ADVERTISEMENT

ಭಾನುವಾರ, 10–4–1994

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 20:00 IST
Last Updated 9 ಏಪ್ರಿಲ್ 2019, 20:00 IST

‘ಕಾಶ್ಮೀರ ವಿವಾದಾತ್ಮಕ ಪ್ರದೇಶ ಅಲ್ಲ’
ಜಮ್ಮು, ಏ. 9 (ಪಿಟಿಐ, ಯುಎನ್‌ಐ)– ಕಾಶ್ಮೀರ ವಿವಾದಾತ್ಮಕ ಪ್ರದೇಶವಲ್ಲ. ಈ ವಿಷಯದಲ್ಲಿ ರಾಜಿ ಅಸಾಧ್ಯ ಎಂದು ಅಮೆರಿಕದಲ್ಲಿನ ಭಾರತೀಯ ರಾಯಭಾರಿ ಸಿದ್ಧಾರ್ಥ ಶಂಕರ ರಾಯ್ ಇಂದು ಇಲ್ಲಿ ಪುನರುಚ್ಚರಿಸಿದರು. ಕಾಶ್ಮೀರದ ಒಂದೇ ಒಂದು ಅಂಗುಲ ಜಾಗವನ್ನು ಭಾರತ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಜಮ್ಮು ವಕೀಲರ ಸಂಘದ ಸಭೆಯಲ್ಲಿ ಅವರು ಮಾತನಾಡಿ, ಕಾಶ್ಮೀರವು ಭಾರತದ ಅವಿಭಾಜ್ಯ ಭಾಗವಾಗಿದ್ದು, ಈ ಕುರಿತ ಯಾವುದೇ ವಿವಾದವನ್ನು ಶಿಮ್ಲಾ ಒಪ್ಪಂದಕ್ಕೆ ಅನುಗುಣವಾಗಿ ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು. ’ಕಾಶ್ಮೀರ ಪ್ರಶ್ನೆಯನ್ನು ಅಂತರರಾಷ್ಟ್ರೀಯ ವಿಷಯವಾಗಿ ಮಾಡುವಂತಿಲ್ಲ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಈ ವಿಷಯದ ಪ್ರಸ್ತಾಪದಿಂದ ಪಾಕಿಸ್ತಾನ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು.

ಕೇಂದ್ರ ವೇತನ ಆಯೋಗ ರಚನೆ
ನವದೆಹಲಿ, ಏ. 9 (ಯುಎನ್ಐ, ಪಿಟಿಐ)– ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್.ಆರ್. ಪಾಂಡ್ಯನ್ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಇಂದು ಮೂವರು ಸದಸ್ಯರ ಐದನೇ ವೇತನಾ ಆಯೋಗ ರಚಿಸಿ ಪ್ರಕಟಣೆ ಹೊರಡಿಸಿತು.

ADVERTISEMENT

ಆಯೋಗವು ಕೇಂದ್ರ ಸರ್ಕಾರಿ ನೌಕರರ ವೇತನ, ಪಿಂಚಣಿ ಸ್ವರೂಪಗಳನ್ನು ಪರಿಷ್ಕರಿಸಲಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕುತುಬ್– ರಕ್ಷಿತ ಸ್ಮಾರಕ
ನವದೆಹಲಿ, ಏ. 9 (ಪಿಟಿಐ)– ಇಲ್ಲಿನ ಕುತುಬ್ ಮಿನಾರ್ ಮತ್ತು ಹುಮಾಯುನನ ಗೋರಿಯನ್ನು ವಿಶ್ವಪರಂಪರೆಯ ರಕ್ಷಿತ ಸ್ಮಾರಕಗಳು ಎಂದು ಘೋಷಿಸಲಾಗಿದೆ.

ಯುನೆಸ್ಕೊ ಭಾರತದಲ್ಲಿ ಒಟ್ಟು 16 ಸ್ಮಾರಕಗಳನ್ನು ವಿಶ್ವ ಪರಂಪರೆಯ ರಕ್ಷಿತ ಸ್ಮಾರಕಗಳೆಂದು ಘೋಷಿಸಿದೆ. ಇವುಗಳೆಂದರೆ ಅಜಂತಾ, ಎಲ್ಲೊರಾ, ಆಗ್ರಾ ಕೋಟೆ, ತಾಜಮಹಲ್, ಕೊನಾರ್ಕ್ ಸೂರ್ಯ ದೇವಾಲಯ, ಮಹಾಬಲಿಪುರಂ, ಗೋವಾ ಚರ್ಚುಗಳು, ಖಜುರಾಹೊ, ಹಂಪಿ, ಫತೆಪುರ ಸಿಕ್ರಿ, ಪಟ್ಟದಕಲ್ಲು, ಎಲಿಫಂಟಾ ಗುಹೆಗಳು, ಬೃಹದೀಶ್ವರ ದೇವಾಲಯ ಮತ್ತು ಸಾಂಚಿ ಸ್ತೂಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.