ಏಕಕಾಲದಲ್ಲಿ ಚುನಾವಣೆಗೆ ಪಟೇಲ್ ವಿರೋಧ
ಮೈಸೂರು, ಮೇ 13– ರಾಜ್ಯದಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದನ್ನು ತಮ್ಮ ಸರ್ಕಾರ ವಿರೋಧಿಸಿದ್ದು, ಈ ಸಂಬಂಧ ಕಾನೂನು ಮತ್ತು ಸಂಸದೀಯ ಸಚಿವ ಎಂ.ಸಿ. ನಾಣಯ್ಯ ಅವರು ಮುಖ್ಯ ಚುನಾವಣಾ ಕಮಿಷನರ್ ಅವರನ್ನು ಶೀಘ್ರದಲ್ಲಿಯೇ ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರು ಇಂದು ಇಲ್ಲಿ ತಿಳಿಸಿದರು.
ಸರ್ಕಾರದ ಅಧಿಕಾರದ ಅವಧಿ ಡಿ.16ಕ್ಕೆ ಮುಗಿಯುತ್ತದೆ. ಈ ಅವಧಿಯನ್ನು ಕಡಿತ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಅವಧಿ ಮುಗಿಯುವ 3 ವಾರಗಳ ಮುಂಚೆ ಚುನಾವಣೆ ನಡೆಸಿದರೆ ಸಾಕು. ಇದಕ್ಕಿಂತ ಹೆಚ್ಚಾಗಿ ರಾಜ್ಯ ಸರ್ಕಾರದ ಜತೆ ಚರ್ಚಿಸದೆ ಚುನಾವಣಾ ಆಯೋಗ ಏಕಾಏಕಿ ದಿನಾಂಕ ನಿಗದಿ ಮಾಡಲಾಗದು ಎಂದು ಸುದ್ದಿಗಾರರಿಗೆ ತಿಳಿಸಿದರು.
ವಿಧಾನಸಭೆಗೆ ಪ್ರತ್ಯೇಕವಾಗಿ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗವನ್ನು ಕೋರುವ ಸಂಬಂಧವಾಗಿ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯವನ್ನು
ತೆಗೆದುಕೊಳ್ಳಲಾಗಿದೆ ಎಂದೂ ಅವರು ಹೇಳಿದರು.
ದೇವರ ಕಲಶ ಬಿದ್ದು ಗಾಯಗೊಂಡ ಸಿದ್ದರಾಮಯ್ಯ
ಮೈಸೂರು, ಮೇ 13– ಮೈಸೂರು ತಾಲ್ಲೂಕು ಸಿದ್ಧರಾಮನ ಹುಂಡಿಯ ಸಿದ್ಧರಾಮೇಶ್ವರ ದೇವಾಲಯದ ಉತ್ಸವದಲ್ಲಿ ಇಂದು ಭಾಗವಹಿಸಿದ್ದ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಲೆಯ ಮೇಲೆ ಆಕಸ್ಮಿಕವಾಗಿ ದೇವರ ಕಲಶ ಬಿದ್ದದ್ದರಿಂದ ಅವರು ಗಾಯಗೊಂಡರು.
ಸಿದ್ದರಾಮಯ್ಯ ಅವರ ಸ್ವಗ್ರಾಮದಲ್ಲಿ ಇಂದು ಸಿದ್ಧರಾಮೇಶ್ವರ ದೇವರ ಪ್ರತಿಷ್ಠಾಪನೆ ನೆರವೇರಿಸುವ ಕಾರ್ಯಕ್ರಮವಿತ್ತು. ಅದರ ಅಂಗವಾಗಿ ದೇವರ ಮೆರವಣಿಗೆ ಇತ್ತು. ದೇವರ ಕಲಶ ಹೊರುವವರ ಪಕ್ಕದಲ್ಲೇ ಉಪಮುಖ್ಯಮಂತ್ರಿ ಇದ್ದುದರಿಂದ ಕಲಶ ಜಾರಿ ಅವರ ತಲೆಯ ಮೇಲೆ ಬಿತ್ತು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.