ADVERTISEMENT

ಸೋಮವಾರ, 3–3–1969

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 19:23 IST
Last Updated 2 ಮಾರ್ಚ್ 2019, 19:23 IST

ಕನ್ನಡಿಗರ ಹಿತಗಳಿಗೆ ಎಲ್ಲೂ ಧಕ್ಕೆ ಬರದಂತೆ ಸೂಕ್ತ ಎಚ್ಚರ ವಹಿಸುವುದಾಗಿ ಮುಖ್ಯಮಂತ್ರಿ

ಹುಬ್ಬಳ್ಳಿ, ಮಾ. 2– ದೇಶದಲ್ಲಿ ಎಲ್ಲಯೇ ಆಗಲಿ ಕನ್ನಡಿಗರ ಹಿತಕ್ಕೆ ಧಕ್ಕೆ ಬರದಂತೆ ತಾವು ಎಚ್ಚರವಹಿಸುವುದಾಗಿ ಮೈಸೂರಿನ ಮುಖ್ಯಮಂತ್ರಿ ಶ್ರೀ ವೀರೇಂದ್ರಪಾಟೀಲ್ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.

ಕರ್ನಾಟಕ ವಾಣಿಜ್ಯೋದ್ಯಮಿ ಸಂಘದ ಹೊಸ ಆಡಳಿತ ಕಟ್ಟಡದ ಉದ್ಘಾಟನಾ ಸಮಾರಂಭದ ಅಧ್ಯಕ್ಷ ಭಾಷಣ ಮಾಡುತ್ತಾ ಶ್ರೀ ವೀರೇಂದ್ರಪಾಟೀಲರು ಇದೇ ತಿಂಗಳ 7–8 ತಾರೀಖುಗಳಲ್ಲಿ ಕಾಂಗ್ರೆಸ್ ಕಾರ್ಯಕಾರಿಯು ಮಹಾಜನ್ ವರದಿಯ ಬಗ್ಗೆ ಪರಿಶೀಲಿಸಲಿದ್ದು ಆ ಸಭೆಯಲ್ಲಿ ಭಾಗವಹಿಸಲಿರುವ ತಾವು ಕನ್ನಡಿಗರ ಹಿತರಕ್ಷಣೆಯ ಬಗ್ಗೆ ಆಲಕ್ಷ್ಯ ತಾಳಿ ಜಾರಿ ಬೀಳುವವನಲ್ಲ ಎಂದು ತಿಳಿಸಿದರು. ತಾವು ಈಗಿನ ಅಧಿಕಾರ ಸ್ಥಾನದಲ್ಲಿ ಎಷ್ಟು ದಿವಸ ಇರುವನೆಂಬುದು ಮಹತ್ವದ್ದಲ್ಲ. ಆದರೆ ಈ ಸ್ಥಾನದಲ್ಲಿ ಇರುವವರೆಗೂ ಕನ್ನಡ ಜನರಿಗೆ ದ್ರೋಹ ಮಾತ್ರ ಎಂದಿಗೂ ಮಾಡುವುದಿಲ್ಲವೆಂದು ಅವರು ಘೋಷಿಸಿದರು.

ADVERTISEMENT

ಅಧ್ಯಕ್ಷ ಚುನಾವಣೆ ಬಿಕ್ಕಟ್ಟು ಪಶ್ಚಿಮ ಜರ್ಮನಿ ವಿಮಾನಗಳಿಗೆ ರಕ್ಷಣೆ ಇಲ್ಲ: ರಷ್ಯಾ ಬೆದರಿಕೆ

ಮಾಸ್ಕೊ, ಮಾ. 2– ಪಶ್ಚಿಮ ಬರ್ಲಿನ್‌ನಲ್ಲಿ ಮಾರ್ಚ್ 5 ರಂದು ನಡೆಯುವ ಚುನಾವಣೆಗೆ ಪಶ್ಚಿಮ ಜರ್ಮನಿಯಿಂದ ಪಶ್ಚಿಮ ಬರ್ಲಿನ್‌ವರೆಗೆ ಬರುವ ವಿಮಾನಗಳನ್ನು, ಮತದಾರರನ್ನು ಸಾಗಿಸಲು ಉಪಯೋಗಿಸಿದರೆ ಅವುಗಳ ಸುರಕ್ಷತೆಗೆ ಭರವಸೆ ಕೊಡಲು ನಿರಾಕರಿಸಿ ರಷ್ಯಾ ಇಂದು ಪಶ್ಚಿಮ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿತು.

