ADVERTISEMENT

ಭಾನುವಾರ, 19–2–1967

50 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ಭಾನುವಾರ ಆರು ಕೋಟಿ ಜನರಿಂದ ಮತದಾನ
ನವದೆಹಲಿ, ಫೆ. 18: ರಾಷ್ಟ್ರಾದ್ಯಂತ ನಾಳೆ ನಡೆಯುವ ನಾಲ್ಕನೇ ಸಾರ್ವತ್ರಿಕ ಚುನಾವಣೆಯಲ್ಲಿ 6 ಕೋಟಿಗೂ ಹೆಚ್ಚಿನ ಮತದಾರರು 763 ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಚಲಾಯಿಸುತ್ತಾರೆ.
 
ಹರಿಯಾನ, ಪಂಜಾಬ್‌ ಮತ್ತು ಬಂಗಾಳ ರಾಜ್ಯಗಳಲ್ಲದೆ ಕೇಂದ್ರಾಡಳಿತ ಪ್ರದೇಶಗಳಾದ ಚಂಡೀಘರ್‌ ಮತ್ತು ದೆಹಲಿಯಲ್ಲಿ ಮತದಾನವು ಭಾನುವಾರ ಆರಂಭವಾಗಿ ಅದೇ ದಿನ ಅಂತ್ಯವಾಗುವುದು. ಭಾನುವಾರ ಮತ ಚಲಾಯಿಸುವ ಎರಡನೇ ಹಂತಕ್ಕೆ ಪ್ರವೇಶಿಸುವ ಮೈಸೂರು ರಾಜ್ಯದಲ್ಲೂ ಮತದಾನ ಮುಗಿಯುವುದು. ಆದರೆ ಬಿಹಾರ್‌ ಮತ್ತು ಉತ್ತರ ಪ್ರದೇಶದಲ್ಲಿ ಮೂರು ಮತ್ತು ನಾಲ್ಕನೇ ದಿನದವರೆಗೆ ಮುಂದುವರಿಯುವುದು. 
 
ಭಾನುವಾರ ಮೈಸೂರು ರಾಜ್ಯದಲ್ಲಿ 96 ವಿಧಾನಸಭೆ ಹಾಗೂ 12 ಲೋಕಸಭೆ ಸ್ಥಾನಗಳಲ್ಲಿ ಚುನಾವಣೆಯಾಗುವುದು. 
 
**
ಮತದಾರರ ಮನ ಹೊಕ್ಕಾಗ......
ಬೆಂಗಳೂರು, ಫೆ. 18– ನಿಮ್ಮ ಓಟು ಯಾರಿಗೆ? ಮತದಾರನ ಮನಸ್ಸಿನೊಳ ಹೊಕ್ಕು ಈ ಪ್ರಶ್ನೆಗೆ ಉತ್ತರ ಪಡೆಯುವುದು ಬಲುಕಷ್ಟ. ಆದರೆ ಅವರ ಮಾತಿನ ರಾಗದಿಂದ, ವರ್ತನೆಯ ಹಾವಭಾವದಿಂದ, ಉತ್ತರದ ಸಿಹಿ, ಖಾರದಿಂದ ಅವನ ಒಲವನ್ನು ಗುರುತಿಸುವುದು ಸಾಧ್ಯ.
 
ಗಾಂಧಿ ಬಜಾರ್‌ನ ಬಸ್ ಸ್ಟಾಪ್‌ನ ಬಳಿ ಪುರೋಹಿತರೊಬ್ಬರು ನಡೆದುಕೊಂಡು ಬರುತ್ತಿದ್ದರು. ಕಾರು ನಿಲ್ಲಿಸಿ ಮಾತು. ‘ನಾವು ವ್ಯಕ್ತಿಯನ್ನು ನೋಡಿ ಮತ ಕೊಡ್ತೇವೆ. ನಾಗರಿಕರ ಹಕ್ಕುಗಳಿಗಾಗಿ ಹೋರಾಡಿದ ಶ್ರೀ ಟಿ.ಆರ್. ಶಾಮಣ್ಣನವರಿದ್ದಾರೆ. ಲೋಕಸಭೆಗೆ ಶ್ರೀ ಕೆಂಗಲ್ ಹನುಮಂತಯ್ಯನವರಿದ್ದಾರೆ’ ಎಂದರು ಅವರು.
 
