ADVERTISEMENT

ಗುರುವಾರ, 17–3–1994

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2019, 20:26 IST
Last Updated 16 ಮಾರ್ಚ್ 2019, 20:26 IST

ಜಲ ಯೋಜನೆಗಳಿಂದ ಪಶ್ಚಿಮ ಘಟ್ಟಕ್ಕೆ ಕುತ್ತು
ನವದೆಹಲಿ, ಮಾ. 16 (ಪಿಟಿಐ)– ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದಲ್ಲಿ ಹರಿಯುವ ಎರಡು ನದಿಗಳಿಗೆ ಅಡ್ಡಲಾಗಿ ನಿರ್ಮಿಸುವ ಹೊಸ ಜಲಾಶಗಳಿಂದ ಹತ್ತು ಸಾವಿರ ಹೆಕ್ಟೇರ್ ನಿತ್ಯ ಹರಿದ್ವರ್ಣದ ಕಾಡು ಮತ್ತು 125 ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಲಿವೆ ಎಂದು ಉಪಗ್ರಹ ಛಾಯಾ ಚಿತ್ರದ ವಿಶ್ಲೇಷಣೆಯಿಂದ ತಿಳಿದು ಬಂದಿದೆ.

ಈ ಪ್ರದೇಶ ಭಾರತದ ಅತ್ಯಂತ ಶ್ರೀಮಂತ ಮತ್ತು ಸಮೃದ್ಧ ಕಾಡುಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಬೆಂಗಳೂರಿನ ದೂರ ಸಂವೇದಿ ತಜ್ಞರು ಪಶ್ಚಿಮ ಘಟ್ಟದಲ್ಲಿನ ಯೋಜನೆಗಳಿಂದ ಉತ್ತರ ಕನ್ನಡದ ಭೂಮಿ ಬಳಕೆ ಹಾಗೂ ಭೂ ಸ್ಥಿತಿಯ ಮೇಲಾಗುವ ಪರಿಣಾಮಗಳ ಬಗ್ಗೆ ಉಪಗ್ರಹ ಛಾಯಾಚಿತ್ರಗಳ ಮೂಲಕ ಅಧ್ಯಯನ ಕೈಗೊಂಡಿದ್ದರು. ಕಾಳಿ ಮತ್ತು ಅದರ ಉಪನದಿಗಳಿಗೆ ನಿರ್ಮಿಸಿದ ಅಣೆಕಟ್ಟೆಗಳು 1970ರ ಮಧ್ಯಭಾಗದಿಂದೀಚೆಗೆ 15 ಸಾವಿರ ಹೆಕ್ಟೇರ್ ಕಾಡಿನ ನಾಶಕ್ಕೆ ಕಾರಣವಾಗಿದೆ ಎಂದು ಅಧ್ಯಯನ ವರದಿ ವಿವರಿಸಿದೆ.

ADVERTISEMENT

**

ನಗರ ಪಾಲಿಕೆ ಕಚೇರಿ ಎದುರು ಶವದ ಜೊತೆ ಧರಣಿ
ಬೆಂಗಳೂರು, ಮಾ. 16– ರುದ್ರಭೂಮಿಗೆ ಶವ ಸಾಗಿಸಲು ಡೀಸೆಲ್ ಇಲ್ಲ ಎಂಬ ಸಬೂಬು ನೀಡಿ ಮಹಾನಗರಪಾಲಿಕೆ ಅಧಿಕಾರಿಗಳು ಶವವಾಹನ ಕಳಿಸದೇ ಇದ್ದುದನ್ನು ಖಂಡಿಸಿ ಮಹಾನಗರ ಪಾಲಿಕೆಯ ಪ್ರಧಾನ ಕಚೇರಿ ಎದುರಿಗೇ ತಂದಿಟ್ಟು ಅಲ್ಲೇ ದಫನ್ ಮಾಡುವುದಾಗಿ ಜನರು ಧರಣಿ ಕುಳಿತ ಅಪರೂಪದ ಘಟನೆ ಇಂದು ನಡೆಯಿತು.

