ADVERTISEMENT

ಸಂಗತ: ಸಾಧನೆಯ ಕಂಬವೇರಿದ ವನಿತೆಯರು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2022, 19:31 IST
Last Updated 15 ಡಿಸೆಂಬರ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಾಲೆಗೆ ಹೋಗಿ ಬರುವ ಹೆಣ್ಣುಮಕ್ಕಳೆಲ್ಲ ಇವರಿಬ್ಬರನ್ನೂ ನೋಡಿದ ತಕ್ಷಣ ಹತ್ತಿರ ಹೋಗಿ ಮಾತನಾಡಿಸುತ್ತಾರೆ. ನೋಟ್ ಪುಸ್ತಕದಲ್ಲಿ ಸಹಿ ತೆಗೆದುಕೊಳ್ಳುತ್ತಾರೆ. ‘ನಮಗೂ ನಿಮ್ಮಂತಾಗುವ ಆಸೆ’ ಎನ್ನುತ್ತಾರೆ. ದಾರಿಹೋಕರು ಈ ದೃಶ್ಯವನ್ನು ಮೊಬೈಲ್ ಕ್ಯಾಮೆರಾಗಳಲ್ಲಿ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಆ ಇಬ್ಬರ ಹೆಸರು ಭಾರತಿ ಮತ್ತು ಶಿರೀಷಾ.

ತೆಲಂಗಾಣ ರಾಜ್ಯದ ವಿದ್ಯುತ್ ವಿತರಣಾ ನಿಗಮವೊಂದರಲ್ಲಿ ‘ಲೈನ್‍ವುಮನ್’ಗಳಾಗಿ ಕೆಲಸ ಮಾಡುತ್ತಿರುವ ಇವರಿಬ್ಬರೂ ದೇಶದಲ್ಲಿ ಇದುವರೆಗೂ ಮಹಿಳೆಯರು ಮಾಡದೇ ಇದ್ದ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ರಾಜ್ಯದಾದ್ಯಂತ ಅಭಿಮಾನಿ ಗಳನ್ನು ಸಂಪಾದಿಸಿರುವ ಇವರು ಹೆಣ್ಣುಮಕ್ಕಳಿಗೆ ಸ್ಫೂರ್ತಿಯ ಸಂಕೇತವೆನಿಸಿದ್ದಾರೆ. ಧಾರಾವಾಹಿ, ಸಿನಿಮಾ ತಾರೆಯರಷ್ಟೇ ಜನಪ್ರಿಯತೆ ಗಳಿಸುತ್ತಾ ‘ಈ ಕೆಲಸ ಮಾಡುತ್ತಿರುವ ನಮಗೆ ನಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆ, ಆದರೆ ಇದು ನಮಗೆ ಸುಲಭವಾಗೇನೂ ದಕ್ಕಿಲ್ಲ, ಅದಕ್ಕೂ ಕಾನೂನು ಹೋರಾಟ ಮಾಡುವಂತಾದದ್ದು ದುರದೃಷ್ಟಕರ’ ಎನ್ನುತ್ತಾರೆ.

ತಮ್ಮ ಜಿಲ್ಲೆಯ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‍ಗಳಲ್ಲಿ ಎಲೆಕ್ಟ್ರಿಕಲ್ ಟ್ರೇಡ್‍ನಲ್ಲಿ ತರಬೇತಿ ಪಡೆದಿರುವ ವಿ.ಭಾರತಿ ಮತ್ತು ಬಬ್ಬೂರಿ ಶಿರೀಷಾ, 2019ರಲ್ಲಿ ತೆಲಂಗಾಣ ರಾಜ್ಯ ವಿದ್ಯುತ್ ನಿಗಮಕ್ಕೆ ಲೈನ್‍ಮನ್ ನೇಮಕಾತಿ ಆದೇಶ ಹೊರಬಿದ್ದಾಗ ಅರ್ಜಿ ಸಲ್ಲಿಸಿದ್ದರು. ಮೊದಲ ಬಾರಿಗೆ ಈ ಕೆಲಸಕ್ಕೆ ಮಹಿಳೆಯರಿಂದ ಅರ್ಜಿ ಬಂದದ್ದನ್ನು ಕಂಡ ನಿಗಮದ ಅಧಿಕಾರಿಗಳು ಅಚ್ಚರಿ
ಗೊಂಡಿದ್ದರು. ಮಹಿಳೆಯರಿಗೆ ಇಪ್ಪತ್ತಾರು ಅಡಿ ವಿದ್ಯುತ್ ಕಂಬವನ್ನು ಹತ್ತಲು ಆಗುವುದಿಲ್ಲ ಎಂಬ ಕಾರಣ ನೀಡಿ ನಿಗಮವು ಅರ್ಜಿಗಳನ್ನು ತಿರಸ್ಕರಿಸಿತ್ತು.