ಇಲ್ಲಿ ಅಭ್ಯರ್ಥಿಗಳ ಹೆಸರು ಸಾಂಕೇತಿಕ. ಬೇರೆ ಬೇರೆ ಕ್ಷೇತ್ರಗಳಲ್ಲಿ ಜನಪ್ರಿಯರಾಗಿರುವ ಬೇರೆ ಬೇರೆ ಅಭ್ಯರ್ಥಿಗಳಿದ್ದಾರೆ. ಅವರ ಕೆಲಸ ನೋಡಿ ಮತ, ಕೆಲವು ಕಡೆಗಳಲ್ಲಿ ವಿಧಾನ ಸಭೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವ ಜನರು ಲೋಕಸಭೆಗೆ ಶ್ರೀ ಟಿ. ಸುಬ್ರಹ್ಮಣ್ಯ ಅವರನ್ನು ಎತ್ತಿ ಹಿಡಿಯುತ್ತಾರೆ.
 
**
ಒಂದು ಓಟೂ ಇಲ್ಲ! ಖಾಲಿ ಪೆಟ್ಟಿಗೆಗೆ ಬೀಗಮುದ್ರೆ
ಬೆಂಗಳೂರು, ಫೆ. 18– ಕೋಲಾರ ಜಿಲ್ಲೆಗೆ ಸೇರಿದ ಗ್ರಾಮವೊಂದರ ಮತದಾರರು ಕಳೆದ ಬುಧವಾರ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿಲ್ಲ.
 
ಸ್ಪರ್ಧಿಗಳಿಬ್ಬರ ಯೋಗ್ಯತೆಗೆ ಸಂಬಂಧಿಸಿದಂತೆ ಮತದಾರರ ಗುಂಪುಗಳೆರಡರ ನಡುವೆ ಬಿಸಿಯಾದ ವಾಗ್ವಾದ ನಡೆಯಿತು. ಆಗ ಈ ಎರಡು ಗುಂಪುಗಳಿಗೂ ಒಪ್ಪಿಗೆಯಾದ ಮಧ್ಯಸ್ಥನೊಬ್ಬ, ಯಾರಿಗೂ ಓಟು ಕೊಡುವುದು ಬೇಡ ಎಂದು ತೀರ್ಪು ಕೊಟ್ಟ.
 
ಪರಸ್ಪರ ವಾಗ್ಯುದ್ಧದಲ್ಲಿ ತೊಡಗಿದ್ದ ಮತದಾರರು ಬಾಯಿ ಮುಚ್ಚಿಕೊಂಡು ಆ ತೀರ್ಪನ್ನು ಒಪ್ಪಿದರು; ತಮ್ಮ ಮತದಾನದ ಹಕ್ಕನ್ನು ಚಲಾಯಿಸದೆ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿದರು.
 
ಮತಗಟ್ಟೆಯ ಅಧಿಕಾರಿ ಖಾಲಿ ಮತ ಪೆಟ್ಟಿಗೆಗಳಿಗೆ ಬೀಗ ಮುದ್ರೆ ಹಾಕಿದರು!
 
**
ಬಿಹಾರದಲ್ಲಿ ಬಟ್ಟೆ ಇಲ್ಲದೆ ಬೆತ್ತಲೆ ಪರಿಸ್ಥಿತಿ
ಮುಂಬೈ, ಫೆ. 18– ಬಿಹಾರದಲ್ಲಿ ಅನಾವೃಷ್ಟಿಯು ಪರಾಕಾಷ್ಠೆಯನ್ನು ಮುಟ್ಟಿದೆಯೆಂದೂ ಅನೇಕರು ಉಡಲು ಬಟ್ಟೆ ಇಲ್ಲದೆ ಬೆತ್ತಲೆ ಸ್ಥಿತಿಗೆ ಇಳಿದಿದ್ದಾರೆಂದೂ ಪಟ್ನಾ ಕೇಂದ್ರ ಕಛೇರಿಯಿಂದ ಇಲ್ಲಿನ ಬಿಹಾರ್ ಪರಿಹಾರ ಸಮಿತಿ ಶಾಖೆಗೆ ತುರ್ತು ತಂತಿ ಬಂದಿದೆ.
 
ಅನೇಕ ಹೆಂಗಸರು ಸೀರೆ ಇಲ್ಲದೆ ಬೆತ್ತಲೆ ಇರಬೇಕಾಗಿ ಬಂದಿದೆಯೆಂದು ಪ್ರತ್ಯಕ್ಷದರ್ಶಿಯೊಬ್ಬರು ಪಟ್ನಾಕ್ಕೆ ಸುದ್ದಿ ಕೊಟ್ಟಿರುವುದಾಗಿ ಗೊತ್ತಾಗಿದೆ. ಅಲ್ಲಿಗೆ ಸೀರೆಗಳನ್ನು ಕಳಿಸಲು ಮನವಿ ಹೊರಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.