ಬರ್ಲಿನ್ನಿನ ರಷ್ಯಾ ಪ್ರದೇಶದಲ್ಲಿರುವ ವಿಮಾನ ಸುರಕ್ಷಣಾ ಕೇಂದ್ರದ ಮುಖ್ಯ ಕಂಟ್ರೋಲರ್ ಅವರು ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್‌ನ ಮುಖ್ಯ ಕಂಟ್ರೋಲರುಗಳಿಗೆ ಈ ಎಚ್ಚರಿಕೆ ನೀಡಿದರೆಂದು ಟಾಸ್ ವಾರ್ತಾ ಸಂಸ್ಥೆ ವರದಿ ಮಾಡಿದೆ.

ಬೇಸಾಯಕ್ಕಾಗಿ ಪ್ರಗತಿಶೀಲ ರೈತರಿಗೆ ಆರ್ಥಿಕ ನೆರವು

ನವದೆಹಲಿ, ಮಾ. 2– ಕೃಷಿ ಕಾರ್ಯಗಳಿಗಾಗಿ ಆರ್ಥಿಕ ನೆರವು ನೀಡುವ ಯೋಜನೆಯೊಂದನ್ನು ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ ರೂಪಿಸಿದೆ.

ಈ ಯೋಜನೆ ಪ್ರಕಾರ ಭೂಮಿ ಖರೀದಿ ಹೊರತು ಉಳಿದೆಲ್ಲ ರೀತಿಯ ವ್ಯವಸಾಯ ಚಟುವಟಿಕೆಗಳಿಗಾಗಿ ಪ್ರಗತಿಶೀಲ ರೈತರಿಗೆ ಮತ್ತು ಮಾರಾಟಕ್ಕೆ ಉಳಿಯುವಷ್ಟು ಹೆಚ್ಚುವರಿ ಉತ್ಪಾದನೆಯುಳ್ಳ ಗೇಣಿದಾರರಿಗೆ ಬ್ಯಾಂಕ್ ಸಾಲ ನೀಡಲಿದೆ.

1971ರ ವೇಳೆಗೆ ಹಾಸನದ ಬಳಿ ವಿಮಾನ ಇಳಿದಾಣ

ಹಾಸನ, ಮಾ. 2– ಹಾಸನದ ವಿಮಾನ ಇಳಿದಾಣ 1971ರ ವೇಳೆಗೆ ಸಿದ್ಧವಾಗುವುದು. ಏಪ್ರೋ ವಿಮಾನಗಳ ಬಳಕೆಗೆ ನಿರ್ಮಿಸಲಾಗುವ ಈ ಇಳಿದಾಣ ನಾಲ್ಕು ಸಾವಿರದ ಆರುನೂರು ಅಡಿ ಉದ್ದದ ರನ್‌ವೇ ಪಡೆದಿರುವುದು.

ಇಳಿದಾಣ ನಿರ್ಮಾಣ ಕ್ಷೇತ್ರಕ್ಕೆ ಇಂದು ಭೇಟಿಕೊಟ್ಟ ರಾಜ್ಯದ ಲೋಕೋಪಯೋಗಿ ಸಚಿವ ಶ್ರೀ ಎಂ. ಲಕ್ಕಪ್ಪ ಅವರು ಹಾಸನದಿಂದ ಇಳಿದಾಣಕ್ಕೆ ಎರಡು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಂಪರ್ಕ ರಸ್ತೆಯ ನಿರ್ಮಾಣಕ್ಕೆ ಒಪ್ಪಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.