
ನಾಡಿಗೆ ಬಂದು ಸೆರೆಯಾದ ಕಾಡುಕೋಣ
ವಿಜಾಪುರ, ಮಾರ್ಚ್ 21– ವಿಜಾಪುರ ಜಿಲ್ಲೆಯ ಮುಳಸಾವಳಗಿ ಗ್ರಾಮದಲ್ಲಿ ಕಳೆದ 10 ದಿನಗಳಿಂದ ಜೋಳ, ಕಬ್ಬು, ಬಾಳೆ ತೋಟಗಳಲ್ಲಿ ದಾಂದಲೆ ಮಾಡುತ್ತಿದ್ದ ತುಂಟ ಕಾಡುಕೋಣವೊಂದನ್ನು ಊರ ಜನರು ಹಿಡಿದು ಕಟ್ಟಿಹಾಕಿದ್ದು, ಅದನ್ನು ಸೋಮವಾರ ಮುಂಜಾನೆ ಬೆಂಗಳೂರಿನ ಬನ್ನೇರುಘಟ್ಟ ಪ್ರಾಣಿ ಸಂಗ್ರಹಾಲಯಕ್ಕೆ ಸಾಗಿಸಲಾಗುತ್ತಿದೆ.
ಸುಮಾರು 5 ಕ್ವಿಂಟಲ್ ತೂಕದ ಈ ಕೋಣವನ್ನು ಮುಳಸಾವಳಗಿಯ ಎಂಟು ಯುವಕರು ಹಗ್ಗದ ಬಲೆಯಲ್ಲಿ ಅಡ್ಡಗಟ್ಟಿ ಬೀಳಿಸಿ, ಮೂಗುದಾರ ಹಾಕಿ, ಕಾಲಿಗೆ ಹಗ್ಗ ಸಿಕ್ಕಿಸಿ ಮರಕ್ಕೆ ಕಟ್ಟಿ ಹಾಕುವ ಸಾಹಸ ಮೆರೆದಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ.
ಕ್ರೂರ ನೋಟದ ಕಂದು ಮಿಶ್ರಿತ ತಿಳಿ ಕಪ್ಪುಬಣ್ಣದ, ಆರು ಹಲ್ಲಿನ ಈ ಆಜಾನುಬಾಹು ಕೋಣವನ್ನು ನೋಡಲು ಗ್ರಾಮದ ಸುತ್ತಮುತ್ತಲ ಊರಿನ ಜನರು ಜಾತ್ರೆಯ ಮಾದರಿಯಲ್ಲಿ ಬಂದು ಹೋಗುತ್ತಿದ್ದಾರೆ. ಹಿಂದೆಂದೂ ನಾವು ಇಂತಹ
ಕಾಡುಪ್ರಾಣಿಯನ್ನು ನೋಡಿರಲಿಲ್ಲ ಎಂದು ವಿಸ್ಮಯ ವ್ಯಕ್ತಪಡಿಸುತ್ತಿದ್ದಾರೆ.
ಜಯಾ ರಕ್ಷಣೆಗೆ ಕೇಂದ್ರದ ಯತ್ನ ಇಲ್ಲ: ವಾಜಪೇಯಿ
ತಿರುಚಿ, ಮಾರ್ಚ್ 21– ಬಿಜೆಪಿ ನೇತೃತ್ವದ ಸರ್ಕಾರ ತನ್ನ ಉಳಿವಿಗಾಗಿ ಎಐಎಡಿಎಂಕೆ ನಾಯಕಿ ಜಯಲಲಿತಾ ಅವರನ್ನು ಭ್ರಷ್ಟಾಚಾರದ ಆಪಾದನೆಯಿಂದ ಮುಕ್ತಗೊಳಿಸಲು ಯತ್ನಿಸುತ್ತಿದೆ ಎಂಬ ಆರೋಪವನ್ನು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತಳ್ಳಿಹಾಕಿದರು.
ಕಾನೂನು ತಜ್ಞರ ಅಭಿಪ್ರಾಯ ಪಡೆದೇ ಜಯಲಲಿತಾ ವಿರುದ್ಧದ ಭ್ರಷ್ಟಾಚಾರ ಪ್ರಕರಣ ಗಳನ್ನು ಮೂರು ವಿಶೇಷ ನ್ಯಾಯಾಲಯ
ಗಳಿಂದ ಬೇರೆಡೆಗೆ ವರ್ಗ ಮಾಡಲಾಗಿದೆ ಎಂದು ವಾಜಪೇಯಿ ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.