ಸಂಗತ: ‘ನೆಟ್ ಜೀರೊ’ ಮತ್ತು ಪವನ ವಿದ್ಯುತ್
ಪವನ ವಿದ್ಯುತ್ ಸ್ಥಾವರಗಳ ರೆಕ್ಕೆಗಳಿಗೆ ಭರಪೂರ ಗಾಳಿಯ ಮೇವು ನೀಡುವ ಮುಂಗಾರು ಚುರುಕಾಗುತ್ತಿದ್ದಂತೆ, ಗಾಳಿಯಿಂದ ವಿದ್ಯುತ್ ಉತ್ಪಾದಿಸುವ ಕಂಪನಿಗಳು ಹೆಚ್ಚಿನ ಉತ್ಪಾದನೆಯ ಉಮೇದಿನಲ್ಲಿವೆ. ದೇಶದಲ್ಲಿ ಒಟ್ಟು ಪವನ ವಿದ್ಯುತ್ ಉತ್ಪಾದನೆಯ ಮುಕ್ಕಾಲು ಭಾಗ ಮುಂಗಾರಿನ ಐದು ತಿಂಗಳಲ್ಲೇ ಆಗುತ್ತದೆ. ಪ್ಯಾರಿಸ್ ಒಪ್ಪಂದದಂತೆ ‘ಶೂನ್ಯ ಇಂಗಾಲ ಉತ್ಸರ್ಜನೆ’ (ನೆಟ್ ಜೀರೊ ಎಮಿಷನ್ಸ್) ಸಾಧಿಸುವ ನಮ್ಮ ಗುರಿಸಾಧನೆಗೆ ಪವನ ವಿದ್ಯುತ್ ಶಕ್ತಿಯು ಪೂರಕವಾಗಿದೆ.
ಇನ್ನೈದು ವರ್ಷಗಳಲ್ಲಿ ನಮ್ಮ ಒಟ್ಟು ವಿದ್ಯುತ್ ಉತ್ಪಾದನೆಯ ಶೇಕಡ 40ರಷ್ಟು ಬಿಸಿಲು ಮತ್ತು ಗಾಳಿಯಿಂದ ಲಭಿಸಬೇಕಿದೆ. ಈಗ ಲಭಿಸುತ್ತಿರುವುದು ಶೇ 20ರಷ್ಟು ಮಾತ್ರ. ಹೀಗಾದಲ್ಲಿ ಗಾಳಿ ವಿದ್ಯುತ್ ಉತ್ಪಾದನೆ ನೂರು ಗಿಗಾ ವಾಟ್ ತಲಪುವುದೂ ಕಷ್ಟ. ಸರ್ಕಾರದ ಅಪಕ್ವ ನೀತಿಗಳು ಸೇರಿದಂತೆ, ಬಂಡವಾಳದ ಕೊರತೆ ಮತ್ತು ಉದ್ಯಮಿಗಳ ನಿರುತ್ಸಾಹ ಪವನ ವಿದ್ಯುತ್ ಕ್ಷೇತ್ರದ ಹಿನ್ನಡೆಗೆ ಕಾರಣವಾಗಿವೆ. ಗಾಳಿಗಿರಣಿ ನಿರ್ಮಿಸಲು ಎತ್ತರದ, ಹೆಚ್ಚು ಗಾಳಿ ಬೀಸುವ ವಿಶಾಲವಾದ ಜಾಗ ಬೇಕು. ಈ ಜಾಗಗಳು ಕಾಡಿನ ಅಥವಾ ಸಂರಕ್ಷಿತ ಅರಣ್ಯಗಳ ಹತ್ತಿರ ಇರಬಾರದು. ಗಾಳಿಗಿರಣಿ ನಿರ್ಮಾಣಕ್ಕೆ ಪರಿಸರ ಇಲಾಖೆಯ ಪರವಾನಗಿ ಮತ್ತು ಕ್ಲಿಯರೆನ್ಸ್ ಎರಡೂ ಬೇಕು.
ಪವನ ವಿದ್ಯುತ್ ಉತ್ಪಾದನೆಯಲ್ಲಿ ಗುಜರಾತ್ (12 ಗಿ.ವಾ) ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ತಮಿಳುನಾಡು 11.3 ಗಿ.ವಾ ಮತ್ತು ಕರ್ನಾಟಕ 6.7 ಗಿ.ವಾ ಉತ್ಪಾದನೆಯೊಂದಿಗೆ ನಂತರದ ಸ್ಥಾನಗಳಲ್ಲಿವೆ. ಜಗತ್ತಿನ ಗಾಳಿವಿದ್ಯುತ್ ಉತ್ಪಾದನೆಯ ಒಟ್ಟು ಸ್ಥಾಪಿತ ಸಾಮರ್ಥ್ಯವು 1,174 ಗಿ.ವಾ ದಾಟಿದೆ. ‘ಕ್ಲೀನ್ ಆ್ಯಂಡ್ ಗ್ರೀನ್ ಎನರ್ಜಿ’ ಖ್ಯಾತಿಯ ಪವನ ವಿದ್ಯುತ್ ಕ್ಷೇತ್ರದಲ್ಲಿ ಚೀನಾ 561.5 ಗಿ.ವಾ ಸ್ಥಾಪಿತ ಸಾಮರ್ಥ್ಯದೊಂದಿಗೆ ವಿಶ್ವದಲ್ಲಿ ನಂಬರ್ 1 ಸ್ಥಾನದಲ್ಲಿದೆ. ಅಮೆರಿಕ (154.5 ಗಿ.ವಾ) ಮತ್ತು ಜರ್ಮನಿ (72.5 ಗಿ.ವಾ) ನಂತರದಲ್ಲಿ ಭಾರತದ್ದು (48.55 ಗಿ.ವಾ) ನಾಲ್ಕನೇ ಸ್ಥಾನ.
