ADVERTISEMENT

25 ವರ್ಷಗಳ ಹಿಂದೆ: ಬುಧವಾರ, 17–09–1997

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 19:30 IST
Last Updated 16 ಸೆಪ್ಟೆಂಬರ್ 2022, 19:30 IST
   

ಶಾಸಕರಿಗೆ ಲಂಚ: ಕೇಸರಿ ವಿರುದ್ಧ ತನಿಖೆಗೆ ಸೂಚನೆ

ನವದಹಲಿ, ಸೆಪ್ಟೆಂಬರ್‌ 16 (ಪಿಟಿಐ)– ಕಾಂ‌ಗ್ರೆಸ್‌ ಅಧ್ಯಕ್ಷ ಸೀತಾರಾಂ ಕೇಸರಿ ಅವರು 1988 ಮತ್ತು 1994ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಲು ಶಾಸಕರಿಗೆ ಲಂಚ ನೀಡಿದ್ದರು ಎಂಬ ಆರೋಪದ ಬಗ್ಗೆ ವಿವರವಾಗಿ ತನಿಖೆ ನಡೆಸುವಂತರೆ ದೆಹಲಿ ಹೈಕೋರ್ಟ್‌ ಇಂದು ಸಿಬಿಐಗೆ ಸೂಚಿಸಿತು.

ಕೇಸರಿ ಅವರು ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಸಮಯದಲ್ಲಿ ಬಿಹಾರದ ಕೆಲವು ಶಾಸಕರ ಖಾತೆಗೆ ಭಾರೀ ಪ್ರಮಾಣದ ಹಣ ಸಂದಾಯವಾಗಿರುವುದರ ಬಗ್ಗೆ ಸಿಬಿಐ ನೀಡಿದ ವರದಿಗೆ ತೃಪ್ತಿ ವ್ಯಕ್ತಪಡಿಸಿದ ನ್ಯಾಯಮೂರ್ತಿ ಜಸ್ವಾಲ್‌ ಸಿಂಗ್‌ ಮತ್ತು ನ್ಯಾಯಮೂರ್ತಿ ಮನ್‌ಮೋಹನ್‌ ಸರೀನ್‌ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಕೇಸರಿ ವಿರುದ್ಧ ತನಿಖೆ ಮುಂದುವರಿಸಿ ಶೀಘ್ರ ಪೂರ್ಣಗೊಳಿಸುವಂತೆ ಆದೇಶಿಸಿತು.

ADVERTISEMENT

ಮೇವು ಹಗರಣ: ಶರಣಾದ ಮಿಶ್ರಾ ಬಂಧನದಲ್ಲಿ

ಪಟ್ನಾ ಸೆಪ್ಟೆಂಬರ್‌ 16 (ಯುಎನ್‌ಐ)– ಮೇವು ಹಗರಣ ಆರೋಪದ ಹಿನ್ನೆಲೆಯಲ್ಲಿ ಬಿಹಾರದ ಮಾಜಜಿ ಮುಖ್ಯಮಂತ್ರಿ ಹಾಗೂ ಸಂಸದ ಡಾ. ಜಗನ್ನಾಥ್‌ ಮಿಶ್ರಾ ಅವರು ಇಂದು ನಿಯೋಜಿತ ಸಿಬಿಐ ನ್ಯಾಯಾಲಯದ ಮುಂದೆ ಹಾಜರಾದರು.

ನಿಯೋಜಿತ ಸಿಬಿಐ ನ್ಯಾಯಾಲಯದವಿಶೇಷ ನ್ಯಾಯಮೂರ್ತಿ ಎಸ್‌.ಕೆ. ಲಾಲ್‌ ಅವರ ಮುಂದೆ ಶರಣಾದ ಡಾ. ಮಿಶ್ರಾ ಅವರನ್ನು ನ್ಯಾಯಾಂಗ ಬಂಧನದಲ್ಲಿಡುವಂತೆ ಆದೇಶ ನೀಡಲಾಯಿತು. ಬೇವೂರ್‌ ಕೇಂದ್ರ ಕಾರಾಗೃಹದಲ್ಲಿ ಅವರನ್ನು ಬಂಧಿಸಿಡಲಾಯಿತು. ಅವರನ್ನು ಮತ್ತೆ ಸೆಪ್ಟೆಂಬರ್‌ 19ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಜೈಲಿನ ಸೂಪರಿಂಟೆಂಡೆಂಟ್‌ ಅವರಿಗೆ ನ್ಯಾಯಾಲಯ ಆದೇಶಿಸಿತು.

