ADVERTISEMENT

25 ವರ್ಷಗಳ ಹಿಂದೆ: ಮಂಗಳವಾರ, 31-10-1995

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 19:31 IST
Last Updated 30 ಅಕ್ಟೋಬರ್ 2020, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ರವಿಗೆ ‘ಪುಟ್ಟಣ್ಣ’, ಪಂಢರಿಬಾಯಿಗೆ ‘ರಾಜ್’ ಪ್ರಶಸ್ತಿ

ಬೆಂಗಳೂರು, ಅ. 30– ಹಿರಿಯ ಅಭಿನೇತ್ರಿ ಪಂಢರಿಬಾಯಿ ಅವರಿಗೆ 1994–95ನೇ ಸಾಲಿನ ಡಾ.ರಾಜಕುಮಾರ್ ಪ್ರಶಸ್ತಿ ಮತ್ತು ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಅನಂತನಾಗ್‌, ಶ್ರುತಿ ಶ್ರೇಷ್ಠ ನಟ, ನಟಿಯಾಗಿ, ‘ಗಂಗವ್ವ ಗಂಗಾಮಾಯಿ’ಯನ್ನು ಅತ್ಯುತ್ತಮ ಚಿತ್ರವನ್ನಾಗಿ ಆಯ್ಕೆ ಮಾಡಲಾಗಿದೆ.

ಚಿತ್ರ ನಿರ್ದೇಶಕ ಗಿರೀಶ ಕಾಸರವಳ್ಳಿ ನೇತೃತ್ವದ ಆಯ್ಕೆ ಸಮಿತಿ ಈ ಶಿಫಾರಸನ್ನು ಮಾಡಿದೆ. ಚಿತ್ರೋದ್ಯಮಕ್ಕೆ ಗಣನೀಯ ಕೊಡುಗೆ ನೀಡಿದವರಿಗೆ ರಾಜ್ ಮತ್ತು ಪುಟ್ಟಣ್ಣ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಇದು ತಲಾ ಒಂದು ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡಿದೆ.

ADVERTISEMENT

ಡಾ.ರಾಜಕುಮಾರ್ ಅವರು ನಾಯಕ ರಾಗಿ ನಟಿಸಿದ ಮೊದಲ ಚಿತ್ರ ‘ಬೇಡರ ಕಣ್ಣಪ್ಪ’ದಲ್ಲಿ ಪಂಢರಿಬಾಯಿಯವರು ನಾಯಕಿಯಾಗಿದ್ದರು ಎನ್ನುವುದು ಇಲ್ಲಿ ಗಮನಾರ್ಹ. ರವಿ ಎಂದೇ ಖ್ಯಾತರಾಗಿ ರುವ ಸ್ವಾಮಿಯವರು ಕಣಗಾಲ್ ಪುಟ್ಟಣ್ಣ ಅವರ ಆಪ್ತ ಗೆಳೆಯರಾಗಿದ್ದರಲ್ಲದೆ, ಪುಟ್ಟಣ್ಣ ಕೊನೆಯುಸಿರೆಳೆದಾಗ ಪೂರ್ತಿಯಾಗದೇ ನಿಂತಿದ್ದ ಅವರ ನಿರ್ದೇಶನದ ‘ಮಸಣದ ಹೂವು’ ಚಿತ್ರದ ಅಂತಿಮ ಭಾಗವನ್ನು ನಿರ್ದೇಶಿಸಿದ್ದರು.

ರೈತ ಸಂಘದಿಂದ ‘ಕಬ್ಬು ಸುಡುವ’ ಚಳವಳಿ

ಬೆಂಗಳೂರು, ಅ. 30– ಬೆಳೆದು ನಿಂತಿರುವ ಹೆಚ್ಚುವರಿ ಕಬ್ಬಿನ ಸಮಸ್ಯೆಯನ್ನು ಬಗೆ ಹರಿಸುವ ಪ್ರಯತ್ನ ಮಾಡದೆ ಭರವಸೆಗಳಲ್ಲೇ ಕಾಲಹರಣ ಮಾಡುವುದಾದರೆ ಕಬ್ಬು ಸುಡುವ ಮೂಲಕ ಸರ್ಕಾರದ ವಿರುದ್ಧ ರಾಜ್ಯದಾದ್ಯಂತ ಚಳವಳಿ ಆರಂಭಿಸುವುದಾಗಿ ರಾಜ್ಯ ರೈತ ಸಂಘದ ಅಧ್ಯಕ್ಷ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಇಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.