ADVERTISEMENT

ಸಂಗತ: ಪಯಣ ಪಥದ ಪಥಿಕರಾಗಿ

ವಿದ್ಯಾವಂತ ಯುವಪೀಳಿಗೆ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗುವುದು ಮಾನವ ಕುಲವೇ ನಾಚಿಕೆಯಿಂದ ತಲೆತಗ್ಗಿಸಬೇಕಾದ ಸಂಗತಿ

ರಾಜಕುಮಾರ ಕುಲಕರ್ಣಿ
Published 18 ಮೇ 2022, 19:45 IST
Last Updated 18 ಮೇ 2022, 19:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಂತಿಮ ಪದವಿ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಇತ್ತೀಚೆಗೆ ಹಾಸ್ಟೆಲಿನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮನಸ್ಸಿಗೆ ತುಂಬ ದುಃಖವನ್ನು ಉಂಟುಮಾಡಿತು. ಖಿನ್ನತೆಯೇ ಅವನು ಆತ್ಮಹತ್ಯೆಯಂಥ ಹೇಯ ಮಾರ್ಗವನ್ನು ಆಯ್ದುಕೊಳ್ಳಲು ಕಾರಣವಾಗಿತ್ತು ಎನ್ನುವ ಮಾತುಗಳು ಕೇಳಿಬಂದವು.

ಬದುಕಿ ಸಾಧಿಸಬೇಕಾದ ವಿಪುಲ ಅವಕಾಶ ಎದುರಿಗಿದ್ದರೂ ಅವನು ಸಾವನ್ನೇ ಆಯ್ಕೆ ಮಾಡಿಕೊಂಡ. ಆ ನಿರ್ಧಾರಕ್ಕೆ ಬಂದ ಗಳಿಗೆ ತಂದೆ ತಾಯಿಯನ್ನು ಆತ ಜ್ಞಾಪಿಸಿಕೊಳ್ಳಬೇಕಿತ್ತು. ಜೀವನದ ಸವಾಲುಗಳಲ್ಲಿ ಗೆದ್ದು ನಿಂತ ಸಾಧಕರನ್ನು ಸ್ಮರಿಸಿಕೊಳ್ಳಬೇಕಿತ್ತು. ದೇಹದ ಅಂಗವೈಕಲ್ಯವನ್ನು ಮೆಟ್ಟಿನಿಂತು ಪ್ರಪಂಚಕ್ಕೇ ಮಾದರಿಯಾದ ಪ್ರಾತಃಸ್ಮರಣೀಯರನ್ನು ನೆನಪಿಸಿಕೊಳ್ಳಬೇಕಿತ್ತು. ಕ್ಷಣಮಾತ್ರದ ನಿರ್ಧಾರ ಬದುಕನ್ನೇ ಬಲಿ ತೆಗೆದುಕೊಂಡಿತು.

ವಿಜ್ಞಾನ ಮತ್ತು ತಂತ್ರಜ್ಞಾನದ ಈ ಯುಗದಲ್ಲಿ ವಿದ್ಯಾವಂತ ಯುವಪೀಳಿಗೆ ಪ್ರೇಮವೈಫಲ್ಯ, ಅಭ್ಯಾಸದ ಹೊರೆ, ಪರೀಕ್ಷೆಯಲ್ಲಿ ಅನುತ್ತೀರ್ಣ, ಇಚ್ಛಿಸಿದ ಕೋರ್ಸಿಗೆ ದೊರೆಯದ ಪ್ರವೇಶ ಇಂತಹ ಕಾರಣಗಳನ್ನು ನೀಡಿ ಆತ್ಮಹತ್ಯೆಗೆ ಶರಣಾಗುತ್ತಿರುವುದು ಇಡೀ ಮಾನವ ಕುಲವೇ ನಾಚಿಕೆಯಿಂದ ತಲೆತಗ್ಗಿಸ ಬೇಕಾದ ಸಂಗತಿ.

ADVERTISEMENT

ಪಾಲಕರ ಅತಿಯಾದ ಮಹತ್ವಾಕಾಂಕ್ಷೆ ಮಕ್ಕಳನ್ನು ಸಂಕಷ್ಟಕ್ಕೆ ದೂಡುತ್ತಿದೆ. ಅಪ್ಪ, ಅಮ್ಮನ ಒತ್ತಾಯಕ್ಕೆ ತಮಗೆ ಇಷ್ಟವಿಲ್ಲದ ಕಾಲೇಜು, ಕೋರ್ಸಿಗೆ ಪ್ರವೇಶ ಪಡೆಯುವವರಲ್ಲಿ ಕೆಲವರು ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳದೆ ಖಿನ್ನತೆಗೆ ಒಳಗಾಗುವುದುಂಟು. ವಸತಿಶಾಲೆ, ಬೇಸಿಗೆ ಶಿಬಿರ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳೆಂದು ಮಕ್ಕಳು ಮನೆಯ ಪರಿಸರದಿಂದ ಹೊರಗೇ ಉಳಿಯುತ್ತಿದ್ದಾರೆ. ಮನೆ ಮತ್ತು ಕುಟುಂಬದ ಸದಸ್ಯರೊಂದಿಗಿನ ಈ ಭಾವನಾತ್ಮಕ ಮತ್ತು ಮಾನಸಿಕ ಅಂತರ ಅದೆಷ್ಟೋ ವಿದ್ಯಾರ್ಥಿಗಳನ್ನು ಖಿನ್ನತೆಗೆ ಒಳಗಾಗಿಸುತ್ತಿದೆ.

