ADVERTISEMENT

25 ವರ್ಷಗಳ ಹಿಂದೆ: ತೃತೀಯ ರಾಜಕೀಯ ರಂಗಕ್ಕೆ ಸಿಪಿಎಂ ಒಲವು

ಮಂಗಳವಾರ, 6–10–1998

ಪ್ರಜಾವಾಣಿ ವಿಶೇಷ
Published 5 ಅಕ್ಟೋಬರ್ 2023, 23:30 IST
Last Updated 5 ಅಕ್ಟೋಬರ್ 2023, 23:30 IST
<div class="paragraphs"><p>25 ವರ್ಷಗಳ ಹಿಂದೆ</p></div>

25 ವರ್ಷಗಳ ಹಿಂದೆ

   

ತೃತೀಯ ರಾಜಕೀಯ ರಂಗಕ್ಕೆ ಸಿಪಿಎಂ ಒಲವು

ಇಎಂಎಸ್ ನಗರ (ಕಲ್ಕತ್ತ) ಅ. 5 (ಯುಎನ್ಐ, ಪಿಟಿಐ)– ಭಾರತೀಯ ಜನತಾ ಪಕ್ಷವನ್ನು ಮೂಲೆಗುಂಪು ಮಾಡಲು ಪ್ರಜಾಸತ್ತಾತ್ಮಕ ಹಾಗೂ ಎಡಪಕ್ಷಗಳನ್ನು ಒಳಗೊಂಡ ತೃತೀಯ ಪರ್ಯಾಯ ಶಕ್ತಿ ಕಟ್ಟುವ ಯತ್ನವನ್ನು ಮುಂದುವರಿಸಬೇಕೆಂಬ ಕರೆಯೊಂದಿಗೆ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ 16ನೇ ಸಮ್ಮೇಳನ ಇಂದು ಇಲ್ಲಿ ಆರಂಭವಾಯಿತು. 

ADVERTISEMENT

ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ರಾಜಕೀಯ ನಿರ್ಣಯದ ಕರಡನ್ನು ಮಂಡಿಸಿದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಹರ್‌ಕಿಷನ್ ಸಿಂಗ್ ಸುರ್ಜಿತ್ ಅವರು, ಬಿಜೆಪಿ, ಆರ್‌ಎಸ್ಎಸ್ ನಡುವಣ ಸಂಬಂಧ ಹಾಗೂ ಅದರ ನೀತಿ– ಸಿದ್ಧಾಂತ ದೇಶಕ್ಕೆ ಅಪಾಯಕಾರಿ ಎಂದು ಟೀಕಿಸಿದರು. 

ಬಿಜೆಪಿ ಅಧಿಕಾರಕ್ಕೆ ಬರುವುದರೊಂದಿಗೆ ಬಲಿಷ್ಠಗೊಂಡಿರುವ ಮತೀಯ ಶಕ್ತಿಗಳ ವಿರುದ್ಧದ ಹೋರಾಟಕ್ಕೆ ಎಡ ಹಾಗೂ ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಅಣಿಗೊಳಿಸಬೇಕಾಗಿದೆ. ಹಾಗೆಯೇ, ಆರ್ಥಿಕ ಉದಾರೀಕರಣದ ವಿರುದ್ಧವೂ ಚಳವಳಿ ಮುಂದುವರಿಸಬೇಕಿದೆ ಎಂದು ಸುರ್ಜಿತ್ ಹೇಳಿದರು. 

ವಿಧಾನಸಭೆ ವಿಸರ್ಜನೆ ಬೆದರಿಕೆ

ಬೆಂಗಳೂರು, ಅ. 5–‘ನಮ್ಮ ಪಕ್ಷದ ಶಾಸಕರಿಗೆ ಮಧ್ಯಂತರ ಚುನಾವಣೆ ನಡೆಯಬೇಕು ಅಥವಾ ರಾಷ್ಟ್ರಪತಿ ಆಡಳಿತ ಜಾರಿಗೆ ಬರಬೇಕೆಂಬ ಅಪೇಕ್ಷೆ ಇದ್ದರೆ, ನನ್ನದೇನೂ ಅಭ್ಯಂತರ ಇಲ್ಲ’ ಎಂದು ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ಇಲ್ಲಿ ವಿಷಾದದಿಂದ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. 

