ADVERTISEMENT

ಗುರುವಾರ, 14–3–1968

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 19:30 IST
Last Updated 13 ಮಾರ್ಚ್ 2018, 19:30 IST

ನ್ಯಾಯಾಧೀಶ ಗ್ರೋವರ್‌ಗೆ ಇರಿತ; ಹಿದಯತ್ಉಲ್ಲ ಹತ್ಯೆ ಯತ್ನ ವಿಫಲ
ನವದೆಹಲಿ, ಮಾ. 13– ಕೊಲೆ ಮೊಕದ್ದಮೆಯೊಂದರ ತೀರ್ಪನ್ನು ನ್ಯಾಯಾಲಯದಲ್ಲಿ ಶೀಘ್ರ ಲಿಪಿಗಾರರಿಗೆ ಹೇಳಿ ಬರೆಸುತ್ತಿದ್ದಾಗ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಶ್ರೀ ಎ.ಎನ್. ಗ್ರೋವರ್‌ರವರನ್ನು ಇಂದು ಮಧ್ಯಾಹ್ನ ಇರಿಯಲಾಯಿತು.

ಗಾಯಗೊಂಡ ಗ್ರೋವರ್ ಅವರನ್ನು ಕೂಡಲೇ ವೆಲ್ಲಿಂಗ್ಡನ್ ಆಸ್ಪತ್ರೆಗೆ ಒಯ್ದು ಶಸ್ತ್ರಿಚಿಕಿತ್ಸೆ ನಡೆಸಲಾಯಿತು.

ಅವರ ಸ್ಥಿತಿ ಈಗ ತೃಪ್ತಿಕರವಾಗಿದೆಯೆಂದು ವೈದ್ಯರು ತಿಳಿಸಿದರು.

ADVERTISEMENT

ಗ್ರೋವರ್‌ರವರ ಮೇಲೆ ಕೈ ಮಾಡಿದನೆಂದು ಹೇಳಲಾದ ಮನಮೋಹನ್‌ದಾಸ್ ಎಂಬುವವನನ್ನು ತತ್‌ಕ್ಷಣ ಪೊಲೀಸರು ಕಸ್ಟಡಿಗೆ ತೆಗದುಕೊಂಡರು.

ಬುರುಡೆಗೆ ಪೆಟ್ಟು: ವೆಲ್ಲಿಂಗ್ಡನ್ ಆಸ್ಪತ್ರೆಗೆ ಕರೆತಂದಾಗ ಗ್ರೋವರ್‌ರವರಿಗೆ ವಿಪರೀತ ರಕ್ತಸ್ರಾವವಾಗುತ್ತಿತ್ತು. ಅವರ ತಲೆ ಬುರುಡೆಗೆ ತಿವಿತದಿಂದ ಎರಡು ಏಟುಗಳು ಬಿದ್ದಿದ್ದು ‘ಪುಟ್ಟ’ ಶಸ್ತ್ರ ಚಿಕಿತ್ಸೆ ಮಾಡಲಾಯಿತು.

ತಿವಿದ ವ್ಯಕ್ತಿ ಇದ್ದಕ್ಕಿದ್ದಂತೆ ನ್ಯಾಯಾಧೀಶರು ಕುಳಿತುಕೊಳ್ಳುವ ವೇದಿಕೆಯತ್ತ ಹಾರಿ ಗ್ರೋವರ್‌ರವರನ್ನು ಇರಿದನೆಂದು ಹೇಳಲಾಗಿದೆ. ವೇದಿಕೆಯ ಮೇಲೆ ಶ್ರೇಷ್ಠ ನ್ಯಾಯಾಧೀಶ ಹಿದಾಯತ್ ಉಲ್ಲಾ ಮತ್ತು ನ್ಯಾಯಮೂರ್ತಿ ವೈದ್ಯಲಿಂಗಂರವರೂ ಕುಳಿತಿದ್ದರು.

ಶ್ರೇಷ್ಠ ನ್ಯಾಯಾಧೀಶರ ಹತ್ಯೆಗೆ ಪ್ರಯತ್ನ ನಡೆಯಿತೆಂದು ಯುನೈಟೆಡ್ ನ್ಯೂಸ್ ಆಫ್‌ ಇಂಡಿಯ ವರದಿ ಮಾಡಿದೆ.

ದುರದೃಷ್ಟದ ಹದಿಮೂರು
ನವದೆಹಲಿ, ಮಾ. 13– ನ್ಯಾಯಮೂರ್ತಿ ಶ್ರೀ ಗ್ರೋವರ್ ಅವರನ್ನು ಸೇರಿಸಿದ ವೆಲ್ಲಿಂಗ್ಡನ್ ನರ್ಸಿಂಗ್ ಹೋಂನ ಕೊಠಡಿಯ ನಂಬರನ್ನು ತಾತ್ಕಾಲಿಕವಾಗಿ 13 ರಿಂದ ‘12–ಎ’ ಎಂದು ಬದಲಾವಣೆ ಮಾಡಲಾಯಿತು.

ನರ್ಸಿಂಗ್ ಹೋಂಗೆ ಕರೆದೊಯ್ಯುತ್ತಿದ್ದಾಗ ಕೊಠಡಿಯ ದುರದೃಷ್ಟ ಸಂಖ್ಯೆ 13ನ್ನು ಬದಲಾವಣೆ ಮಾಡುವಂತೆ ಶ್ರೀ ಗ್ರೋವರ್ ಅವರು ವಿನೋದವಾಗಿ ಹೇಳಿದರು. ಇಂದು ತಮ್ಮ ಮೇಲೆ ಹತ್ಯೆ ನಡೆದ ಸುಪ್ರೀಂ ಕೋರ್ಟಿನ ಕೊಠಡಿಯ ನಂಬರ್ 13 ಎಂದೂ ಅವರು ತಿಳಿಸಿದರು. ‘ಸಾರ್ ಇವತ್ತು ಮಾರ್ಚಿ 13’ ಎಂದು ಅಲ್ಲಿದ್ದ ಪತ್ರಿಕಾ ವರದಿಗಾರರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.