ನಮ್ಮ 7,600 ಕಿ.ಮೀ. ಉದ್ದದ ಕರಾವಳಿಯ, ಹನ್ನೆರಡು ನಾಟಿಕಲ್ ಮೈಲ್ ಒಳಗಿನ ಹೆಚ್ಚು ಆಳವಿರದ ಸಮುದ್ರದ ನೀರಿನಲ್ಲಿ ಲೆಕ್ಕವಿಲ್ಲದಷ್ಟು ಗಾಳಿಗಿರಣಿ ನಿರ್ಮಿಸಲು ಅವಕಾಶವಿದೆ. ಇದನ್ನು ‘ಆಫ್‌ಶೋರ್ ವಿಂಡ್ ಮಿಲ್’ ಎನ್ನುತ್ತೇವೆ. ಇವುಗಳಿಂದ ನೂರು ಗಿ.ವಾ ವಿದ್ಯುತ್ ಶಕ್ತಿ ಉತ್ಪಾದಿಸಬಹುದು. ಈ ವಿದ್ಯುತ್ ಉತ್ಪಾದಿಸಿದ ಜಾಗದಲ್ಲೇ ಬಳಕೆಯಾದರೆ ಸಾಗಣೆಯ ಅನಗತ್ಯ ಖರ್ಚು ಮತ್ತು ಮಾಲಿನ್ಯ ತಪ್ಪುತ್ತವೆ.
ಮೊದಲ ಗಾಳಿಗಿರಣಿಯು 1180ರಲ್ಲಿ ಯುರೋಪಿನ ನಾರ್ಮೆಂಡಿಯಲ್ಲಿ ಬಳಕೆಯಲ್ಲಿತ್ತು. 1887ರಲ್ಲಿ ಸ್ಕಾಟ್ಲೆಂಡಿನ ಜೇಮ್ಸ್ ಬ್ಲಿತ್ ಪ್ರಥಮ ಬಾರಿಗೆ ಸುಧಾರಿತ ಗಾಳಿಗಿರಣಿ ರಚಿಸಿ ವಿದ್ಯುತ್ ಉತ್ಪಾದಿಸಿದ್ದ. 1920–30ರ ದಶಕದಲ್ಲಿ ಅಮೆರಿಕದ ಗ್ರಾಮೀಣ ಪ್ರದೇಶಗಳಲ್ಲಿ ಒಂದು ಕಿಲೊವಾಟ್‌ಗಿಂತ ಕಡಿಮೆ ಸಾಮರ್ಥ್ಯದ ಗಾಳಿಗಿರಣಿಗಳು ಕೆಲಸ ಮಾಡುತ್ತಿದ್ದವು. 1930ರಲ್ಲಿ ವಿದ್ಯುತ್ ಪ್ರಸರಣಕ್ಕಾಗಿ ತಂತಿ ವ್ಯವಸ್ಥೆ ಬಂದಾಗ ಗಾಳಿಗಿರಣಿಗಳನ್ನು ಗ್ರಿಡ್‌ಗೆ ಸಂಪರ್ಕಿಸುವುದು ಅಸಾಧ್ಯ ಎಂದು ನಿರ್ಧರಿಸಿ ಬಂದ್ ಮಾಡಲಾಯಿತು. 1970ರಲ್ಲಿ ತೈಲ ಬಿಕ್ಕಟ್ಟು ಉಂಟಾದಾಗ ಗಾಳಿಗಿರಣಿಗಳು ಮತ್ತೆ ಮುನ್ನೆಲೆಗೆ ಬಂದವು.
