ADVERTISEMENT

ಬುಧವಾರ, 30–11–1994

ಬುಧವಾರ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 19:37 IST
Last Updated 29 ನವೆಂಬರ್ 2019, 19:37 IST

ಆಂಧ್ರದಲ್ಲಿ ಮತ್ತೆ ನಕ್ಸಲೀಯರ ಕೃತ್ಯ: ನೆಲಬಾಂಬ್ ಸ್ಫೋಟ– ಎಂಟು ಪೊಲೀಸರು ಸೇರಿ ಹತ್ತು ಸಾವು

ಹೈದರಾಬಾದ್, ನ. 29 (ಯುಎನ್‌ಐ, ಪಿಟಿಐ)– ವಾರಂಗಲ್‌ಗೆ ಸಮೀಪದ ಉರುಗೊಂಡ ಗ್ರಾಮದಲ್ಲಿ ಸಂಭವಿಸಿದ ನೆಲಬಾಂಬ್ ಸ್ಫೋಟಕ್ಕೆ ಇಂದು ಆಂಧ್ರ ಪ್ರದೇಶ ವಿಶೇಷ ಪೊಲೀಸ್‌ ಪಡೆಗೆ ಸೇರಿದ ಎಂಟು ಮಂದಿ ಪೊಲೀಸರೂ ಸೇರಿದಂತೆ ಹತ್ತು ಮಂದಿ ಬಲಿಯಾಗಿದ್ದಾರೆ. ಗಾಯಗೊಂಡಿರುವ ಇತರ ಹನ್ನೆರಡು ಮಂದಿ ಪೊಲೀಸರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿರುವ ಪೀಪಲ್ಸ್ ವಾರ್ ಗ್ರೂಪ್‌ಗೆ ಸೇರಿದ ನಕ್ಸಲೀಯರು ನಡೆಸುತ್ತಿರುವ ಚುನಾವಣಾ ಪೂರ್ವ ಹಿಂಸಾಚಾರದಲ್ಲಿ ಇದು ಎರಡನೇ ಭೀಕರ ಘಟನೆಯಾಗಿದೆ.

ದೇವೇಗೌಡ ಹತ್ಯೆಗೆ ಸಂಚು 4 ಜನರ ಬಂಧನ

ADVERTISEMENT

ಬೆಂಗಳೂರು, ನ. 29– ಪ್ರದೇಶ ಜನತಾದಳದ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರ ಹತ್ಯೆ ಮಾಡಲು ಹಾಸನದಿಂದ ರಾಮನಗರಕ್ಕೆ ಬಂದಿದ್ದರು ಎನ್ನಲಾದ ನಾಲ್ವರ ತಂಡವೊಂದನ್ನು ಪಕ್ಷದ ಕಾರ್ಯಕರ್ತರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಂಧಿತರಲ್ಲಿ ಯೋಜನಾ ಖಾತೆ ಸಚಿವ ಕೆ.ಎಚ್. ಹನುಮೇಗೌಡ ಅವರ ಗನ್‌ಮ್ಯಾನ್ ಕೃಷ್ಣೇಗೌಡ (30) ಮತ್ತು ಅವರ ಕಾರಿನ ಚಾಲಕ ಮಹಮದ್ ಅನ್ವರ್ (40) ಸಹ ಸೇರಿದ್ದು, ಗುಂಡುಗಳು ತುಂಬಿದ್ದ 12 ಸುತ್ತಿನ ಒಂದು ರಿವಾಲ್ವರ್ ಮತ್ತು ಅಂಬಾಸಿಡರ್ ಕಾರನ್ನು ಐಜೂರು ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡು ಕೊಲೆ ಯತ್ನ ಮೊಕದ್ದಮೆಯನ್ನು ದಾಖಲು ಮಾಡಿಕೊಂಡಿದ್ದಾರೆ. ಹಾಸನದ ನಗರಸಭಾ ಸದಸ್ಯರ ಕಾರಿನ ಚಾಲಕ ಸನಾವುಲ್ಲಾ (30) ಮತ್ತು ಹಾಸನ ಸಮೀಪದ ಕಮಲಾಪುರ ಅಂಚೆ ಮತ್ತು ತಂತಿ ಕಾಲೊನಿಯ ನಿವಾಸಿ ಕೃಷ್ಣೇಗೌಡ (42) ಬಂಧಿತರಾದ ಇನ್ನಿಬ್ಬರು ಆರೋಪಿಗಳು.

ಬಳ್ಳಾರಿ ವಿದ್ಯುತ್ ಯೋಜನೆಗೆ ಅಸ್ತು

ನವದೆಹಲಿ, ನ. 29 (ಯುಎನ್‌ಐ)– ವಿದೇಶಿ ಬಂಡವಾಳ ಹೂಡಿಕೆಯ ವಿದ್ಯುತ್ ಕ್ಷೇತ್ರದ ಮೂರು ಹಾಗೂ ತ್ರಿಪುರಾದಲ್ಲಿನ ಅನಿಲ ಆಧಾರಿತ ವಿದ್ಯುತ್ ಉತ್ಪಾದನೆಯ ಒಂದು ಯೋಜನೆಗೆ ಕೇಂದ್ರ ಸರ್ಕಾರ ಇಂದು ಅನುಮೋದನೆ ನೀಡಿತು.

ಈ ವಿದ್ಯುತ್ ಯೋಜನೆಗಳನ್ನು ಕರ್ನಾಟಕದ ಬಳ್ಳಾರಿ ಜಿಲ್ಲೆ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ಸ್ಥಾಪಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.