ADVERTISEMENT

25 ವರ್ಷಗಳ ಹಿಂದೆ: ಭಾನುವಾರ, 26–11–1995

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 19:45 IST
Last Updated 25 ನವೆಂಬರ್ 2020, 19:45 IST
   

ತಪ್ಪು ಮಾಹಿತಿ ಆಧರಿಸಿ ಹಟ್ಟಿ ಲಾಕ್‌ಔಟ್‌: 48 ತಾಸಿನಲ್ಲಿ ತೆರವು
ಬೆಂಗಳೂರು, ನ. 25–
ಅರೆಬರೆ ಮಾಹಿತಿಯನ್ನು ಆಧರಿಸಿ ಸಾರ್ವಜನಿಕ ಕ್ಷೇತ್ರದ ಲಾಭದಾಯಕ ಉದ್ಯಮವೊಂದಕ್ಕೆ ಸರ್ಕಾರವೇ ಬೀಗಮುದ್ರೆ (ಲಾಕ್‌ಔಟ್‌) ಘೋಷಿಸಿ, ಮುಂದೆ ಕೇವಲ ನಲವತ್ತೆಂಟು ಗಂಟೆಗಳಲ್ಲಿಯೇ ಅದನ್ನು ಹಿಂತೆಗೆದುಕೊಂಡು, ಕಾರ್ಮಿಕರೊಂದಿಗೆ ಮಾತುಕತೆಗೆ ಸಜ್ಜಾದ ಅಭೂತಪೂರ್ವ ಪ್ರಕರಣ ಹಟ್ಟಿ ಚಿನ್ನದ ಗಣಿಯಲ್ಲಿ ಜರುಗಿರುವುದು ಇದೀಗ ಬಯಲಾಗಿದೆ.

ಸಂಪೂರ್ಣವಾಗಿ ರಾಜ್ಯ ಸರ್ಕಾರದ ಸ್ವಾಮಿತ್ವದ ಹಟ್ಟಿ ಚಿನ್ನದ ಗಣಿ ಕಳೆದ ಹಲವಾರು ವರ್ಷಗಳಿಂದ ಲಾಭ ಮಾಡಿ ಕೊಂಡು ಬಂದಿದ್ದು, ಇತ್ತೀಚಿನ ಕೆಲವು ದಿನಗಳಲ್ಲಿ ಕಾರ್ಮಿಕರು ಮತ್ತು ಆಡಳಿತ ವರ್ಗದ ನಡುವೆ ಉದ್ಭವಿಸಿದ ಬಿಕ್ಕಟ್ಟು ಅಂತಿಮವಾಗಿ ಲಾಕ್‌ಔಟ್ ಘೋಷಣೆಯಲ್ಲಿಪರ್ಯವಸಾನವಾಯಿತು.

ಪಾಕ್‌ಗೆ ಶಸ್ತ್ರಾಸ್ತ್ರ– ಲೋಕಸಭೆ ಚರ್ಚೆ
ನವದೆಹಲಿ, ನ. 25 (ಪಿಟಿಐ)–
ಸೋಮವಾರ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಬೆಲೆ ಏರಿಕೆ, ರೂಪಾಯಿಯ ಅಪಮೌಲ್ಯ ಮತ್ತು ಪಾಕಿಸ್ತಾನಕ್ಕೆ ಅಮೆರಿಕವು ಇತ್ತೀಚೆಗೆ ನೀಡಿದ 37 ಕೋಟಿ ಡಾಲರ್ ಶಸ್ತ್ರಾಸ್ತ್ರ ನೆರವಿನ ಬಗ್ಗೆ ವ್ಯಾಪಕ ಚರ್ಚೆ ನಡೆಯುವ ಸಂಭವವಿದೆ.

ADVERTISEMENT

ಲೋಕಸಭಾ ಸ್ಪೀಕರ್ ಶಿವರಾಜ್ ಪಾಟೀಲ್ ಅವರ ನೇತೃತ್ವದಲ್ಲಿ ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಒಮ್ಮತಕ್ಕೆ ಬರಲಾಯಿತು. ಸಭೆಯಲ್ಲಿ ಪ್ರತಿಪಕ್ಷ ನಾಯಕರಲ್ಲದೆ ಸಂಸದೀಯ ವ್ಯವಹಾರಗಳ ಸಚಿವ ವಿ.ಸಿ.ಶುಕ್ಲಾ ಅವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.