ADVERTISEMENT

ಸೋಮವಾರ, 27–6–1994

ಸೋಮವಾರ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 18:59 IST
Last Updated 26 ಜೂನ್ 2019, 18:59 IST

ಇಂದು ದಳದ ಸಭೆ– ಲಲ್ಲೂ, ಬಿಜು ಪಾಲ್ಗೊಳ್ಳಲು ನಕಾರ

ಪಟ್ನಾ, ಜೂನ್ 26 (ಪಿಟಿಐ)– ಜನತಾ ದಳದ ಹಿರಿಯ ನಾಯಕರ ಎರಡು ದಿನಗಳ ಸಭೆ ನಾಳೆ ದೆಹಲಿಯಲ್ಲಿ ಆರಂಭವಾಗಲಿದೆ. ಆದರೆ ಬಿಹಾರ್ ಮುಖ್ಯಮಂತ್ರಿ ಲಲ್ಲೂ ಪ್ರಸಾದ್ ಯಾದವ್ ಹಾಗೂ ಒರಿಸ್ಸಾ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಇದರಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿರುವ ಕಾರಣ ಸಭೆ ವ್ಯರ್ಥ ಕಸರತ್ತಾಗುವ ಲಕ್ಷಣಗಳು ಕಂಡುಬರುತ್ತಿವೆ.

ಪಕ್ಷದ ಅಧ್ಯಕ್ಷ ಎಸ್.ಆರ್. ಬೊಮ್ಮಾಯಿ ಅವರು ಸಂಧಾನ ಯತ್ನ ನಡೆಸುತ್ತಿದ್ದು ಇದುವರೆಗೆ ಹೆಚ್ಚಿನ ಪ್ರಗತಿ ಕಂಡುಬಂದಿಲ್ಲ. ಲಲ್ಲೂ ಪ್ರಸಾದ್ ಯಾದವ್ ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದು ‘ಜೂನ್ 29ರಿಂದ ವಿಧಾನಸಭೆ ಅಧಿವೇಶನ ಆರಂಭವಾಗುತ್ತಿದ್ದು, ರಾಜ್ಯದಿಂದ ಹೊರಗೆ ಹೋಗಿ ಸಭೆಯಲ್ಲಿ ಭಾಗವಹಿಸಲು ನನಗೆ ಪುರುಸೊತ್ತೆಲ್ಲಿದೆ’ ಎಂದು ಪ್ರಶ್ನಿಸಿದರು.

ADVERTISEMENT

ರೋರಿಚ್ ಆಸ್ತಿಗೆ ಟ್ರಸ್ಟ್– ಮೇರಿ ವಿಫಲ ಯತ್ನ

ಬೆಂಗಳೂರು, ಜೂನ್ 26– ರೋರಿಚ್ ದಂಪತಿಯ ಕೋಟ್ಯಂತರ ರೂಪಾಯಿ ಬೆಲೆ ಆಸ್ತಿ ಕಬಳಿಸುವ ಉದ್ದೇಶದಿಂದ ಅವರ ಕಾರ್ಯದರ್ಶಿ ಮೇರಿ ಜಾಯ್ಸ್ ಪೂಣಚ್ಚ ಅಂತರ್‌ರಾಷ್ಟ್ರೀಯ ಟ್ರಸ್ಟೊಂದನ್ನು ರಚಿಸಲು ಪ್ರಯತ್ನಿಸಿ ವಿಫಲರಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ರಾಷ್ಟ್ರಪತಿ ಶಂಕರ ದಯಾಳ್ ಶರ್ಮಾ, ರಷ್ಯದ ಅಧ್ಯಕ್ಷ ಬೋರಿಸ್ ಯೆಲ್ಸಿನ್, ಎಸ್.ಎಂ. ಕೃಷ್ಣ (ಈಗ ಉಪಮುಖ್ಯಮಂತ್ರಿ), ನೇಪಾಳದಲ್ಲಿ ರಷ್ಯಾದ ರಾಯಭಾರಿ ಆಗಿರುವ ಅಲೆಗ್ಸಾಂಡರ್ ಕಡಕಿನ್, ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿ ನಂಜುಂಡರಾವ್ ಹಾಗೂ ತಮ್ಮನ್ನೊಳಗೊಂಡ ಟ್ರಸ್ಟ್ ರಚಿಸಲು ಮೇರಿ ಜಾಯ್ಸ್ ಪ್ರಯತ್ನಿಸಿದ್ದರು.

ಈ ಸಂಬಂಧ 1992 ಜೂನ್ 15ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಸಭೆಯೊಂದು ನಡೆಯಿತು. ಅಲೆಗ್ಸಾಂಡರ್ ಕಡಕಿನ್ ಅವರೂ ಸೇರಿದಂತೆ ರಷ್ಯದ ಹಲವು ಗಣ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು. ಮೇರಿ ಅವರ ಅನುಮಾನಾಸ್ಪದ ನಡವಳಿಕೆಯಿಂದಾಗಿ ಟ್ರಸ್ಟ್ ರಚನೆಗೆ ರಷ್ಯ ಗಣ್ಯರು ಒಪ್ಪಲಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.