ಮೈಸೂರು ರಾಜ್ಯದಲ್ಲೂ ಶ್ರೀಮಂತ ರೈತರು

ನವದೆಹಲಿ, ಸೆಪ್ಟೆಂಬರ್‌ 16– ರಾಷ್ಟ್ರದಲ್ಲಿ ಅಸಂಖ್ಯಾತ ಮಂದಿ ಶ್ರೀಮಂತ ರೈತ ಕುಟುಂಬಗಳಿರುವ ಏಳು ರಾಜ್ಯಗಳಲ್ಲಿ ಮೈಸೂರು ರಾಜ್ಯವೂ ಒಂದು ಎಂದು ಆರ್ಥಿಕ ಮತ್ತು ವೈಜ್ಞಾನಿಕ ಸಂಶೋಧನಾ ಪ್ರತಿಷ್ಠಾನ (ಖಾಸಗಿ ಸಂಸ್ಥೆ) ನಡೆಸಿದ ಸಮೀಕ್ಷೆಯಿಂದ ವ್ಯಕ್ತಪಟ್ಟಿದೆ.

ಶ್ರೀಮಂತ ಕುಟುಂಬಗಳಿರುವ ಏಳು ರಾಜ್ಯಗಳು: ಪಂಜಾಬ್‌, ಹರಿಯಾಣ, ರಾಜಸ್ತಾನ್, ಗುಜರಾತ್‌, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಮೈಸೂರು. ಸಮಗ್ರ ರಾಷ್ಟ್ರದಲ್ಲಿ ‘ಭಾರಿ ಆದಾಯವಿರುವ’ ಶ್ರೀಮಂತ ಕುಟುಂಬಗಳಲ್ಲಿ 7/10 ಭಾಗದಷ್ಟು ಮಂದಿ ಈ ಏಳು ರಾಜ್ಯಗಳಲ್ಲಿದ್ದಾರೆ. ರೈತ ಕುಟುಂಬಗಳ ಹತ್ತು ವರ್ಷದ ಕೃಷಿ ಆದಾಯದ ಬಗ್ಗೆ (1960–61ರಿಂದ 1970–71) ಅಂದಾಜು ಮಾಡಲಾಗಿದೆ.

ಲೆಬನಾನ್‌ ತೀರಾ ಒಳಕ್ಕೆ ಇಸ್ರೇಲಿ ಪಡೆ ಮತ್ತಿಗೆ: ಎರಡು ಸೇತುವೆಗಳ ಧ್ವಂಸ

ಟೆಲ್‌ ಆವೀವ್‌, ಸೆಪ್ಟೆಂಬರ್‌ 16– ಲೆಬನಾನ್‌ನಲ್ಲಿ ಹಿಂದೆಂದೂ ಹೋಗದಿದ್ದಷ್ಟು ತೀರಾ ಒಳಕ್ಕೆ ಇಂದು ಇಸ್ರೇಲಿ ಟ್ಯಾಂಕ್‌ಗಳು ಮತ್ತು ಇನ್‌ಫೆಂಟ್ರಿ ದಳ ನುಗ್ಗುತ್ತಿದ್ದರೆ ಇನ್ನೊಂದು ಕಡೆ ಇಸ್ರೇಲಿ ಜೆಟ್‌ಗಳು ಲಿಟಾನಿ ನದಿಗೆ ಕಟ್ಟಿದ್ದ ಎರಡು ಸೇತುವೆಗಳನ್ನು ಧ್ವಂಸ ಮಾಡಿದವು.

ಟ್ಯಾಂಕ್‌ಗಳು ಮತ್ತು ಇನ್‌ಫೆಂಟ್ರಿ ದಳಗಳು ಮಧ್ಯ ವಲಯದಲ್ಲಿ ಫಿರಂಗಿ ಪಡೆ ಮತ್ತು ವಿಮಾನ ಪಡೆ ಬೆಂಬಲದೊಂದಿಗೆ ಗಡಿಯೊಳಗೆ 20 ಕಿಲೊಮೀಟರ್‌ಗಳಿಗೂ ಹೆಚ್ಚು ದೂರಕ್ಕೆ ನುಗ್ಗಿ 13 ಲೆಬನಾನ್‌ ಗ್ರಾಮಗಳಲ್ಲಿ ಸುತ್ತಾಡಿ ಗೆರಿಲ್ಲಾಗಳು ಉಪಯೋಗಿಸುತ್ತಿದ್ದ ಅನೇಕ ಮನೆಗಳನ್ನು ಸಿಡಿಮದ್ದಿನಿಂದ ಸ್ಫೋಟಗೊಳಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.