ಭಾರತದ ಪ್ರಥಮ ಗಾಳಿ ಗಿರಣಿಯು ಗುಜರಾತಿನ ವೇರಾವಲ್‌ನಲ್ಲಿ 1980ರಲ್ಲಿ ಪರೀಕ್ಷಾರ್ಥವಾಗಿ ಕಾರ್ಯಾರಂಭ ಮಾಡಿತು. ಆರು ವರ್ಷಗಳ ನಂತರ ಖೇಮ್ಕಾ ಕುಟುಂಬದವರು ಮದ್ರಾಸ್‌ನಲ್ಲಿ ಎನ್‌ಇಪಿಸಿ–ಮೈಕಾನ್ ಕಂಪನಿ ಸ್ಥಾಪಿಸಿ, ಗಾಳಿಗಿರಣಿಗೆ ಉದ್ಯಮದ ರೂಪ ನೀಡಿದರು. 1990ರಲ್ಲಿ ತುಳಸಿ ತಂತಿ ಎಂಬ ಉದ್ಯಮಿ ಆರಂಭಿಸಿದ ಸುಜ್ಲನ್ ಕಂಪನಿಯು ದೇಶದ ಗಾಳಿಗಿರಣಿ ಉದ್ಯಮಕ್ಕೆ ಭದ್ರ ಬುನಾದಿ ಒದಗಿಸಿತು. 2010–11ರಲ್ಲಿ ಸೌರವಿದ್ಯುತ್ ಯೋಜನೆಗಳು ಪ್ರಾರಂಭ ವಾಗುವವರೆಗೆ ಗಾಳಿವಿದ್ಯುತ್ ಯೋಜನೆಗಳು ಮುಂಚೂಣಿಯಲ್ಲಿದ್ದವು.
ಗಾಳಿಗಿರಣಿಗಳಿಂದ ಸಮಸ್ಯೆಗಳೂ ಇವೆ. ನಿರ್ವಹಿಸುವಾಗ ಮಾಲಿನ್ಯ ಉಂಟಾಗದಿದ್ದರೂ ಆಯಸ್ಸು ಮುಗಿದ ನಂತರ ಯಂತ್ರದಿಂದ ದೊರೆಯುವ ಅಪಾರ ಉಕ್ಕು, ತಾಮ್ರ ಮತ್ತು ಫೈಬರ್ ಗ್ಲಾಸ್‌ಗಳನ್ನು ಸರಿಯಾಗಿ ರೀಸೈಕಲ್ ಮಾಡದಿದ್ದರೆ ಮಾಲಿನ್ಯ ತಪ್ಪಿದ್ದಲ್ಲ. ರೆಕ್ಕೆಗಳ ಸದ್ದಿನಿಂದ ಅದರ ಬಳಿ ಕೆಲಸ ಮಾಡುವ ಕೆಲಸಗಾರರು ನಿದ್ರಾಹೀನತೆಯಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಒಂದೇ ಜಾಗದಲ್ಲಿ ಹಲವು ಗಾಳಿಗಿರಣಿಗಳ ರೆಕ್ಕೆಗಳು ತಿರುಗುವುದರಿಂದ ಸುತ್ತಲಿನ ಹೊಲಗಳ ಮಣ್ಣಿನ ತೇವಾಂಶ ಕಡಿಮೆಯಾಗಿರುವುದು ವರದಿಯಾಗಿದೆ. ಕೆಲವು ಜಾತಿಯ ಬಾವಲಿಗಳಿಗೆ ಮತ್ತು ಪಕ್ಷಿಗಳಿಗೆ ಗಾಳಿಗಿರಣಿಯ ರೆಕ್ಕೆಗಳಿಂದ ಅಪಾಯವಿದೆ.
‘ಇಂಟರ್‌ಸ್ಟೇಟ್ ಟ್ರಾನ್ಸ್‌ಮಿಷನ್ ಸಿಸ್ಟಮ್’ ಮೇಲಿನ ಶುಲ್ಕವನ್ನು ತೆಗೆದು ಹಾಕಿರುವುದರಿಂದ ಖಾಸಗಿ ಉದ್ಯಮ ದೊಡ್ಡದಾಗಿ ತಲೆ ಎತ್ತುವ ಸೂಚನೆ ದೊರಕಿದೆ. ಗುಜರಾತ್‌ನಲ್ಲಿ ಗಾಳಿ ಹೆಚ್ಚು ಮತ್ತು ಸ್ಥಾವರಕ್ಕೆ ಬೇಕಾದ ಸ್ಥಳವೂ ಸುಲಭವಾಗಿ ದೊರಕುತ್ತದೆ. ಹಾಗಾಗಿ, ಉದ್ಯಮಿಗಳ ಗಮನ ಅತ್ತ ಕಡೆಗಿದೆ. ಜನರು ಡಿಶ್ ಆಂಟೆನಾ ಗಾತ್ರದ ಗಾಳಿಗಿರಣಿಗಳಿಂದ ಮನೆಗೆ ಬೇಕಾದ ವಿದ್ಯುತ್ತನ್ನು ಕಡಿಮೆ ಖರ್ಚಿನಲ್ಲಿ ಉತ್ಪಾದಿಸಿ ಬಳಸಬಹುದು. ಹೆಚ್ಚಿನದನ್ನು ಗ್ರಿಡ್‌ಗೆ ವರ್ಗಾಯಿಸಿ ಹಣ ಗಳಿಸಬಹುದು. ಇದೆಲ್ಲದರಿಂದಾಗಿ, ಪವನ ವಿದ್ಯುತ್ ಕ್ಷೇತ್ರಕ್ಕೆ ಸುಗ್ಗಿಕಾಲ ಬರಬಹುದೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.