ADVERTISEMENT

ಇದನ್ನು ಭಾರತಿ ಮತ್ತು ಶಿರೀಷಾ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಲೈನ್‍ಮನ್ ಹುದ್ದೆಗೆ ಕಂಬ ಹತ್ತಲು ಬರಬೇಕು ಎಂಬ ನಿಯಮವಿದೆ. ಅದರಂತೆ ಕಂಬ ಹತ್ತಲು ಆಗುತ್ತದೆಯೋ ಇಲ್ಲವೋ ಎಂದು ‘ಪೋಲ್ ಟೆಸ್ಟ್’ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. 2020ರ ಡಿಸೆಂಬರ್ 23ರಂದು ಒಂದೊಂದೇ ನಿಮಿಷದಲ್ಲಿ ಕಂಬ ಹತ್ತಿಳಿದ ಇಬ್ಬರೂ ಪೋಲ್ ಟೆಸ್ಟ್ ಪಾಸ್ ಆದರು. ಈ ಪ್ರಕರಣದ ವಿಚಾರಣೆಯು ಎಂಟು ತಿಂಗಳವರೆಗೆ ನಡೆಯಿತು. ಅದರಲ್ಲಿ ಗೆದ್ದೂಬಿಟ್ಟರು. ಈ ಸಂಬಂಧದ ಪ್ರವೇಶ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದರು. ಅದಾದ ಒಂದು ತಿಂಗಳ ಒಳಗಾಗಿ ಇಬ್ಬರಿಗೂ ನೇಮಕಾತಿ ಆದೇಶ ನೀಡಬೇಕೆಂದು ನ್ಯಾಯಾಲಯ ತಾಕೀತು ಮಾಡಿತು. ಸಿದ್ಧಿಪೇಟ ಜಿಲ್ಲೆಯ ಗಣೇಶಪಲ್ಲಿ ಗ್ರಾಮದ ಶಿರೀಷಾಗೆ ರಾಜ್ಯದ ಇಂಧನ ಸಚಿವ ಜಗದೀಶ್ ರೆಡ್ಡಿ ಅವರೇ ಖುದ್ದಾಗಿ ನೇಮಕಾತಿ ಪತ್ರ ನೀಡಿದರು.

ನ್ಯಾಯಾಲಯದ ಆದೇಶದಂತೆ ಇಬ್ಬರೂ ಲೈನ್‍ಮನ್ ಹುದ್ದೆಗೆ ನೇಮಕಗೊಂಡು ವಿದ್ಯುತ್ ವಿತರಣಾ ನಿಗಮದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

‘ಪುರುಷರೊಂದಿಗೆ ಅವರಷ್ಟೇ ಕ್ಷಮತೆಯಿಂದ ಕೆಲಸ ಮಾಡುತ್ತಿದ್ದೇವೆ. ಎತ್ತೆತ್ತರದ ಕಂಬ, ವಿದ್ಯುತ್ ಗೋಪುರ ಏರಿ ಲೈನ್ ಸರಿಮಾಡಿ ವಿದ್ಯುತ್ ಹರಿಯುವಂತೆ ನೋಡಿಕೊಳ್ಳುತ್ತೇವೆ’ ಎನ್ನುವ ಭಾರತಿ, ‘ಲೈನ್‍ವುಮನ್ ಆಗಿ ಕೆಲಸ ಮಾಡುತ್ತಿರುವ ಮೊದಲ ಮಹಿಳೆಯರು ನಾವು ಎಂಬ ಗೌರವ ನಮ್ಮಲ್ಲಿ ಹೆಚ್ಚಿನ ಆತ್ಮವಿಶ್ವಾಸ ತುಂಬಿದೆ’ ಎಂದು ಸಂತಸಪಡುತ್ತಾರೆ.