ವ್ಯಾಪಾರೀಕರಣವು ಶಿಕ್ಷಣವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಮೇಲೆ ಶಿಕ್ಷಣದ ಉದ್ದೇಶಗಳಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಇಂದು ಶಿಕ್ಷಣದಿಂದ ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಯಾಗುತ್ತಿಲ್ಲ. ನೀತಿ ಶಿಕ್ಷಣ ಎನ್ನುವುದು ಶಾಲಾ ಕಾಲೇಜುಗಳ ವೇಳಾಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿದೆ. ಹಿಂದೆ ಶಾಲಾ ಅವಧಿಯ ನಂತರವೂ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸಮಯ ಕಳೆಯುತ್ತಿದ್ದರು. ಪಠ್ಯಕ್ರಮದಾಚೆ ಬದುಕಿನ ತತ್ವಗಳನ್ನು ಬೋಧಿಸುತ್ತಿದ್ದರು. ದಾರಿ ತಪ್ಪಿದಾಗ ಕಿವಿ ಹಿಂಡಿ ಬುದ್ಧಿ ಹೇಳುತ್ತಿದ್ದರು. ಇಂದು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮಧ್ಯದ ಸಂಬಂಧ ನಾಲ್ಕು ಗೋಡೆಗಳ ನಡುವಣ ಪಠ್ಯಕ್ರಮದ ಬೋಧನೆಗೆ ಮಾತ್ರ ಸೀಮಿತವಾಗಿದೆ.

ಬದುಕು ಒಡ್ಡಿದ ಸವಾಲುಗಳನ್ನು ಎದುರಿಸಿ ಅಪ್ರತಿಮ ಸಾಧನೆ ಮಾಡಿದವರು ನಮ್ಮ ನಡುವೆ ಇದ್ದಾರೆ. ಸ್ಟೀಫನ್ ಹಾಕಿಂಗ್, ಪುಟ್ಟರಾಜ ಗವಾಯಿ, ಸುಧಾ ಚಂದ್ರನ್, ಜಾನ್ ಮಿಲ್ಟನ್ ಅವರಂತಹ ಸಾಧಕರು ದೈಹಿಕ ವೈಕಲ್ಯವನ್ನು ಮೀರಿನಿಂತು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅದ್ಭುತವಾದದ್ದನ್ನು ಸಾಧಿಸಿದರು. ಪಯಣದ ಪಥದಲ್ಲಿ ಎದುರಾದ ಕಲ್ಲು ಮುಳ್ಳುಗಳನ್ನು ಬದಿಗೆ ಸರಿಸಿ, ತಾವು ನಡೆಯಬೇಕಾದ ದಾರಿಯನ್ನು ಸ್ವತಃ ನಿರ್ಮಿಸಿಕೊಂಡ ಪಥಿಕರಿವರು. ಒಂದೊಮ್ಮೆ ಅವರು ಸಮಸ್ಯೆಗಳಿಗೆ ಹೆದರಿ ಸಾಧನೆಯ ಪಥದಿಂದ ವಿಮುಖರಾಗಿದ್ದರೆ ಇಂದು ಜಗತ್ತು ಅವರನ್ನು ನೆನಪಿಟ್ಟುಕೊಳ್ಳುತ್ತಿರಲಿಲ್ಲ. ಪ್ರಪಂಚ ಸದಾ ಸ್ಮರಿಸುವುದು ಸಾಧಕರನ್ನೇ ವಿನಾ ಬದುಕಿಗೆ ಬೆನ್ನು ಮಾಡುವ ಹೇಡಿಗಳನ್ನಲ್ಲ.

ಅಮೆರಿಕದ ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗುವ ಪೂರ್ವದಲ್ಲಿ ಅಬ್ರಹಾಂ ಲಿಂಕನ್‍ ಅವರಿಗೆ ವಿವಿಧ ಚುನಾವಣೆಗಳಲ್ಲಿ ಸತತ ಒಂಬತ್ತು ಸೋಲುಗಳು ಎದುರಾಗಿದ್ದವು. ಇಂಥ ಸಾಧಕರ ಬದುಕು ಮಕ್ಕಳಿಗಷ್ಟೇ ಅಲ್ಲ ಪಾಲಕರಿಗೂ ಸ್ಫೂರ್ತಿಯಾಗಬೇಕು.

