ADVERTISEMENT

50 ವರ್ಷಗಳ ಹಿಂದೆ: ಚಂದ್ರನ ಮೇಲೆ ಎರಡು ಗಂಟೆ ಮಾನವನ ಓಡಾಟ

ಮಂಗಳವಾರ

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 18:44 IST
Last Updated 21 ಜುಲೈ 2019, 18:44 IST

ಚಂದ್ರನ ಮೇಲೆ ಎರಡು ಗಂಟೆ ಮಾನವನ ಓಡಾಟ

ಹೂಸ್ಟನ್, ಜುಲೈ 21– ಚಂದ್ರಗ್ರಹದಲ್ಲಿ ಮಾನವನು ಪ್ರಪ್ರಥಮ ಬಾರಿ ಕಾಲಿಟ್ಟು ಅದರ ‘ನೆಲದ’ ಮೇಲೆಲ್ಲಾ ಸುತ್ತಾಡಿದ 1969ರ ಜುಲೈ 21, ಮಾನವ ವರ್ಗದ ಇತಿಹಾಸದಲ್ಲೇ ಚಿರಸ್ಮರಣೀಯ ದಿನ.

ಈ ಅಸೀಮ ಸಾಹಸದ ಮೂಲಕ ತಮ್ಮ ಹೆಸರು, ತಮ್ಮ ದೇಶ– ಅಷ್ಟೇಕೆ, ಇಡೀ ಮಾನವ ಜನಾಂಗವನ್ನೇ ಅಮರಗೊಳಿಸಿದ ಖ್ಯಾತಿ ಅಮೆರಿಕದ ಇಬ್ಬರು ಅಂತರಿಕ್ಷ ಯಾತ್ರಿಗಳಾದ ನೀಲ್ ಆರ್ಮ್‌ಸ್ಟ್ರಾಂಗ್‌ ಮತ್ತು ಎಡ್ವಿನ್ ಆಲ್ಡ್ರಿನ್ ಅವರಿಗೆ ಸೇರಿದ್ದು.

ADVERTISEMENT

ಚಂದ್ರಗ್ರಹದ ಜಲರಹಿತ ಪ್ರಶಾಂತ ಸಮುದ್ರದಲ್ಲಿ ಚಂದ್ರಕೋಶ ‘ಈಗಲ್’ ಕರಾರುವಾಕ್ಕಾಗಿ ಇಳಿದ ಆರು ಗಂಟೆ 21 ನಿಮಿಷಗಳ ನಂತರ ಗಗನಯಾತ್ರಿಗಳು ತಮ್ಮ ಕೋಶದ ಬಾಗಿಲು ತೆರೆದರು.

ಈ ವಸುಂಧರೆ!

ಹೂಸ್ಟನ್, ಜುಲೈ 21– ‘ರಮಣೀಯವಾದ ದೃಶ್ಯ’ ಎಂದು ಚಂದ್ರಗ್ರಹವನ್ನು ತಲುಪಿರುವ ಗಗನಯಾತ್ರಿಗಳು ತಾವು ಇಳಿದಿರುವ ಸ್ಥಳದಿಂದ ಭೂಮಿಯನ್ನು ಬಣ್ಣಿಸಿದ್ದಾರೆ.

ಮದ್ರಾಸ್‌ನಲ್ಲಿ ಅನೇಕ ಶಾಲಾ–ಕಾಲೇಜಿಗೆ ರಜ

ಮದ್ರಾಸ್, ಜುಲೈ 21– ಚಂದ್ರಗ್ರಹದ ಮೇಲೆ ಮಾನವನು ನಡೆದಾಡಿದ ಸಂತೋಷಾರ್ಥವಾಗಿ ಇಂದು ಮದ್ರಾಸಿನಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿಗೆ ರಜ ಘೋಷಿಸಲಾಯಿತು.

ಅಂತರಿಕ್ಷ ಯಾನದಲ್ಲಿ ರಷ್ಯದ ಮತ್ತೊಂದು ದಾಖಲೆ, ‘ಲೂನಾ–15’ ಸಹ ಯಶಸ್ವೀ ಚಂದ್ರಸ್ಪರ್ಶ

ಜೋಡ್ರೆಲ್‌ಬ್ಯಾಂಕ್, ಇಂಗ್ಲೆಂಡ್, ಜುಲೈ 21– ರಷ್ಯದ ಮಾನವ ರಹಿತ ಲೂನಾ–15 ಉಪಗ್ರಹವು ಇಂದು ಮಧ್ಯಾಹ್ನ 3.50 ಗಂಟೆಗೆ (ಭಾರತೀಯ ಕಾಲಮಾನ ರಾತ್ರಿ 9.20) ಚಂದ್ರನ ಮೇಲೆ ಇಳಿಯಿತೆಂದು ಜೋಡ್ರೆಲ್ ಬ್ಯಾಂಕ್ ವೇಧಶಾಲೆ ಇಂದು ವರದಿ ಮಾಡಿದೆ.

ಅಮೆರಿಕದ ಗಗನಗಾಮಿಗಳಾದ ನೀಲ್ ಆರ್ಮ್‌ಸ್ಟ್ರಾಂಗ್‌ ಮತ್ತು ಎಡ್ವಿನ್‌ ಆಲ್ಡ್ರಿನ್ ಅವರು ಚಂದ್ರನಿಂದ ಹೊರಡಲು ಸಿದ್ಧರಾಗುತ್ತಿದ್ದಾಗ ಲೂನಾ ಅಲ್ಲಿ ಇಳಿಯಿತು.

ಉಪಗ್ರಹವು ಇಳಿದಿರುವುದೆಂದು ತೋರಿಸುವ ಸಂಕೇತಗಳು ಅಲ್ಲಿಂದ ಪ್ರಸಾರ ವಾಗಿವೆಯೆಂದೂ, ಅದು ಪಥ ತ್ಯಜಿಸಿ ಚಂದ್ರನ ನೆಲ ಮುಟ್ಟಿದಂತಿದೆ ಎಂದೂ ಖಗೋಳ ವಿಜ್ಞಾನಿ ಸರ್ ಬರ್ನಾರ್ಡ್ ಲೋವೆಲ್ ಹೇಳಿರುವುದಾಗಿ ಮಾಧ್ಯಮ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.