಿದ್ಯುತ್ ವರ್ಷಪೂರ್ತಿ ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.