ಕ್ರಿಕೆಟ್ ಬಾಜಿಗೆ ಶಾಸನಬದ್ಧ ಸ್ಥಾನ ಇಲ್ಲ: ವಾಜಪೇಯಿ
ನವದೆಹಲಿ, ಏ. 16– ಕ್ರಿಕೆಟ್ ಬಾಜಿ ಪದ್ಧತಿಯನ್ನು ಶಾಸನಬದ್ಧಗೊಳಿಸುವ ಯಾವುದೇ ಉದ್ದೇಶವು ಸರ್ಕಾರದ ಮುಂದಿಲ್ಲ ಎಂಬುದಾಗಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ಇಲ್ಲಿ ಸ್ಪಷ್ಟಪಡಿಸಿದರು.
ಕ್ರಿಕೆಟ್ ಬಾಜಿಕಟ್ಟುವ ಹಾವಳಿಯನ್ನು ಸಂಪೂರ್ಣವಾಗಿ ತೊಡೆದು ಹಾಕಬೇಕೆನ್ನುವುದು ನಮ್ಮ ಉದ್ದೇಶ ಎಂದು ಅವರು ಇಂದು ಇಲ್ಲಿ ಮುಕ್ತಾಯಗೊಂಡ ಎರಡು ದಿನಗಳ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಹೇಳಿದರು.
ದಕ್ಷಿಣ ಆಫ್ರಿಕಾದ ಕ್ರಿಕೆಟ್ ಮೋಸದಾಟದಲ್ಲಿನ ವಂಚನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಬೆಟ್ಟಿಂಗ್ ಪದ್ದತಿಯನ್ನೇ ಶಾಸನಬದ್ಧಗೊಳಿಸುವ ಬಗೆಗೆ ಸರ್ಕಾರ ಪರಿಶೀಲಿಸುವುದಾಗಿ ಕ್ರೀಡಾ ಸಚಿವ ಸುಖ್ ದೇವ್ ಸಿಂಗ್ ದಿಂಡ್ಸಾ ಅವರು ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದ ಹಿನ್ನೆಲೆಯನ್ನು ಪ್ರಧಾನಿ ಪರೋಕ್ಷವಾಗಿ ಪ್ರಸ್ತಾಪಿಸಿದರು.
ಕಲ್ರಾ ನಿವಾಸದಿಂದ ಮಹತ್ವದ ದಾಖಲೆ ವಶ
ನವದೆಹಲಿ, ಏ. 16 (ಯುಎನ್‌ಐ)– ಮೋಸದ ಕ್ರಿಕೆಟ್ ಆಟದಲ್ಲಿ ಶಾಮೀಲಾಗಿದ್ದಾರೆಂಬುದಕ್ಕೆ ಸಾಕ್ಷಿಯಾಗಬಲ್ಲಂತಹ ಮಹತ್ವದ ದಾಖಲೆಗಳನ್ನು ಹಗರಣದ ಪ್ರಮುಖ ಆರೋಪಿ ರಾಜೇಶ್ ಕಲ್ರಾ ಅವರ ನಿವಾಸದಿಂದ ತಾನು ವಶಪಡಿಸಿಕೊಂಡಿರುವುದಾಗಿ ಜಾರಿ ನಿರ್ದೇಶನಾಳಯ ಇಂದು ಹೇಳಿದೆ.
ನಿರ್ದೇಶನಾಲಯದ ವಿಶೇಷ ಪ್ರಾಸಿಕ್ಯೂಟರ್ ಸುಭಾಷ್ ಬನ್ಸಾಲ್ ಅವರು ಇಂದು ಮೊಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿ.ಕೆ.ಖನ್ನಾ ಅವರ ಮುಂದೆ ನೀಡಿದ ಹೇಳಿಕೆ ವೇಳೆ ಇದನ್ನು ತಿಳಿಸಿದರು.
ದಿನಚರಣೆಯಲ್ಲಿ ಕ್ರಿಕೆಟ್ ಬುಕ್ಕಿಗಳ ಹೆಸರು. ವಿಳಾಸ ಮತ್ತು ದೂರವಾಣಿ ಸಂಖ್ಯೆಗಳು ಇವೆ. ಈ ಪೈಕಿ ಒಬ್ಬರ ವಿಚಾರಣೆ ಈಗ ನಡೆಯುತ್ತಿದೆ ಎಂದ ಅವರು. ಇನ್ನಷ್ಟು ವಿವರ ನೀಡಲು ನಿರಾಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.