ಶನಿವಾರ ಜನತಾದಳದ ಕೆಲವು ಶಾಸಕರು ಸಭೆ ನಡೆಸಿ ಸರ್ಕಾರದ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ನಾಯ
ಕತ್ವದ ಬದಲಾವಣೆಯಾಗಬೇಕೆಂಬ ಅರ್ಥದಲ್ಲಿ ಮಾತನಾಡಿದರೆಂದು ಪತ್ರಿಕೆಗಳಲ್ಲಿ ವರದಿಯಾಗಿರುವ ಬಗ್ಗೆ ಮುಖ್ಯಮಂತ್ರಿ ತಮ್ಮನ್ನು ಭೇಟಿ ಮಾಡಿದ ಪಕ್ಷದ ಕೆಲವು ಶಾಸಕರು, ನಾಯಕರ ಮುಂದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ. 

ಸರ್ಕಾರದ ಕಾರ್ಯವೈಖರಿ ಬಗ್ಗೆ ಅಥವಾ ರಾಜಕೀಯವಾಗಿ ವಿರೋಧ ಪಕ್ಷಗಳು ನಮ್ಮ ಸರ್ಕಾರಕ್ಕೆ ಸವಾಲು ಹಾಕಿದರೆ ನಾನು ಅದನ್ನು ವಿಧಾನಸಭೆಯಲ್ಲೇ ಸಮರ್ಪಕವಾಗಿ ಎದುರಿಸಲು ಸಿದ್ಧನಿದ್ದೇನೆ. ಆದರೆ, ನಮ್ಮ ಪಕ್ಷದವರೇ ಆಗಾಗ್ಗೆ ಸಭೆ ಸೇರಿ ನಾಯಕತ್ವ ಬದಲಾವಣೆ ಆಗಬೇಕೆಂದು ಒತ್ತಾಯಿಸುತ್ತಾ ಕಿರಿಕಿರಿ ಮಾಡುತ್ತಿರುವುದಕ್ಕೆ ಕೊನೆ ಎಲ್ಲಿ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು ಎಂದು ಹೇಳಲಾಗಿದೆ.

ಗ್ರಾಮೀಣಾಭಿವೃದ್ಧಿ ಸಚಿವ ಎಂ.ಪಿ. ಪ್ರಕಾಶ್ ಮತ್ತು ಕೇಂದ್ರದ ಮಾಜಿ ಸಚಿವ ಎಸ್.ಆರ್. ಬೊಮ್ಮಾಯಿ ಅವರನ್ನು ಪಟೇಲ್ ಅವರ ವಿರುದ್ಧ ಎತ್ತಿಕಟ್ಟಲು ಶಾಸಕರ ಒಂದು ಗುಂಪು ಈ ರೀತಿಯ ಹತಾಶ ಪ್ರಯತ್ನ ನಡೆಸುತ್ತಿದೆ ಎಂದು ಕೆಲವರು ಹೇಳಿದಾಗ, ‘ಈ ರೀತಿಯ ತಂತ್ರ ನನ್ನ ಮುಂದೆ ನಡೆಯುವುದಿಲ್ಲ’ ಎಂದು ಮುಖ್ಯಮಂತ್ರಿ ಖಾರವಾಗಿಯೇ ಹೇಳಿದರು ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಆಸ್ಪತ್ರೆಗೆ ದಾಖಲು

ಬೆಂಗಳೂರು ಅ. 5– ಹರ್ನಿಯಾ ಶಸ್ತ್ರಚಿಕಿತ್ಸೆಗಾಗಿ ಮುಖ್ಯಮಂತ್ರಿ ಜೆ. ಎಚ್. ಪಟೇಲ್ ಅವರು ಇಂದು ಇಲ್ಲಿ ಆಸ್ಪತ್ರೆಗೆ ದಾಖಲಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.