ಕಾರ್ಗಿಲ್‌ನಲ್ಲಿ ಗುಂಡಿನ ದಾಳಿ: 15 ಉಗ್ರರು ಸೇರಿ 30 ಸಾವು
ಶ್ರೀನಗರ, ಮೇ 16 (ಯುಎನ್‌ಐ, ಪಿಟಿಐ)– ಕಾರ್ಗಿಲ್ ಮತ್ತು ಡ್ರಾಸ್ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನಿ ಅತಿಕ್ರಮಣಕಾರರ ವಿರುದ್ಧ ಭಾರತೀಯ ಸೇನಾಪಡೆಗಳು ಕಳೆದ ಒಂದು ವಾರದಿಂದ ಭಾರಿ ಕಾರ್ಯಾಚರಣೆ ನಡೆಸುತ್ತಿದ್ದು, ಇದುವರೆಗೆ 15 ಮಂದಿ ಭಯೋತ್ಪಾದಕರ ಸಹಿತ 30 ಮಂದಿ ಸತ್ತಿದ್ದಾರೆ.
ಕಾರ್ಗಿಲ್ ಮೂಲಕ ಭಯೋತ್ಪಾದಕರನ್ನು ದೇಶದೊಳಕ್ಕೆ ನುಗ್ಗಿಸುವುದಕ್ಕಾಗಿಯೇ ಅಲ್ಲಿ ಪಾಕಿಸ್ತಾನಿ ಪಡೆಗಳು ಭಾರತೀಯ ನೆಲೆಗಳತ್ತ ಭಾರಿ ಶೆಲ್ ದಾಳಿ ನಡೆಸುತ್ತಿವೆ. ಇದಕ್ಕೆ ಪ್ರತಿಯಾಗಿ ಭಾರತೀಯ ಪಡೆಗಳು ನಿಯಂತ್ರಣ ರೇಖೆಯಲ್ಲಿನ ಹಳ್ಳಿಗಳನ್ನು ಭಾಗಶಃ ತಮ್ಮ ವಶಕ್ಕೆ ತೆಗೆದುಕೊಂಡು ಇಲ್ಲಿ ಉಗ್ರರಿಗೆ ಯಾವುದೇ ನೆಲೆ ದೊರಕದಂತೆ ಮಾಡಿವೆ.
ಸೋನಿಯಾ ವಿರುದ್ಧ ಕಾಂಗ್ರೆಸ್‌ನಲ್ಲಿ ಬಂಡಾಯ
ನವದೆಹಲಿ, ಮೇ 16 (ಪಿಟಿಐ, ಯುಎನ್‌ಐ)– ವಿದೇಶಿ ಮೂಲದ ಸೋನಿಯಾ ಗಾಂಧಿ ಅವರನ್ನು ದೇಶದ ಮುಂದಿನ ಪ್ರಧಾನಿ ಎಂದು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವುದಕ್ಕೆ ಕಾಂಗ್ರೆಸ್ ಪಕ್ಷದ ಇಬ್ಬರು ಮುಂಚೂಣಿ ನಾಯಕರಾದ ಶರದ್ ಪವಾರ್ ಹಾಗೂ ಪಿ.ಎ. ಸಂಗ್ಮಾ ಮತ್ತು ಈಗಾಗಲೇ ಭಿನ್ನಮತದ ಪತಾಕೆಯನ್ನು ಹಾರಿಸಿರುವ ತಾರೀಖ್ ಅನ್ವರ್ ವಿರೋಧ ವ್ಯಕ್ತಪಡಿಸಿದ್ದಾರೆ.
ಅವರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರವೊಂದನ್ನು ಬರೆದಿದ್ದು, ಈ ವಿಷಯದ ಚರ್ಚೆಗೆ ಸೋನಿಯಾ ಗಾಂಧಿ ಕಾರ್ಯಕಾರಿ ಸಮಿತಿಯ ತುರ್ತು ಸಭೆಯೊಂದನ್ನು ನಾಳೆ ಕರೆದಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.