ಯಶವಂತ ಚಿತ್ತಾಲ ಅವರು ಮನುಷ್ಯನ ಬದುಕಬೇಕೆನ್ನುವ ಉತ್ಸಾಹವನ್ನು ವಿವರಿಸುತ್ತ, ‘ಜೀವಕೋಟಿಯ ವಿಕಾಸದಲ್ಲಿ ‘ಬದುಕಬೇಕು’ ಎಂಬ ಅಭೀಪ್ಸೆಯ ಹಿಂದೆ ಕೋಟಿ ವರ್ಷಗಳ ಇತಿಹಾಸವಿದ್ದರೆ ‘ಯಾಕೆ ಬದುಕಬೇಕು?’ ಎಂದು ಕೇಳಿಕೊಳ್ಳುವ ಪ್ರಜ್ಞೆ ತೀರ ಸದ್ಯದ್ದು. ಬದುಕುವುದರಲ್ಲಿ ಅದಮ್ಯ ಉತ್ಸಾಹವಿರುವ ಜೀವಕ್ಕೆ ಯಾಕೆ ಬದುಕಬೇಕು ಎಂಬ ಪ್ರಶ್ನೆಗಿಂತ ಹೇಗೆ ಬದುಕಬೇಕು ಎಂಬ ಪ್ರಶ್ನೆಯೇ ಹೆಚ್ಚು ಸಹಜವಾದದ್ದು. ‘ನೀವೇಕೆ ಬದುಕಿದ್ದೀರಿ’ ಎಂಬ ಪ್ರಶ್ನೆಗೆ, ಬದುಕಿನಲ್ಲಿ ವಿಶ್ವಾಸವಿದ್ದ ಜೀವಿಯಿಂದ ಉತ್ತರವಿಲ್ಲ. ಆದರೆ ‘ನೀವು ನಂಬಿಕೆ ಇಟ್ಟುಕೊಂಡ ಜೀವನಮೌಲ್ಯಗಳು ಯಾವುವು?’ ‘ಯಾವ ಸಂಗತಿಗಳಿಂದಾಗಿ ನಿಮಗೆ ಬದುಕು ಅರ್ಥಪೂರ್ಣ ಎನ್ನಿಸಿದೆ’ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬಹುದು’ ಎಂದಿದ್ದಾರೆ.

‘ಕಹಾ ಮೈನೆ ಕಿತನಾ ಹೈ ಗುಲ್ ಕಾ ಸಬಾತ್/ಕಾಲಿ ನೆ ಯೆ ಸುನ್ಕರ್ ತಬಸ್ಸೂಂ ಕಿಯಾ’ (‘ಎಷ್ಟು ಕಾಲ?’ ನಾನು ಕೇಳಿದೆ ಗುಲಾಬಿಯ ಆಯಸ್ಸು. ಮೊಗ್ಗು ಮೊಗವೆತ್ತಿ ಮುಗುಳ್ನಕ್ಕಿತಷ್ಟೆ)- ಬದುಕಿನ ಮಹತ್ವವನ್ನು ಅತ್ಯಂತ ಅರ್ಥಪೂರ್ಣವಾಗಿ ವಿವರಿಸುವ ಮಿರ್ಜಾ ಗಾಲಿಬ್‍ನ ಗಝಲ್ ಸಾಲುಗಳಿವು. ಅರಳಿ ನಿಂತ ಹೂವು ತನ್ನ ಬದುಕು ಕ್ಷಣಿಕವೆಂದು ಎಂದಿಗೂ ಶೋಕಿಸುವುದಿಲ್ಲ. ಅದು ಬದುಕಿರುವವರೆಗೂ ತನ್ನ ಪರಿಮಳವನ್ನು ಸುತ್ತಲೂ ಬೀರುತ್ತದೆ.

ಕಲ್ಲುಬಂಡೆ ಕೆಳಗಿನ ಗರಿಕೆಹುಲ್ಲು ಸಿಕ್ಕ ಅವಕಾಶದಲ್ಲೇ ಹೊರಚಾಚಿ ಚಿಗುರೊಡೆಯುತ್ತದೆ. ಬಚ್ಚಲಿನ ಕೊಳೆಯ ನೀರಲ್ಲಿ ಬೆಳೆದು ನಿಲ್ಲುವ ಮಲ್ಲಿಗೆ ಬಳ್ಳಿ ಘಮಘಮಿಸುವ ಹೂಗಳನ್ನು ಬಿಡುತ್ತದೆ. ಆದರೆ ದೇಹದಲ್ಲಿ ದೊಡ್ಡ ಮೆದುಳಿರುವ ಮನುಷ್ಯ ಮಾತ್ರ ಸೋಲುಗಳಿಗೆ ಅಧೀರನಾಗಿ ಸಾವಿನಲ್ಲಿ ಪರಿಹಾರ ಹುಡುಕುವುದು ಯಾವ ನ್ಯಾಯ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.