ADVERTISEMENT

25 ವರ್ಷಗಳ ಹಿಂದೆ: 14–09–1997

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 19:30 IST
Last Updated 13 ಸೆಪ್ಟೆಂಬರ್ 2022, 19:30 IST
   

ಮದರ್‌ ತೆರೇಸಾಗೆ ವಿಶ್ವಗಣ್ಯರ ಅಂತಿಮ ನಮನ

ಕೋಲ್ಕತ್ತ, ಸೆ.13 (ಪಿಟಿಐ, ಯುಎನ್‌ಐ)– ಅನಾಥ ಮಕ್ಕಳ ಆಶಾಕಿರಣ, ದೀನರ ಬಂಧು, ಅಶಕ್ತರ ಊರುಗೋಲು, ಜಗದ ಮಹಾಮಾತೆ ಹಾಗೂ ಪರರ ಸೇವೆಗೆ ತನ್ನನ್ನು ಸಮರ್ಪಿಸಿಕೊಂಡು ‘ಕರುಣಾಮಯಿ’ಯಾಗಿ ಬದುಕಿದ ಮದರ್‌ ತೆರೇಸಾ ಅವರ ಅಂತ್ಯಕ್ರಿಯೆ ಇಲ್ಲಿನ ‘ಮದರ್‌ ಹೌಸ್‌’ನಲ್ಲಿ ಕ್ರಿಶ್ಚಿಯನ್‌ ಆರಾಧನಾ ವಿಧಿ ಹಾಗೂ ಪ್ರಾರ್ಥನೆಯೊಂದಿಗೆ ಇಂದು ಮಧ್ಯಾಹ್ನ 3 ಗಂಟೆಗೆ ಸರ್ಕಾರಿ ಗೌರವದಲ್ಲಿ ನಡೆಯಿತು.

‘ಮದರ್‌ ಹೌಸ್‌’ನಲ್ಲಿ ಖಾಸಗಿಯಾಗಿ ನಡೆದ ಸಮಾಧಿ ಪ್ರಕ್ರಿಯೆ ಮುಗಿದ ನಂತರ ಮನೆ ಮುಂದೆ ಸಾಲುಗಟ್ಟಿ ನಿಂತಿದ್ದ ಸೈನಿಕರು 14 ಬಂದೂಕುಗಳಿಂದ ತಲಾ ಮೂರು ಸುತ್ತು ಕುಶಾಲುತೋಪುಗಳನ್ನು ಆಕಾಶಕ್ಕೆ ಹಾರಿಸುವ ಮೂಲಕ ಸರ್ಕಾರಿ ಗೌರವದ ಅಂತ್ಯಸಂಸ್ಕಾರಕ್ಕೆ ಮಂಗಳ ಹಾಡಿದರು.

ADVERTISEMENT

ಮಧ್ಯಂತರ ಚುನಾವಣೆ: ಕಾಂಗ್ರೆಸ್‌ ಲೆಕ್ಕಾಚಾರ

ನವದೆಹಲಿ, ಸೆ.13 – ಪ್ರಧಾನಿ ಐ.ಕೆ.ಗುಜ್ರಾಲ್‌ ಅವರ ಸರ್ಕಾರಕ್ಕೆ ಇನ್ನೊಂದು ವರ್ಷ ಮಾತ್ರ ಜೀವ ನೀಡುವುದಾಗಿ ಕೆಲ ದಿನಗಳ ಹಿಂದೆ ಹೇಳಿದ ಕಾಂಗ್ರೆಸ್‌ ಅಧ್ಯಕ್ಷ ಸೀತಾರಾಂ ಕೇಸರಿ ಅವರು, ಬರುವ ಫೆಬ್ರುವರಿ ಮಾರ್ಚ್‌ ಹೊತ್ತಿಗೆ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆಗಳ ಬಗೆಗೆ ಲೆಕ್ಕಾಚಾರ ಹಾಕುತ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರೀಗ ಪಕ್ಷದ ಕೆಲವು ಹಿರಿಯ ನಾಯಕರೊಡನೆ ಅನೌಪಚಾರಿಕವಾಗಿ ಮಾತುಕತೆ ನಡೆಸುತ್ತಿದ್ದಾರೆಂದು ವಿಶ್ವಾಸನೀಯ ಮೂಲಗಳು ಹೇಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.