‘ಕಂಬದ ಮೇಲೇರಿ ಕೆಲಸ ಮಾಡುವುದನ್ನೇ ಗಮನಿಸುತ್ತಾ ವಿಡಿಯೊ, ಫೋಟೊ ತೆಗೆಯುವ ನಾಗರಿಕರು, ನಾವು ಕೆಳಗಿಳಿದು ಬಂದ ಮೇಲೆ ‘ಶಹಬ್ಬಾಸ್, ಹೆಣ್ಣುಮಕ್ಕಳೆಂದರೆ ಹೀಗಿರಬೇಕು’ ಎನ್ನುತ್ತಾರೆ. ಅದೇ ನಮ್ಮ ಕೆಲಸಕ್ಕೆ ಸಿಗುತ್ತಿರುವ ದೊಡ್ಡ ಮರ್ಯಾದೆ’ ಎನ್ನುವ ಶಿರೀಷಾ, ‘ಹೆಣ್ಣಿಗೊಂದು, ಗಂಡಿಗೊಂದು ಕೆಲಸ ಎಂದು ಮಾಡಿದವರು ಯಾರೊ? ನನಗಂತೂ ಅಂಥ ವ್ಯತ್ಯಾಸ ಕಾಣುತ್ತಿಲ್ಲ’ ಎನ್ನುತ್ತಾರೆ.

ಇಬ್ಬರು ಮಕ್ಕಳ ತಾಯಿ, 32ರ ಹರೆಯದ ಭಾರತಿ ಮತ್ತು 22 ವರ್ಷದ ಶಿರೀಷಾ, ಅತ್ಯಂತ ಸಾಮಾನ್ಯ ಹಿನ್ನೆಲೆಯಿಂದ ಬಂದವರು. ‘ಸಂಬಂಧಿಕರು, ನೆರೆಹೊರೆಯವರೆಲ್ಲ, ಅದು ಗಂಡಸರ ಕೆಲಸ, ನಿಮ್ಮ ಕೈಲಿ ಆಗುತ್ತದಾ ಎನ್ನುತ್ತಿದ್ದಾಗಲೆಲ್ಲ ಅವರಿಗೆ ಉತ್ತರ ನೀಡುವುದೇ ವ್ಯರ್ಥವೆನಿಸುವಷ್ಟು ಕಿರಿಕಿರಿಯಾಗುತ್ತಿತ್ತು, ಈಗ ಅವರ ದೃಷ್ಟಿ ಬದಲಾಗಿದೆ, ಅವರು ತೋರಿಸುವ ವಿಶ್ವಾಸದಿಂದ ನಮಗೆ ಇನ್ನಷ್ಟು ಸ್ಥೈರ್ಯ ಲಭಿಸಿದೆ’ ಎನ್ನುವ ಭಾರತಿ, ಗಾಢ ಬಣ್ಣದ ಹಳದಿ ಹೆಲ್ಮೆಟ್, ಶಾಕ್‌ಪ್ರೂಫ್ ಬೂಟು, ಗ್ಲೌಸ್ ಧರಿಸಿ ಕೈಯಲ್ಲಿ ಕಟಿಂಗ್ ಪ್ಲೈಯರ್ ಹಿಡಿದು ಕಂಬವೇರುತ್ತ, ‘ನೇಮಕಾತಿ ಆದೇಶದಲ್ಲಿ ‘ಲೈನ್‍ಮನ್’ ಎಂದೇ ಬರೆದಿದ್ದಾರೆ. ಅದು ‘ಲೈನ್‍ವುಮನ್’ ಎಂದಾಗಬೇಕು, ಆ ದಿನವೂ ದೂರವಿಲ್ಲ’ ಎಂದು ಕಣ್ಣರಳಿಸುತ್ತಾರೆ.

ವಿಮಾನ, ಮೆಟ್ರೊ ರೈಲು, ಫೈಟರ್‌ ಜೆಟ್, ಕ್ರೂಸ್, ಬಸ್ ಓಡಿಸಿದ್ದಲ್ಲದೆ ಬಾಹ್ಯಾಕಾಶಕ್ಕೂ ಮಹಿಳೆಯರು ಕಾಲಿಟ್ಟು ವಿನೂತನ ಸಾಧನೆ ಮಾಡಿದ್ದಾರೆ. ವಿಶ್ವದ ಎತ್ತರದ ಪರ್ವತ ಏರಿ ಪತಾಕೆ ಹಾರಿಸಿದ್ದಾರೆ, ಈಗ ಲೈನ್‍ಮನ್ ನೇಮಕಾತಿ ಆದೇಶದಲ್ಲಿ ಪುರುಷ– ಮಹಿಳೆ ಇಬ್ಬರೂ ಅರ್ಜಿ ಸಲ್ಲಿಸಬಹುದು ಎಂದಾಗಿದೆ. ಮಹಿಳೆ ‘ಬಹುಕಾರ್ಯಕ್ಷಮತಾಮಯಿ’ ಎಂಬುದನ್ನು ಭಾರತಿ- ಶಿರೀಷಾ ಜಂಟಿಯಾಗಿ ನಿರೂಪಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.