ಬೆಂಗಳೂರು ಮಹಾನಗರಪಾಲಿಕೆ ಇತಿಹಾಸದಲ್ಲೇ ಕಚೇರಿಯ ಎದುರು ಶವ ಇಟ್ಟು ಜನರು ಧರಣಿ ಕುಳಿತದ್ದು ಇದೇ ಮೊದಲು. ‘ಇನ್ನೆಂದೂ ಇಂಥ ತೊಂದರೆ ಮರುಕಳಿಸದಂತೆ ಎಚ್ಚರ ವಹಿಸುತ್ತೇವೆ’ ಎಂದು ತಮ್ಮನ್ನು ಮುತ್ತಿದ ಯುವಕರಿಗೆ ಪಾಲಿಕೆಯ ಆಯುಕ್ತ ಪಿ.ಡಿ. ಶೆಣೈ ಭರವಸೆ ನೀಡಿ ವ್ಯಾನ್ ಒದಗಿಸಿದ ನಂತರ ಉದ್ರಿಕ್ತ ಸ್ಥಿತಿ ತಹಬಂದಿಗೆ ಬಂತು.

**

ಪರಿಶೀಲನೆ ನಂತರ ಬ್ರಿಟನ್ ವಿಮಾನ ಖರೀದಿ
ಎಡಿನ್‌ಬರೊ, ಮಾ. 16 (ಯುಎನ್‌ಐ, ಪಿಟಿಐ)– ಸುಧಾರಿತ ‘ಹಾಕ್’ ತರಬೇತಿ ಜೆಟ್ ವಿಮಾನವನ್ನು ಬ್ರಿಟನ್ನಿನಿಂದ ಖರೀದಿಸುವುದಕ್ಕೆ ಸಂಬಂಧಿಸಿದಂತೆ ಭಾರತ ಯಾವುದೇ ಆತುರದ ನಿರ್ಧಾರ ಕೈಗೊಳ್ಳಲು ಇಚ್ಛಿಸುವುದಿಲ್ಲ ಎಂದು ಪ್ರಧಾನಮಂತ್ರಿ ಪಿ.ವಿ. ನರಸಿಂಹ ರಾವ್ ಇಂದು ಇಲ್ಲಿ ಸ್ಪಷ್ಟಪಡಿಸಿದರು.

ಲಂಡನ್ನಿನಿಂದ ಎಡಿನ್‌ಬರೊಗೆ ಆಗಮಿಸುವಾಗ ವಿಮಾನದಲ್ಲಿ ವರದಿಗಾರರೊಡನೆ ಮಾತನಾಡಿದ ಅವರು ‘ಹಾಕ್’ ವಿಮಾನಗಳ ಪೂರೈಕೆಗೆ ಸಂಬಂಧಿಸಿದಂತೆ ಬ್ರಿಟನ್ ಸಲಹೆ ಕುರಿತು ಪರಿಶೀಲನೆ ಅಗತ್ಯ. ಇದಕ್ಕೆ ಕಾಲಾವಕಾಶ ಬೇಕು ಎಂದು ನುಡಿದರು.

**

ಪ್ರವೇಶ ಪರೀಕ್ಷೆ ಶುಲ್ಕ 80 ರೂ ಏರಿಕೆ
ಬೆಂಗಳೂರು, ಮಾ. 16– ತಾಂತ್ರಿಕ ಶಿಕ್ಷಣ ನಿರ್ದೇಶನಾಲಯವು ಸಾಮಾನ್ಯ ಪ್ರವೇಶ ಪರೀಕ್ಷೆಯ ಅರ್ಜಿ ಶುಲ್ಕವನ್ನು 200 ರೂಪಾಯಿಗೆ ಹೆಚ್ಚಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ವೃತ್ತಿ ಶಿಕ್ಷಣದ ಪ್ರವೇಶ ವಿಧಾನವನ್ನು ಅತ್ಯಾಧುನಿಕಗೊಳಿಸುವ ಯೋಜನೆಯ ಫಲ ಇದಾಗಿದೆ.

ಇದರಿಂದ ಅರ್ಜಿ ಬೆಲೆ ಕಳೆದ ವರ್ಷಕ್ಕಿಂತ 80 ರೂಪಾಯಿ ಹೆಚ್ಚಾಗಿದೆ. ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಅರ್ಜಿ ಶುಲ್ಕ 50 ರೂಪಾಯಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.